ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ
ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಎಮ್.ಆರ್.ಪಾಟೀಲ್
ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಇತ್ತಿಚೆಗೆ ಕರಿಯಪ್ಪಗೌಡ ಪಾಟೀಲ್ ಎಂಬಾತರ ಮಗಳು ಪೂರ್ಣಾ ಕರಿಯಪ್ಪಗೌಡ ಪಾಟೀಲ್ (05) ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಕುಂದಗೋಳ ಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮೃತಪಟ್ಟ ಪೂರ್ಣಾ ಕುಟುಂಬಸ್ಥರೊಂದಿಗೆ ಮಾಹಿತಿ ಪಡೆದುಕೊಂಡು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಬಾಲಕಿ ಮೃತಪಟ್ಟಿರುವುದು ಶಂಕಿತ ಡೆಂಗ್ಯೂ ಜ್ವರಕ್ಕೆ ನಾ? ಇಲ್ಲಾ ಅನ್ಯ ಕಾರಣದಿಂದ ಮೃತಪಟ್ಟಿದ್ದಾರಾ ಎಂಬುದನ್ನು ಖಚಿತಪಡಿಸಿ. ಈ ಬಗ್ಗೆ ಅಗತ್ಯ ತಪಾಸಣೆಯ ರಿಪೋರ್ಟ್'ನ್ನು ತುರ್ತು ಬೆಂಗಳೂರಿಗೆ ಕಳಿಸಿ ಎಂದು ಸೂಚನೆ ನೀಡಿದರು.
ಇದೇ ವೇಳೆ ಕುಟುಂಬಸ್ಥರಿಗೆ ಆರೋಗ್ಯದಿಂದಿರಲು ಸೂಚಿಸಿ, ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಳ್ಳುವಂತೆ, ಅಗತ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಚತೆಯನ್ನು ಪರಿಶೀಲಿಸಿದರು. ಈ ವೇಳೆ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮ ಪಂಚಾಯತಿ ವತಿಯಿಂದ ಪ್ರತಿಯೊಂದು ಸ್ಥಳದಲ್ಲಿ ಫಾಗಿಂಗ್ ಮಾಡುವಂತೆ, ಹಾಗೂ ಡೆಂಗ್ಯೂ ಜಾಗೃತಿ ಮೂಡಿಸುವಂತೆ ಸೂಚನೆ ಕೊಟ್ಟರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ತಾಲೂಕು ಆರೋಗ್ಯ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.