ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿತ್ತನೆ ಬೀಜ ದುಬಾರಿ

02:00 AM May 29, 2024 IST | Samyukta Karnataka

ಕೃಷಿ ಕ್ಷೇತ್ರದ ಉತ್ತಮ ಇಳುವರಿಗೆ ಗುಣಮಟ್ಟದ ಬಿತ್ತನೆ ಬೀಜ ಅತ್ಯಗತ್ಯ. ಪ್ರತಿ ವರ್ಷವೂ ಕೂಡ ಗುಣಮಟ್ಟದ ಬಿತ್ತನೆ ಬೀಜ ಪಡೆಯಲು ಪರದಾಡುವ ರೈತರು ಕಡೆಗೆ ವ್ಯಾಪಾರಿಗಳ ಮಾತಿಗೆ ಕಟ್ಟುಬಿದ್ದು ನಕಲಿ ಬೀಜಗಳನ್ನೇ ಅಸಲಿ ಬೀಜಗಳೆಂದು ಭಾವಿಸಿ ಬಿತ್ತನೆ ಮಾಡುವ ಪರಿಣಾಮವಾಗಿ ಇಳುವರಿಯ ಪ್ರಮಾಣ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಕುಸಿಯುವುದರಿಂದ ಸಾಲದಲ್ಲಿಯೇ ಮುಳುಗೇಳಬೇಕಾದಂತಹ ಸ್ಥಿತಿಗೆ ಸಿಕ್ಕಿಬೀಳುವುದು ಒಂದು ರೀತಿಯಲ್ಲಿ ಪ್ರಾರಬ್ಧವಾಗಿರುವ ವಾಡಿಕೆ. ಈ ಬಾರಿ ಪೂರೈಕೆಯಾಗುತ್ತಿರುವುದು ಗುಣಮಟ್ಟದ ಬಿತ್ತನೆ ಬೀಜವೋ ಎಂಬುದು ಅರಿವಿಗೆ ಬಾರದಿದ್ದರೂ ಬೆಲೆ ಮಾತ್ರ ಶೇ. ೬೦ರಷ್ಟು ಹೆಚ್ಚಾಗಿರುವುದು ಮೊದಲೇ ಸಾಲದಲ್ಲಿ ಮುಳುಗಿರುವ ರೈತನಿಗೆ ನುಂಗಲಾರದ ತುತ್ತಾಗಿದೆ. ಕೃಷಿ ಇಲಾಖೆ ಮುಂಗಾರು ಸಮೀಪಿಸುವ ವೇಳೆಗೆ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರದ ಜೊತೆಗೆ ಅಗತ್ಯ ತರಬೇತಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಒದಗಿಸುವ ಘೋಷಿತ ನೀತಿಯನ್ನು ನಿಯತ್ತಿನಿಂದ ಪರಿಪಾಲಿಸದೇ ಇರುವುದು ಈ ಪಡಿಪಾಟಲಿಗೆ ಕಾರಣ. ಪೂರ್ವ ಮುಂಗಾರಿನ ಕೃಪೆಯಿಂದಾಗಿ ಜಮೀನನ್ನು ಉಳುಮಿಗೆ ಹದ ಮಾಡಿ ಬಿತ್ತನೆ ಮಾಡುವ ಸಂದರ್ಭದಲ್ಲಿ ಬೀಜಗಳ ಬೆಲೆ ಗಗನಕ್ಕೇರಿರುವುದು ಕೇವಲ ಕಾಕತಾಳೀಯವಾಗಲಾರದು. ವ್ಯಾಪಾರಿಗಳ ಚೆಲ್ಲಾಟವನ್ನು ಮೊದಲಿನಿಂದಲೂ ಅರಿತಿರುವ ಕೃಷಿ ಇಲಾಖೆಯ ಅಧಿಕಾರಿಗಳು ಇಂತಹ ಸ್ಥಿತಿ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದರೆ ಬಹುಶಃ ಈ ಬಿಕ್ಕಟ್ಟು ತಲೆದೋರುತ್ತಿರಲಿಲ್ಲವೇನೋ.
ನಕಲಿ ಬಿತ್ತನೆ ಬೀಜಗಳ ಹಾವಳಿಯ ನಿವಾರಣೆಗೆ ಕಟ್ಟೆಚ್ಚರದ ಕಣ್ಗಾವಲು ಅತ್ಯಗತ್ಯ. ಅಂಗೈನಲ್ಲಿ ಅರಮನೆ ತೋರಿಸುವ ಮಾತುಗಳನ್ನು ಆಡುತ್ತಲೇ ರೈತರಿಗೆ ಇಳುವರಿ ಪ್ರಮಾಣ ದ್ವಿಗುಣವಾಗುವುದೆಂದು ನಂಬಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ಬಿತ್ತನೆ ಬೀಜದ ಕಂಪನಿಗಳಿಗೆ ಲಗಾಮು ಹಾಕುವ ಕೆಲಸವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡದೇ ಇರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ. ಪ್ರತಿ ವರ್ಷವೂ ಕೂಡಾ ನಕಲಿ ಬಿತ್ತನೆ ಬೀಜದ ಹಾವಳಿಗೆ ಸಿಕ್ಕಿ ಸರ್ಕಾರದ ವಿರುದ್ಧ ತಿರುಗಿಬೀಳುವ ರೈತರ ಆಕ್ರೋಶಕ್ಕೆ ಸಿಕ್ಕುವುದು ಕೇವಲ ಪೊಲೀಸರ ಲಾಠಿ ಏಟು ಮಾತ್ರ. ಇಂತಹ ವಾತಾವರಣ ಮೊದಲು ತಪ್ಪಬೇಕು. ರೈತರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂಬುದು ವಾದದ ಮಟ್ಟಿಗೆ ಸರಿ. ಆದರೆ, ಅಂತಹ ವಾತಾವರಣ ನಿರ್ಮಾಣವಾಗುವ ಸ್ಥಿತಿಯನ್ನು ಕೂಡಾ ಸರ್ಕಾರ ಸೃಷ್ಟಿಸಬಾರದು. ಹಿಂದೆ ೨೦೦೭-೦೮ರ ಸಂದರ್ಭದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮಾರನೆಯ ದಿನವೇ ಹಾವೇರಿಯಲ್ಲಿ ರೈತರು ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಪೂರೈಕೆ ಸಮರ್ಪಕವಾಗಿಲ್ಲ ಎಂದು ಪ್ರತಿಭಟಿಸಿದ ಪರಿಣಾಮ ಪೊಲೀಸರು ಗೋಲಿಬಾರ್ ಮಾಡಿದ್ದ ಸಂಗತಿಯನ್ನು ಮರೆಯಬಾರದು. ಇದು ಯಾವುದೇ ಒಂದು ರಾಜಕೀಯ ಪಕ್ಷದ ವಿಚಾರವಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಕೂಡಾ ಅಧಿಕಾರಿಗಳ ವರ್ತನೆ ಯಥಾ ಪ್ರಕಾರದಲ್ಲೇ ಮುಂದುವರಿಯುವುದು ಈ ಸಮಸ್ಯೆಗೆ ಕಾರಣ. ಕೃಷಿ ಖಾತೆಯ ಜವಾಬ್ದಾರಿ ವಹಿಸಿರುವ ಉತ್ಸಾಹಿ ಚಲುವರಾಯ ಸ್ವಾಮಿ ಅವರು ರೈತರ ಸಮಸ್ಯೆಗಳ ನಿವಾರಣೆಗೆ ಮಧ್ಯಪ್ರವೇಶಿಸಿ ಆದ್ಯತೆಯ ಮೇರೆಗೆ ಪರಿಹಾರ ಒದಗುವಂತೆ ನೋಡಿಕೊಳ್ಳುವುದು ಅತ್ಯಗತ್ಯ.
ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಲವಾರು. ಕೃಷಿಗೆ ಬಂಡವಾಳ ಒದಗಿಸುವುದು ಕೂಡಾ ಒಂದು ದೊಡ್ಡ ಸಮಸ್ಯೆ. ಏಕೆಂದರೆ, ಒಂದು ವರ್ಷದ ಕೊಯ್ಲಿಗೆ ಬಂದ ಫಸಲು ಪ್ರಾಕೃತಿಕ ವಿಕೋಪದಿಂದಾಗಿ ನಷ್ಟಕ್ಕೆ ಒಳಗಾದಾಗ ಅದಕ್ಕೆ ಹೂಡಿದ ಬಂಡವಾಳವೆಲ್ಲಾ ವ್ಯರ್ಥ. ಇದರಿಂದ ಸಾಲದ ಮರುಪಾವತಿಯಾಗದೆ ಬಡ್ಡಿ ಚಕ್ರಬಡ್ಡಿಯಲ್ಲಿ ಸಿಲುಕಿ ರೈತ ಸುಸ್ಥಿದಾರನಾಗುವುದು ಸ್ವಾಭಾವಿಕ. ಇಂತಹ ರೈತನಿಗೆ ಸಹಕಾರಿ ಬ್ಯಾಂಕುಗಳ ಸಾಲ ಸೌಲಭ್ಯಕ್ಕೆ ಅನರ್ಹ. ಖಾಸಗಿಯವರ ಮೂಲಕ ಪಡೆಯುವ ದುಬಾರಿ ಬಡ್ಡಿಯ ಸಾಲ ತೀರಿಸಲಾಗದ ಸ್ಥಿತಿಗೆ ಬಂದು ಆತ್ಮಹತ್ಯೆಯ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗುವ ಬೆಳವಣಿಗೆ ಸರ್ಕಾರದ ಆಡಳಿತವನ್ನು ಎಚ್ಚರಿಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡುವ ಬದಲು ರೈತಾಪಿ ಜನರಿಗೆ ಸಕಾಲದಲ್ಲಿ ಕೃಷಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸಿ ಮಾರುಕಟ್ಟೆ ಸೌಲಭ್ಯವನ್ನು ಸೃಷ್ಟಿಸಿದರೆ ಆಗ ರೈತನ ಬಾಳು ಬಂಗಾರವಾಗುವುದು ಖಂಡಿತ. ಹಾಗೆ ಮಾಡದೇ ಹೋದರೆ ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗಿ ಸಂಪೂರ್ಣವಾಗಿ ಪರಿವರ್ತನೆಗೊಂಡು ಕೃಷಿ ಕ್ಷೇತ್ರ ನೆಲಕಚ್ಚುವ ಕಾಲ ದೂರ ಇರಲಾರದು.

Next Article