ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ಥಿತಪ್ರಜ್ಞನ ಸುಖ-ದುಃಖ ಪ್ರಜ್ಞೆ

04:30 AM Oct 29, 2024 IST | Samyukta Karnataka

ಭಗವಂತನು ಹೇಳಿದ ಸ್ಥಿತಪ್ರಜ್ಞನ ಲಕ್ಷಣದಲ್ಲಿ ಒಂದು ಶ್ಲೋಕ ಹೀಗಿದೆ.. ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ | ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ||' ಪರಮಾತ್ಮನಲ್ಲಿ ಯಾವತನ ಪ್ರಜ್ಞೆಯು ನೆಲೆ ನಿಂತಿದೆಯೋ ಅವನು ಸ್ಥಿತಪ್ರಜ್ಞ. ಸ್ಥಿತಪ್ರಜ್ಞನು ಸುಖ-ದುಃಖಗಳಲ್ಲಿ ಹೇಗಿರುತ್ತಾನೆಂಬುದನ್ನು ಈ ಶ್ಲೋಕವು ಹೇಳುತ್ತದೆ. ದುಃಖಗಳು ಎದುರಾದಾಗ ಅವನ ಮನಸ್ಸು ಉದ್ವೇಗಗೊಳ್ಳುವುದಿಲ್ಲ. ದುಃಖಗಳು ಮೂರು ಪ್ರಕಾರವಾಗಿರುತ್ತವೆ. ಶೋಕ, ಮೋಹ, ಜ್ವರ, ತಲೆನೋವು ಮುಂತಾದವುಗಳಿಂದ ಉಂಟಾದ ದುಃಖಗಳು ಆಧ್ಯಾತ್ಮಿಕ ದುಃಖಗಳು. ಹುಲಿ, ಸರ್ಪ, ಚೋರ ಮುಂತಾದವುಗಳಿಂದ ಉಂಟಾಗುವ ದುಃಖಗಳು ಆದಿಭೌತಿಕ ದುಃಖಗಳು. ಅತಿವೃಷ್ಟಿ-ಅನಾವೃಷ್ಟಿಯಿಂದ ಉಂಟಾಗುವ ದುಃಖಗಳು ಆದಿದೈವಿಕ ದುಃಖಗಳು. ಈ ದುಃಖಗಳು ಉಂಟಾದಾಗ ಅಜ್ಞಾನಿಯಾದ ಮನುಷ್ಯನ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತದೆ.ಈ ದುಃಖವನ್ನು ಬೇಗ ಪರಿಹರಿಸಿಕೊಳ್ಳಲು ತನ್ನಿಂದ ಸಾಧ್ಯವಾಗುತ್ತಿಲ್ಲವಲ್ಲಾ’ ಎಂಬುದಾಗಿ ಅಜ್ಞಾನಿಯ ಮನಸ್ಸು ವ್ಯಾಕುಲಗೊಳ್ಳುತ್ತದೆ. ಇದೇ ಉದ್ವೇಗ. ಇದು ತಮೋಗುಣದಿಂದ ಬರುತ್ತದೆ. ದುಃಖಗಳು ಪ್ರಾರಬ್ಧ ಪಾಪ ಕರ್ಮಗಳಿಂದ ಬರುತ್ತದೆ.
ಆ ಕರ್ಮಗಳು ಅನುಭವಿಸುವ ಮೂಲಕ ತಾನಾಗಿಯೇ ಪರಿಹಾರ ಆಗುತ್ತವೆ ಅಥವಾ ಭಗವಂತನ ಇಚ್ಛೆಯಿಂದಲೇ ದುಃಖ ತಾನಾಗಿಯೇ ಕಡಿಮೆಯಾಗುತ್ತದೆ.
ಆಶ್ಚರ್ಯಕರ ಸಂಗತಿಯೇನೆಂದರೆ, ವಿವೇಕಿಗಳಿಗೂ ಸುಮಾರಾಗಿ ಇದೇ ತರಹದ ವ್ಯಾಕುಲತೆ ಅಥವಾ ಉದ್ವೇಗ ಪಾಪಾಚರಣೆಯು ಸನ್ನಿಹಿತವಾದಾಗ(ಪಾಪದ ಕೆಲಸವನ್ನು ಮಾಡಬೇಕಾದ ಪ್ರಸಂಗ ಬಂದಾಗ) ಉಂಟಾಗುತ್ತದೆ. ಮತ್ತು ಪಾಪಾಚರಣೆಯು ಸನ್ನಿಹಿತವಾದಾಗ ಹೀಗೆ ವ್ಯಾಕುಲತೆ ಉದ್ವೇಗ ಸ್ವಾಗತಾರ್ಹ. ಯಾಕೆಂದರೆ ಅದರಿಂದ ಪಾಪಾಚರಣೆ ದೂರವಾಗುತ್ತದೆ. ಆದರೆ ಅಜ್ಞಾನಿಗಳಿಗೆ ಪಾಪಾಚರಣೆಯು ಸನ್ನಿಹಿತವಾದಾಗ ಈ ವ್ಯಾಕುಲತೆ ಉಂಟಾಗುವುದಿಲ್ಲ. ಬದಲಾಗಿ ದುಃಖಾನುಭವದ ಕಾಲದಲ್ಲಿ ಉಂಟಾಗುತ್ತದೆ. ಇದರಿಂದ ಪ್ರಯೋಜನವಿಲ್ಲ.
ವಿವೇಕಿಯಾದ ಸ್ಥಿತಪ್ರಜ್ಞನಿಗೆ ದುಃಖದ ಕಾರಣ ಗೊತ್ತಿರುತ್ತದೆ ಮತ್ತು ವ್ಯಾಕುಲ ಪಟ್ಟಿದ್ದರಿಂದ ಪಾಪ ಹೋಗುವುದಿಲ್ಲ ಎಂಬುದು ಗೊತ್ತಿರುತ್ತದೆ. ಇಲ್ಲಿ ನೆನಪಿಡಬೇಕಾದದ್ದೇನೆಂದರೆ ಪ್ರಾರಬ್ಧ ಪಾಪ ಕರ್ಮಗಳು ದುಃಖವನ್ನು ಮಾತ್ರ ಉಂಟು ಮಾಡುತ್ತವೆ. ವ್ಯಾಕುಲತೆಯನ್ನಲ್ಲ. ಇಲ್ಲಿ ವ್ಯಾಕುಲತೆ ಭ್ರಾಂತಿ.
ಸ್ಥಿತಪ್ರಜ್ಞನ ಇನ್ನೊಂದು ಮುಖ, ಸುಖ ಬಂದಾಗ `ಮತ್ತೆ ತನಗೆ ಹೀಗೆಯೇ ಸುಖ ಬರುತ್ತಿರಲಿ’ಎಂದು ಬಯಸುವುದಿಲ್ಲ. ಹೀಗೆ ಬಯಸುವಿಕೆಯು ಒಂದು ಭ್ರಾಂತಿಯೇ.
ಆದ್ದರಿಂದ ಸ್ಥಿತಪ್ರಜ್ಞನು ಪಾಪವಿರುವಾಗಲೂ ದುಃಖ ಬರದಿರಲಿ ಎಂಬುದಾಗಿಯೂ ಭ್ರಾಂತಿ ಪಡುವುದಿಲ್ಲ ಮತ್ತು ಪುಣ್ಯವಿಲ್ಲದಾಗಲೂ ಸುಖ ಬರಲಿ ಎಂಬುದಾಗಿ ಭ್ರಾಂತಿ ಪಡುವುದಿಲ್ಲ.

Next Article