For the best experience, open
https://m.samyuktakarnataka.in
on your mobile browser.

ಯಾಜ್ಞವಲ್ಕ್ಯರ ಉತ್ತರ: ಶಂಕರರ ಆಶಯ

04:00 AM May 14, 2024 IST | Samyukta Karnataka
ಯಾಜ್ಞವಲ್ಕ್ಯರ ಉತ್ತರ  ಶಂಕರರ ಆಶಯ

ಜನಕ ಮಹಾರಾಜನ ಯಜ್ಞದಲ್ಲಿ ಅನೇಕ ಜನ ಋಷಿಗಳು ಸೇರಿದ್ದರು. ಅವರಲ್ಲಿ ಯಾರು ಅತ್ಯಂತ ಶ್ರೇಷ್ಠ ಬ್ರಹ್ಮಚಾರಿಗಳೋ ಅವರಿಗೆ ಒಂದು ಸಾವಿರ ಗೋವುಗಳು ಬಹುಮಾನವಾಗಿ ಘೋಷಿಲ್ಪಟ್ಟಿದ್ದವು. ಯಾಜ್ಞವಲ್ಕ್ಯರು ಅಲ್ಲಿರುವ ಎಲ್ಲ ಪ್ರಮುಖ ಋಷಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಕೊಟ್ಟು ಆ ಬಹುಮಾನಗಳನ್ನು ಗೆದ್ದರು. ಅವರು ಇನ್ನೇನು ಗೆಲ್ಲುವ ಕೊನೆಯ ಹಂತದಲ್ಲಿರುವಾಗ ಅವರಿಗೆ ಕೊನೆಯದಾಗಿ ಇನ್ನೊಮ್ಮೆ ಯಾರಾದರೂ ಪ್ರಶ್ನೆ ಕೆಳುವವರಿದ್ದರೆ ಅವರಿಗೆ ಒಮ್ಮೆ ಅವಕಾಶ ಕೊಡೊಣ ಎಂದೆನಿಸಿತು. ಅದಕ್ಕಾಗಿ ಅವರು ನೆರೆದಿದ್ದ ಎಲ್ಲರನ್ನೂ ಕುರಿತಾಗಿ ಒಂದು ಸವಾಲು ಒಡ್ಡಿದರು. ನಿಮ್ಮಲ್ಲಿ ಯಾರು ಬೇಕಾದರೂ ಪ್ರಶ್ನೆ ಕೇಳಬಹುದು. ಆಗಲೇ ಪ್ರಮುಖ ಋಷಿಗಳಿಗೆ ಯಾಜ್ಞವಲ್ಕ್ಯರು ಸಮರ್ಪಕ ಉತ್ತರ ಕೊಟ್ಟಿದ್ದರಿಂದ ಯಾರೂ ಎದ್ದು ನಿಲ್ಲಲಿಲ್ಲ. ಯಾಜ್ಞವಲ್ಕ್ಯರು ತಿರುಗಿ ಕೇಳಿದರು. ಹಾಗಿದ್ದರೆ ನಾನೇ ನಿಮ್ಮೆಲ್ಲರಿಗೂ ಒಂದು ಪ್ರಶ್ನೆ ಕೇಳುತ್ತೇನೆ'. ಹೀಗೆ ಹೇಳುತ್ತ : ಮರವು ಕತ್ತರಿಸಲ್ಪಟ್ಟ ನಂತರ ಮತ್ತೆ ಚಿಗುರುವಂತೆ ಮರಣವೆಂಬ ಕತ್ತರಿಯಿಂದ ಕತ್ತರಿಸಲ್ಪಟ್ಟ ಮನುಷ್ಯನು ಮತ್ತೆ ಹುಟ್ಟಿಬರುತ್ತಾನೆ. ಯಾವ ಮೂಲದಿಂದ ಆತ ಮತ್ತೆ ಹುಟ್ಟಿ ಬರುತ್ತಾನೆ?.. ಎಂಬ ಪ್ರಶ್ನೆಯನ್ನು ಇಟ್ಟರು. ಮೂಲವೆಂಬ ತತ್ವ ಜಗತ್ತಿನ ಮೂಲವನ್ನು ಎತ್ತಿಹೇಳುತ್ತದೆ. ಪರಮಾತ್ಮನೆ ಜಗತ್ತಿನ ಮೂಲ. ಪ್ರಶ್ನೆಗೆ ಯಾರೂ ಉತ್ತರಿಸದಿದ್ದಾಗ ಸ್ವತಃ ತಾವೇ ಅವರು ಉತ್ತರವನ್ನು ಹೇಳಿದರು.ವಿಜ್ಞಾನಮಾನಂದಂ ಬ್ರಹ್ಮ ರಾತಿರ್ದಾತುಃ ಪರಾಯಣಮ್ ಆನಂದ ತದ್ವಿದಃ' ಆನಂದ ಸ್ವರೂಪಿಯಾದ ಚೈತನ್ಯವೇ ಬ್ರಹ್ಮ. ಅದೇ ಜಗತ್ತಿನ ಮೂಲ. ಯಾಕೆಂದರೆ ದಾನ ಶೀಲನಾದ ವ್ಯಕ್ತಿಗೆ ಅದೇ ಪರಮಾತ್ಮನೇ ಯೋಗ್ಯ ಫಲವನ್ನು ಕೊಡುವ ಮೂಲಕ ಆಶ್ರಯನಾಗಿದ್ದಾನೆ. ಅಷ್ಟೇ ಅಲ್ಲ ಎಲ್ಲಾ ಕರ್ಮಾಚರಣೆಗಳಿಗೂ ಫಲ ಕೊಡುವ ಮೂಲಕ ಆಶ್ರಯ ಅವನೇ ಆಗಿದ್ದಾನೆ. ಬ್ರಹ್ಮಜ್ಞಾನಿಯಾಗಿದ್ದು ಬ್ರಹ್ಮದಲ್ಲಿಯೇ ನೆಲೆ ನಿಂತವನಿಗೆ ಕೂಡಾ ಅದೇ ಪರಮಾತ್ಮನೇ ಆಶ್ರಯನಾಗಿದ್ದಾನೆ. ಕರ್ಮಮಾರ್ಗಿಗಳಿಗೂ ಮತ್ತು ಜ್ಞಾನ ಮಾರ್ಗಿಗಳಿಗೂ ಆಶ್ರಯದಾತನಾಗಿ ಅವನು ಜಗತ್ತಿನ ಮೂಲವೇ ಆಗಿರಬೇಕಾಗುತ್ತದೆ.
ಅವನೇ ಯಾಜ್ಞವಲ್ಕ್ಯರ ಪ್ರಶ್ನೆಗೆ ಉತ್ತರ. ಮರಣವೆಂಬ ಕತ್ತರಿಯಿಂದ ಕತ್ತರಿಸಲ್ಪಟ್ಟ ಜೀವಾತ್ಮನು ಪರಮಾತ್ಮನೆಂಬ ಮೂಲದಿಂದ ಮತ್ತೆ ಹುಟ್ಟಿಬರುತ್ತಾನೆ. ಎಂಬುದು ಅವರ ಉತ್ತರದ ಆಶಯ. ಹಾಗೆಂದರೇನರ್ಥ? ಜಗತ್ತಿನ ಮೂಲವೇ ಜೀವಾತ್ಮನ ಮೂಲ. ಜಗತ್ತಿನ ಮೂಲ ಬೇರೆಯಲ್ಲ, ಜೀವಾತ್ಮನ ಮೂಲ ಬೇರೆಯಲ್ಲ, ಎರಡೂ ಒಂದೇ. ಇದೇ ಅದ್ವೈತ. ಅಜ್ಞಾನ, ಆಸೆ ಮತ್ತು ಕರ್ಮ(ಪುಣ್ಯ-ಪಾಪ)ಗಳಿಂದ ಈ ಅದ್ವೈತವು ಮುಚ್ಚಿ ಹೋಗಿದೆ. ತಾನು ಪರಮಾತ್ಮನಿಗಿಂತ ಬೇರೆಯಂಬ ಅನುಭವ
ಇದರಿಂದ ಜಿವಾತ್ಮನಿಗೆ ಉಂಟಾಗುತ್ತಿದೆ. ಈ ತಪ್ಪು ಅನುಭವವನ್ನು ಕರ್ಮಯೋಗ, ಭಕ್ತಿ ಅಷ್ಟಾಂಗಯೋಗ ಮತ್ತು ಜ್ಞಾನಯೋಗಗಳ ಮೂಲಕ ತೊಡೆದು ಹಾಕಿ ಅದ್ವೈತದ ಅನುಭವವನ್ನು ಪಡೆಯುವುದೆ ಶಂಕರಾಚಾರ್ಯರ ಉಪದೇಶದ ಸಾರ.