ಯುಗಾದಿಯು ಯೋಗಾದಿಯೂ ಆಗಲಿ
ಇಂದು ಚಾಂದ್ರಮಾನ ಯುಗಾದಿ. ಕ್ರೋಧಿ ಎಂಬ ಹೆಸರಿನ ಹೊಸ ವರ್ಷ ಆರಂಭವಾಗುತ್ತಿದೆ. ಚಂದ್ರನ ವೃದ್ಧಿ-ಹ್ರಾಸಗಳನ್ನವಲಂಬಿಸಿ ಪರಿಗಣಿಸುವುದಾದ್ದರಿಂದ ಇದಕ್ಕೆ ಚಾಂದ್ರಮಾನ ಯುಗಾದಿ ಎಂದು ಹೆಸರು. ಇದರಂತೆ ಸೂರ್ಯನನ್ನು ಅವಲಂಬಿಸಿ ಲೆಕ್ಕ ಹಾಕುವ ವರ್ಷವೂ ಇದೆ. ಹೊಸವರ್ಷವನ್ನು ಉತ್ಸಾಹದಿಂದ ಸ್ವಾಗತಿಸಬೇಕೆಂಬುದೇನೋ ನಿಜ. ಆದರೆ ಆ ಸ್ವಾಗತಿಸುವಿಕೆ ಜವಾಬ್ದಾರಿ ಪ್ರಜ್ಞೆಯಿಂದ ಕೂಡಿರಬೇಕು ಎಂಬುದೂ ಅಷ್ಟೇ ನಿಜ.
ಯಾಕೆಂದರೆ, ಹೊಸತು ಚೆಂದ. ಹಾಗಾಗಿ ಉತ್ಸಾಹ ಬರುವುದು ಸಹಜ. ಸಹಜವಾದುದ್ದಕ್ಕೇ ಇನ್ನಷ್ಟು ಪ್ರೋತ್ಸಾಹ ಕೊಡಬೇಕು. ಅದರಿಂದ ಜೀವನೋತ್ಸಾಹ ಹೆಚ್ಚುತ್ತದೆ. ಆದರೆ ಇಲ್ಲಿ ಹೊಸತು ಯಾವುದು? ಬಟ್ಟೆ-ಬರೆಗಳೇ, ಮನೆಯೇ-ಆಸ್ತಿಯೇ? ಅಲ್ಲ. ಕಾಲ ಇಲ್ಲಿ ಹೊಸತು. ಹೊಸಕಾಲ ಬಂತೆಂದರೆ ಹಳೆಕಾಲ ಕಳೆಯಿತು. ಆಯುಷ್ಯ ಒಂದಷ್ಟು ಕಳೆಯಿತು. ಮರಣ ಇನ್ನಷ್ಟು ಹತ್ತಿರವಾಯಿತು. ತಾನು ಮಾಡಬೇಕಾದ ಕರ್ತವ್ಯಗಳಿಗೆ ಅವಕಾಶ ಕಡಿಮೆಯಾಯಿತು. ತನ್ನ ಶ್ರೇಷ್ಠ ಸಾಧನೆಗಳಿಗೆ ಅವಕಾಶ ಕಡಿಮೆಯಾಯಿತು. ಇದು ಇಲ್ಲಿ ಬರಬೇಕಾದ ಜವಾಬ್ದಾರಿ ಪ್ರಜ್ಞೆ.
ಮನುಷ್ಯ ಜೀವನದ ಶ್ರೇಷ್ಠ ಸಾಧನೆಗಳಲ್ಲಿ ಜ್ಞಾನ-ವೈರಾಗ್ಯಗಳ ಸಾಧನೆ ಮುಖ್ಯವಾದುದು. ಜ್ಞಾನವೆಂದರೆ ಪರಮಾತ್ಮನ ಅರಿವು. ಅದು ಭಕ್ತಿಯ ಮೂಲಕ ಬೆಳೆದು ಬರಬೇಕು. ಭಕ್ತಿಯು ಬೆಳೆಯಲು ದೀರ್ಘ ಕಾಲಾವಕಾಶ ಬೇಕು. ದೀರ್ಘ ಪ್ರಕ್ರಿಯೆ ಶುರುವಾಗುವುದಕ್ಕೆ ತಡವಾದರೆ ಬೆಳೆಯುವುದು ಯಾವಾಗ? ಇಲ್ಲಿ ವೈರಾಗ್ಯವೆಂದರೆ ಆಸೆಗಳನ್ನು ಕಡಿಮೆ ಮಾಡಿಕೊಳ್ಳುವಿಕೆ. ಆಸೆಗಳು ಕಡಿಮೆಯಾದಷ್ಟು ದೇವರು ಹತ್ತಿರನಾಗುತ್ತಾನೆ. ಆಸೆಗಳು ಬೆಳೆದಷ್ಟು ಸಂಸಾರ ಬಂಧನ ಬೆಳೆಯುವ ಮೂಲಕ ದೇವರು ದೂರಾಗುತ್ತಾನೆ.
ಆದ್ದರಿಂದ ವಯಸ್ಸು ಬೆಳೆಯುತ್ತ ಆಸೆಗಳನ್ನು ಕಡಿಮೆ ಮಾಡಿಕೊಳ್ಳುತ್ತ ಹೋಗುವ ಕೆಲಸವಾಗಬೇಕು. ಆದರೆ ಹಾಗಾಗುತ್ತಿಲ್ಲ. ಶಂಕರರು ಹೇಳಿದ ಪ್ರಸಿದ್ಧವಾದ ಮಾತು.
`ದಿನಮಪಿ ರಜನೀ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ | ಕಾಲಃ ಕ್ರೀಡತಿ ಗಚ್ಛತ್ಯಾಯುಃ ತದಪಿ ನ ಮುಂಚತ್ಯಾಶಾವಾಯುಃ ||'
ಹಗಲು-ರಾತ್ರಿಗಳು ಒಂದಾದ ಮೇಲೊಂದು ಬರುತ್ತಲೇ ಇರುತ್ತವೆ. ಹಾಗೆಯೇ ಶಿಶಿರ (ಈ ವರ್ಷದ ಕೊನೆಯ ಋತು) ಮತ್ತು ವಸಂತ (ಹೊಸ ವರ್ಷದ ಮೊದಲ ಋತು)ಗಳು ಮತ್ತೆ ಮತ್ತೆ ಬರುವ ಮೂಲಕ ಕಾಲದ ಆಟ ಮುಂದೆ ಹೋಗುತ್ತದೆ, ಆಯುಷ್ಯ ಕಳೆಯುತ್ತಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಸೆಗಳ ಬೆನ್ನುಹತ್ತುವುದನ್ನು ಕಡಿಮೆ ಮಾಡಿಕೊಳ್ಳಬೇಕು.
ಸಂಕ್ಷೇಪದಲ್ಲಿ ಹೇಳಬೇಕೆಂದರೆ ಯುಗಾದಿಯು ಯೋಗಾದಿಯೂ ಆಗಬೇಕು.