For the best experience, open
https://m.samyuktakarnataka.in
on your mobile browser.

ಶ್ರೀರಾಮನವಮಿ ವ್ರತದ ಮಹತ್ವ

03:30 AM Apr 18, 2024 IST | Samyukta Karnataka
ಶ್ರೀರಾಮನವಮಿ ವ್ರತದ ಮಹತ್ವ

ರಾಮನವಮಿ ವ್ರತವನ್ನು ಪ್ರತಿಯೊಬ್ಬರೂ ಆಚರಣೆ ಮಾಡಬೇಕು ಎಂದು ಕೆಲವು ವಾಕ್ಯಗಳು ಹೇಳುತ್ತವೆ. ರಾಮಭಕ್ತರಷ್ಟೇ ಮಾಡಬೇಕೆಂದು ಕೆಲವು ವಾಕ್ಯಗಳೂ ಹೇಳುತ್ತವೆ. ಕಾಮ್ಯಫಲವನ್ನು ಅಪೇಕ್ಷಿಸುವವರು ರಾಮನವಮಿ ವ್ರತವನ್ನು ಮಾಡಬೇಕೆಂದು ಇನ್ನು ಕೆಲವು ವಾಕ್ಯಗಳು ಹೇಳುತ್ತವೆ.
ಅಗಸ್ತ್ಯ ಸಂಹಿತೆಯಲ್ಲಿ ಉಪದೇಶಿಸಿದ ಅಗಸ್ತ್ಯರ ಮಾತುಗಳ ಸಾರಾಂಶ ಹೀಗಿದೆ. ಪ್ರತಿಯೊಬ್ಬರಿಗೂ ವಿಧಿಸಲ್ಪಟ್ಟ ಕರ್ಮ ಮತ್ತು ಭೋಗ ಮೋಕ್ಷಗಳಿಗೆ ಏಕಮಾತ್ರ ಸಾಧನೆಯೆಂದರೆ ಅದು ಶ್ರೀ ರಾಮನವಮಿ ವ್ರತ. ಅಶುಚಿಯಾದವನು, ಪಾಪಿಯಾದವನು, ಈ ಶ್ರೇಷ್ಠವ್ರತವನ್ನು ಆಚರಿಸುವುದರಿಂದ ಜಗತ್ತಿನಲ್ಲಿ ಮಾನ್ಯನಾಗುತ್ತಾನೆ.
ಶ್ರೀರಾಮನು ಹೇಗೆ ಗೌರವಾನ್ವಿತನಾಗಿದ್ದನೋ ಅವನಂತೆ ತನ್ನ ಭಕ್ತನನ್ನೂ ಕೂಡ ಗೌರವಾನ್ವಿತನನ್ನಾಗಿ ಮಾಡುತ್ತಾನೆ. ರಾಮನಿಗೆ ವಿರುದ್ಧವಾಗಿ ನಡೆದ ನರಾಧಮನು ಕುಂಭೀಪಾಕವೆಂಬ ಘೋರನರಕದಲ್ಲಿ ಬೇಯುತ್ತಾನೆ. ಒಂದು ರಾಮನವಮಿಯ ದಿವಸ ಉಪವಾಸ ಮಾಡಿದರೂ ಸಾಕು ಆ ಮನುಷ್ಯನ ಇಷ್ಟಾರ್ಥಗಳೆಲ್ಲವೂ ಕೈಗೂಡುತ್ತವೆ. ಪಾಪದಿಂದ ಮುಕ್ತನಾಗುತ್ತಾನೆ. ಶ್ರೀರಾಮನವಮಿಯಂದು ಉಪವಾಸರೂಪವಾದ ವ್ರತವನ್ನು ಆಚರಣೆ ಮಾಡಬೇಕು. ರಾತ್ರಿಯ ಕಾಲದಲ್ಲಿ ನೆಲದ ಮೇಲೆ ಕುಳಿತು ರಾಮಭಜನೆಯನ್ನು ಮಾಡುತ್ತಾ ಜಾಗರಣೆ ಮಾಡಬೇಕು. `ಸದಾ ಶ್ರೀರಾಮ' ಎಂಬ ಶಬ್ದ ಪ್ರಯೋಗವನ್ನು ಮಾಡುವ ಮೂಲಕ ಈ ವ್ರತವನ್ನು ನಿತ್ಯವೆಂದು ಸೂಚಿಸಿದ್ದಾರೆ.
ಶಾಸ್ತ್ರವಚನಗಳಲ್ಲಿ ಪಾಪ ಪರಿಹಾರವೇ ಮುಖ್ಯಫಲವೆಂದು ಹೇಳಿರುವುದರಿಂದ ಈ ವ್ರತವು ಕಾಮ್ಯವೆಂದು ಕೆಲವರು ಹೇಳುತ್ತಾರೆ. ಆದರೆ ನಿರ್ಣಯ ಸಿಂಧು, ತಿಥಿತತ್ವ ಮೊದಲಾದ ಗ್ರಂಥಗಳಲ್ಲಿ ಸಂಯೋಗಪೃಥಕ್ಷ್ಯ ಎಂಬ ಮೀಮಾಂಸಾ ನ್ಯಾಯಕ್ಕೆ ಈ ವ್ರತವು ನಿತ್ಯವೂ ಹೌದು ಕಾಮ್ಯವೂ ಹೌದು ಎಂದು ನಿರ್ಣಯಸಿದ್ದಾರೆ.
ಯಾರು ಇಂದ್ರಿಯ ಸಾಮರ್ಥ್ಯವನ್ನು ಬಯಸುತ್ತಾನೋ ಅವನು ಮೊಸರಿನಿಂದ ಹೋಮವನ್ನು ಮಾಡಬೇಕು. ಸ್ವತಂತ್ರವಾದ ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಮೊಸರನ್ನು ಪ್ರತ್ಯೇಕವಾಗಿ ವಿಧಾನ ಮಾಡಿರುವುದರಿಂದ ದಧಿಹೋಮವು ನಿತ್ಯವೂ ಆಗಿದೆ ಕಾಮ್ಯವೂ ಆಗಿದೆ ಎಂದು ತಿಳಿಯಬೇಕು. ಹೇಮಾದ್ರಿಯಲ್ಲಿ ನಿರ್ಣಯ ಸಿಂಧುವಿನಲ್ಲಿ ವ್ರತರಾಜದಲ್ಲಿ ಹೇಳಲ್ಪಟ್ಟ ರಾಮನವಮೀ ವ್ರತವಿಧಾನವನ್ನು ಸಂಗ್ರಹವಾಗಿ ಹೀಗೆ ಹೇಳಬಹುದು. ಚೈತ್ರಶುಕ್ಲ ಅಷ್ಟ್ಟಮೀಯ ದಿವಸ ರಾಮಭಕ್ತನು ಸ್ನಾನ ಸಂಧ್ಯಾವಂದನಾದಿಗಳನ್ನು ಆಚರಣೆ ಮಾಡಬೇಕು. ಅನಂತರ ಶ್ರೋತ್ರ‍್ರಿಯನೂ ಶ್ರೀರಾಮಭಕ್ತನೂ, ಶ್ರೀರಾಮಪೂಜಕನೂ, ಶ್ರೀರಾಮಮಂತ್ರಜ್ಞನೂ, ವೇದಜ್ಞನೂ ಆದ ಬ್ರಹ್ಮಜ್ಞಾನಿಯನ್ನು ಆಮಂತ್ರಿಸಬೇಕು. ಅವನನ್ನು ಸ್ವಾಗತ ಮಾಡಿ ಪೂಜಿಸಿ, ಅವನಿಗೆ ರಾಮನ ಪ್ರತಿಮೆಯನ್ನು ದಾನ ಮಾಡುತ್ತೇನೆಂದು ಸಂಕಲ್ಪ ಮಾಡಬೇಕು. ಅನಂತರ ಆ ಶ್ರೀರಾಮಭಕ್ತನಿಗೆ ಅಭ್ಯಂಜನವನ್ನು ಮಾಡಿಸಿ, ಸ್ನಾನ ಮಾಡಿಸಬೇಕು. ಶ್ವೇತವಸ್ತ್ರಗಳನ್ನು ಶ್ವೇತಪುಷ್ಪಗಳನ್ನು ನೀಡಿ ಸಾತ್ವಿಕ ಆಹಾರವನ್ನು ಭೋಜನ ಮಾಡಿಸಬೇಕು. ಅನಂತರ ಉಳಿದ ಆಹಾರವನ್ನು ತಾನು ಭುಂಜಿಸಬೇಕು. ನಿರಂತರ ಶ್ರೀರಾಮಧ್ಯಾನವನ್ನು ಮಾಡುತ್ತಲೇ ಇರಬೇಕು. ಅವನ ಬಳಿ ರಾಮದೇವರ ಕಥೆಯನ್ನು ಕೇಳಬೇಕು. ರಾಮದೇವರ ಮಹತ್ವವನ್ನೂ ಕೂಡ ಕೇಳಿ ತಿಳಿದುಕೊಳ್ಳಬೇಕು.
ಶ್ರೀರಾಮ ಕೇವಲ ದೇವರ ಪ್ರತಿಮೆಯಲ್ಲ ಅದೊಂದು ಮೌಲ್ಯದ ಖಣಿ.