For the best experience, open
https://m.samyuktakarnataka.in
on your mobile browser.

ಶಿಕ್ಷಣ ನೀತಿ ಮತ್ತು ಶಿಕ್ಷಕ ವೃತ್ತಿ

03:53 PM Oct 02, 2023 IST | Samyukta Karnataka
ಶಿಕ್ಷಣ ನೀತಿ ಮತ್ತು ಶಿಕ್ಷಕ ವೃತ್ತಿ

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ (ಎನ್‌ಇಪಿ-೨೦೨೦) ಇದನ್ನು ತಿರಸ್ಕರಿಸಿದ್ದೇವೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಮತ್ತೊಮ್ಮೆ ಪುನರುಚ್ಚಾರ ಮಾಡಿದ್ದಾರೆ. ಸರ್ಕಾರದ ಈ ನಿಲುವಿಗೆ ನಮ್ಮ ರಾಜ್ಯದ ಶಿಕ್ಷಕ ಸಮುದಾಯದಿಂದ ಇತ್ತ ಪ್ರತಿಸ್ಪಂದನವೂ ಇಲ್ಲ, ಅತ್ತ ಪ್ರತಿಭಟನೆಯೂ ಇಲ್ಲ. ಸಕಾರಣೀಯ ಸಮರ್ಥನೆಯೂ ಇಲ್ಲ ಅಥವಾ ತರ್ಕಬದ್ಧವಾದ ವಿರೋಧವೂ ಇಲ್ಲ. ಒಂದೆಡೆ ಕಾವೇರಿ ನದಿ ಸಮಸ್ಯೆಯನ್ನು ನಮ್ಮ ರೈತಸಮುದಾಯ ಜೀವನ್ಮರಣದ ಪ್ರಶ್ನೆಯನ್ನಾಗಿ ಪರಿಗಣಿಸಿ ಉಗ್ರ ಹೋರಾಟಕ್ಕಿಳಿದಿದೆ. ಮತ್ತೊಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಅಥವಾ ತಿರಸ್ಕಾರಕ್ಕೂ ಹಾಗೂ ವೃತ್ತಿವಂತ ಶಿಕ್ಷಕರಾದ ತಮಗೂ ಯಾವುದೇ ರೀತಿಯ ಅವಿನಾಭಾವ ಸಂಬಂಧವೇ ಇಲ್ಲವೇನೋ ಎಂಬಂತೆ ನಿರ್ಲಿಪ್ತತೆಯಲ್ಲಿದೆ ನಮ್ಮ ಅಧ್ಯಾಪಕ ವೃಂದ.

ಅಬ್ದುಲ್ಲಾ ಬಿನ್ ಅಹಮದ್ ಬಡಾವಿ ಇವರು ಮಲೇಶ್ಯಾ ದೇಶದ ೫ನೇ ಪ್ರಧಾನಮಂತ್ರಿ. ಅವರದ್ದೇ ರಾಜಧಾನಿ ಕೌಲಾಲಾಂಪುರ್‌ನಲ್ಲಿ ೨೦೦೫ರಲ್ಲಿ ಜರುಗಿದ ಕಾಮನ್‌ವೆಲ್ತ್ ದೇಶಗಳ ವಿಶ್ವವಿದ್ಯಾಲಯಗಳ ದ್ವೈವಾರ್ಷಿಕ ಶೃಂಗ ಸಮ್ಮೇಳನವನ್ನು ಉದ್ಘಾಟಿಸಿ ಈ ನಾಯಕ ಹೇಳಿದ್ದೇನು ಗೊತ್ತೆ?
"ಇವತ್ತು ಜಗತ್ತಿನ ಬಹುತೇಕ ರಾಷ್ಟ್ರಗಳು ಏನನ್ನು ಬಯಸುತ್ತಲಿವೆ ಎಂಬುದನ್ನು ಒತ್ತಿ ಹೇಳಲೇಬೇಕಾದ ಕಾಲವೀಗ ಕೂಡಿಬಂದಿದೆ. ಅದೇನೆಂದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾನವ ಬಂಡವಾಳ (ಸಾಮರ್ಥ್ಯ) ನಿರ್ಮಾಣ ಇವೆರಡೂ ಸಹ ಅತ್ಯಂತ ಮುಖ್ಯವಾದ, ಅತಿ ಮೂಲಭೂತವಾದ ಅಥವಾ ಜೀವನ್ಮರಣದ ವಸ್ತುಗಳೇ ಆಗಿರುವ ಮಹತ್ವದ ಸವಾಲುಗಳು. ಅದರಲ್ಲೂ ನನ್ನ ದೇಶವಾದ ಮಲೇಶ್ಯಾಗಂತೂ ಇದೊಂದು ಜೀವನ್ಮರಣದ ಸಂಗತಿಯೇ ಆಗಿದೆ. ಆದ್ದರಿಂದ ಮುಂಬರುವ ನಮ್ಮ ರಾಷ್ಟ್ರದ ೯ನೇ ಪಂಚವಾರ್ಷಿಕ ಯೋಜನೆಯಲ್ಲಿ ಮಲೇಶ್ಯಾವನ್ನು ಒಂದು ನಾಲೆಜ್ ಪವರ್ ಆಗಿ (ಜ್ಞಾನಾಧಾರಿತ ಶಕ್ತಿಯಾಗಿ) ಬೆಳೆಸಬೇಕೆಂಬುದೇ ನಮ್ಮ ಹೆಗ್ಗುರಿಯಾಗಿದ್ದು, ಇದರಲ್ಲಿ ನಮ್ಮ ಅತ್ಯುತ್ತಮ ವಿ.ವಿ.ಗಳೇ ಪ್ರಮುಖ ಪಾತ್ರ ವಹಿಸುವಂತಾಗಬೇಕೆಂದು ನಾನು ಆಶಿಸುತ್ತೇನೆ."
ಹೇಗಿದೆ ನೋಡಿ ಆ ಪುಟ್ಟ ರಾಷ್ಟ್ರವೊಂದರ ಪ್ರಧಾನ ಮಂತ್ರಿಯ ಶೈಕ್ಷಣಿಕ ಶ್ರೇಷ್ಠತೆಯ ಗುರಿಸಾಧನೆಯ ದೃಷ್ಟಿಕೋನ. ಇವತ್ತಿಗೂ ಕೇವಲ ೩.೩೬ ಕೋಟಿ ಜನಸಂಖ್ಯೆಯುಳ್ಳ ಹಾಗೂ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳು ಸಂಗಮಿಸುವ ಪ್ರದೇಶದಲ್ಲಿರುವ ಈ ಮಲೇಶ್ಯಾ ಎಂಬ ದ್ವೀಪ ರಾಷ್ಟ್ರದ ರಾಜಕೀಯ ನಾಯಕತ್ವದ ಶೈಕ್ಷಣಿಕ ಕಾಳಜಿ. ಅಂದು ೨೦೦೫ರಲ್ಲಿ ಪ್ರಧಾನಿ ಅಬ್ದುಲ್ಲಾ ಬಡಾವಿ ಇಂತಹ ಮಾತುಗಳನ್ನಾಡುವ ಸಂದರ್ಭ ಕೂಡ ಕುತೂಹಲಕಾರಿಯಾಗಿತ್ತು. ವಿಶ್ವದ ೨೦೦ ಅತ್ಯುತ್ತಮ ವಿ.ವಿ.ಗಳ ರ‍್ಯಾಂಕ್ ಪಟ್ಟಿಯ ಮೊದಲ ನೂರು ಸ್ಥಾನಗಳ ಒಳಗಿದ್ದ ಮಲೇಶ್ಯಾದ ಎರಡು ಅತಿ ಶ್ರೇಷ್ಠ ವಿ.ವಿ.ಗಳು ಒಮ್ಮೆಲೆ ಆ ವರುಷ ೧೦೦ ಸ್ಥಾನಗಳಷ್ಟು ಕೆಳಕ್ಕೆ ಕುಸಿದು ರಾಷ್ಟ್ರಾದ್ಯಂತ ಭಾರಿ ತಲ್ಲಣವುಂಟಾಗಿತ್ತಂತೆ. ಈ ಕುಸಿತಕ್ಕೆ ಖಂಡಿತವಾಗ್ಯೂ ಅವುಗಳ ಗುಣಮಟ್ಟದಲ್ಲಾದ ಹಿಂಜರಿತವೇನೂ ಕಾರಣವಾಗಿರಲಿಲ್ಲ. ಆದರೆ ಈ ರ‍್ಯಾಂಕ್ ಪಟ್ಟಿ ತಯಾರಿಸುವ ಅಂತಾರಾಷ್ಟ್ರೀಯ ಮೌಲ್ಯಮಾಪನ ಸಂಸ್ಥೆಯ ತಾಂತ್ರಿಕ ವಿಧಾನದಲ್ಲಿ ಕೊಂಚ ಮಾರ್ಪಾಟಾಗಿದ್ದೇ ತಡ ಈ ಅವಘಡ ಸಂಭವಿಸಿತ್ತಂತೆ. ಹೀಗಿದ್ದೂ ಅಲ್ಲಿನ ಶಿಕ್ಷಣ ತಜ್ಞರುಗಳು ಹಾಗೂ ಪ್ರತಿಪಕ್ಷಗಳ ನಾಯಕರುಗಳೆಲ್ಲಾ ಭಾರಿ ಕೋಲಾಹಲವನ್ನೇ ಸೃಷ್ಟಿಸಿ ಇದು ಹೇಗಾಯ್ತೆಂಬುದನ್ನು ಪತ್ತೆ ಹಚ್ಚಲು ರಾಷ್ಟ್ರೀಯ ವಿಚಾರಣಾ ಆಯೋಗವನ್ನೇ ನೇಮಿಸಬೇಕೆಂದು ಅಂದಿನ ಪ್ರಧಾನಿಯ ಮೇಲೆ ಒತ್ತಡ ಹೇರಿದ್ದರಂತೆ.
ಎಂತಹ ವಿಪರ್ಯಾಸ ನೋಡಿ. ಬರಬರುತ್ತಾ ನಮ್ಮ ಇಂಡಿಯಾ ಅಥವಾ ಭಾರತ್ ದೇಶದ ಜನನಾಯಕರುಗಳಿಗೆ ಶಿಕ್ಷಣ ನೀತಿ ಅಥವಾ ವಿಶ್ವದರ್ಜೆಯ ವಿದ್ಯಾಸಂಸ್ಥೆಗಳನ್ನು ಬೆಳೆಸಬೇಕೆಂಬ ವಿಚಾರ ಯಾವತ್ತಿಗಾದರೂ ಒಂದು ಜೀವನ್ಮರಣದ ಪ್ರಶ್ನೆ ಎಂಬಷ್ಟು ಗಂಭೀರವಾಗಿ ಕಾಣಿಸಿದ್ದುಂಟೆ? ಸ್ವಾತಂತ್ರ್ಯ ಬಂದಾಗಿನಿಂದಲೂ ಸಹ ನಮ್ಮ ಕರ್ನಾಟಕವನ್ನೇ ಆಳಿದ ಯಾರಾದರೊಬ್ಬ ಮುಖ್ಯಮಂತ್ರಿ ತಮ್ಮ ಬಳಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಇಟ್ಟುಕೊಂಡಿದ್ದುಂಟೆ? ಅಥವಾ ಕನಿಷ್ಠ ಪಕ್ಷ ನನಗೆ ಉನ್ನತ ಶಿಕ್ಷಣ ಇಲಾಖೆಯೊಂದಿದ್ದರೆ ಸಾಕು, ಉಳಿದೆಲ್ಲಾ ಇಲಾಖೆಗಳನ್ನು ನಾನು ಸ್ಥೂಲವಾಗಿ ಮೇಲುಸ್ತುವಾರಿ ಮಾಡಿಕೊಂಡಿರಬಲ್ಲೆ ಎಂಬ ನಿಲುವು ತಾಳಿದ್ದುಂಟೆ?
ಪ್ರತಿ ಸಾರಿ ಚುನಾವಣಾ ಫಲಿತಾಂಶ ಪ್ರಕಟಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜರುಗುವ ಮಂತ್ರಿಮಂಡಲ ರಚನೆ ಹಾಗೂ ಖಾತೆಗಳ ಹಂಚಿಕೆಯಲ್ಲಿ ಶಿಕ್ಷಣ ಮತ್ತು ಕೃಷಿ (ಅಥವಾ ಜೊತೆಜೊತೆಗೆ ಪಶುಸಂಗೋಪನೆ!) ಇಲಾಖೆಗಳನ್ನು ಮುಖ್ಯಮಂತ್ರಿಗಳೇ ವಹಿಸಿಕೊಳ್ಳುವ ಪರಿಪಾಠವೆಂದಾದರೂ ಜರುಗಿದ್ದುಂಟೆ? ಇಲ್ಲವೇ ಇಲ್ಲ. ಈಚೀಚೆಗಂತೂ ಸಿಎಂ ಯಾರೇ ಆದ್ರೂನೂ ಅವರಿಗೆ ಹಣಕಾಸು ಇಲಾಖೆಯೇ ಭೂಷಣ ಎಂಬಂತಾಗಿದೆ ಅಲ್ಲವೇ? ಶಿಕ್ಷಣಕ್ಕೆ ಸಂಬಂಧಿಸಿದ ಎರಡು ಇಲಾಖೆಗಳನ್ನು ಯಾರಾದರಿಬ್ಬರು ಅದೇ ಮೊದಲ ಬಾರಿಗೆ ಸಚಿವರಾಗಿರುವವರೊಬ್ಬರಿಗೆ ವಹಿಸಿಕೊಡುವ ಪದ್ಧತಿಯೇ ಪರಂಪರೆಯಾಗಿಬಿಟ್ಟಿದೆ, ಅಲ್ಲವೇ?
ಇದೀಗ ನೋಡಿ, ಮತ್ತೊಮ್ಮೆ ಮೊನ್ನೆಯಷ್ಟೇ ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಚಿವರು "ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸುವುದರಿಂದ ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ರ‍್ತೇವೆ" ಎಂದು ಪುನರುಚ್ಚಾರ ಮಾಡಿದ್ದಾರೆ. ಸುಮಾರು ೧೦ ವರ್ಷಗಳ ನಿರಂತರ ಪರಿಶ್ರಮ, ಪರ‍್ಯಾಲೋಚನೆ ಹಾಗೂ ಪರಿಣತರೊಂದಿಗಿನ ಸಮಾಲೋಚನೆಯ ಮೂಲಕವೇ ೨೦೨೦ರ ಜುಲೈ ೩೧ರಿಂದಲೇ ಜಾರಿಗೆ ಬಂದಿರುವ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯನ್ನು ಅದೊಂದು ನರೇಂದ್ರ ಮೋದಿಯ ನೀತಿ ಎಂಬ ರಾಜಕೀಯ ಪೂರ್ವಾಗ್ರಹದ ಕಾರಣದಿಂದ ತಿರಸ್ಕರಿಸಿಬಿಟ್ಟಿದೆ ಸಿದ್ರಾಮಯ್ಯ ಸರ್ಕಾರ.
ಆದರೇನಂತೆ? ಸರ್ಕಾರದ ಇಂತಹ ತೀವ್ರಗಾಮಿ ತೀರ್ಮಾನ ಕುರಿತಂತೆ ಇಡೀ ಕರ್ನಾಟಕದ ಶಿಕ್ಷಣ ಸಮುದಾಯ ಯಾವುದೇ ರೀತಿಯ ಸಂಭ್ರಮವನ್ನಾಗಲೀ ಅಥವಾ ಸಂಕಟವನ್ನಾಗಲೀ ಹೇಳಿಕೊಳ್ಳದೆಯೇ ದಿವ್ಯ ಮೌನದಿಂದಿರುವುದು ಅತ್ಯಂತ ವಿಷಾದಕರ ದೃಶ್ಯವಾಗಿದೆ. ಶಿಕ್ಷಣ ನೀತಿಯ ಅನುಷ್ಠಾನವಾಗಬೇಕಿರುವುದೇ ಕಾಲೇಜು ಹಾಗೂ ವಿ.ವಿ.ಗಳ ಪ್ರವಚನ ಮಂದಿರಗಳಲ್ಲಿ ಮತ್ತು ಶಾಲೆಗಳ ಪಾಠದ ಕೊಠಡಿಗಳಲ್ಲಿ. ಈ ರೀತಿಯ ಅನುಷ್ಠಾನದ ಪ್ರತ್ಯಕ್ಷ ಹೊಣೆಗಾರಿಕೆ ಹಾಗೂ ಪಾತ್ರದಾರಿಕೆ ಇರುವುದೇ ಸೇವಾನಿರತ ಅಧ್ಯಾಪಕರುಗಳ ಮೇಲೆಯೇ ಅಲ್ಲವೇ?
ದುರದೃಷ್ಟಕರವೇನೆಂದರೆ, ಎನ್‌ಇಪಿ ಸಂಬಂಧಿತ ಅಲ್ಲಲ್ಲಿ ಜರುಗಿರಬಹುದಾದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುತ್ತಿರುವವರೆಲ್ಲರೂ ಕೇವಲ ವಿಶ್ರಾಂತ ಕುಲಪತಿಗಳು ಮತ್ತು ನಿವೃತ್ತ ಅಧ್ಯಾಪಕರುಗಳು ಮಾತ್ರವೇ. `ಅವಿಶ್ರಾಂತ' ಸೇವಾನಿರತ ಕುಲಪತಿಗಳು, ಪ್ರೊಫೆಸರುಗಳು ಹಾಗೂ ಅನುಭವಿ ಶಾಲಾ ಮೇಷ್ಟ್ರುಗಳು ಮಾತ್ರ ಸರ್ಕಾರದ ಶಿಕ್ಷಣ ನೀತಿಗೂ ಹಾಗೂ ತಮ್ಮ ಶಿಕ್ಷಕ ವೃತ್ತಿಗೂ ಯಾವುದೇ ಸಂಬಂಧವೇ ಇಲ್ಲವೇನೋ ಎಂಬಂತೆ ತತ್ಸಂಬಂಧಿತ ವಿದ್ಯಾಮಾನಗಳಿಂದ ದೂರವೇ ಉಳಿದುಬಿಟ್ಟಿದ್ದಾರೆ.
ಎನ್‌ಇಪಿ ತಂದಿರೋದು ಕೇಂದ್ರದಲ್ಲಿರೋ ಮೋದಿ ಸರ್ಕಾರ, ಅದನ್ನು ತಿರಸ್ಕರಿಸೋದು ಕರ್ನಾಟಕವನ್ನಾಳುತ್ತಿರೋ ಕಾಂಗ್ರೆಸ್ ಸರ್ಕಾರ. ಬಹುಶ: ಈ ಕಾರಣದಿಂದಾಗಿಯೋ ಏನೋ ನೂತನ ನೀತಿಯನ್ನು ವಿರೋಧಿಸುವುದಾಗಲೀ ಅಥವಾ ಸಮರ್ಥಿಸುವುದೇ ಆಗಲೀ ಎರಡೂ ಸಹ ಸಮಾನ ಗಂಡಾಂತರಕಾರಿ ಸಂಗತಿಗಳೇ ಎಂಬ ಅವ್ಯಕ್ತ ಭಯ ಕಾಡುತ್ತಿರಬಹುದು.
ಇದು ಇವತ್ತಿನ ಬೆಳವಣಿಗೆಯಷ್ಟೇ ಅಲ್ಲ, ಅನಾದಿಕಾಲದಿಂದಲೂ ಶಿಕ್ಷಣ ನೀತಿ ರೂಪಿಸುವಲ್ಲಿ ಕರ್ತವ್ಯನಿರತ ಶಿಕ್ಷಕರನ್ನು ಹೊರಗಿಟ್ಟೇ ಹೊಸ-ಹೊಸ ವ್ಯವಸ್ಥೆಗಳನ್ನು ಹೇರುತ್ತಾ ಬಂದ ಅಧಿಕಾರಿಶಾಹಿಯ ಧೋರಣೆಯೂ ಕಾರಣವಾಗಿರಬಹುದು. ಸದ್ಯಕ್ಕಂತೂ ಶಿಕ್ಷಣ ನೀತಿಗೂ ಶಿಕ್ಷಕ ವೃತ್ತಿಗೂ ಸಾವಯವ ಸಂಬಂಧವೇ ಕಡಿದು ಹೋಗಿರುವುದು ಮಾತ್ರ ಸತ್ಯ.