ಶಹನಾಯಿ ವಾದಕ ಪಂ. ಬಸವರಾಜ ಭಜಂತ್ರಿ ಸಾಧನೆ ಸ್ತುತ್ಯಾರ್ಹ: ಸಿಎಂ
ಮೈಸೂರು: ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂ.ಬಸವರಾಜ ಭಜಂತ್ರಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆ ಸ್ತುತ್ಯಾರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇಂದು ಹಂ.ಪಾ. ನಾಗರಾಜಯ್ಯ ನವರಿಂದ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಇಂದು ದಸರಾ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ ಎಂದರು.
ಮೈಸೂರು ಸಾಂಸ್ಕೃತಿಕ ನಗರ
ಮೈಸೂರನ್ನು ಸಾಂಸ್ಕೃತಿಕ ನಗರ ಎಂದು ಗುರುತಿಸಲಾಗುತ್ತದೆ. ರಾಜರ ಕಾಲದಿಂದಲೂ ಕೂಡ ಸಂಗೀತ, ನಾಟ್ಯ, ವಿವಿಧ ಕಲೆಗಳಿಗೆ ಪ್ರೋತ್ಸಾಹಿಸಲಾಗುತ್ತಿತ್ತು. ಈ ಪರಂಪರೆಯನ್ನು ಸರ್ಕಾರವೂ ಮುಂದುವರೆಸಿಕೊಂಡು ಬಂದಿದೆ. ಸಂಗೀತ ಸಾಹಿತ್ಯ ಕಲೆಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿರುವ ಅಪ್ರತಿಮ ಸಾಧಕರನ್ನು ಗುರುತಿಸಿ ಗೌರವಿಸುವುದು ಸರ್ಕಾರದ ಕರ್ತವ್ಯ. ಈ ಬಾರಿ ಸರ್ಕಾರ ದಸರಾ ಉತ್ಸವವನ್ನು ವೈಭವಯುತವಾಗಿ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.