ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ: ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ
ತುಮಕೂರು: ಈಗಾಗಲೇ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡು ಪಕ್ಷದಿಂದ ಉಚ್ಚಾಟನೆಗೊಂಡಿರುವ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ಅಂದರೆ ಮಾರ್ಚ್ 27ರಂದು ಸೋಮವಾರ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀನಿವಾಸ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶ್ರೀನಿವಾಸ್ ಅವರು ಅಧಿಕೃತವಾಗಿ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಗುಬ್ಬಿ ಜೆಡಿಎಸ್ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿ. ಹೊಸಹಳ್ಳಿ ಗ್ರಾಮದಲ್ಲಿ ಸಾಲು ಸಾಲು ಜೆಡಿಎಸ್ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. 300ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಜೆಡಿಎಸ್ ಬೂತ್ ಕಮಿಟಿ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಚೇರಿಗೆ ರವಾನಿಸಿದ್ದಾರೆ.
ತಮ್ಮ ರಾಜೀನಾಮೆ ಕುರಿತು ತುಮಕೂರಿನ ಗುಬ್ಬಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್, “ ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಸದ್ಯಕ್ಕೆ ನಾನೊಬ್ಬನೇ ರಾಜೀನಾಮೆ ಕೊಡುತ್ತೇನೆ. ಬೇರೆ ಶಾಸಕರ ಬಗ್ಗೆ ನನಗೆ ಗೊತ್ತಿಲ್ಲ” ಎಂದಿದ್ದಾರೆ.
ರಾಜೀನಾಮೆ ಬಳಿಕ ಶ್ರೀನಿವಾಸ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದ್ದು ಇನ್ನು ಎಸ್ ಆರ್ ಶ್ರೀನಿವಾಸ್ ಪಕ್ಷ ಸೇರ್ಪಡೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದ ಟಿಕೆಟ್ ಪ್ರಕಟಿಸಿಲ್ಲ. ಆದ್ರೆ, ಗುಬ್ಬಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆದಂತಿದೆ.