For the best experience, open
https://m.samyuktakarnataka.in
on your mobile browser.

ಶೀರೂರು ಮಠದ ಬಾಳೆ ಮುಹೂರ್ತ ಸಂಪನ್ನ

03:29 PM Dec 06, 2024 IST | Samyukta Karnataka
ಶೀರೂರು ಮಠದ ಬಾಳೆ ಮುಹೂರ್ತ ಸಂಪನ್ನ

ಉಡುಪಿ: ಭಾವಿ ಪರ್ಯಾಯ ಶೀರೂರು ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ವೃಶ್ಚಿಕ ಲಗ್ನ ಸುಹೂರ್ತದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ನಡೆಯಿತು.
ಭಾವಿ ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸುಮುಹೂರ್ತದಲ್ಲಿ‌ ವೇದ ವಾದ್ಯ ಘೋಷದ ನಡುವೆ ಬಾಳೆ ಸಸಿ‌ಗೆ ಸ್ವರ್ಣ ಬಿಂದಿಗೆಯಿಂದ ನೀರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗಣ್ಯ ಪ್ರಮುಖರು ಬಾಳೆಸಸಿ ನೆಟ್ಟರು. ಜೊತೆಗೆ ತುಳಸಿ ಸಸಿ ಹಾಗೂ ಕಬ್ಬಿನ ಕಂದು ನೆಡಲಾಯಿತು. ವಿದ್ವಾನ್ ಗಿರಿರಾಜ ಉಪಾಧ್ಯಾಯ ಕಂಬ್ಳಕಟ್ಟ ಧಾರ್ಮಿಕ ವಿಧಿ ನೆರವೇರಿಸಿದರು. ಶೀರೂರು ಮಠದ ದಿವಾನ ಡಾ. ಉದಯ ಸರಳತ್ತಾಯ, ಶ್ರೀಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್ ಇದ್ದರು. ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು.
ಬೆಳಿಗ್ಗೆ 5.30ಕ್ಕೆ ಶೀರೂರು ಮಠದ ಉಪಾಸ್ಯದೇವರಾದ ಶ್ರೀವಿಠಲದೇವರ ಸನ್ನಿಧಾನದಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ ಸಲ್ಲಿಸಿ, ಶ್ರೀ ಅನಂತೇಶ್ವರ- ಚಂದ್ರೇಶ್ವರ, ಕೃಷ್ಣ ಮುಖ್ಯಪ್ರಾಣ ಹಾಗೂ ವೃಂದಾವನ ದರ್ಶನಗೈದು ಪ್ರಾರ್ಥನೆ ಸಲ್ಲಿಸಿ ಮರಳಿ ಶೀರೂರು ಮಠಕ್ಕೆ ಆಗಮಿಸಲಾಯಿತು. ಶೀರೂರು ಮಠದಿಂದ ಪಿಪಿಸಿ ಬಳಿಯ ತೋಟದ ವರೆಗೆ ಬಾಳೆ ಸಸಿಗಳೊಂದಿಗೆ ವೇದ- ವಾದ್ಯ ಘೋಷ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರು, 2026ರ ಜ.18ರಿಂದ ಎರಡು ವರ್ಷ ಕಾಲದ ತಮ್ಮ ಪ್ರಥಮ ಪರ್ಯಾಯ ಅವಧಿಯಲ್ಲಿ ಅನ್ನದಾನ ಮತ್ತು ಕೃಷ್ಣ ಸನ್ನಿಧಿಯಲ್ಲಿ ಚತುರ್ವೇದ ಪಾರಾಯಣ, ವೇದ ಪಾಠ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಸ್ವಾಗತಿಸಿ, ಬಾಳೆ ಮುಹೂರ್ತದ ಹಿನ್ನೆಲೆ ವಿವರಿಸಿದ ಮಠದ ದಿವಾನ ಡಾ. ಉದಯ ಸರಳತ್ತಾಯ: ಶ್ರೀಮಠದ ಸುಮಾರು ಒಂದು ಎಕರೆ ಜಾಗದಲ್ಲಿ ಭಕ್ತರಿಂದಲೇ ಒಂದು ಸಾವಿರ ಬಾಳೆ ಸಸಿ ನೆಟ್ಟು ಪೋಷಿಸಿ, ಪರ್ಯಾಯ ಕಾಲದಲ್ಲಿ ಅದನ್ನು ಬಳಸುವ ಆಶಯ ಹೊಂದಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ ಮತ್ತು ಗೋಪಾಲಕೃಷ್ಣ ಆಸ್ರಣ್ಣ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಭುವನಾಭಿರಾಮ ಉಡುಪ, ಶ್ರೀಪತಿ ಭಟ್ ಮೂಡುಬಿದಿರೆ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಸಂದೀಪ ಮಂಜ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪ್ರಮುಖರಾದ ಮೋಹನ ಭಟ್, ವಾಸುದೇವ ಆಚಾರ್ಯ, ಶ್ರೀಕಾಂತ ನಾಯಕ್, ಗೋವಿಂದ ಭಟ್, ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ, ಡಾ. ಕೃಷ್ಣಪ್ರಸಾದ್, ಪ್ರಸಾದ್ ರಾಜ್ ಕಾಂಚನ್, ಪುತ್ತಿಗೆ ಮಠ ಕೊಠಾರಿ ರಾಮಚಂದ್ರ ಕೊಡಂಚ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ ಮತ್ತು ಸಿಇಓ ಸುಬ್ರಹ್ಮಣ್ಯ ಸಾಮಗ, ಅದಮಾರು ಮಠದ ಗೋವಿಂದರಾಜ್ ಮೊದಲಾದವರಿದ್ದರು. ಅಶ್ವತ್ಥ ಭಾರದ್ವಾಜ್ ನಿರೂಪಿಸಿ, ವಂದಿಸಿದರು.

Tags :