ಶನಿಕಾಟಕ್ಕೆ ಗಣೇಶನೇ ಪರಿಹಾರ
ಯಾಕೋ ಏಳರಾಟ ಕಾಡುತ್ತಿದೆ. ಶನಿ ಹೆಗಲೇರಿದ್ದಾನೋ ಎನೋ ಗೊತ್ತಿಲ್ಲ. ಏನೂ ಕೆಲಸವಾಗುತ್ತಿಲ್ಲ. ಅಂದುಕೊಂಡಿದ್ದೆಲ್ಲ ಉಲ್ಟಾ ಪಲ್ಟಾ ಆಗುತ್ತಿವೆ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ಹಲವಾರು ಬಾರಿ ಕಣಿ ಕೇಳಿದರೂ ಉಪಯೋಗವಾಗುತ್ತಿಲ್ಲ ಎಂದು ಆ ಸಾಹೇಬರು ಮರಮರ ಮರಗುತ್ತಿದ್ದಾರೆ ಎಂದು ಲೊಂಡೆನುಮ ಪಬ್ಲಿಕ್ ಮಾಡಿದ್ದಾನೆ. ಹಲವರು ಹೋಗಿ ಧ್ಯಾನ ಮಾಡಿ ಸಾರ್ ಎಂದು ಹೇಳಿದ್ದರು. ಇನ್ನು ಕೆಲವರು ಅಯ್ಯೋ ಅದೇನು ಆಗುತ್ತೆ ಎಡಗೈಗೆ ಕರಿಲಕ್ಷಂಪತಿ ಕಡೆಯಿಂದ ಯಂತ್ರ ಕಟ್ಟಿಸಿಕೊಳ್ಳಿ ಸಾರ್ ಎಂದು ಹೇಳಿಬಂದರು ಏನು ಹೇಳಿದರೂ ಸಾಹೇಬರ ಹೆಗಲೇರಿ ಕುಳಿತಿರುವ ಶನಿಮಾತ್ಮನು ಆಗ ಹೆಂಗ ಇದ್ದಿ? ಈಗ ಹೆಂಗೆ ಇರುತ್ತಿ ಎಂದು ವಿಚಿತ್ರ ಭಾಷೆಯಲ್ಲಿ ಕೇಳಿದಂತೆ ಸಾಹೇಬರಿಗೆ ಭಾಸವಾಗುತ್ತಿದೆಯಂತೆ. ಇದಕ್ಕೇನು ಮಾಡುವುದು ಎಂದು ಲೊಂಡೆನುಮ ಊರೂರು ತಿರುಗಾಡಿ ಸಲಹೆ ಕೇಳುತ್ತಿದ್ದಾನೆ. ಕೊನೆಗೆ ಲಾದುಂಚಿ ರಾಜ ನಿಮ್ಮ ಸಾಹೇಬರಿಗೆ ಹೀಗೆ ಆಗಲು ಕಾರಣವೇನು ಗೊತ್ತೆ? ಹೇಳುತ್ತೇನೆ ಕೇಳು… ಅವತ್ತು ಪೂಜಾರಿ ಕುಪ್ಪಣ್ಣ ಪೂಜೆ ಮಾಡಿ ಹಣೆಗೆ ಕುಂಕುಮ ಇಡಲು ಬಂದಾಗ.. ಸಾಹೇಬರು ಹಿಗ್ಗಾ-ಮುಗ್ಗಾ ಝಾಡಿಸಿದರು. ನನ್ನ ಹಣೆಗೆ ಯಾಕಪ್ಪ ಪೂಜಾರಿ ಎಂದು ಜಬರಿಸಿದ ಹಾಗೆ ಮಾಡಿ ನಸುನಕ್ಕು ಬಂದಿದ್ದರು. ಅಂದೇ ರಾತ್ರಿ ಕುಪ್ಪಣ್ಣ… ದೇವಿ ಶಾಪ ಭಯಂಕರವಾಗಿರುತ್ತದೆ ಎಂದು ನುಡಿದಿದ್ದ. ಅದೆಲ್ಲ ಸರಿ ಇದಕ್ಕೇನು ಪರಿಹಾರ? ಸೂಚಿಸಿ ಎಂದಾಗ ಲಾದುಂಚಿ ರಾಜನು ಯಾವ್ಯಾವ ದೇವರ ಮುಂದೆ ಎಡವಟ್ಟಾಗಿ ಮಾತನಾಡಿದ್ದರೋ ಆ ದೇವರ ಸನ್ನಿಧಾನಕ್ಕೆ ಹೋಗಿ ಬೇಡಿಕೊಂಡರೆ ಎಲ್ಲವೂ ಪರಿಹಾರ ಆಗುತ್ತದೆ ಎಂದು ತಿಳಿಸಿದ. ಮರುದಿನವೇ ಲೊಂಡೆನುಮ ಸಾಹೇಬರಿಗೆ ಹೇಳಿದ. ಅಂದಿನಿಂದ ಸಾಹೇಬರು ಸಿಕ್ಕ ಸಿಕ್ಕ ದೇವರ ಗುಡಿಗೆ ಹೋಗಿ..ಸ್ವಾಮೀ ನೀನೇ ಕಾಪಾಡಪ್ಪ ಎಂದು ಬೇಡಿಕೊಳ್ಳುತ್ತಿದ್ದಾರೆ. ಎಲ್ಲ ದೇವರು ಮೀಟಿಂಗ್ ಮಾಡಿ… ಇದು ನಮ್ಮ ಸುಪರ್ದಿಗೆ ಬರುವುದಿಲ್ಲ. ಸ್ವಲ್ಪ ದಿನಗಳಲ್ಲಿ ಗಣೇಶ ಬರುತ್ತಿದ್ದಾನೆ. ಆತನೇ ಬಗೆಹರಿಸಿ ಹೋಗುತ್ತಾನೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಈಗ ಗಣೇಶನೇ ಕಾಪಾಡಿ ಒಂಭತ್ತರಂದೇ ಎಲ್ಲವೂ ಪರಿಹರಿಸು ಎಂದು ಬೇಡಿಕೊಳ್ಳುತ್ತಿದ್ದಾರೆ.