ಶಿರಸಿ ಮಾರಿಕಾಂಬಾ ಜಾತ್ರೆಗೆ ಚಾಲನೆ
ಶಿರಸಿ: ಜಾಗೃತ ಶಕ್ತಿ ಪೀಠಗಳಲ್ಲಿ ಒಂದೆನಿಸಿರುವ ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಮಂಗಳವಾರ ರಥದ ಕಲಶಾರೋಹಣದ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು. ಮೊದಲ ದಿನವೇ ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.
ಮಂಗಳವಾರ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ದೇವಸ್ಥಾನದ ಪದ್ಧತಿಯಂತೆ ಬಂಡಲದ ಮರಾಠಿ ಬಾಬುದಾರ ಕುಟುಂಬದವರು, ಬಾಬುದಾರರು, ಆಡಳಿತ ಮಂಡಳಿ ಧರ್ಮದರ್ಶಿಗಳು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ರಥದ ಕಳಶಾರೋಹಣ ನಡೆಸಿದರು. ೯ ದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಮಾ. ೧೯ರಂದು ಮಂಗಳವಾರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಶ್ರೀದೇವಿಯ ರಥದ ಕಳಸ ಪ್ರತಿಷ್ಠೆಯೊಡನೆ ಅಧಿಕೃತವಾಗಿ ಆರಂಭಗೊಂಡಿದೆ.
ಸಭಾ ಮಂಟಪದಲ್ಲಿ ಶ್ರೀದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ, ಮಾ. ೨೦ರಂದು ಬೆಳಗ್ಗೆ ರಥಾರೋಹಣ, ಮಧ್ಯಾಹ್ನದ ಶುಭಮುಹೂರ್ತದಲ್ಲಿ ರಥೋತ್ಸವದ ಶೋಭಾಯಾತ್ರೆ ಮೆರವಣಿಗೆ ಹಾಗೂ ಜಾತ್ರಾ ಗದ್ದುಗೆಯ ಮೇಲೆ ಶ್ರೀದೇವಿಯ ಸ್ಥಾಪನೆ ಜಾತ್ರೆಯ ಆರಂಭದ ಮೊದಲಿನ ಎರಡು ದಿನಗಳ ಪ್ರಮುಖ ಆಚರಣೆಗಳಾಗಿವೆ.