ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂಸಾರ ಬಂಧನ

04:03 AM May 28, 2024 IST | Samyukta Karnataka

ಸಂಸಾರವನ್ನು ಬಂಧನವೆಂಬುದಾಗಿ ಯಾಕೆ ಕರೆಯುತ್ತಾರೆ? ಭಜನೆಗಳಲ್ಲಿ, ಸ್ತೋತ್ರಗಳಲ್ಲಿ ಭವ-ಬಂಧನವನ್ನು ಬಿಡಿಸುವ ಬಗ್ಗೆ ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸಿಕೊಳ್ಳುತ್ತಾರೆ. ಆದರೆ ಸಂಸಾರವು ಬಂಧನವಾದದ್ದು ಹೇಗೆ? ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.
ಈ ಪ್ರಶ್ನೆಗೆ ಅನೇಕ ಉತ್ತರಗಳನ್ನು ಕೊಡಬಹುದು. ಇಲ್ಲಿ ಜನ್ಮ-ಮರಣಗಳ ಅದು ಬಂಧನ ಹೇಗೆ ಎಂಬುದನ್ನು ತಿಳಿಸಬಹುದು. ಭಗವಂತನ ಪ್ರಸಿದ್ಧವಾದ ಮಾತು-`ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ ಟ ತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ವಂ ಶೋಚಿತುಮರ್ಹಸಿ ಟಟ' ಹುಟ್ಟಿದವನಿಗೆ ಮರಣ ತಪ್ಪಿದ್ದಲ್ಲ, ಮರಣ ಹೊಂದಿದವನಿಗೆ ಮತ್ತೆ ಹುಟ್ಟು ತಪ್ಪಿದ್ದಲ್ಲ. ಹೀಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಜನ್ಮ-ಮರಣಗಳು ನಮ್ಮನ್ನು ಕಟ್ಟಿ ಹಾಕಿವೆ. ಇದೇ ಸಂಸಾರ ಬಂಧನ. ಇಲ್ಲಿ ಹುಟ್ಟಿದವನಿಗೆ ಹೇಗೆ ಮರಣ ಅನಿವಾರ್ಯವೋ, ಮರಣ ಹೊಂದಿದವನಿಗೆ ಪುನಃ ಹುಟ್ಟು ಅಷ್ಟೇ ಅನಿವಾರ್ಯ.
ಗಂಭೀರವಾದ ಅಪರಾಧ ಮಾಡಿದವನಿಗೆ ಮರಣದಂಡನೆಯನ್ನು ವಿಧಿಸುತ್ತಾರೆ. ಆ ಅಪರಾಧಿಗೆ ಪ್ರತಿದಿನವೂ, ಪ್ರತಿ ಕ್ಷಣವೂ ತನ್ನ ಮರಣ ಹತ್ತಿರ ಬರುತ್ತಿರುವ ನಿಜವಾದ ಅನುಭವವಾಗುತ್ತದೆ. ಮರಣದಂಡನೆಗೆ ಗುರಿಯಾದ ಈ ಅಪರಾಧಿಗೂ ಮತ್ತು ನಮಗೂ ಬಹಳ ಅಂತರವಿದೆ. ನಾವುಗಳು ಹುಟ್ಟುವಾಗಲೇ ಮರಣವನ್ನು ನಿರ್ಧರಿಸಿಕೊಂಡೇ ಹುಟ್ಟಿ ಬಂದಿದ್ದೇವೆ. ಅಂದರೆ ಒಂದು ರೀತಿಯಲ್ಲಿ ಮರಣದಂಡನೆಯು ನಿರ್ಧಾರವಾಗಿದೆ. ನಮಗಿದು ಎಷ್ಟೋ ಸಲ ಮರೆತು ಹೋಗಿರುವುದರಿಂದ ಮರಣವಿಲ್ಲದಿರುವವರೆಂಬ ಹಾಗೆ ಉಚ್ಛೃಂಕಲತೆಯಿಂದ ವರ್ತಿಸುತ್ತೇವೆ. ಮಾಂಸದ ಅಂಗಡಿಯಲ್ಲಿ ಇರುವ ಗೂಡಿನಲ್ಲಿ ಕೋಳಿಗಳನ್ನು ಇಟ್ಟಿರುತ್ತಾರೆ. ಕಟುಕನು ಯಾವ ವೇಳೆಯಲ್ಲಿಯೂ, ಯಾವ ಕೋಳಿಯನ್ನೂ ಕೊಯ್ಯಬಹುದು. ಆ ಕೋಳಿಗಳಿಗಿಂತ ನಮ್ಮ ನಮ್ಮ ಸ್ಥಿತಿ ತುಂಬಾ ಭಿನ್ನವಾದವು ಏನು ಅಲ್ಲ. ಪ್ರಾಚೀನ ಗ್ರಂಥಗಳಲ್ಲಿ ನಮ್ಮನ್ನು ಮೃತ್ಯು ದೇವತೆಯ ಆಟಿಕೆ ಎಂಬುದಾಗಿ ಕರೆದಿದ್ದಾರೆ ಆಟಗಾರನು ತನಗೆ ಇಷ್ಟ ಬಂದಂತೆ ಆಟಿಕೆಗಳನ್ನು ಬಳಸಬಹುದು ಅಥವಾ ಒದ್ದು ಆಚೆಗೆ ಎಸೆಯಬಹುದು. ಇದೇ ನಮ್ಮ ಸ್ಥಿತಿ, ಬಂಧನದ ಸ್ಥಿತಿ.
ಸಾಧನೆಗಳನ್ನು ಮಾಡಿ ಶಾಸ್ತ್ರೋಕ್ತ ಕ್ರಮದಂತೆ ಶರೀರತ್ಯಾಗ ಮಾಡುವ ಯೋಗಿ ಮತ್ತು ಧರ್ಮಮಯ ಜೀವನವನ್ನು ಸಾಗಿಸುವ ಧರ್ಮನಿಷ್ಠ ಇವರಿಬ್ಬರನ್ನು ಹೊರತುಪಡಿಸಿದರೆ ಬಹುತೇಕ ಉಳಿದೆಲ್ಲರ ಮರಣವೂ ಮತ್ತೆ ಹುಟ್ಟುವಿಕೆಗೆ ಬಾಗಿಲನ್ನು ತೆರೆದೇ ಇಡುತ್ತದೆ. ಹುಟ್ಟಿದವನಿಗೆ ಹೇಗೆ ಮರಣದ ಭಯವೋ ಅದೇ ರೀತಿ ಮರಣ ಹೊಂದಿದವನಿಗೆ ಮತ್ತೆ ಹುಟ್ಟುವಿಕೆ ಅಷ್ಟೇ ಭಯಂಕರವಾಗಿ ಇರುತ್ತದೆ. ಅನೇಕ ಜೀವಿಗಳು ಮರಣಾನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಗ ಅವರಿಗೆ ಮತ್ತೆ ಹುಟ್ಟುವುದರ ಭಯ ಗೋಚರವಾಗದಿರಬಹುದು. ಆದರೆ ಕೆಲವು ಜೀವಿಗಳಿಗೆ ಮರಣಾನಂತರವೂ ಪ್ರಜ್ಞೆ ಮುಂದುವರೆಯುತ್ತದೆ. ಅಂತಹ ಎಲ್ಲ ಜೀವಿಗಳಿಗೂ ಮುಂದೆ ಮತ್ತೆ ತಾಯಿಯ ಗರ್ಭ ಸೇರಬೇಕೆಂದರೆ ಭಯವಾಗುತ್ತದೆ ಇದನ್ನು ಉಪನಿಷತ್ತುಗಳು ಮತ್ತು ಪುರಾಣಗಳು ನಿರೂಪಿಸುತ್ತವೆ. ವಸ್ತುಸ್ಥಿತಿಯಲ್ಲಿ ತಾಯಿಯ ಗರ್ಭದಲ್ಲಿ ವಾಸ ಮತ್ತು ಜನನ ಅತ್ಯಂತ ಕಠೋರವಾದ ದುಃಖವೇ ಆಗಿದೆ. ಒಟ್ಟಾರೆ ಹುಟ್ಟಿದ ನಂತರ ಮರಣದ ಅನಿವಾರ್ಯತೆಯಲ್ಲಿ ಮತ್ತು ಮರಣದ ನಂತರ ಪುನಃ ಹುಟ್ಟುವ ಅನಿವಾರ್ಯತೆಯಲ್ಲಿ ನಾವೆಲ್ಲ ಸಿಕ್ಕಿಕೊಂಡಿದ್ದೇವೆ. ಇದೇ ಸಂಸಾರ ಬಂಧನ.

Next Article