For the best experience, open
https://m.samyuktakarnataka.in
on your mobile browser.

ಸಂಕಲ್ಪ ಶುದ್ಧವಾಗಿದ್ದಲ್ಲಿ ಲಕ್ಷ್ಯ ಶುದ್ಧವಾಗಿರುತ್ತದೆ

03:00 AM May 07, 2024 IST | Samyukta Karnataka
ಸಂಕಲ್ಪ ಶುದ್ಧವಾಗಿದ್ದಲ್ಲಿ ಲಕ್ಷ್ಯ ಶುದ್ಧವಾಗಿರುತ್ತದೆ

ಮನಸ್ಸನ್ನು ಕರಗಿಸಲು ಅರ್ಧಘಳಿಗೆಯ ಅನುಭವವೂ ಸಾಕಾಗುತ್ತದೆ. ಸುಂದರವಾಗಿರುವ ನಮ್ಮ ಈ ಪ್ರಪಂಚ ಮತ್ತು ಅದರ ಜೊತೆ ನಮ್ಮ ಮಧುರವಾದ ಸಂಬಂಧಗಳು ನಿಜವಲ್ಲವೆಂದರೆ ಈ ತರಹದ ಅನುಭವಗಳು ನಮ್ಮ ಜೀವನದ ತಿರುಳನ್ನು ಮಾಗಿಸಲು ಸಾಧ್ಯವಿರುತ್ತಿತ್ತೇ? ನಾವೆಲ್ಲರೂ ನಮ್ಮ ಜೀವನದಲ್ಲಿ ಪ್ರತಿಯೊಂದು ಕ್ಷಣಕ್ಷಣವೂ ನಮ್ಮ ಬೇಕುಗಳನ್ನು ಹೊಂದಿಸಿಕೊಳ್ಳುವುದಕ್ಕಾಗಿ, ಈ ಜಗತ್ತಿನಲ್ಲಿ ಸುಖವನ್ನರಸಿಕೊಂಡು ಹೋಗುತ್ತಿರುತ್ತೇವೆ. ಸುಖಸಂತೋಷಗಳು ಈ ಪ್ರಪಂಚದಲ್ಲಿ ಅಪಾರವಾಗಿವೆ ಎಂಬುದಕ್ಕೆ ನಮ್ಮ ಹೃದಯಂತರಾಳವು ಸದಾ ಈ ಸುಖದ ಬಗ್ಗೆ ಧ್ಯಾನಿಸುತ್ತಿರುವುದೇ ಸಾಕ್ಷಿ. ನಮ್ಮ ಕಣ್ಣಿಗೆ ಮತ್ತು ಸ್ಪರ್ಶಕ್ಕೆ ಸಿಗುವ ಅರ್ಧಂಬರ್ಧ ಒಲವು-ಚೆಲುವುಗಳೆಲ್ಲವೂ ಪರಿಪೂರ್ಣ ಸುಖ ಸತ್ವ ಸಮುದ್ರದ ತೆರೆಗಳು. ಸೂರ್ಯನು ನಮಗೆ ಅತ್ಯಂತ ದೂರದಲ್ಲಿದ್ದರೂ ಸಹ ಅವನ ಕಿರಣಗಳು ನಮಗೆ ಕುರುಹಾಗಿ ನಿಲುಕುತ್ತವೆ. ಅಲೆಗಳು ಪರಿಪೂರ್ಣತೆಯ ಕುರುಹು. ದೈವಿಕ ಸತ್ತ್ವವು ಮನುಷ್ಯನ ಒಳಗೆ ಉಸಿರು ಹೋಗುವಂತೆ ಹೋಗಿ ಪ್ರತಿಕ್ಷಣವೂ ಅವನನ್ನು ಹೊಸಬನನ್ನಾಗಿ ಮಾಡಿ ಅವನು ಈ ಹೊಸತನವನ್ನು ಉಳಿದ ಜಗತ್ತಿಗೂ ಕೊಟ್ಟು ಕೆಲಸಮಾಡುವಂತೆ ಯಾವಾಗಲೂ ಪ್ರೇರೇಪಿಸುತ್ತಲೇ ಇರುತ್ತದೆ. ಈ ಹೊಸದನ್ನಾಗಿಸುವುದನ್ನು ಕಿಂಚಿತ್ತೂ ಕುಂದಿಲ್ಲದಿರುವಂತೆ ಸಂಪೂರ್ಣವಾಗಿ ಗಳಿಸುವ ಪ್ರಯತ್ನವೇ ಪುರುಷನ ಪ್ರಗತಿ. ಅದೇ ಪ್ರಕೃತಿ. ವಿಜ್ಞಾನ, ಶಾಸ್ತ್ರ, ಕಲೆ, ಕಾವ್ಯ, ವಿದ್ಯೆಗಳೆಲ್ಲಾ ಈ ಕೃತಾರ್ಥತೆಯನ್ನು ಪಡೆಯಲು ಪ್ರಯತ್ನಿಸುವ ಸಾಧನಗಳಷ್ಟೆ. ಸಂಕಲ್ಪ ಶುದ್ಧವಾಗಿಲ್ಲದಿದ್ದಲ್ಲಿ ಲಕ್ಷ್ಯ ಕೂಡಾ ಶುದ್ಧವಾಗಿರುವುದಿಲ್ಲ.
ತೆರೆಯೇಳುವುದು ದೈವಸತ್ತ್ವನರನೊಳು ನೆರೆಯೆ
ತೆರೆಬೀಳುವುದು ಕರ್ಮವಿಧಿಯಿದಿರು ಪರಿಯೆ
ತೆರೆಯನಾನುತೆ ತಗ್ಗು, ತಗ್ಗನಾನುತಲಿ ತೆರೆ
ತೆರೆತಗ್ಗುಗಳಿನೆ ತೊರೆ - ಮಂಕುತಿಮ್ಮ
ಮನುಷ್ಯನಲ್ಲಿ ಪರಮಾತ್ಮನ ಸಾರ ಸೇರಿಕೊಂಡರೆ ಅಲೆಗಳು ಮೇಲಕ್ಕೇಳುತ್ತವೆ. ಕರ್ಮ ಮತ್ತು ವಿಧಿ ಎದುರಾಗಿ ಹರಿಯುವಾಗ ಅಲೆಗಳು ಇಳಿಯುತ್ತವೆ. ಆ ಅಲೆಗಳನ್ನು ಹೊಂದಿಕೊಂಡಂತೆ ನೆಲದಲ್ಲಿ ಗುಣಿ, ಆ ಗುಣಿಗಳಲ್ಲಿ ಅಲೆ. ಆ ಅಲೆ ಮತ್ತು ಗುಣಿಗಳು ಸೇರಿದರೆ ಒಂದು ಚಿಕ್ಕ ತೊರೆ.
ಕರ್ಮವು ಫಲವನ್ನು ಉತ್ಪತ್ತಿಮಾಡಿ ಮುಗಿದುಹೋಗುತ್ತದೆ. ಆದರೆ ಫಲವು ನಾಶವಾಗುವುದಿಲ್ಲ. ಉತ್ಪತ್ತಿಯಾದ ಫಲವು ಅನುಭವಿಸಲ್ಪಡದೆ ನಾಶವಾಗುವುದಿಲ್ಲ. ನಾವು ಈಗ ಅನುಭವಿಸುತ್ತಿರುವ ಸುಖ-ದುಃಖಗಳು ಹಿಂದೆ ನಾವು ಮಾಡಿದ ಕರ್ಮದ ಫಲವಾಗಿದ್ದು 'ಪ್ರಾರಬ್ಧ' ಎನ್ನುತ್ತಾರೆ. ಇನ್ನೂ ಅನುಭವಿಸಲು ಬಾಕಿಯಿರುವ ಅದೃಷ್ಟಫಲವನ್ನು (ಕಣ್ಣಿಗೆ ಗೋಚರಿಸದ) 'ಆಗಾಮಿಫಲ' ಎನ್ನುತ್ತಾರೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಫಲಗಳನ್ನು ಈಗ ಅನುಭವಿಸುವ ಜೊತೆಯಲ್ಲೇ ಈಗ ಮಾಡಿದ ಕರ್ಮದ ಫಲವನ್ನೂ ಅನುಭವಿಸುತ್ತೇವೆ. ಆದರೆ ಎಲ್ಲ ಫಲಗಳನ್ನೂ ಅನುಭವಿಸಿ ಮುಗಿಸಲಾರೆವು. ಹೀಗೆ ಬಾಕಿ ಉಳಿದಿರುವ ಫಲವನ್ನು 'ಸಂಚಿತಫಲ' ಎನ್ನುತ್ತಾರೆ. ಅವುಗಳನ್ನು ಅನುಭವಿಸಲಿಕ್ಕಾಗಿಯೇ ಮತ್ತೆ ಜನ್ಮವೆತ್ತುವುದು ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ ಮುಂದಿನ ಜನ್ಮ ಎಂಥದ್ದಾಗಿರಬೇಕೆಂದು ಎಂದು ಈ ಜನ್ಮದಲ್ಲಿಯೇ ಆಯ್ಕೆಮಾಡಿಕೊಳ್ಳಬಹುದು!
ಮಹಾಭಾರತದ ಸಂದೇಶ: ಕೌರವನು ಚತುಸ್ಸಮುದ್ರಾಂತವಾದ ಭೂಮಿಯನ್ನು ಆಳಿ, ತೊಡೆ ಮುರುಸಿಕೊಂಡು ಬಿದ್ದ. ಹತ್ತಿರ ಒಬ್ಬರೂ ಇಲ್ಲದೆ ಬದುಕಿದ್ದಾಗಲೇ ಅವನನ್ನು ತೋಳಗಳು ಕಿತ್ತುತಿಂದವು. ವಿಶ್ವವನ್ನೇ ಗೆದ್ದ ಅರ್ಜುನ ದನಕಾಯುವವರಿಗೆ ಸೋತ. ಯಾದವರು ತಮ್ಮವರಿಂದಲೇ ನಾಶವಾದರು. ಆದ್ದರಿಂದ ಇವೆಲ್ಲವನ್ನೂ ವಿಚಾರ ಮಾಡಿ ಶಾಂತಿಯ ಕಡೆಗೆ ಮನಸ್ಸು ಕೊಡಿ. ಶಾಂತಿ ಲಭಿಸಬೇಕಾದರೆ ತತ್ತ್ವಜ್ಞಾನದಿಂದ, ಧರ್ಮಾಚರಣೆಯಿಂದ.
ನೀವು ಯೋಚಿಸುವ, ಅನುಭವಿಸುವ ಮತ್ತು ಜೀವನವನ್ನು ಗ್ರಹಿಸುವ ವಿಧಾನವು ನಿಮ್ಮ ಭೂತಕಾಲದ ಅನುಭವದಿಂದ ನಿಯಮಾಧೀನವಾಗಿರುವಾಗ 'ಸ್ವಾತಂತ್ರ್ಯ' 'ಬಿಡುಗಡೆ' ಎಂಬ ವಿಚಾರವೇ ಅಸ್ತಿತ್ವದಲ್ಲಿಲ್ಲ. ನಿಮ್ಮ ಹುಟ್ಟಿದ ದಿನದಿಂದ ನಿಮ್ಮ ಪೋಷಕರು, ಕುಟುಂಬ, ಸಂಸ್ಕೃತಿ, ಧರ್ಮ, ಶಿಕ್ಷಣ, ಸಾಮಾಜಿಕ ಸನ್ನಿವೇಶಗಳು ನಿಮ್ಮ ಮೇಲೆ ಪ್ರಭಾವ ಬೀರಿವೆ; ಇದೀಗ ನೀವೇನಾಗಿದ್ದೀರೋ ಅದನ್ನು ನಿರ್ಧರಿಸಿದೆ. ಆದ್ದರಿಂದ ನಿಮ್ಮ ಚಿಂತನೆ ಭೂತಕಾಲದಿಂದ ಆಳವಾಗಿ ನಿಯಂತ್ರಿಸಲ್ಪಟ್ಟಿದೆ. ಈ ರೀತಿಯ ರೂಪುಗೊಳ್ಳುವಿಕೆಯನ್ನು 'ಕರ್ಮ' ಎನ್ನಲಾಗುತ್ತದೆ. ಭೂತಕಾಲದ ನಿಮ್ಮ ಕ್ರಿಯೆಗಳು ನಿಮಗೆ ತಿಳಿದೋ, ತಿಳಿಯದೆಯೋ ಘಟಿಸಲ್ಪಟ್ಟು ನಿಮ್ಮ ಇಂದಿನ ಸ್ಥಿತಿಗೆ ಕಾರಣವಾಗಿವೆ. ಇದು(ಕರ್ಮ) ನಿಮ್ಮ ಮೇಲೆ ಭದ್ರವಾದ ಹಿಡಿತವನ್ನು ಹೊಂದಿದ್ದು, ಸ್ವಾತಂತ್ರ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಮನುಷ್ಯ ಯಾವುದೇ ಯೋಚನೆಯನ್ನು ಖಚಿತತೆಯೊಂದಿಗೆ ಆರಂಭಿಸಿದರೆ ಆ ಯೋಚನೆ ಅನುಮಾನದಲ್ಲಿ ಕೊನೆಗೊಳ್ಳುತ್ತದೆ. ಬದಲಿಗೆ ಸಂದೇಹದಿಂದ ಪ್ರಾರಂಭಿಸಿದರೆ ಆತನ ಯೋಚನೆ ಕೊನೆಗೆ ಖಚಿತತೆಯಲ್ಲಿ ಅಂತ್ಯಗೊಳ್ಳುತ್ತದೆ! ಏನಿದರರ್ಥ? ಖಚಿತತೆಯಿಂದ ಆರಂಭವಾದ ಯೋಚನೆ ಮುಂದುವರಿದಂತೆ ಆ ಯೋಚನೆಗೆ ಪೂರಕವಾದ ಇನ್ನಿತರ ವಿಷಯಗಳು ಜತೆಗೂಡುವುದರಿಂದ ಕೊನೆಗೆ ಆತ ಯೋಚನೆಯನ್ನು ಅರ್ಧದಲ್ಲಿ ನಿಲ್ಲಿಸುವುದರಿಂದ ಸಂದೇಹದಲ್ಲಿ ಕೊನೆಗೊಳ್ಳುತ್ತದೆ. ಸಂದೇಹದಿಂದ ಆರಂಭವಾದುದು ಸಾಗುತ್ತಾ ಸಾಗುತ್ತಾ ಖಚಿತತೆ ಪ್ರಾಪ್ತವಾಗುತ್ತದೆ.
ಗೃಹಸ್ಥನೆಂದರೆ ಮನೆಮಾಡಿಕೊಂಡು ಸಂಸಾರವನ್ನು ನಡೆಸುತ್ತಿರುವವನು. ಸಂಸಾರವೆಂದರೆ ಗಂಡ-ಹೆಂಡತಿ; ತಾಯಿ-ತಂದೆ; ಅಣ್ಣ-ತಮ್ಮ; ಮಕ್ಕಳು-ಮರಿ, ನೆಂಟರು-ಇಷ್ಟರು. ಸಂಸಾರವೇ ಸಮಾಜಕ್ಕೆ ತಳಹದಿ. ಈಗಿನ ಕಾಲದ ಆರ್ಥಿಕ ಸ್ಥಿತಿಗತಿಗಳಿಂದಲೂ, ವ್ಯಕ್ತಿಸ್ವಾತಂತ್ರ್ಯಕ್ಕೆ ಅತಿಶಯವಾದ ಪ್ರಾಶಸ್ತ್ಯ ಕೊಡುತ್ತಾ ಬಂದಿರುವುದರಿಂದಲೂ ಸಂಸಾರದಲ್ಲಿ ವಿಶ್ವಾಸ, ವಿಧೇಯತೆ, ಒಗ್ಗಟ್ಟು ಮುಂತಾದ ಸ್ನೇಹಗುಣಗಳು ಕಡಿಮೆಯಾಗುತ್ತಿವೆ. ಸ್ನೇಹವಿಲ್ಲದ ಸಂಸಾರ ಎಂಥ ಸಂಸಾರ..? ಅದು ಮರಳುಕಾಡು; ಇಲ್ಲದಿದ್ದರೆ ಕುರುಕ್ಷೇತ್ರ. ಸಂಸಾರದಲ್ಲಿ ಪ್ರೀತಿಯಿದ್ದರೆ ಕ್ಷಮೆ, ತ್ಯಾಗ ಇವೆರಡೂ ತಾನೇ ಬರುತ್ತವೆ. ನಿಜವಾದ ಪ್ರೀತಿಗೆ ಇವೇ ಹೆಗ್ಗುರುತು. ವ್ಯಕ್ತಿಗಳು ಉತ್ತಮಗೊಂಡಾಗ ಸಂಸಾರ ಉತ್ತಮವಾಗುತ್ತದೆ. ಉತ್ತಮ ಸಂಸಾರಗಳಿಂದ ಉತ್ತಮ ಸಮಾಜ; ಉತ್ತಮ ಸಮಾಜದಿಂದ ದೇಶ, ರಾಷ್ಟ್ರ ಎಲ್ಲಾ. ಪ್ರಕೃತಿಯು ತ್ರಿಗುಣಾತ್ಮಕವಾಗಿದ್ದು ಸತ್ವ, ರಜಸ್ಸು, ತಮಸ್ಸು ಮೂರು ಗುಣಗಳಿಂದ ಕೂಡಿದ್ದು, ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿಯೂ ಈ ಮೂರೂ ಗುಣಗಳು ಇದ್ದೇ ಇರುತ್ತವೆ; ಮನುಷ್ಯನಲ್ಲೂ. ಈ ಮೂರರಲ್ಲಿ ಯಾವ ಗುಣ ಪ್ರಬಲವಾಗಿರುತ್ತದೆಯೋ ಅದು ಆ ವಸ್ತುವಿನ, ವ್ಯಕ್ತಿಯ ವ್ಯಕ್ತಿತ್ವವಾಗಿರುತ್ತದೆ.
ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ
ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಕಯಮ್
ಪ್ರಾಯ, ಯೌವನ, ಹಣ, ಒಡೆತನ, ಅವಿವೇಕ (ಬುದ್ಧಿಗೇಡಿತನ) ಗಳಲ್ಲಿ ಒಂದೊಂದೂ ಅನರ್ಥಕಾರಿ. ನಾಲ್ಕೂ ಒಂದೆಡೆ ಇದ್ದರೆ ಹೇಳತೀರದು.
ಪಿಪೀಲಿಕಾರ್ಜಿತಂ ಧಾನ್ಯಂ ಮಕ್ಷಿಕಾ ಸಂಚಿತಂ ಮಧು
ಲುಬ್ಧೇನ ಸಂಚಿತಂ ದ್ರವ್ಯಂ ಸಮೂಲಂ ಚ ವಿನಶ್ಯತಿ
ಇರುವೆಗಳು ಗಳಿಸಿದ ಧಾನ್ಯ, ದುಂಬಿಗಳು ಸಂಗ್ರಹಿಸಿದ ಜೇನು, ಜಿಪುಣ ಕೂಡಿಟ್ಟ ಹಣ ಇವು ಸಮೂಲವಾಗಿ ನಾಶವಾಗುತ್ತವೆ.
ತಿಹಾಸತಜ್ಞ ವಿಲ್‌ಡ್ಯುರಾಂಟ್ ಹೇಳುವಂತೆ; `ನಾಗರಿಕತೆಯು ಕ್ರಮಬದ್ಧವಾಗಿ ಆರಂಭಗೊಂಡು ನಿರಂಕುಶವಾಗಿ ಬೆಳೆದು ಅವ್ಯವಸ್ಥೆಯಲ್ಲಿ ಪರ್ಯವಸಾನವಾಗುತ್ತದೆ. ಮಾನವನ ಎಲ್ಲಾ ಸಾಮರ್ಥ್ಯಗಳನ್ನು ಒಂದು ದಿಕ್ಕಿನಲ್ಲಿ ಹರಿಸುವ ಪ್ರಯತ್ನವನ್ನು ಬಹಳಷ್ಟು ಜನರು ಬಹಳ ಕಾಲದಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಮನಸ್ಸನ್ನು ಉದಾತ್ತವಾಗಿ ಇರಿಸಿಕೊಳ್ಳುವುದು ಹಾಗೂ ಚಾರಿತ್ರ್ಯಶಕ್ತಿ ಅಭಿವೃದ್ಧಿಪಡಿಸಿಕೊಳ್ಳುತ್ತಾ ಸಾಗುವುದೇ ನಿಜವಾದ ಕ್ರಾಂತಿ. ತತ್ವಜ್ಞಾನಿಗಳು ಮತ್ತು ಸಂತ-ಮಹಾತ್ಮರೇ ನಿಜವಾದ ಕ್ರಾಂತಿಪುರುಷರೆಂದು ಮಾನವ ಇತಿಹಾಸ ದಾಖಲಿಸುತ್ತಾ ಸಾಗಿದೆ. ಭಾರತವು ನಮ್ಮ ಜನಾಂಗದ ಮಾತೃಭೂಮಿ. ಸಂಸ್ಕೃತವು ಎಲ್ಲಾ ಐರೋಪ್ಯ ಭಾಷೆಗಳ ತಾಯಿ. ಭಾರತಮಾತೆ ನಮ್ಮೆಲ್ಲ ತತ್ವ-ಸಿದ್ಧಾಂತಗಳ ಜನನಿ. ಅವಳೇ ಅರಬ್ಬರ ಮೂಲಕ ಬಂದ ಗಣಿತಶಾಸ್ತçದ ತಾಯಿ. ಗ್ರಾಮ, ಸಮುದಾಯ, ಸ್ಥಳೀಯ ಸರ್ಕಾರಗಳ ಮತ್ತು ಪ್ರಜಾಪ್ರಭುತ್ವದ ತಾಯಿ…….. ಒಟ್ಟಾರೆ ಭಾರತಮಾತೆ ಅನೇಕ ದೃಷ್ಟಿಗಳಲ್ಲಿ ನಮ್ಮೆಲ್ಲರ ತಾಯಿ'.