ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾಮರಸ್ಯ

03:30 AM May 13, 2024 IST | Samyukta Karnataka

ಅಧ್ಯಾತ್ಮ ಸಾಧನೆಯು ಶ್ರದ್ಧೆಯಿಂದ ಪ್ರಾರಂಭಗೊಂಡು ಸಾಮರಸ್ಯದಲ್ಲಿ ಪೂರ್ಣಗೊಳ್ಳುತ್ತದೆ. ಭಕ್ತನ ಶ್ರದ್ಧೆಯೇ ವಿಕಾಸಗೊಂಡು ಅವನನ್ನು ಶಿವಸಾಮರಸ್ಯದವರೆಗೆ ಕರೆದೊಯ್ಯುತ್ತದೆ. ಸಾಮರಸ್ಯವೆಂದರೆ ಒಂದು ವಸ್ತು ಇನ್ನೊಂದು ವಸ್ತುವಿನಲ್ಲಿ ಬೆರೆತು ಒಂದಾಗುವುದು. ಜೀವಾತ್ಮನು ಪರಮಾತ್ಮನಲ್ಲಿ ಬೆರೆತು ಒಂದಾಗುವುದನ್ನು ಇಲ್ಲಿ ಸಾಮರಸ್ಯವೆಂದು ಕರೆಯಲಾಗಿದೆ.
ಸಾಮಾನ್ಯವಾಗಿ ಒಂದು ವಸ್ತು ಇನ್ನೊಂದು ವಸ್ತುವಿನಲ್ಲಿ ಬೆರೆತು `ಸಮರಸ'ವಾಗಬೇಕಾದರೆ ಆ ಎರಡು ವಸ್ತುಗಳ ಗುಣಧರ್ಮಗಳು ಒಂದೇ ಆಗಿರಬೇಕಾಗಿರುತ್ತದೆ. ಭಿನ್ನ ಭಿನ್ನ ಗುಣಧರ್ಮಗಳನ್ನು ಹೊಂದಿದ ಎರಡು ವಸ್ತುಗಳು ಬೆರೆತು ಒಂದಾಗಲು ಸಾಧ್ಯವಿಲ್ಲ. ಒಂದಾದಂತೆ ತೋರಬಹುದು ಆದರೆ ಸಮರಸವಾಗಲಾರದು.
ನೀರಿನಲ್ಲಿ ನೀರು ಬೆರೆತಾಗ ಅದು ಸಮರಸಗೊಳ್ಳುತ್ತದೆ. ಏಕೆಂದರೆ ನೀರಿನಲ್ಲಿ ಸಮಾನ ಧರ್ಮಗಳಿದ್ದು ಬೆರೆತ ಮೇಲೆ ಅವುಗಳನ್ನು ಬೇರ್ಪಡಿಸುವುದು ಸಾಧ್ಯವಾಗುವುದಿಲ್ಲ. ಮತ್ತು ಇದು ಮೊದಲಿನ ನೀರು, ಇದು ನಂತರ ಹಾಕಿದ ನೀರು ಎಂದು ವಿಭಾಗಿಸಿ ನೋಡಲು ಸಾಧ್ಯವಾಗುವುದಿಲ್ಲ. ಅದು ಏಕರಸವಾಗುತ್ತದೆ. ಆದರೆ ನೀರಿನಲ್ಲಿ ಹಾಲು ಬೆರೆತರೆ ಅದನ್ನು ಸಮರಸವೆಂದು ಹೆಸರಿಸಲಾಗದು. ಮೊದಲಿದ್ದ ನೀರಿನ ಬಣ್ಣ ಹಾಲು ಸೇರಿದ ನಂತರ ಉಳಿಯುವದಿಲ್ಲ. ಯಾಕೆಂದರೆ ಹಾಲಿನ ಗುಣಧರ್ಮವೇ ಬೇರೆ, ನೀರಿನ ಗುಣಧರ್ಮವೇ ಬೇರೆ. ಅವೆರಡು ಸೇರಿದಾಗ ಆಗುವುದೇ ಬೇರೆ. ಒಟ್ಟಿನಲ್ಲಿ ಸಮಾನ ಗುಣಧರ್ಮ ಹೊಂದಿದ ವಸ್ತುಗಳಲ್ಲಿ ಮಾತ್ರ ಸಮರಸ ಸಾಧ್ಯವಾಗುವುದು.
ಜೀವಪರಮಾತ್ಮರಲ್ಲಿ ಸಮರಸವು ಉಂಟಾಗಬೇಕಾದರೆ, ಜೀವಿಯು ಪರಮಾತ್ಮನ ಗುಣಧರ್ಮಗಳ ಎತ್ತರಕ್ಕೆ ಏರಬೇಕಾಗುತ್ತದೆ. ಆತ್ಮದ ದೃಷ್ಟಿಯಿಂದ ವಿಚಾರಿಸಲಾಗಿ ವಸ್ತುತಃ ಅಂಗ- ಲಿಂಗಗಳಲ್ಲಿ ಯಾವ ಭೇದವು ಇಲ್ಲ. ಆದರೆ ಅವರಲ್ಲಿರುವ ಶಕ್ತಿ ಸಾಮರ್ಥ್ಯಗಳನ್ನು ಅವಲೋಕಿಸಿದರೆ ಭೇದ ಎದ್ದು ತೋರುತ್ತದೆ. ಜೀವಿಯು ಅಲ್ಪಜ್ಞತ್ವ ಹಾಗೂ ಅಲ್ಪ ಕರ್ತೃತ್ವಶಕ್ತಿಗಳಿಂದ ಕೂಡಿಕೊಂಡರೆ ಶಿವನು ಸರ್ವಜ್ಞತ್ವ-ಸರ್ವಕರ್ತತ್ವ ಶಕ್ತಿಗಳಿಂದ ವಿಶಿಷ್ಟನಾಗಿರುವನು. ಅಂತೆಯೇ "ಶಿವಾದ್ವೈತ ಪರಿಭಾಷೆ"ಯಲ್ಲಿ ನೀಲಕಂಠ ಶಿವಾಚಾರ್ಯರು-“ಸ್ಕೂಲ ಚಿದ ಚಿದ್ರೂಪಶಕ್ತಿವಿಶಿಷ್ಟತ್ವಂ ಜೀವತ್ವಂ' ಎಂಬುದಾಗಿ ಜೀವಾತ್ಮನ ಲಕ್ಷಣವನ್ನು "ಸೂಕ್ಷ್ಮ ಚಿದಚಿದ್ರೂಪ ಶಕ್ತಿವಿಶಿಷ್ಟತ್ವಂ ಶಿವತ್ವಂ" ಎಂಬುದಾಗಿ ಶಿವನ ಲಕ್ಷಣವನ್ನು ನಿರೂಪಿಸಿರುವರು. ಸ್ಥೂಲ ಚಿದಚಿತ್‌ಶಕ್ತಿಯೆಂದರೆ ಮಲತ್ರಯ ವಿಶಿಷ್ಟ ಅಲ್ಪಜ್ಞತ್ವ ಮತ್ತು ಅಲ್ಪಕರ್ತೃತ್ವ ಎಂತಲೂ, ಸೂಕ್ಷ್ಮ ಚಿದ ಚಿತ್ ಶಕ್ತಿಯೆಂದರೆ ಮಲತ್ರಯ ರಹಿತ ಸರ್ವಜ್ಞತ್ವ ಮತ್ತು ಸರ್ವಕರ್ತೃತ್ವವೆಂದು ಅರ್ಥೈಸಲಾಗುತ್ತದೆ. ಕಾರಣ ಸಂಸಾರ ಅವಸ್ಥೆಯಲ್ಲಿ ಜೀವಪರಮಾತ್ಮರಲ್ಲಿ ನೆಲೆಸಿರುವ ಗುಣಧರ್ಮಗಳು ಪರಸ್ಪರ ಭಿನ್ನ ಭಿನ್ನವಾಗಿರುವುದರಿಂದ ಅವರಿಬ್ಬರ ಸಮರಸ ಹೇಗೆ ಸಾಧ್ಯ ಎಂಬ ಸಂದೇಹ ಸಹಜವಾದುದು. ಈ ಕಾರಣಕ್ಕಾಗಿಯೇ ದ್ವೈತವಾದಿಗಳು ಶಿವಜೀವರಲ್ಲಿ ಅದ್ವೈತ ಅಥವಾ ಸಮರಸ ಅದೆಂದಿಗೂ ಸಾಧ್ಯವಿಲ್ಲವೆಂದು ವಾದಿಸುವುದುಂಟು. ಆದರೆ ವಸ್ತುತಃ ಶಿವಜೀವರ ಪರಸ್ಪರ ಭಿನ್ನತೆಗೆ ಅವರಲ್ಲಿ ನೆಲೆಸಿರುವ ಗುಣಧರ್ಮಗಳು ಕಾರಣವೇ ಹೊರತು ಅವರ ಸ್ವರೂಪವಲ್ಲ. ಸ್ವರೂಪತಃ ಇವರಿಬ್ಬರೂ ಒಂದೆ ಆಗಿರುವುದರಿಂದ ಇವರ ಸ್ವರೂಪವನ್ನು ಆವರಿಸಿರುವ ಅಲ್ಪಜ್ಞತ್ವ ಅಲ್ಪಕರ್ತೃತ್ವ ಮತ್ತು ಸರ್ವಜ್ಞತ್ವ ಸರ್ವಕರ್ತೃತ್ವಾದಿಗಳು ದೂರಸರಿದಾಗ ಇವರಿಬ್ಬರ ಸಾಮರಸ್ಯ ಘಟಿಸುವುದರಲ್ಲಿ ಯಾವ ಪ್ರತಿರೋಧವೂ ಇಲ್ಲ.

Next Article