For the best experience, open
https://m.samyuktakarnataka.in
on your mobile browser.

ಸಂಸದರ ಮೌನಪ್ರಸ್ಥ-ರಾಜ್ಯ ವಾನಪ್ರಸ್ಥ

12:39 PM Sep 28, 2023 IST | Samyukta Karnataka
ಸಂಸದರ ಮೌನಪ್ರಸ್ಥ ರಾಜ್ಯ ವಾನಪ್ರಸ್ಥ

ಮೌನವೇ ಆಭರಣ ಎಂಬುದು ರೂಪಾತ್ಮಕವಾದ ಮಾತು. ಆದರೆ ಶಾಸನ ಸಭೆಗಳಲ್ಲಿ ಮೌನ ಆಭರಣವಾಗುವುದಿಲ್ಲ. ಮಾತೇ ಅಲ್ಲಿ ಅಸ್ತ್ರ. ಶಾಸನಸಭೆ ಎಷ್ಟಾದರೂ ಅನುಭವಗಳ ವಿನಿಮಯದ ಮಾತಿನ ಮಂಟಪ. ಈ ಸದನಗಳಲ್ಲಿ ಮೌನವ್ರತ ಸಾಧಿಸುವುದು ಜನಪರವಂತೂ ಅಲ್ಲ. ಆದರೆ ಇದು ಅಪ್ಪಟ ಜನವಿರೋಧಿ ಹಾಗೂ ಜೀವವಿರೋಧಿ. ಹೀಗಿರುವಾಗ ಜನಾದೇಶದ ಮೂಲಕ ಆಯ್ಕೆಯಾದ ಸದಸ್ಯರು, ಜನರ ಸಂಕಟಗಳ ನಿವೇದನೆ ಮಾಡಿಕೊಳ್ಳದೇ ಮೌನವನ್ನು ಆಭರಣವನ್ನಾಗಿ ಮಾಡಿಕೊಂಡರೆ ಅದು ಉತ್ತರಕುಮಾರನ ಪೌರುಷವಷ್ಟೇ. ಇಂತಹ ಉತ್ತರಕುಮಾರರ ಪೌರುಷ ಪ್ರದರ್ಶನದಿಂದ ಸಂಸದರು ಮೌನಪ್ರಸ್ಥವಾಸಿಗಳಾದರೆ ಅವರನ್ನು ನಂಬಿಕೊಂಡ ರಾಜ್ಯದ ಜನ ವಾನಪ್ರಸ್ಥ ವಾಸಿಗಳಾಗುವುದೊಂದೇ ದಾರಿ. ಇದು ಚುನಾಯಿತ ಪ್ರತಿನಿಧಿಗಳ ವಿವೇಚನೆ ಹಾಗೂ ವಿವೇಕದ ಮುಂದಿರುವ ಜನಾ ದೇಶದಲ್ಲಿ ಹೊಳೆಯುತ್ತಿರುವ ಪ್ರಶ್ನೆ.

ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಗುಲಾಮರೇ? ಪ್ರಧಾನಿ ಎದಿರು ರಾಜ್ಯದ ಹಿತಾಸಕ್ತಿಗಾಗಿ ಮಾತನಾಡುವ ತಾಕತ್ತೂ ಇಲ್ಲವೇ? ಕಳೆದೆರಡು ತಿಂಗಳಿನಿಂದ ಈ ಪ್ರಶ್ನೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಿರಿ ಮರಿ ಪುಢಾರಿಗಳೂ ಕೂಡ ಕೇಳುತ್ತಿದ್ದಾರೆ. ಹದಿನೇಳನೇ ಲೋಕಸಭೆಯ ಅಂತಿಮ ಚರಣದಲ್ಲಿರುವ ಈ ಸಂದರ್ಭದಲ್ಲಿ ರಾಜ್ಯದ ಇಪ್ಪತ್ತೆಂಟೂ ಸಂಸದರ ಕಾರ್ಯ ಕ್ಷಮತೆ ಮತ್ತು ರಾಜ್ಯಕ್ಕೆ, ಜನರಿಗೆ, ಕ್ಷೇತ್ರಕ್ಕೆ ಆಗಿರುವ ಲಾಭ, ಸಂರಕ್ಷಣೆಯ ಕುರಿತು ಪರಾಮರ್ಶೆ ಆರಂಭವಾಗಿದೆ. ನಾಲ್ಕೂವರೆ ವರ್ಷಗಳ ನಂತರ ತಮ್ಮ ಸಂಸದರ ಬಗ್ಗೆ ಜನಸಾಮಾನ್ಯ ಕೂಡ ವಿಮರ್ಶಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಜ್ಞ ಬೆಳವಣಿಗೆಯೇ ಸರಿ.
ಕಾವೇರಿ, ಮಹದಾಯಿ ವಿವಾದಗಳ ಕುರಿತು ಸರ್ವಪಕ್ಷ ನಿಯೋಗ ಕರೆದುಕೊಂಡು ಬರುತ್ತಿದ್ದೇವೆ. ಸಮಯ ಕೊಡಿ' ಎಂದು ಎರಡು ಸಾರೆ ಪತ್ರ ಬರೆದಿದ್ದೇವೆ. ಪ್ರಧಾನಿಯಿಂದ ಸ್ಪಂದನೆಯಿಲ್ಲ. ಇಪ್ಪತ್ತೈದು ಸಂಸದರ ಬೆಂಬಲವನ್ನು ಪ್ರಧಾನಿಯವರು ಪಡೆದಿದ್ದಾರೆ. ಪ್ರಧಾನಿಯವರ ಎದಿರು ನಿಂತು ಈ ಸಂಬಂಧ ಪ್ರಶ್ನಿಸುವ ತಾಕತ್ತು ಅಥವಾ ಅವಕಾಶ ಕೊಡಿಸುವ ಸ್ಥೆರ್ಯ- ಧೈರ್ಯ ಯಾರಿಗೂ ಇಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿಯೇ ಸವಾಲು ಹಾಕಿದ್ದಾರೆ. ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಕಾವೇರಿ ವಿವಾದದಲ್ಲಿ ಓಣಿ- ಬೀದಿಗಳಲ್ಲಿ ಹೋರಾಟಗಾರರು, ಜನಸಾಮಾನ್ಯರು ಸಂಸದರ ಈ ವರ್ತನೆ- ತಾಕತ್ತನ್ನು ಟೀಕಿಸುತ್ತಿರುವುದು ವಿಷಾದದ ಸಂಗತಿಯಾದರೂ, ಪರಿಸ್ಥಿತಿ ವಾಸ್ತವವೇ ಆಗಿದೆ. ರಾಜ್ಯದ ಸಮಸ್ಯೆಗಳ ದೀರ್ಘ ಪಟ್ಟಿಯನ್ನೇ ಈಗಿನ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರ್ಕಾರಗಳೆರಡೂ ಕೇಂದ್ರಕ್ಕೆ ಸಲ್ಲಿಸಿದ್ದಿದೆ. ತೀವ್ರ ಅತಿವೃಷ್ಟಿ ಆಯಿತು. ಪರಿಹಾರ ಕೊಡಿ ಎಂದರೂ ಪರಿಹಾರ ಲಭಿಸಲಿಲ್ಲ. ರೈತರ ಫಸಲ್ ಬಿಮಾ, ಆದರ್ಶ ಗ್ರಾಮ, ಪ್ರಧಾನಿ ಆವಾಸ್ ಯೋಜನೆ, ಸಹಕಾರಿ ಸಂಸ್ಥೆಗಳ ಆದಾಯ ತೆರಿಗೆ, ಎಲ್ಲಕ್ಕೂ ಹೆಚ್ಚಾಗಿ ಜಿಎಸ್‌ಟಿ ಪರಿಹಾರ ಇವೆಲ್ಲವನ್ನೂ ನ್ಯಾಯಯುತವಾಗಿ ಕೊಡಿಸಬೇಕಾದ ಸಂಸದರು, ಕೊಡಬೇಕಾದ ಕೇಂದ್ರವನ್ನು ಪ್ರಶ್ನಿಸಿಲ್ಲ. ಮಹದಾಯಿ ಕಳಸಾ ಬಂಡೂರಿ ಯೋಜನೆಯ ಅಂಗೀಕಾರ, ಒಪ್ಪಿಗೆ; ಮೇಕೆದಾಟು, ಎತ್ತಿನ ಹೊಳೆ ಯೋಜನೆ, ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ, ಈಗ ಕಾವೇರಿ... ಕರ್ನಾಟಕದ ಇವೆಲ್ಲ ಕೋರಿಕೆಗಳಿಗೆ ಸಂಸದರಿಂದ ಮನ್ನಣೆ ದೊರಕಿತಾ? ಸಂಸತ್ತಿನಲ್ಲಿ ಕರ್ನಾಟಕದ ಸಂಸದರು ಧ್ವನಿ ಎತ್ತಿದ್ದಾರಾ? ಐದು ವರ್ಷಗಳಲ್ಲಿ ತೋರಿಸಿ ಎಂಬ ಪ್ರಶ್ನೆ ಎದುರಾಗಿದೆ. ಎರಡು ಸಂಸದರಿರುವ ಗೋವಾದ ಎದಿರು ಇಪ್ಪತ್ತೈದು ಸಂಸದರು, ಅದೂ ಕೇಂದ್ರದ ಐವರು ಸಚಿವರುಗಳು ಇದ್ದೂ ಮಾತನಾಡದೇ ಮೌನ ವ್ರತ ತಾಳಿದ್ದೇಕೆ? ಮಹಾರಾಷ್ಟ್ರ- ಕರ್ನಾಟಕ ಗಡಿ ತಂಟೆ, ರಾಜ್ಯದ ಬೃಹತ್ ನೀರಾವರಿ ಯೋಜನೆಗಳಿಗೆ ನೆರವು, ಜಲ ವಿವಾದಗಳಿಗೆ ಸಂಸದರೇಕೆ ಒತ್ತಡ ಹೇರುತ್ತಿಲ್ಲ? ಈ ನೇರ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ನಿಜ. ಹದಿಮೂರನೇ ಲೋಕಸಭೆಯಲ್ಲಿ ಇಪ್ಪತೈದು ಬಿಜೆಪಿ ಸಂಸದರು, ಓರ್ವ ಪಕ್ಷೇತರ, ಓರ್ವ ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್ ಪ್ರತಿನಿಧಿಗಳಿದ್ದಾರೆ. ಮೋದಿ-೨ ಸರ್ಕಾರ ರಚನೆಯಲ್ಲಿ ಕರ್ನಾಟಕದ ಪಾಲು- ಬೆಂಬಲ ಸಾಕಷ್ಟಿದೆ. ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ಒಂದೇ ಮೋದಿಯವರನ್ನು ಬೆಂಬಲಿಸಿದ್ದು. ಹಾಗಿದ್ದೂ ಕರ್ನಾಟಕ ತಾತ್ಸಾರಗೊಂಡಿದ್ದೇಕೆ? ಅಥವಾ ರಾಜ್ಯದ ಹಿತರಕ್ಷಣೆಯಲ್ಲಿ ಒಮ್ಮತ ಪ್ರದರ್ಶನ ಸಾಧ್ಯವಾಗಿಲ್ಲವೇಕೆ? ಸಂಸದರ ಅಸಾಮರ್ಥ್ಯವೇ? ಮೋದಿ ಬ್ರಿಗೇಡ್ ನಾಯಕ, ಕಟ್ಟರ್ ಪಂಥೀಯ ಚಕ್ರವರ್ತಿ ಸೂಲಿಬೆಲೆ ವರ್ಷದ ಹಿಂದೆ ಕರ್ನಾಟಕದ ಸಂಸದರ ಬಗ್ಗೆ, ಅವರ ಕಾರ್ಯಕ್ಷಮತೆಯ ಬಗ್ಗೆ ನೇರಾನೇರ ಟೀಕೆಯನ್ನು ಮಾಡಿದಾಗ ಬಿಜೆಪಿ ತಲ್ಲಣಗೊಂಡಿತ್ತು. ಪ್ರಧಾನಿಯವರಿಗೆ ನಿಕಟಪ್ರಾಯರಾದ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಸಂಸದರೂ ಆಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಸೇರಿದಂತೆ ಯಾರೂ ರಾಜ್ಯದ ಹಿತ ಮತ್ತು ಕ್ಷೇತ್ರದ ಅಭಿವೃದ್ಧಿ, ಜನರ ನೋವು ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ೨೫ ಬಿಜೆಪಿ ಸಂಸದರು ಕಟ್ಟಿ ಕಡಿದು ಹಾಕಿದ್ದೇನು? ಎಂದು ಅಪರೂಪಕ್ಕೊಮ್ಮೆ ಸತ್ಯಕ್ಕೆ ಸನಿಹದ ಆರೋಪ ಮಾಡಿದ್ದರು.ನಮ್ಮ ಸಂಸದರು ತಮಿಳುನಾಡು, ಕೇರಳ ಸಂಸದರಿಂದ ಕಲಿಯುವುದು ಸಾಕಷ್ಟಿದೆ. ನಾಡಿನ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಬಲಿಕೊಡಲು ಅವರೆಂದೂ ಸಿದ್ಧರಾಗುವುದಿಲ್ಲ. ಆದರೆ ಕರ್ನಾಟಕದ ಸಂಸದರು ಏಕರಸವಾಗಿ ಬೆರೆಯಲು ಮನಸ್ಸಿಲ್ಲದವರಾಗಿದ್ದಾರೆ' ಎಂದು ಈ ಮೋದಿ ಬ್ರಿಗೇಡನ ಸೂಲಿಬೆಲೆ ನಿಜ ಅಭಿಪ್ರಾಯ ವ್ಯಕ್ತಪಡಿಸಿದಾಗ ಬಿಜೆಪಿಯಲ್ಲಿ ಕಂಪನ ಮೂಡಿತ್ತು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಧ್ವನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲ. ಉತ್ತರ ಕರ್ನಾಟಕದ ಜಲ ವಿವಾದ, ಬರ ಯಾವುದೂ ಕೂಡ ಈ ಸಂಸದರಿಗೆ ಕಾಣುತ್ತಿಲ್ಲ ಎನ್ನುವ ಆಕ್ರೋಶ ಈ ಬ್ರಿಗೇಡ್ ಮುಖಂಡನಿಂದ ಯಾವಾಗ ಬಂತೋ ಆಗ ಸಮಜಾಯಿಷಿ ನೀಡುವ ಕೆಲಸವಷ್ಟೇ ಆಯಿತು.
ಸೂಲಿಬೆಲೆ ಒಬ್ಬರೇ ಅಲ್ಲ. ಓಣಿ- ಬೀದಿಯಲ್ಲಿ ರಾಜಕೀಯ ಬಲ್ಲವರೆಲ್ಲ ಆಡಿಕೊಳ್ಳುವ ಮಾತಿದು.
ರಾಜ್ಯದಲ್ಲಿ ಹಿಂದಿನ ಬಿಜೆಪಿಯ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳಲ್ಲಿ ಕೇಂದ್ರದ ವಿರುದ್ಧ ಏನೇ ಆರೋಪಗಳಿದ್ದರೂ ಮುಚ್ಚಿಕೊಳ್ಳುವ ಪ್ರಯತ್ನಗಳು ನಡೆದವು. ತಪ್ಪೆಸಗಿದ್ದರೂ ಸಮಜಾಯಿಷಿ ನೀಡುವ ತಂತ್ರಗಾರಿಕೆಯನ್ನು ಅನಿವಾರ್ಯವಾಗಿ ಬಳಸಿಕೊಳ್ಳಲಾಯಿತು.
ಹಾಗೆ ನೋಡಿದರೆ ಕರ್ನಾಟಕದಿಂದ ಸಂಸದೀಯ ಪಟುಗಳು, ರಾಜ್ಯದ ಹಿತಕ್ಕಾಗಿ ಸೆಟೆದು ನಿಂತವರು ಬಹಳ ಕಡಿಮೆಯೇ. ತಮ್ಮ ಕ್ಷೇತ್ರ ಮತ್ತು ಪ್ರಾದೇಶಿಕ ಅಭಿವೃದ್ಧಿಗಾಗಿ ಸರ್ ಸಿದ್ದಪ್ಪ ಕಂಬಳಿ, ಕೆ.ಮಲ್ಲಪ್ಪ, ದಿನಕರ ದೇಸಾಯಿ, ಮಂಗಳೂರಿನ ಟಿ.ಎ.ಪೈ ಒಂದು ಹಂತದವರೆಗೆ ಇನ್ನೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಆ ನಂತರದ ವರ್ಷಗಳಲ್ಲಿ ಪಕ್ಷ, ಜಾತಿ, ಸಿದ್ಧಾಂತವನ್ನು ಮೀರಿ ಸಂಸತ್ತಿನಲ್ಲಿ ಮೆರೆದ ಅಗ್ರ ಪಂಕ್ತೀಯರೆಂದರೆ, ಕನ್ನಡಿಗ, ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯದಿಂದ ಚುನಾಯಿತರಾಗದಿದ್ದರೂ ಕರ್ನಾಟಕದವರಾಗಿದ್ದ ಜಾರ್ಜ್ ಫರ್ನಾಂಡೀಸ್, ರಾಜ್ಯಸಭೆ ಸದಸ್ಯರಾಗಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ, ಡಿ.ಕೆ.ನಾಯ್ಕರ್, ಜಾಫರ್ ಶರೀಫ್, ಜನಾರ್ದನ ಪೂಜಾರಿ, ನಂಜೇಗೌಡ ಇತ್ಯಾದಿ. ಇತ್ತೀಚಿನ ವರ್ಷಗಳಲ್ಲಿ ಅನಂತಕುಮಾರ ಈ ಸಾಲಿಗೆ ಸೇರುವವರು.
ಉತ್ತರದವರಿಗೆ ಕರ್ನಾಟಕ ಅಂದರೆ, ಮದ್ರಾಸಿಗಳು! ಸೌತ್ ಇಂಡಿಯಾ ಅಂದರೆ ಮದ್ರಾಸಿ, ಮಲೆಯಾಳಿಗಳಷ್ಟೇ… ಈ ಮನೋಭಾವ ದೇವೇಗೌಡರು ಪ್ರಧಾನಿಯಾದಾಗಿನಿಂದ ಬದಲಾಗಿದೆ. ಇಂದೂ ಕೂಡ ಕಾವೇರಿ ವಿಷಯವಾಗಿ ದೇವೇಗೌಡರು ರಾಜ್ಯಸಭೆಯಲ್ಲಿ ತುಂಬ ಕಳಕಳಿಯ ಮಾತನಾಡಿದರೇ ವಿನಾ, ಲೋಕಸಭೆಯಲ್ಲಿ ಆಡಳಿತ ಪಕ್ಷದ ಇಪ್ಪತೈದು ಸಂಸದರಿದ್ದರೂ ಒಬ್ಬರೂ ಧ್ವನಿ ಎತ್ತಲಿಲ್ಲ!
ಇಂದಿರಾ ಗಾಂಧಿ ಅವಧಿಯಲ್ಲಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಕೆನರಾ ಸಂಸದ ಬಿ.ವಿ.ನಾಯಕ್, ಅದೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಪ್ರತಿಭಟಿಸಿದವರು. ರಾಜ್ಯವನ್ನು ಕಡೆಗಣಿಸಿದಾಗ ಜಾಫರ್ ಶರೀಫ್, ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದವರು. ಹದಿನೆಂಟು ವರ್ಷಗಳ ಕಾಲ ರಾಜ್ಯಸಭೆ ಮತ್ತು ಕೇಂದ್ರದ ಮಂತ್ರಿಯಾಗಿದ್ದ ಮಾರ್ಗರೆಟ್ ಆಳ್ವಾ ಈ ರಾಜ್ಯದವರಾದರೂ ಕೂಡ ಪುನಃ ಲೋಕಸಭೆಗೆ ಆಯ್ಕೆಯಾಗಿ ನೆನಪುಳಿಯುವಂತೆ ಕೆಲಸ ಮಾಡಿದ್ದು ಕಡಿಮೆಯೇ. ಇದರ ನಡುವೆಯೂ ಕೂಡಾ ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪ ಮಾಡಿರುವ ಸಂಸದರ ಪೈಕಿ ಚಿತ್ರದುರ್ಗದ ಎಂ.ವೈ.ಹನುಮಂತಪ್ಪ, ತುಮಕೂರಿನ ಕೆ.ಲಕ್ಕಪ್ಪ, ಚಾಮರಾಜನಗರದ ಕಾಗಲವಾಡಿ ಶಿವಣ್ಣ ಅವರನ್ನು ಗುರುತಿಸಬಹುದು. ಅಲ್ಪಾವಧಿಯಲ್ಲಿ ಕಾರ್ಯನಿರ್ವಹಿಸಿದರೂ, ವಿ.ಎಸ್.ಉಗ್ರಪ್ಪನವರು ಪರಿಣಾಮಕಾರಿಯಾಗಿಯೇ ವಾದ ಮಂಡಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಅಚ್ಚರಿಯ ಸಂಗತಿಯೆಂದರೆ, ಕರ್ನಾಟಕದ ಸಂಸದರು, ಕೇಂದ್ರ ಮಂತ್ರಿಗಳಾದಾಗ ಸರ್ಕಾರದ ನೀತಿ ನಿಲುವುಗಳನ್ನು ಮಂಡಿಸಿದ ರೀತಿ ನಿಜಕ್ಕೂ ಗಮನಾರ್ಹ. ಕೇಂದ್ರದಲ್ಲಿ ಶಿಕ್ಷಣ ಹಾಗೂ ನೌಕಾಯಾನ ಸಚಿವರಾಗಿದ್ದ ಬಳ್ಳಾರಿಯ ಡಾ.ವಿ.ಕೆ.ಆರ್‌ವಿ ರಾವ್ ಅವರ ವಾದ ಮಂಡನೆಯ ಸ್ವರೂಪವನ್ನು ನೆನಪಿಸಿಕೊಳ್ಳುವವರು ಈಗಲೂ ಇದ್ದಾರೆ. ವಿದೇಶಾಂಗ ಮಂತ್ರಿಯಾಗಿ ಎಸ್.ಎಂ.ಕೃಷ್ಣ ಕೂಡಾ ತಮ್ಮ ಕಾರ್ಯ ನಿರ್ವಹಣೆ ಮೂಲಕ ಗಮನ ಸೆಳೆದಿದ್ದರು. ಈಗಿನ ಗಣಿ ಹಾಗೂ ಸಂಸದೀಯ ಖಾತೆ ಮಂತ್ರಿ ಪ್ರಹ್ಲಾದ್ ಜೋಶಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸಂಸತ್‌ನ ಕಲಾಪ ಹೊಸತಿರುವು ಪಡೆದುಕೊಳ್ಳುವ ರೀತಿಯಲ್ಲಿ ತಮ್ಮ ನಿಲುವುಗಳನ್ನು ಮಂಡಿಸುತ್ತಿರುವುದನ್ನು ಯಾರಾದರೂ ಮೆಚ್ಚಲೇ ಬೇಕು. ಆದರೆ, ಕರ್ನಾಟಕದ ವಿಚಾರ ಬಂದಾಗ ಅದೇಕೋ ಏನೋ ಸಂಸದರು ಏಕಧ್ವನಿಯಲ್ಲಿ ವಾದ ಮಂಡಿಸುವ ನಿದರ್ಶನಗಳು ಅಪರೂಪ. ಕರ್ನಾಟಕಕ್ಕೆ ಮಲತಾಯಿ ಧೋರಣೆ ಇದೇ ಸರಕಾರದಲ್ಲಷ್ಟೇ ಅಲ್ಲ.. ಹಿಂದಿನ ಎಲ್ಲ ಸರ್ಕಾರಗಳಲ್ಲೂ ಇದೇ ಸ್ಥಿತಿ ಎನ್ನಿ.. ಇಷ್ಟಾಗಿಯೂ ಸಂಸದರಿಗೇನು ರಾಜ್ಯದ ಹೊಣೆಗಾರಿಕೆ? ಎಂದು ಪ್ರಶ್ನಿಸುವವರಿದ್ದಾರೆ. ಮೊನ್ನೆ ಹೊಸ ಸಂಸತ್ತು ಪ್ರವೇಶಿಸುವ ಪೂರ್ವ ಬಿಜೆಪಿ ಸಂಸದೆ ಮೇನಕಾ ಗಾಂಧಿ, `ಲಕ್ಷಗಟ್ಟಲೇ ಮತದಾರರ ನಂಬಿಕೆಯನ್ನು ಕಾಪಾಡುವುದು ಮತ್ತು ಅವರಲ್ಲಿ ಅಚಲವಾದ ಬದ್ಧತೆ, ನೈತಿಕವಾದ ನಿಷ್ಠೆ ಮತ್ತು ಧೈರ್ಯ- ಹಿತಾಸಕ್ತಿಯನ್ನು ಕಾಪಾಡುವುದು' ನಮ್ಮ ಸಂಸದರ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದ್ದು ಮಾರ್ಮಿಕವಾಗಿತ್ತು.
ಅಧಿವೇಶನ ಇಲ್ಲದಿರುವಾಗ ಸಂಸದರಿಗೇನು ಕೆಲಸ ಎಂದು ಪ್ರಶ್ನಿಸಿದವರೂ ಇದ್ದಾರೆ. ಪ್ರಸಕ್ತ ಯೋಜನೆಗಳನ್ನೇ ನೋಡಿ. ಸಂಸದರ ನಿಧಿ ಬಳಕೆ ಕರ್ನಾಟಕದಲ್ಲಿ ಶೇಕಡಾ ೭೦ನ್ನೂ ದಾಟಿಲ್ಲ. ಆದರ್ಶ ಗ್ರಾಮ ಯೋಜನೆಯಡಿ ವರ್ಷಕ್ಕೆ ಒಂದು ಗ್ರಾಮ ದತ್ತು ಪಡೆಯಬೇಕಾದವರು, ಇಡೀ ರಾಜ್ಯದಲ್ಲಿ ಹದಿನೇಳು ಗ್ರಾಮಗಳನ್ನಷ್ಟೇ ದತ್ತು ಪಡೆದಿದ್ದಾರೆ. ಅದೂ ಕೂಡ ಗ್ರಾಮಕ್ಕೆ ಹೋದವರೇ ಕಡಿಮೆ. ಈ ಸಂಸದನಿಗೇ, ತಾವು ದತ್ತು ಪಡೆದ ಗ್ರಾಮ ಯಾವುದೆಂದು. ಅವರಿಗೂ ಗೊತ್ತಿಲ್ಲ !
ಗ್ಯಾಸ್ ಸಿಲೆಂಡರ್, ಪೆಟ್ರೋಲ್ ಪಂಪ್ ಪರವಾನಗಿ, ಕೇಂದ್ರೀಯ ಶಾಲೆಗಳಿಗೆ ಪ್ರವೇಶಕ್ಕೆ ಶಿಫಾರಸು, ಹೆದ್ದಾರಿ ಗುತ್ತಿಗೆ, ಟೆಲಿಫೋನ್ ಕನೆಕ್ಷನ್‌ಗಳಷ್ಟೇ ತಮ್ಮ ಕೆಲಸವೆಂದಷ್ಟೇ ತಿಳಿದ ಸಂಸದರಿದ್ದಾರೆ. ಮೋದಿಯವರ ಪ್ರಿಯ ಯೋಜನೆ ಸ್ವಚ್ಛ ಭಾರತ, ಆದರ್ಶ ಗ್ರಾಮ, ಆವಾಸ್ ಯೋಜನೆ… ಇವುಗಳನ್ನು ಬಿಜೆಪಿಯ ಇಪ್ಪತೈದು ಸಂಸದರು ಎಷ್ಟು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ? ಹೋಗಲಿ ಸಂಸತ್ತಿನಲ್ಲಿ ಪಾಲ್ಗೊಂಡು, ಸಂಸದೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆಯೇ ಎಂದರೆ, ಐದು ವರ್ಷಗಳಲ್ಲಿ ಕೇವಲ ಹದಿನೆಂಟು ಪ್ರಶ್ನೆಗಳನ್ನು ಕೇಳಿದ ಸಂಸತ್ ಸದಸ್ಯರು ಮೂವರು! ಯಾವೊಂದು ಚರ್ಚೆಯಲ್ಲಿಯೂ ಭಾಗವಹಿಸದವರೇ ಹೆಚ್ಚು. ಖಾಸಗಿ ಬಿಲ್ ಅಥವಾ ರಾಜ್ಯದ ಬೇಕು ಬೇಡಿಕೆ ಇತ್ಯಾದಿಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದವರೇ ಇಲ್ಲ.
ಉತ್ತರ ಕನ್ನಡದ ಸಂಸದರಂತೂ ಮೂರು ವರ್ಷಗಳಿಂದ ಸಾರ್ವಜನಿಕ ಸಭೆಗಳಲ್ಲೂ ಪಾಲ್ಗೊಳ್ಳುತ್ತಿಲ್ಲ. ಇವರು ಕೇಂದ್ರದ ಮಾಜಿ ಸಚಿವರು ಕೂಡ. ಚಿಕ್ಕಬಳ್ಳಾಪುರದ ಸಂಸದ ಬಚ್ಚೇಗೌಡ ನೇರಾನೇರವಾಗಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಟೀಕೆಯನ್ನೇ ಮಾಡಿದರು. ಅವರಿಗೆ ಮತ್ತು ಶ್ರೀನಿವಾಸ ಪ್ರಸಾದ ಮೊದಲಾದವರು ಮುಂದೆ ಬಿಜೆಪಿ ಟಿಕೆಟ್ಟೂ ಬೇಡ, ಸಂಸತ್ ಸದಸ್ಯನೂ ಆಗಲಾರೆ ಎಂದು ಘೋಷಿಸಿದವರು. ಕೇಂದ್ರದ ಸಚಿವರಾಗಿದ್ದು, ರಾಜ್ಯದ ಮಾಜಿ ಸಿಎಂ ಹಾಗೂ ಈಗ ಹಾಲಿ ಸಂಸದ ಡಿ.ವಿ.ಸದಾನಂದಗೌಡ, ರಮೇಶ ಜಿಗಜಿಣಗಿ ಅವರು ಕೆಲ ದಿನಗಳ ಹಿಂದಷ್ಟೇ ನನ್ನ ತೇಜೋವಧೆಗೆ ನಮ್ಮವರೇ ನಿಂತಿದ್ದಾರೆ ಎಂದು ಪರಿತಪಿಸಿದರು. ಏಕೆ ಹೀಗೆ? ಸಂಸತ್ತಿನ ಒಳ ಹೂರಣಗಳು, ಅಲ್ಲಿನ ವ್ಯಾವಹಾರಿಕತೆಗಳು, ನಡಾವಳಿಕೆಗಳು ಇವರಿಗೆ ಅರ್ಥವೇ ಆಗಲಿಲ್ಲವೇ ಎಂದರೆ ಬಹುತೇಕರಿಗೆ ಹಿಂದಿ- ಇಂಗ್ಲಿಷ್ ಸಮಸ್ಯೆ!. ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಹಿಂದಿಯಲ್ಲಿ ಮಾತನಾಡಲು ಹೋಗಿ ತಡವರಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯಿತು. ಕನ್ನಡದಲ್ಲಿಯೇ ಮಾತನಾಡಲು ಇವರಿಗೇಕೆ ಕೀಳರಿಮೆ? ಜೆ.ಎಚ್.ಪಟೇಲ್ ಪ್ರಥಮವಾಗಿ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿ ಕಂಪು ಮೂಡಿಸಿ, ಪೀಠಿಕೆ ಹಾಕಿಕೊಟ್ಟರು. ಆ ನಂತರವೂ ಕೆಲವರು ಕನ್ನಡದಲ್ಲಿ ಮಾತನಾಡಿದವರಿದ್ದಾರೆ. ರಾಜ್ಯದ ಹಿತ ಬಂದಾಗ ತಮಿಳುನಾಡು- ಕೇರಳದ ಎಲ್ಲ ಪಕ್ಷಗಳ ಸಂಸದರೂ ಒಂದಾಗಿ ಕೇಂದ್ರವನ್ನು ಬಗ್ಗಿಸುತ್ತವೆ. ತಮಿಳುನಾಡಿನ ಸ್ಟಾಲಿನ್, ಕರುಣಾನಿಧಿ, ಜಯಲಲಿತಾ ಎಲ್ಲರೂ ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ. ಬಗ್ಗಿಸಿ ಕೆಲಸ ಮಾಡಿಸಿಕೊಂಡಿದ್ದಾರೆ. ಈಗಿನ ಎನ್‌ಡಿಎ ಸರ್ಕಾರದಲ್ಲೂ ಕೂಡ. ಆದರೆ ಅತೀ ಹೆಚ್ಚು ಸಂಸದರನ್ನು ಆಡಳಿತ ಪಕ್ಷಕ್ಕೆ ಕೊಟ್ಟರೂ ನಮ್ಮವರು ಮಾತ್ರ ಆ ತಾಕತ್ತು ಪ್ರದರ್ಶಿಸುತ್ತಿಲ್ಲ.
ದೆಹಲಿ ರಾಜಕಾರಣ ಹಾಗೂ ವ್ಯವಹಾರ ಬಹುತೇಕ ಕರ್ನಾಟಕದ ಸಂಸದರಿಗೆ ಅರ್ಥವೇ ಆಗಲಿಲ್ಲವೇನೋ? ಅಥವಾ ಒಗ್ಗಿಕೊಳ್ಳಲು ಅಸಾಧ್ಯವಾಯಿತೇನೋ… ?
ಈ ಪರಿಸ್ಥಿತಿಗೆ ಇನ್ನೊಂದು ಮುಖವೂ ಇದೆ. ಲೋಕಸಭೆ, ವಿಧಾನಸಭೆ, ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಸ್ಪಷ್ಟ ನಿಲುವು ಇದ್ದಂತಿಲ್ಲ. ಗೆಲುವಿನ ಕುದುರೆಯಾದರೆ ಸಾಕು ಎಂಬುದೊಂದೆ ಅಭ್ಯರ್ಥಿಗಳ ಆಯ್ಕೆಗಿರುವ ಮಾನದಂಡ. ಇದರಿಂದಾಗಿ ಹಿಂದಿ, ಇಂಗ್ಲಿಷ್ ಜ್ಞಾನವಿಲ್ಲದವರು ಸಂಸತ್‌ಗೆ ಹೋದಾಗ ದಿಗ್ಬçಮೆಗೊಳ್ಳುವ ವಾತಾವರಣ ಸ್ವಾಭಾವಿಕ. ಸಂಸತ್‌ನ ಅಭ್ಯರ್ಥಿಗಳನ್ನು ಗುರುತಿಸುವಾಗ ಖಚಿತ ಮಾನದಂಡಗಳನ್ನು ರೂಪಿಸಿಕೊಂಡಿದ್ದರೆ ಆಗ ನಿರೀಕ್ಷಿತ ಪರಿಣಾಮ ಸಾಧ್ಯವಿದೆ. ಸಂಸತ್‌ನ ಆರಂಭದ ದಿನಗಳಲ್ಲಿ ವಕೀಲರ ಪ್ರಾತಿನಿಧ್ಯ ಹೆಚ್ಚಾಗಿ ಇರುತ್ತಿತ್ತು. ಈಗ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಸಂಸತ್‌ನ ಕಲಾಪದ ಗುಣಮಟ್ಟ ಸವಕಳಿಯಾಗುವ ಜೊತೆಗೆ ಕೇವಲ ಧರಣಿ ಸತ್ಯಾಗ್ರಹ ಇಲ್ಲವೇ ಮಾತಿನ ಮಾರಾಮಾರಿಯಲ್ಲಿಯೇ ಮುಕ್ತಾಯಗೊಂಡು ಸಾವಿರಾರು ಕೋಟಿ ರೂಗಳು ಮೌಲ್ಯದ ವಿಧೇಯಕಗಳು ಚರ್ಚೆಯಿಲ್ಲದೇ ಅಂಗೀಕಾರವಾಗುವ ವಿಪರ್ಯಾಸದ ಬೆಳವಣಿಗೆ ಸ್ವಯಂಕೃತ ಅಪರಾಧವೇ.
ಸಂಸದರ ಉತ್ತರದಾಯಿತ್ವ ಯಾರಿಗೆ ಎನ್ನುವುದಕ್ಕೆ ಮಾತಿನ ಭಾಷೆ ದೊರೆಯುತ್ತದೆ. ಬದಲು ಕಾರ್ಯ ಆಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ಮಹದಾಯಿ- ಕಾವೇರಿ, ಕೊಬ್ಬರಿ, ಬಂದರು ಅಭಿವೃದ್ಧಿ ಇತ್ಯಾದಿ ಗಮನ ಸೆಳೆದಿದ್ದವು. ಕೊಬ್ಬರಿ ಕ್ವಿಂಟಾಲ್‌ಗೆ ಹದಿನೈದು ಸಾವಿರ ಬೆಂಬಲ ಬೆಲೆ ನೀಡುವುದಾಗಿ ಸ್ವತಃ ಕೇಂದ್ರ ಗೃಹ ಮಂತ್ರಿ ನೀಡಿದ್ದರು.
ಆದರೆ ಚುನಾವಣೆಯ ನಂತರ ಬೆಂಬಲ ಬೆಲೆಯೇ ಇಲ್ಲದಾಯಿತು. ಅದನ್ನು ಆಯ್ಕೆಯಾದವರೂ ಪ್ರಶ್ನಿಸಿಲ್ಲ. ಹಾಗೆಯೇ ಕಳಸಾ ಬಂಡೂರಿ ಮಹದಾಯಿ ತಕ್ಷಣ ಮಂಜೂರಿ ಕೊಡಿಸುತ್ತೇವೆ ಎಂದಿದ್ದರು. ಈಗ ಮರೆತೇ ಹೋಯಿತು. ನೂರಾರು ನೆಪಗಳು ಮುನ್ನೆಲೆಗೆ ಬಂದವು.
ಏಕೆ ಹೀಗೆ? ಕರ್ನಾಟಕದ ಸಂಸದರೇಕೆ ಮೌನ ವ್ರತ ಅನುಸರಿಸುತ್ತಾರೆ ಎಂಬುದಕ್ಕೆ ಪಕ್ಷದ ರಾಜಕಾರಣದ ವ್ಯವಸ್ಥೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು ಹಾಗೂ ಸೂಪರ್ ಪಾವರ್ ಹೈಕಮಾಂಡ್ ಸಂಸ್ಕೃತಿ ಮೇಲುಗೈ ಸಾಧಿಸಿರುವುದೇ ಕಾರಣ.
ಕಾವೇರಿ ಹೋರಾಟಗಾರರೆಲ್ಲರೂ ಆಗಾಗ ಸ್ಮರಿಸಿಕೊಳ್ಳುವುದು ಅನಂತಕುಮಾರ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂಬುದು. ಮೊನ್ನೆ ನಡೆದ ಅನಂತಕುಮಾರ ಸ್ಮರಣೆಯಲ್ಲೂ ಕೂಡ ಸ್ವತಃ ಉಪ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಇದನ್ನು ನೆನಪು ಮಾಡಿಕೊಂಡವರೇ.
ಈಗಿದ್ದವರಲ್ಲಿ ಅಂತಹ ತಾಕತ್ತಿರುವ, ಎಲ್ಲರೊಂದಿಗೆ ಸೌಹಾರ್ದತೆ ಹೊಂದುವ ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲದರಲ್ಲೂ ರಾಜಕೀಯ ಕಾಣದ, ರಾಜಕಾರಣ ಮಾಡದ ಉದಾರತೆ ಇರುವವರು ಕಾಣರು ಅಷ್ಟೇ.
ಕೇಂದ್ರದ ಸಚಿವರು, ಬಿಜೆಪಿ ಸಂಸದರು ನಿದ್ರೆಯಿಂದ ಏಳುವುದು ಯಾವಾಗ ಎಂದು ಕಾಂಗ್ರೆಸ್ ತನ್ನ ಟ್ವಿಟರ್‌ನಲ್ಲಿ ಪ್ರಶ್ನಿಸಿತ್ತು. ಕನಿಷ್ಠ ಉತ್ತರ ನೀಡುವ ಕಾರ್ಯವನ್ನು ಬಿಜೆಪಿ ಮಾಡಿಲ್ಲ. ಅಷ್ಟು ನಿರಾಸಕ್ತಿಯೋ, ಅಥವಾ ಅಸಮಾಧಾನವೋ?
ಮೊನ್ನೆ ಹೊಸ ಸಂಸತ್ ಅನ್ನು ಮಕರ ದ್ವಾರದ ಮೂಲಕ ಪ್ರವೇಶಿಸುವಾಗ ಪ್ರಧಾನಿ ಮೋದಿ ಅವರು ದೇಶಕೇಲಿಯೇ ಸಿರ್ಫ್ ದಿಲ್ ಚಾಹಿಯೆ… ಎಂದಿದ್ದರು.
ರಾಜ್ಯದ ಜನ ಈಗ ಕೇಳುತ್ತಿದ್ದಾರೆ, ಕರ್ನಾಟಕ್ ಕೆ ಲಿಯೇ ಭೀ ಸಿರ್ಫ್ ದಿಲ್ ಚಾಹಿಯೆ ನಾ… ಎಂದು.
ಸಂಸದರ ಪ್ರಗತಿ ಕಾರ್ಡ್ ಪರಾಮರ್ಷೆಗಂತೂ ಈಗ ಸಕಾಲ. ಉಳಿದಿರುವುದು ಇನ್ನಾರು ತಿಂಗಳಷ್ಟೇ ಅಲ್ಲವೇ…!?