For the best experience, open
https://m.samyuktakarnataka.in
on your mobile browser.

ಶಿಲ್ಪಿ ಕೃಷ್ಣ ನಾಯ್ಕ್‌ಗೆ ಪೊಲೀಸ್ ಕಸ್ಟಡಿ

05:56 PM Nov 11, 2024 IST | Samyukta Karnataka
ಶಿಲ್ಪಿ ಕೃಷ್ಣ ನಾಯ್ಕ್‌ಗೆ ಪೊಲೀಸ್ ಕಸ್ಟಡಿ

ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕ ಅವರನ್ನು ಕೇರಳದಲ್ಲಿ ಬಂಧಿಸಿದ್ದ ಪೊಲೀಸರು ಸೋಮವಾರ (ನ. ೧೧ರಂದು) ಕಾರ್ಕಳ ತಾಲೂಕು ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿ ಕೃಷ್ಣ ನಾಯ್ಕನಿಗೆ ೬ ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ನಾಯ್ಕ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ತಿರಸ್ಕರಿಸಿ ಆದೇಶ ನೀಡಿತ್ತು. ಅನಂತರ ಪೊಲೀಸರು ಪತ್ತೆ ಕಾರ್ಯ ತೀವ್ರಗೊಳಿಸಿ ಹುಡುಕಾಟ ನಡೆಸಿದ್ದರು. ಕೇರಳದ ಕ್ಯಾಲಿಕಟ್‌ನಲ್ಲಿ ತಲೆಮರಸಿಕೊಂಡಿದ್ದ ಕೃಷ್ಣ ನಾಯ್ಕ್ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದರು.
ಕೃಷ್ಣ ನಾಯ್ಕ ‘ಕೃಷ್ ಆರ್ಟ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ೧.೨೫ ಕೋಟಿ ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸಿದ್ದು, ಅನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೆ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ಆರೋಪಿಸಿ ನಲ್ಲೂರಿನ ಕೃಷ್ಣ ಶೆಟ್ಟಿ ಅವರು ಜೂನ್ ತಿಂಗಳಲ್ಲಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.