ಸಂವಿಧಾನ ಬದಲಾವಣೆ ಮೋದಿ ಆಂತರಿಕ ಯೋಜನೆ
ಬೆಂಗಳೂರು: ಭಾರತೀಯ ಸಂವಿಧಾನ ಆಪತ್ತಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮಾತಿಗಷ್ಟೇ ಸಂವಿಧಾನದ ರಕ್ಷಣೆ ಮಾಡೋಣ ಎಂಬ ಮಾತನ್ನು ಹೇಳುತ್ತಿದ್ದಾರೆ. ಆದರೆ ಅವರ ಆಂತರಿಕ ಯೋಜನೆ ಸಂವಿಧಾನ ಬದಲಾವಣೆ ಮಾಡುವುದೇ ಆಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ'ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಸಂವಿಧಾನ ಬದಲಾವಣೆಯ ಬಗ್ಗೆ ಸಂಚು ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತೋ ಆ ರಾಜ್ಯದ ಶಾಸಕರು, ಸಂಸದರ ಮೇಲೆ ಕೇಂದ್ರ ಸರ್ಕಾರ ಇ.ಡಿ ದಾಳಿ ನಡೆಸಿ ಬೆದರಿಸುತ್ತಿದ್ದಾರೆ. ನಮ್ಮ ಶಾಸಕರನ್ನು ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಕೆಲ ಶಾಸಕರನ್ನು ಹಿಂದಿನ ಅವಧಿಯಲ್ಲಿ ಖರೀದಿ ಮಾಡಿದ್ದರು. ಅದೇ ಮಾದರಿಯಲ್ಲಿ ಮಣಿಪುರ, ಗೋವಾ, ಉತ್ತರಾ ಖಂಡದಲ್ಲಿ ಈ ಪ್ರಯೋಗ ಮಾಡಿದ್ದಾರೆ. ಕೇಂದ್ರದ ಇದೇ ಚಾಳಿ ಮುಂದುವರಿದರೆ ಮುಂದೊಂದು ದಿನ ಸಂವಿಧಾನಕ್ಕೆ ಧಕ್ಕೆಯಾಗಲಿದೆ ಎಂದರು. ಹೆಗಡೆ ಬಾಯಲ್ಲಿ ಹೇಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನರೇಂದ್ರ ಮೋದಿಯವರ ಮಂತ್ರಿ ಮಂಡಲದಲ್ಲಿ ಇದ್ದುಕೊಂಡೇ ಕೇಂದ್ರ ಸಚಿವ ಆಗಿದ್ದ ಅನಂತಕುಮಾರ ಹೆಗಡೆ,
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು" ಎಂದು ಘೋಷಿಸಿದರು.
ಈ ಘೋಷಣೆಯನ್ನು ಪ್ರಧಾನಿ ಮೋದಿಯವರಾಗಲೀ, ಅಮಿತ್ ಶಾ ಆಗಲೀ, ಬಿಜೆಪಿಯಾಗಲೀ ಖಂಡಿಸಲಿಲ್ಲ. ವಿರೋಧಿಸಲಿಲ್ಲ. ಹೀಗಾಗಿ ಬಿಜೆಪಿ, ಆರ್‌ಎಸ್‌ಎಸ್ ಅಜೆಂಡಾವನ್ನು, ಉದ್ದೇಶವನ್ನು ಅನಂತಕುಮಾರ ಹೆಗಡೆ ಬಾಯಲ್ಲಿ ಹೇಳಿಸಿದ್ದಾರೆ ಎಂದು ಕಿಡಿಕಾರಿದರು. ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ವಿವರಿಸಿದರು.