For the best experience, open
https://m.samyuktakarnataka.in
on your mobile browser.

ಸಂಶಯ: ಪ್ರೇಮ ವಿಶ್ವಾಸಗಳ ಶತ್ರು

04:00 AM May 10, 2024 IST | Samyukta Karnataka
ಸಂಶಯ  ಪ್ರೇಮ ವಿಶ್ವಾಸಗಳ ಶತ್ರು

ಸಂಶಯಕ್ಕೆ ಹಿರಿಯರು ಪಿಶಾಚಿ ಸ್ಥಾನ ಕೊಟ್ಟಿದ್ದಾರೆ. ಈ ಪಿಶಾಚಿ (ಸಂಶಯ) ನಿಮ್ಮಲ್ಲಿ ಹುಟ್ಟುತ್ತಲೇ ನಿಮ್ಮ ಹೃದಯ, ಮನಸ್ಸು, ದೇಹದ ಸುತ್ತ ಮುತ್ತಲೂ ಇರುವ ಪ್ರೇಮ ದೇವತೆ ಮೆಲ್ಲನೆ ಹೊರಟು ಹೋಗುತ್ತಾಳೆ. ಆಗ ನಿಮ್ಮ ಮೈ ಮನವೆಲ್ಲ ಸಂಶಯ ಭೂತದ ಸ್ಥಾನವಾಗುವುದು.
ಕುರಾನ್ ಇದನ್ನು ಪಾಪ ಎಂದು ಕರೆದಿದೆ. ಕುರಾನ್ ನೀಡಿರುವ ಪ್ರಮುಖ ದೈವಿಕ ಆಜ್ಞೆಗಳಲ್ಲಿ ಒಂದು: ಸಂಶಯ ಸ್ವಭಾವವನ್ನು ತ್ಯಜಿಸಿರಿ ಎಂದು. ಕುರಾನಿನ ಅಧ್ಯಾಯ ಅಲ್ ಹುಜುರಾತ್ (೪೯-೧೨) ದಲ್ಲಿ ಹೆಚ್ಚಿನ ಸಂಶಯಗಳಿಂದ ದೂರವಾಗಿರಿ ಸಂಶಯಗಳು ಪಾಪಗಳಾಗಿವೆ' ಇನ್ನೊಬ್ಬರ ಬಗ್ಗೆ ವೃಥಾ ಸಂಶಯದಿಂದ ನೋಡುವುದು ಪಾಪವಾಗಿದೆ ಎನ್ನಲಾಗಿದೆ. ಸಂಶಯವೆಂದರೆ ಯಾವು ದನ್ನು ಪರಿಶೀಲಿಸಲಾಗದ ಸಾಕ್ಷಾಧಾರಗಳಿಲ್ಲದೆ ನಂಬುವುದೆ. ಜನರು ಸಂಶಯದಿಂದಲೇ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಿದರೆ ಸಮಾಜದ ಮೇಲೆ ಅದರ ಕೆಟ್ಟ ಪರಿಣಾಮ ಆಗುವುದು. ನೈತಿಕತೆಯ ದೃಷ್ಟಿಯಿಂದ ಅದು ಪಾಪವಾದರೆ ಕಾನೂನಿನ ದೃಷ್ಟಿಯಿಂದ ಅದು ಅಪರಾಧ ಎನಿಸಬಹುದು. ಇಂತಹ ಸ್ವಭಾವವನ್ನು ತ್ಯಜಿಸಬೇಕು. ಪ್ರವಾದಿವರ್ಯ ಮೊಹಮ್ಮದ್(ಸ) ಅವರ ಈ ಉಪದೇಶ ನೋಡಿ,ನಿಮ್ಮ ಜೊತೆ ಇರುವವರನ್ನು ಜೊತೆಗೆ ಕೆಲಸ ಮಾಡುವವರನ್ನು ಸಂಶಯದ ದೃಷ್ಟಿಯಿಂದ ನೋಡಬೇಡಿ. ಸಂಶಯ ಅದೊಂದು ದೊಡ್ಡ ಸುಳ್ಳು' ಎಂದಿದ್ದಾರೆ. ನೀವು ಒಬ್ಬರ ತಪ್ಪು ಕೆಲಸಗಳ ಬಗ್ಗೆ ಸಂಶಯ ಪಟ್ಟರೆ ಅದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೆ, ನೀವು ತಪ್ಪು ಮಾಡುತ್ತಿದ್ದೀರಿ. ನೀವು ಸುಳ್ಳು ಹೇಳುತ್ತಿರುವಿರಿ ಎಂದು ಅರ್ಥ.
ನಾವೆಲ್ಲ ಸಮಾಜ ಜೀವಿಗಳು. ಕೂಡಿ ಬಾಳುವುದು ನಮ್ಮೆಲ್ಲರ ದೈನಂದಿನ ಜೀವನ ಶೈಲಿ. ಒಬ್ಬರಿಗೊಬ್ಬರು ಪರಸ್ಪರ ನಂಬಿಕೆ ವಿಶ್ವಾಸಗಳಿಂದ ವ್ಯವಹರಿಸಬೇಕಾಗುತ್ತದೆ. ನಂಬಿಕೆ ವಿಶ್ವಾಸಗಳಿಲ್ಲದೆ ಯಾವ ಸಮಾಜವು ಉದ್ಧಾರವಾಗಲಾರದು. ಸಂಶಯದ ಸ್ವಭಾವ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ.
ಅಲ್ಲದೆ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗದಂತೆ. ಇಡೀ ಸಮಾಜವನ್ನು ಸಂಶಯದ ಜಾಲವನ್ನಾಗಿಸಿ ಅಲ್ಲಿ ಸಂಶಯದ ಭೂತ ಪಿಶಾಚಿಗಳ ತಾಣವಾದಂತೆ ಪರಸ್ಪರ ಅಪ ನಂಬಿಕೆಗಳಿಂದ ಕಲಹ, ಅಶಾಂತಿಯಿಂದ ನೈತಿಕ ಮಾಲಿನ್ಯತೆಯ ಜೊತೆಗೆ ಸಾಂಸ್ಕತಿಕ ಮಾಲಿನ್ಯವು ಉಂಟಾಗುತ್ತದೆ. ಸಮಾಜ ರೋಗ ಗ್ರಸ್ತವಾಗುತ್ತದೆ.