ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚುನಾವಣಾ ಆಯೋಗದ ಪಾತ್ರ ಸೂತ್ರ: ಸರಿ ಇರಲಿ

02:00 AM May 16, 2024 IST | Samyukta Karnataka

ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ರೀತಿ ನೀತಿ ನಿರ್ಲಿಪ್ತ ಮನೋಧರ್ಮದಲ್ಲಿದ್ದರೆ ಮಾತ್ರ ಅದಕ್ಕೆ ಸಾರ್ವಜನಿಕ ವಲಯದಲ್ಲಿ ಪಾವಿತ್ರ್ಯದ ಸ್ಥಾನ. ಏಕೆಂದರೆ, ಚುನಾವಣಾ ಆಯೋಗ ಯಾವುದೇ ರೀತಿಯ ವೈಚಾರಿಕತೆಗೆ ಕಟ್ಟುಬಿದ್ದ ಸಂಸ್ಥೆಯೂ ಅಲ್ಲ - ವೈಚಾರಿಕತೆಯ ವಿರೋಧಿಯೂ ಅಲ್ಲ. ಶಾಸನಬದ್ಧವಾಗಿ ರೂಪಿತವಾಗಿರುವ ಶಾಸನಗಳ ಬೆಳಕಿನಲ್ಲಿ ಕಾರ್ಯ ನಿರ್ವಹಿಸುವುದಷ್ಟೆ ಅದರ ಪ್ರಧಾನ ಜವಾಬ್ದಾರಿ. ಇಂತಹ ನಿರ್ಲಿಪ್ತ ಧೋರಣೆಯ ವರ್ತನೆಯಿಂದಾಗಿ ಯಾವುದೇ ರೀತಿಯ ಅಕ್ರಮಗಳು ಜರುಗಿದಾಗಲೂ ಸಾರ್ವಜನಿಕರು ಮೊದಲು ದೂರು ಕೊಡುವುದು ಚುನಾವಣಾ ಆಯೋಗಕ್ಕೆ. ಇದು ವಿಶ್ವಾಸಾರ್ಹತೆಯ ಜೊತೆಗೆ ನ್ಯಾಯ ಸಮ್ಮತ ಧೋರಣೆಯ ಪ್ರತೀಕವೂ ಹೌದು. ಆದರೆ, ಪ್ರಸ್ತುತ ಪ್ರಗತಿಯಲ್ಲಿರುವ ಲೋಕಸಭಾ ಚುನಾವಣೆಯ ಬೆಳವಣಿಗೆಯಲ್ಲಿ ಚುನಾವಣಾ ಆಯೋಗ ಪಾತ್ರ ಹಲವು ಬಾರಿ ಕಾನೂನು ತಜ್ಞರಿಗೂ ತಬ್ಬಿಬ್ಬು ಮೂಡಿಸಿದೆ ಎಂಬುದು ಗಂಭೀರವಾದ ವಿಚಾರವೇ. ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆಯ ವಿಚಾರಗಳನ್ನು ನೋಡುವಾಗ ಸಮತೂಕದ ದೃಷ್ಟಿ ಅತ್ಯಗತ್ಯ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಹೇಳುವಂತೆ ಆಡಳಿತಾರೂಢ ಪಕ್ಷದ ಮುಖಂಡರು ದ್ವೇಷ ಭಾಷಣಗಳನ್ನೇ ಮಾಡುತ್ತಿರುವ ಬಗ್ಗೆ ದೂರು ನೀಡಿದರೂ ತೆಪ್ಪಗಿರುವ ಆಯೋಗ ಪ್ರತಿಪಕ್ಷಗಳ ಮುಖಂಡರ ವಿರುದ್ಧದ ದೂರುಗಳಿಗೆ ಮಾತ್ರ ಶರವೇಗದಲ್ಲಿ ನೋಟಿಸ್ ಜಾರಿ ಮಾಡುತ್ತಿರುವ ಕ್ರಮದ ಹಿಂದೆ ಪಕ್ಷಪಾತ ನಿಲುವಿನ ಸಂಶಯ ಎದ್ದು ಕಾಣುತ್ತಿದೆ ಎಂಬ ಮಾತನ್ನು ನಿರಾಕರಿಸುವುದು ಕಷ್ಟವೇ.
ಕ್ರಮ ಹಾಗೂ ಅಕ್ರಮ ಒಂದೇ ನಾಣ್ಯದ ಎರಡು ಮುಖಗಳಲ್ಲ. ಒಂದು ನಕಲಿ ನಾಣ್ಯದ ಮುಖ. ಇನ್ನೊಂದು ಅಸಲಿ ನಾಣ್ಯದ ಮುಖ. ಈ ನಕಲಿ ನಾಣ್ಯದ ಮುಖವನ್ನು ಕಂಡಾಗ ಅದರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಂಡರೆ ಅಸಲಿ ನಾಣ್ಯದ ಚಲಾವಣೆ ಸುಸೂತ್ರ. ಆದರೆ, ಈಗ ನಕಲಿ ಯಾವುದು ಅಸಲಿ ಯಾವುದು ಎಂಬುದು ತಿಳಿಯದ ರೀತಿಯಲ್ಲಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡುತ್ತಿರುವ ವಿಚಾರ ನಿಜಕ್ಕೂ ಅರ್ಥವಾಗದ್ದು. ಇದರ ಜೊತೆಗೆ ಅಕ್ರಮಗಳನ್ನು ಪಟ್ಟಿ ಮಾಡಿ ಕೆಲವು ಸುಧಾರಣೆಗಳನ್ನು ಮುಂದಿಟ್ಟು ಚುನಾವಣಾ ಆಯೋಗಕ್ಕೆ ವಿಧ್ಯುಕ್ತವಾಗಿ ಪತ್ರ ಬರೆದಾಗ ಸಂಬಂಧಪಟ್ಟವರಿಗೆ ಸಮಜಾಯಿಷಿ ನೀಡುವ ಜೊತೆಗೆ ಸಾರ್ವಜನಿಕರಿಗೂ ವಿವರಣೆ ನೀಡುವುದು ಸಾಧುವಾದ ಹಾಗೂ ನ್ಯಾಯಸಮ್ಮತವಾದ ಮಾರ್ಗ. ಆದರೆ, ಈ ಕ್ರಮ ಅನುಸರಿಸುವಾಗ ಪತ್ರ ಬರೆದವರಿಗೆ ಬೆದರಿಕೆ ಹಾಕುವ ಪ್ರವೃತ್ತಿ ಯಾವುದೇ ರೀತಿಯಲ್ಲಿ ಸರಿಯಲ್ಲ. ಹಿರಿಯ ರಾಜಕೀಯ ಮುಖಂಡರು ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ದೂರಿನ ಪತ್ರಕ್ಕೆ ಕೊಟ್ಟಿರುವ ಉತ್ತರದ ಧಾಟಿ ಅತಿರೇಕದ್ದು ಎಂದು ಧಾರಾಳವಾಗಿ ಹೇಳಬಹುದು.
ಚುನಾವಣಾ ಆಯೋಗ ಇಂತಹ ದೋಷಗಳನ್ನು ನಿವಾರಿಸಿಕೊಳ್ಳದಿದ್ದರೆ ವಿಶ್ವಾಸಾರ್ಹತೆ ಉಳಿಯಲಾರದು. ದೀಪದ ಕೆಳಗೆ ಕತ್ತಲೆ ಎನ್ನುವಂತೆ ದೋಷಗಳು ನುಸುಳಿರಬಹುದು. ಇಂತಹ ದೋಷಗಳನ್ನು ಎತ್ತಿತೋರಿಸಿದಾಗ ನಿವಾರಣೆ ಕ್ರಮಗಳು ಮುಖ್ಯವಾಗಬೇಕೆ ವಿನಃ ಯಾರಿಗೋ ಒಬ್ಬರಿಗೆ ಅಥವಾ ಒಂದು ಗುಂಪಿಗೆ ಖುಷಿ ಕೊಡುವ ರೀತಿಯಲ್ಲಿ ವರ್ತಿಸುವುದು ಕಾನೂನಿನ ಸ್ಫೂರ್ತಿಯ ವಿರೋಧ. ಇಂತಹ ಧೋರಣೆ ಚುನಾವಣಾ ಆಯೋಗದಲ್ಲಿ ಹೇಗೆ ನುಸುಳಿದೆ ಎಂಬುದು ಕೂಡಾ ಕುತೂಹಲದ ಸಂಗತಿಯೇ. ಆಯೋಗದ ಕಮಿಷನರ್‌ಗಳ ನೇಮಕಾತಿ ಸ್ವರೂಪದಲ್ಲಿ ಮಾರ್ಪಾಡಾಗಿರುವುದು ಇದಕ್ಕೊಂದು ಕಾರಣ ಇದ್ದರೂ ಇರಬಹುದು. ಈಗಿನ ಶಾಸನದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಆಯ್ಕೆ ಸಮಿತಿಯಲ್ಲಿ ಪ್ರಾತಿನಿಧ್ಯವಿಲ್ಲ. ಕೇಂದ್ರ ಸರ್ಕಾರದ ಬಯಸುವವರಿಗೆ ಮಾತ್ರ ಈ ಸ್ಥಾನ. ಹೀಗಿರುವಾಗ ನೇಮಕ ಮಾಡಿದವರಿಗೆ ನಿಷ್ಠೆಯಿಂದಿರುವುದು ಲೋಕದ ನ್ಯಾಯ. ಏನೇ ಆದರೂ ದೇಶ ಕಟ್ಟುವ ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಚುನಾವಣಾ ಆಯೋಗ ತನ್ನ ಪಾತ್ರವನ್ನು ಸರಿಪಡಿಸಿಕೊಳ್ಳುವುದು ಎಷ್ಟು ಸೂಕ್ತವೋ ಅದಕ್ಕಿಂತಲೂ ನೇಮಕಾತಿ ಸೂತ್ರವೂ ಕೂಡಾ ಮೊದಲಿನಂತೆಯೇ ಆಗುವುದು ಆದ್ಯತೆಯ ಮೇಲೆ ಆಗಬೇಕಾದ ಕೆಲಸ.
ಟಿ.ಎನ್. ಶೇಷನ್ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ೩೪ ವರ್ಷಗಳ ಹಿಂದೆ ನೇಮಕಗೊಂಡಾಗ ಅದೊಂದು ನಿಷ್ಕ್ರೀಯ ಸಂಸ್ಥೆಯಾಗಿತ್ತು. ತಮ್ಮ ಲೋಕನಿಷ್ಠೆ ಹಾಗೂ ಲೋಕದೃಷ್ಟಿಯ ಜೊತೆಗೆ ಸಂವಿಧಾನಬದ್ಧ ಅಧಿಕಾರವನ್ನು ಬಳಸಿಕೊಂಡು ಚುನಾವಣಾ ಆಯೋಗಕ್ಕೆ ಕಾಯಕಲ್ಪ ನೀಡಿ ನಿಷ್ಪಕ್ಷಪಾತ ಸಂಸ್ಥೆಯಾಗಿ ರೂಪಿಸಿದ್ದು ಈಗ ಇತಿಹಾಸ. ಅಂತಹ ಇತಿಹಾಸದ ವಿಸ್ತರಣೆಯಾಗಬೇಕೆ ಹೊರತು ತಿದ್ದುಪಡಿಯಾಗುವ ಕ್ರಮಗಳು ದೇಶವಿರೋಧಿ.

Next Article