ಶೆಟ್ಟರ್ ಪಕ್ಷಕ್ಕೆ ಮರಳಿದ್ದು ತುಂಬ ಖುಷಿ
ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮರಳಿ ಬಿಜೆಪಿ ಸೇರಿದ್ದು ನನಗೆ ತುಂಬ ಖುಷಿಯಾಗಿದೆ. ಆದರೆ, ಅವರು ಯಾತಕ್ಕಾಗಿ ಬಂದು ಯಾತಕ್ಕಾಗಿ ಹೋದರು ಎಂಬುದನ್ನು ಅವರನ್ನೇ ಕೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಗದೀಶ ಶೆಟ್ಟರ ಅವರು ಮರಳಿ ಬಿಜೆಪಿಗೆ ಹೋಗಿದ್ದು ವೈಯಕ್ತಿವಾಗಿ ಸಂತಸ ಮೂಡಿಸಿದೆ. ಕಾಂಗ್ರೆಸ್‌ಗೆ ಬರುವಾಗ ಒಂದು ರೀತಿ ಹೇಳಿದ್ದರು. ಈಗ ಹೋಗುವಾಗ ಮತ್ತೊಂದು ರೀತಿ ಹೇಳಿದ್ದಾರೆ. ಇದೆಲ್ಲ ರಾಜಕಾರಣದಲ್ಲಿ ಸಾಮಾನ್ಯ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಅವರು ಏನೆಂದು ಮಾತನಾಡಿದ್ದರು ಎನ್ನುವುದು ರಾಜ್ಯದ ಜನತೆಗೆ ಗೊತ್ತು. ನಮ್ಮಲ್ಲಿ ಬಂದ ತಕ್ಷಣ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಾಯಿತು. ಎಲ್ಲ ಸಭೆಗಳಲ್ಲಿ ಅವರಿಗೆ ಗೌರವ ನೀಡಿದ್ದೇವೆ. ಸದ್ಯ ದಿಢೀರ್ ಪಕ್ಷ ತೊರೆದು ಹೋಗಿದ್ದಾರೆ. ಆದರೆ, ಅವರೊಬ್ಬ ಮಾಜಿ ಮುಖ್ಯಮಂತ್ರಿ ಆಗಿದ್ದು, ಒಂದು ಸಿಸ್ಟಮ್ ಎನ್ನುವುದು ಇರಬೇಕಿತ್ತು ಎಂದರು.
ನಮ್ಮ ಪಕ್ಷ ತೊರೆದು ಹೋಗಿದ್ದಕ್ಕೆ ನಮಗೇನು ನಷ್ಟವಿಲ್ಲ. ನಮ್ಮದು ಎರಡು ಬಾಗಿಲು ಇರುವ ಪಾರ್ಟಿ. ಒಂದು ರೀತಿಯಲ್ಲಿ ಸಿಟಿ ಬಸ್ ಇದ್ದಂತೆ. ಯಾರಾದರೂ ಹತ್ತಬಹುದು, ಇಳಿಯಬಹುದು. ಮುಂದಿನ ದಿನಗಳಲ್ಲಿ ಇನ್ನು ಹಲವಾರು ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಅದೆಲ್ಲವನ್ನು ಸಮಯ ಬಂದಾಗ ಹೇಳುತ್ತೇವೆ ಎಂದು ಸುಮ್ಮನಾದರು.