ಶಾಮನೂರ ವಯಸ್ಸಾದ ವ್ಯಕ್ತಿ, ಬಾಯಿ ತಪ್ಪಿ ಹೇಳಿದ್ದಾರೆ
ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಸಾಕಷ್ಟು ವಯಸ್ಸಾಗಿದೆ. ಹಾಗಾಗಿ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಬಾಯಿ ತಪ್ಪಿ ಹೇಳಿದ್ದಾರೆ. ವಯಸ್ಸಿನ ಕಾರಣಕ್ಕೆ ಮಾತನಾಡುವಾಗ ಏರುಪೇರಾಗಿದೆ ಅಷ್ಟೇ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡರಾದ ಮೋಹನ್ ಲಿಂಬಿಕಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೊ ಗೊತ್ತಿಲ್ಲ. ಮೊದಲೇ ಅವರಿಗೆ ಬಹಳ ವಯಸ್ಸಾಗಿದೆ. ಮಾತನಾಡುವಾಗ ವ್ಯತ್ಯಾಸವಾಗುವುದು ಸಹಜ. ಇದೂ ಹಾಗೆಯೇ ಆಗಿರಬೇಕು. ಏನೇ ಇದ್ದರೂ ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷದ ಹೇಳಿಕೆಯಲ್ಲ ಎಂದು ಲಿಂಬಿಕಾಯಿ ಹೇಳಿದರು.
ಶಾಮನೂರ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. ಅದೊಂದು ಜವಾಬ್ದಾರಿಯುತ ಸ್ಥಾನ. ಶಾಸಕರೂ ಆಗಿದ್ದಾರೆ. ಬಾಯಿ ತಪ್ಪಿ ಹೀಗೆ ಹೇಳಲು ಹೇಗೆ ಸಾಧ್ಯ? ಹಾಗಾದರೆ ಸಮಾಜದ ವಿಷಯದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ, ನೀಡುವ ಹೇಳಿಕೆಗಳು ಹೀಗೆಯೇ ಇರುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಿಂಬಿಕಾಯಿಯವರು, ಹಾಗೇನಿಲ್ಲ. ಈ ಹೇಳಿಕೆ ವಿಷಯದಲ್ಲಿ ಹಾಗಾಗಿದೆ. ಬಾಯಿ ತಪ್ಪಿ ಈ ಮಾತು ಹೇಳಿದ್ದಾರೆ ಎಂದುಕೊAಡು ಬಿಡಬೇಕಷ್ಟೇ ಎಂದು ನುಡಿದರು.