For the best experience, open
https://m.samyuktakarnataka.in
on your mobile browser.

ಸಕಲ ಜೀವಿಗಳಿಗೆ ಲೇಸನ್ನು ಪಾಲಿಸುತ್ತ…

05:00 AM Jun 07, 2024 IST | Samyukta Karnataka
ಸಕಲ ಜೀವಿಗಳಿಗೆ ಲೇಸನ್ನು ಪಾಲಿಸುತ್ತ…

ಕುರಾನಿನ ಅನೇಕ ಅಧ್ಯಾಯಗಳಲ್ಲಿ ಪಶು ಪಕ್ಷಿಗಳ ಆರೈಕೆ, ರಕ್ಷಣೆ ಕುರಿತು ವಿವಿಧ ಪ್ರಸಂಗಗಳಲ್ಲಿ ಆಜ್ಞೆ, ಉಪದೇಶ ಹಾಗೂ ವಿವರಣೆಯನ್ನು ನೀಡಲಾಗಿದೆ. ಗಮನಿಸುವ ವಿಷಯವೆಂದರೆ ಕೆಲವು ಅಧ್ಯಾಯಗಳಿಗೆ ಪಶು ಪಕ್ಷಿ, ಕೀಟಕಗಳ ಹೆಸರನ್ನಿಡಲಾಗಿದೆ. ಕುರಾನಿನ ಎರಡನೆಯ ಅಧ್ಯಾಯದ ಹೆಸರು ಆಕಳು' (ಬಕರ) ಎಂದು. ಅಧ್ಯಾಯ ನಮ್ಲ (೨೭) ಅಂದರೆ ಇರುವೆ, ಅಧ್ಯಾಯ ಅಂಕಬೂತ (೨೦) ಅಂದರೆ ಜೇಡ, ಅಧ್ಯಾಯ ನಹ್ಲ (೧೬) ಅಂದರೆ ಜೇನ್ನೊಣ. ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಪ್ರಾಣಿಯನ್ನು ಹಾಗೂ ಎರಡು ರೆಕ್ಕೆಗಳಿಂದ ಹಾರುವ ಪಕ್ಷಿಗಳನ್ನು ನೋಡಿಕೊಳ್ಳಿ ಅವೆಲ್ಲವೂ ನಿಮ್ಮಂತೆಯೇ ಇರುವ ಜೀವಿಗಳು( ಅಧ್ಯಾಯ ೬.೩೮). ಪ್ರವಾದಿವರ್ಯ ಮೊಹಮ್ಮದ್(ಸ) ಅವರ ಈ ವಚನ ನೋಡಿ..ಪ್ರಾಣಿಗಳೊಂದಿಗೆ, ಪಕ್ಷಿಗಳೊಂದಿಗೆ, ಉತ್ತಮವಾಗಿ ವರ್ತಿಸಿರಿ. ಅವುಗಳ ಮೇಲೆ ಕರುಣೆ ತೋರಿದರೆ ಅಲ್ಲಾಹನು ನಿಮಗೆ ಪ್ರತಿಫಲ ನೀಡುವನು. ಎಲ್ಲ ಪಶು ಪಕ್ಷಿಗಳಿಗೆ ಕರುಣೆ ತೋರಬೇಕು. ವಿನಾಕಾರಣ ಅವುಗಳನ್ನು ಹಿಂಸಿಸಬಾರದು. ಅವುಗಳಿಗೆ ದಯೆ ತೋರಿಸಿದರೆ ಅಲ್ಲಾಹನು ನಿಮ್ಮನ್ನು ಮೆಚ್ಚುವನು'.
ಮೂಕ ಪ್ರಾಣಿಗಳು ನಮ್ಮೊಂದಿಗೇನೂ ಹೇಳಲಾರವು ನಮ್ಮನ್ನು ಕುರಿತು ದೂಷಿಸಲು ಅವುಗಳಿಗೆ ಸಾಧ್ಯವಿಲ್ಲ ಅವುಗಳ ಮೇಲೆ ದಯೆ ತೋರಬೇಕು. ಅವುಗಳಿಗೆ ಆಯಾಸವಾಗಿ ಅವು ನಿಶಕ್ತರಾಗುವ ಮೊದಲು ಅವುಗಳಿಗೆ ಸೂಕ್ತ ಆಹಾರ ಹಾಗೂ ವಿಶ್ರಾಂತಿ ನೀಡಿರಿ ಎಂಬ ಅನೇಕ ಉಪದೇಶಗಳು ಎಲ್ಲಾ ಧರ್ಮಗಳ ಸಾಧು ಸಂತರು ಶರಣರು ನೀಡಿದ್ದಾರೆ. ಇಸ್ಲಾಮಿನ ಮೂಲಭೂತ ನಡವಳಿಕೆಯಲ್ಲಿ ಪಶು ಪಕ್ಷಿ ಹಾಗೂ ಇತರ ಜೀವಿಗಳನ್ನೇ ಹಿಂಸಿಸುವುದು ಅವುಗಳ ಜೀವಗಳೊಂದಿಗೆ ಆಟವಾಡುವುದನ್ನು ತೀವ್ರವಾಗಿ ವಿರೋಧಿಸಲಾಗಿದೆ. ಪ್ರವಾದಿವರ್ಯ ಮುಹಮ್ಮದ(ಸ) ಅವರ ಇನ್ನೊಂದು ವಚನ ನೋಡಿ.' ಯಾವನಾದರೂ ಪ್ರಾಣಿ ಪಕ್ಷಿ ಇತರ ಜೀವಿಗಳ ಜೀವಿಸುವ ಹಕ್ಕನ್ನು ಲೆಕ್ಕಿಸದೆ ಕೊಲ್ಲುತ್ತಾನೋ ವಿಚಾರಣೆಯ ದಿನ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದು.
ಹೀಗೆ ಪ್ರವಾದಿವರ್ಯರು ಪಶು ಪಕ್ಷಿಗಳು ಜೀವಿಸುವ ಹಕ್ಕನ್ನು ಗೌರವಿಸುವುದನ್ನು ಕಲಿಸಿ ಕೊಟ್ಟರು. ಜೀವ ಇರುವ ಯಾವುದಕ್ಕೂ ನೀವು ಉಪಕಾರ ಮಾಡಿದರೆ ಅದರ ಪ್ರತಿಫಲ ನಿಮಗೆ ದೊರೆಯುತ್ತದೆಂಬ ಇನ್ನೊಂದು ವಚನ. `ಮನುಷ್ಯನ ಪ್ರಾಣ ಉಳಿಸಲು ವಿಷ ಜಂತುಗಳನ್ನು ಕ್ರೂರ ಮೃಗಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ. ವಿನಾಕಾರಣ ಮೋಜಿಗಾಗಿ, ಬೇಟೆಯಾಡಿ ಅವುಗಳನ್ನು ಕೊಲ್ಲುವುದಾಗಲಿ, ಪಂಜರಗಳಲ್ಲಿ ಇಡುವುದಾಗಿ ಇಸ್ಲಾಂ ನಿಷೇಧಿಸಿದೆ. ಜೇನುನೊಣ ಇಸ್ಲಾಮಿನಲ್ಲಿ ಪವಿತ್ರವಾದುದ್ದೆಂದು ಪರಿಗಣಿಸಲಾಗಿದೆ. ಜೇನು ಮನುಷ್ಯರಿಗೆ ಆಹಾರ ಔಷದ ಹಾಗೂ ಆರೋಗ್ಯಕ್ಕಾಗಿ ಅವಶ್ಯವೆಂದು ಹೇಳಿ ಅವುಗಳನ್ನು ಕೊಲ್ಲುವುದು ಪಾಪ ಕಾರ್ಯವೆಂದು ಹೇಳಲಾಗಿದೆ.