For the best experience, open
https://m.samyuktakarnataka.in
on your mobile browser.

ವೈರಾಗ್ಯ ಎಲ್ಲಿ ಬೇಕು? ಎಲ್ಲಿ ಬೇಡ?

04:56 AM Apr 16, 2024 IST | Samyukta Karnataka
ವೈರಾಗ್ಯ ಎಲ್ಲಿ ಬೇಕು  ಎಲ್ಲಿ ಬೇಡ

ಯಾವ ಕೆಲಸವನ್ನು ಯಾವ ಧ್ಯೇಯ ಅಥವಾ ಧೋರಣೆಯೊಂದಿಗೆ ಮಾಡಬೇಕೆಂಬುದನ್ನು ಅರಿತುಕೊಂಡು ಮಾಡಿದರೆ ಆ ಕೆಲಸವು ಪರಿಪೂರ್ಣವಾಗುತ್ತದೆ. ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್ | ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ ||' ಈ ಸುಭಾಷಿತವು ಇದನ್ನು ಉದಾಹರಣೆಯೊಂದಿಗೆ ವರ್ಣಿಸುತ್ತದೆ. ವಿದ್ಯೆ ಅಥವಾ ಹಣವನ್ನು ಸಂಪಾದಿಸುವಾಗ ತಾನುಅಜರಾಮರ', ತನಗೆ ಮುಪ್ಪು, ಸಾವುಗಳಿಲ್ಲ - ಎಂಬ ಭಾವನೆಯಿಂದ ಸಂಪಾದಿಸಬೇಕು. ಆಗ ಮುಪ್ಪು-ಮರಣಗಳ ನೆನಪಾದರೆ, ವೈರಾಗ್ಯ ಬಂದು, ಹಣ ಸಂಪಾದನೆಗೆ ತೊಡಕಾಗುತ್ತದೆ. ವ್ಯಾಪಾರ ಮಾಡುತ್ತಿರುವವನು ಅಥವಾ ಉದ್ಯೋಗ ಮಾಡುತ್ತಿರುವವನು ಉತ್ಸಾಹದಿಂದ ತೊಡಗಲು ಈ ಅಪಕ್ವ ವೈರಾಗ್ಯವು ಅಡ್ಡ ಬರುತ್ತದೆ. ಅದಕ್ಕಾಗಿ ಉದ್ಯೋಗ, ವ್ಯಾಪಾರ ಮಾಡುವಾಗ ಎಷ್ಟು ಸಂಪಾದಿಸಿದರೆ ಏನು ಪ್ರಯೋಜನ? ನಾನೇ ಇನ್ನು ಕೆಲವು ಕಾಲದಲ್ಲಿ ಮರಣ ಹೊಂದುತ್ತೇನೆ' ಎಂಬ ಆಲೋಚನೆ ಮಾಡಬಾರದು. ಇದೇ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಅಥವಾ ಓದುವಾಗ ಅಪಕ್ವ ವೈರಾಗ್ಯ ಅಡ್ಡ ಬರಬಾರದು. ತುಂಬಾ ವಯಸ್ಸಾದವರು ಓದುವುದರಲ್ಲಿ ಮಗ್ನರಾಗುವುದನ್ನು ನಾವು ನೋಡುತ್ತೇವೆ. ಹಾಗೆ ಮಗ್ನರಾಗುವುದರಿಂದಲೇ ಅವರು ಒಂದು ರೀತಿಯ ನೆಮ್ಮದಿ ಪಡೆಯುತ್ತಾರೆ. ಧರ್ಮಾಚರಣೆ ಮಾಡುವಾಗ ಇರಬೇಕಾದ ಧೋರಣೆಯೇ ಬೇರೆ. ಧರ್ಮಾಚರಣೆಗೆ ಪಾರಲೌಕಿಕ ಚಿಂತನೆ ಶ್ರದ್ಧೆಯನ್ನು ಒದಗಿಸುತ್ತದೆ. ಐಹಿಕ ಜೀವನವು ಶಾಶ್ವತವೆಂಬ ಚಿಂತನೆ ಪಾರಲೌಕಿಕ ಚಿಂತನೆಗೆ ಅಡ್ಡ ಬರುತ್ತದೆ. ಶ್ರದ್ಧೆಯಿಂದ ತೊಡಗಿದಾಗಲೇ ಧರ್ಮಾಚರಣೆಯಿಂದ ನೆಮ್ಮದಿ, ಆನಂದ ದೊರೆಯುತ್ತದೆ. ಆ ಶ್ರದ್ಧೆಯನ್ನು ಮನಸ್ಸಿನಲ್ಲಿ ಉಕ್ಕಿ ಬರುವಂತೆ ಮಾಡಲು ಮುಪ್ಪು-ಮರಣಗಳ ನೆನಪು ಬೇಕು. ಆ ನೆನಪು ಎಷ್ಟು ಉತ್ಕಟವಾಗಿರಬೇಕೆಂಬುದನ್ನು ದೃಷ್ಟಾಂತದ ಮೂಲಕ ಹೇಳುತ್ತಾರೆ.ಮೃತ್ಯುದೇವತೆ ತನ್ನ ಜುಟ್ಟು ಹಿಡಿದು ತನ್ನನ್ನು ಸೆಳೆದುಕೊಂಡು ಹೋಗಲು ಬಂದು ನಿಂತಿದೆ' ಎಂಬ ಭಾವನೆಯೊಂದಿಗೆ ಧರ್ಮಾಚರಣೆಯಲ್ಲಿ ತೊಡಗಬೇಕು. ಆಶ್ಚರ್ಯಕರವಾದ ಸಂಗತಿ ಏನೆಂದರೆ ಈ ರೀತಿಯಲ್ಲಿ ಮೃತ್ಯು ನಿತ್ಯ ಸನ್ನಿಹಿತ ಎಂಬ ಸತ್ಯವನ್ನು ಅರ್ಥಮಾಡಿಕೊಂಡಿರು ವವನಿಗೆ ದೀರ್ಘಕಾಲದ ಆಯುಷ್ಯ ದೊರೆಯುತ್ತದೆ. ಯಾರು ತಾನೆಂದೂ
ಸಾಯುವವನಲ್ಲ ಎಂದು ಭಾವಿಸಿಕೊಂಡಿರುತ್ತಾರೋ, ಅವರಿಗೆ ಬೇಗ ಮೃತ್ಯು ಬರುತ್ತದೆ. `ಅಯಂ ಲೋಕೋ ನಾಸ್ತಿ ಪರ ಇತಿ ಮಾನೀ ಪುನಃ ಪುನರ್ವಶಮಾಪದ್ಯತೇ ಮೇ' ಇಹಲೋಕವೇ ಶಾಶ್ವತ, ಪರಲೋಕವೆಂಬುದಿಲ್ಲ ಎಂಬುದಾಗಿ ಭಾವಿಸಿರುವವರೇ ಮತ್ತೆ ಮತ್ತೆ ಮೃತ್ಯುವಿಗೆ ವಶರಾಗುತ್ತಾರೆ ಎಂಬುದಾಗಿ ಕಠೋಪನಿಷತ್ತು ತಿಳಿಸುತ್ತದೆ. ವಿದ್ಯೆ, ಹಣವನ್ನು ಸಂಪಾದಿಸುವಾಗ ನಾವು ಶಾಶ್ವತ ಎಂಬ ಭಾವನೆ ಮತ್ತು ಧರ್ಮಸಾಧನೆ ಮಾಡುವಾಗ ತಾನು ಶಾಶ್ವತನಲ್ಲ ಎಂಬ ಭಾವನೆ - ಇವೆರಡೂ ಒಂದಕ್ಕೊಂದು ವಿರುದ್ಧವಾಗಿ ಇರುವಂತೆ ತೋರುತ್ತಿದ್ದರೂ, ಇವೆರಡನ್ನೂ ಸಮನ್ವಯಗೊಳಿಸಿಕೊಂಡವನೇ ಜೀವನದಲ್ಲಿ ಯಶಸ್ವಿಯಾಗುತ್ತಾನೆ.