For the best experience, open
https://m.samyuktakarnataka.in
on your mobile browser.

ಸಾವನ್ನೇ ಗೆದ್ದು ಬಂದ ಯುವತಿ

10:56 PM Oct 28, 2024 IST | Samyukta Karnataka
ಸಾವನ್ನೇ ಗೆದ್ದು ಬಂದ ಯುವತಿ

ತುಮಕೂರು: ತಾಲೂಕಿನ ಮೈದಾಳ ಕೆರೆಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ.
ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಗುಬ್ಬಿ ತಾಲೂಕಿನ ಶಿವರಾಂಪುರ ನಿವಾಸಿ ಹಂಸ (೧೯) ಗೆಳತಿಯರ ಜತೆ ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ಭಾನುವಾರ ಮಧ್ಯಾಹ್ನ ತೆರಳಿದ್ದರು. ನಂತರ ಅಲ್ಲೇ ಸಮೀಪದಲ್ಲಿದ್ದ ಮೈದಾಳ ಕೆರೆ ಕೋಡಿ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ತಕ್ಷಣ ಇತರ ಗೆಳತಿಯರು ಪೊಲೀಸರಿಗೆ ವಿಷಯ ತಿಳಿಸಿದು ಕೂಡಲೇ ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದರು.
ಸೋಮವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯವನ್ನು ಅಗ್ನಿ ಶಾಮಕದಳದ ಸಿಬ್ಬಂದಿ ಕೈಗೊಂಡಾಗ ಕಲ್ಲಿನ ಪೊಟರೆಯಲ್ಲಿ ವಿದ್ಯಾರ್ಥಿನಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಸತತ ೧೨ ಗಂಟೆ ಕಾರ್ಯಾಚರಣೆ: ಸತತ ೧೨ ಗಂಟೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿದ್ದು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಹಂಸ ಇಡೀ ರಾತ್ರಿ ಕಲ್ಲಿನ ಪೊಟರೆಯಲ್ಲಿ ಕಾಲ ಕಳೆದಿದ್ದು, ಪವಾಡ ಎಂಬಂತೆ ಬದುಕುಳಿದು ಬಂದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇಲ್ಲದಂತಾಗಿದ್ದು ಎಸ್‌ಐಟಿ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.