For the best experience, open
https://m.samyuktakarnataka.in
on your mobile browser.

ಹಳೆ ತತ್ವ ಹೊಸ ಯುಕ್ತಿಗಳ ಹದ ಮಿಶ್ರಣ

01:12 AM Jan 30, 2024 IST | Samyukta Karnataka
ಹಳೆ ತತ್ವ ಹೊಸ ಯುಕ್ತಿಗಳ ಹದ ಮಿಶ್ರಣ

ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು|
ಹೊಸಯುಕ್ತಿ ಹಳೆತತ್ವದೊಡಗೂಡೆಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆಮೇಳವಿಸೆ|
ಜಸವು ಜನಜೀವನಕೆ-ಮಂಕುತಿಮ್ಮ||
ಈ ಪದ್ಯವನ್ನು ಇಂದಿನ ಬಹುತೇಕ ಶ್ರದ್ಧಾವಂತ ಸಮಾಜ ಚಿಂತಕರು ಹೇಳುತ್ತಾರೆ, ಅಥವಾ ಈ ಪದ್ಯದ ಸಾಲು ಗೊತ್ತಿಲ್ಲದಿದ್ದರೂ ಇದರ ತಾತ್ಪರ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ವಿಜ್ಞಾನ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿರುವುದರ ಜೊತೆಗೆ ಋಷಿಗಳ ತತ್ವಜ್ಞಾನ ಪೂರ್ಣವಾದ ವಾಕ್ಯಗಳು ಒಟ್ಟಿಗೆ ಬಂದರೆ ಚೆನ್ನಾಗಿ ಇರುತ್ತದೆ. ಒಂದು ವನದ ಸೌಂದರ್ಯವನ್ನು ಸಸ್ಯಶಾಸ್ತ್ರ ತಿಳಿದವನು ಎರಡು ಅಂಶಗಳ ಮೂಲಕ ನಿರ್ಧರಿಸುತ್ತಾನೆ. ಒಂದು ಆ ಮರಕ್ಕೆ ಹೊಸ ಚಿಗುರು ಇರಬೇಕು.
ಇನ್ನೊಂದು ಭೂಮಿಯಲ್ಲಿ ಬೇರು ಆಳವಾಗಿ ಹೋಗಿರಬೇಕು. ಕೇವಲ ಹೊರಗೆ ಚೆಂದ ಕಾಣುವ ಚಿಗುರುಗಳಿಂದಷ್ಟೇ ಮರದ ನಿಜವಾದ ಸೊಬಗು ಸಿದ್ಧವಾಗುವುದಿಲ್ಲ. ಕೆಳಗೆ ಆಳವಾಗಿ ಬೇರು ಇಲ್ಲದಿದ್ದರೆ ಆ ಚಿಗುರು ಹೆಚ್ಚು ಕಾಲ ನಿಲ್ಲಲಾರದು. ಹಾಗೆಯೇ ಹಳೆಯ ಋಷಿವಾಕ್ಯದ ಹಿನ್ನೆಲೆ ಇಲ್ಲದಿದ್ದರೆ ವಿಜ್ಞಾನ ತಂತ್ರಜ್ಞಾನಗಳು ದಾರಿ ತಪ್ಪುವ ಸಾಧ್ಯತೆಗಳಿವೆ.
ಆದ್ದರಿಂದ ಹಳತು ಹೊಸ ತರಹದವಾದ ಮಿಶ್ರಣ ಬೇಕಾಗಿದೆ. ಆದರೆ ಇಂದಿನ ವಾತಾವರಣದಲ್ಲಿ ಹೊಸತರ ಬಗ್ಗೆ, ಅಂದರೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳ ಬಗ್ಗೆ ಕೊಡಲ್ಪಡುತ್ತಿರುವ ಮಹತ್ವ ಪ್ರಾಚೀನ ಋಷಿ ವಾಕ್ಯಗಳಿಗೆ ಸಿಗುತ್ತಿಲ್ಲ. ಶಾಲೆಗಳ ಪಠ್ಯಕ್ರಮದಲ್ಲಿ ಋಷಿಗಳ ಚಿಂತನೆಗೆ ಅವಶ್ಯವಿರುವಷ್ಟು ಅವಕಾಶವಿಲ್ಲ.
ಮನೆಗಳಲ್ಲಿ ತಾಯಿ-ತಂದೆಯರು ಮಕ್ಕಳಿಗೆ ಪ್ರಾಚೀನ ಪರಂಪರೆಯ ಶ್ರೇಷ್ಠತೆಯನ್ನು ತಿಳಿಸುವುದಕ್ಕೆ ಕೊಡುತ್ತಿರುವ ಮಹತ್ವ ಕಡಿಮೆಯಾಗಿದೆ. ತಾಯಿ-ತಂದೆಯರಿಗೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳ ಕಡೆಗೆ ಹೆಚ್ಚು ಗಮನ. ಎಷ್ಟೋ ಸಲ ನಮ್ಮ ಕಾನೂನು ಕೂಡ ಇದೇ ಮಾರ್ಗವನ್ನು ಅನುಸರಿಸುತ್ತದೆ. ಹಾಗಾಗಿ ಇಂದಿನ ವಾತಾವರಣದಲ್ಲಿ ಹಳೆ ತತ್ವ ಹೊಸ ಯುಕ್ತಿಗಳ ಹದ ಮಿಶ್ರಣವಾಗದೆ ಸಮಾಜ ಸಮತೋಲತೆಯನ್ನು ತಪ್ಪುತ್ತಿದೆ.
ಇದನ್ನು ಸರಿಪಡಿಸುವುದಕ್ಕೆ ಆಧ್ಯಾತ್ಮಿಕ, ಧಾರ್ಮಿಕ, ನೇತಾರ ಹೆಚ್ಚು ಗಮನ ಹರಿಸಬೇಕಾಗಿದೆ. ಸದ್ಯಕ್ಕೆ ಮಠಗಳಲ್ಲಿ, ಆಶ್ರಮಗಳಲ್ಲಿ ಹಳೆ ತತ್ವಕ್ಕೆ ತಕ್ಕಮಟ್ಟಿನ ಮಹತ್ವವಿದೆ. ಅದು ಸಮಾಜದ ಬೇರೆ ಸ್ತರಗಳಲ್ಲಿಯೂ ಬರಬೇಕು.
ಸಾಹಿತ್ಯ ನಿರ್ಮಾಣ ಈ ದಿಸೆಯಲ್ಲಿ ಇನ್ನಷ್ಟು ಆಗಬೇಕು. ಪ್ರಭಾವಶಾಲಿ ಮಾಧ್ಯಮಗಳು ಈ ದಿಸೆಯಲ್ಲಿ ಇನ್ನಷ್ಟು ಮುಂದೆ ಬರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಈ ನಿಟ್ಟಿನ ಪರಿಷ್ಕಾರಗಳಾಗಬೇಕು. ಏನೂ ಮಾಡದೆ ಹೀಗೆ ಮುಂದುವರಿದರೆ ಜಗತ್ತಿನ
ಅಮೇರಿಕ, ಬ್ರಿಟನ್, ರಷ್ಯಾಗಳಂತೆಯೆ ನಾವು ಕೂಡ ಪೆಟ್ಟು ತಿನ್ನಬೇಕಾಗಿ ಬರಬಹುದು. ಅಂದರೆ ಆ ದೇಶಗಳಂತೆಯೆ ನಮ್ಮ ದೇಶದ ಜನತೆಯ ಜನಜೀವನ ಇನ್ನಷ್ಟು ಅಶಾಂತಿಮಯವಾಗಬಹುದು.