ಸಂಸಾರದ ಭಾರ ಇಳಿಸು
ಸರ್ವಸಮರ್ಪಣ ಭಾವದ ಶಿವಯೋಗಿಗಳ ಎಲ್ಲ ಯೋಗಕ್ಷೇಮವನ್ನು ಭಗವಂತನೇ ನೋಡಿಕೊಳ್ಳುತ್ತಾನೆ. ಇದರಿಂದಾಗಿ ಅವನಿಗೆ ಯಾವುದೇ ಬಾಧೆಗಳು ಕಾಡಲಾರವು. ಅವನು ಎಲ್ಲವನ್ನು ಭಗವಂತನಿಗೆ ಹೊರಿಸಿ ತಾನು ನಿಶ್ಚಿಂತನಾಗಿರುತ್ತಾನೆ. ಸತತ ಸಂತುಷ್ಟನಾಗಿರುತ್ತಾನೆ. ಗೀತೆಯ ದೃಷ್ಟಿಯಲ್ಲಿ ಇಂತಹ ಭಕ್ತ ಭಗವಂತನಿಗೆ ಬಹಳ ಪ್ರಿಯ.
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |
ಮಯ್ಯರ್ಪಿತಮನೋಬುದ್ಧಿರ್ಯೊ ಮದ್ಭಕ್ತಃ ಸ ಮೇ ಪ್ರಿಯಃ |
ಮನ ಬುದ್ಧಿಗಳೆಲ್ಲವನ್ನು ನನಗೆ ಅರ್ಪಿಸಿ ಸದಾ ಸಂತುಷ್ಟನೂ, ಯೋಗಿಯೂ ಸಂಯಮನೂ ದೃಢ ನಿಶ್ಚಯವುಳ್ಳವನೂ ಆದ ಭಕ್ತನು ನನಗೆ ತುಂಬ ಪ್ರಿಯನೆಂದು ಇಲ್ಲಿ ಹೇಳುವ ಮೂಲಕ ಕೃಷ್ಣನು ಶಿವಯೋಗಿಯ ಮನಸ್ಥಿತಿಯ ಪ್ರಾಶಸ್ತ್ಯವನ್ನು ಪ್ರತಿಪಾದಿಸಿರುವನು.
ಸದಾ ಆನಂದದಿಂದ ಇರುವುದೇ ಶಿವಯೋಗಿಯ ಒಂದು ತೆರನಾದ ಭಕ್ತಿಯಾಗಿರುತ್ತದೆ. ಆನಂದ ಶಬ್ದವು ಸುಖದ ಪರ್ಯಾಯ ವಾಚಿಯಲ್ಲ. ಆನಂದಕ್ಕೂ ಸುಖಕ್ಕೂ ಸೂಕ್ಷ್ಮ ವ್ಯತ್ಯಾಸವುಂಟು. ಸುಖ ಕ್ಷಣಿಕ, ಆನಂದ ನಿತ್ಯ. ಸುಖ ಹೊರಗಿನ ವಸ್ತುಗಳನ್ನು ಅವಲಂಭಿಸಿ ಬರುವುದು. ಆನಂದ ಬಾಹ್ಯ ಯಾವ ವಸ್ತುವಿನ ಅವಲಂಬನೆಯಿಲ್ಲದೆ ಆಂತರಿಕ ಆತ್ಮಜನ್ಯ. ಇದು ಸುಖಕ್ಕೂ ಆನಂದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸ. ಯೋಗಿಯು ಹೊರಗಿನ ವಿಷಯದಲ್ಲಿ ಅನಾಸಕ್ತನಾಗಿರುವುದರಿಂದ ಅವನು ಆತ್ಮಸುಖಿ. ಹೊರಗಿನ ಈ ಅನಾಸಕ್ತಿಗೆ ಅವನ ಸಮರ್ಪಣಾ ಮನೋಭಾವವೇ ಕಾರಣ. ಅವನು ತನ್ನ ಎಲ್ಲ ಭಾರವನ್ನು ಶಿವನಿಗೆ ಅರ್ಪಿಸಿ ನಿಶ್ಚಿಂತನಾಗಿರುವನು. ಸಾಂಸಾರಿಕ ಭಾರವನ್ನು ತಾನು ಹೊತ್ತವನು ದುಃಖಿಯಾಗುತ್ತಾನೆ. ಅದನ್ನು ಇಳಿಸಿದವನು ಸುಖಿಯಾಗುತ್ತಾನೆ. ಎಲ್ಲ ಭಾರವನ್ನು ಹೊರುವ ಸಾಮರ್ಥ್ಯ ಭಗವಂತನಿಗೆ ಇರುವುದರಿಂದ ಅವನಿಗೆ ಅದನ್ನು ಬಿಟ್ಟು ನೆಮ್ಮದಿಯಾಗಿ ಬದುಕುವುದೇ ಸೂಕ್ತ.
ಸಾಮಾನ್ಯವಾಗಿ ನಾವು ನಮ್ಮ ಭಾರವನ್ನು ಇಳಿಸುತ್ತಿಲ್ಲ. ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಒಬ್ಬ ತನ್ನ ಕುದುರೆಯ ಮೇಲೆ ಒಂದು ದೊಡ್ಡ ಮೇವಿನ ಹೊರೆಯನ್ನು ಇಟ್ಟು ಅದರ ಹಿಂದೆ ತಾನು ಕುಳಿತು ಹೊರಟಿದ್ದನು. ಎದುರಿಗೆ ಬಂದ ಒಬ್ಬ ದಯಾಗುಣಿಯಾದ ದಾರಿಕಾರನು ಇದನ್ನು ನೋಡಿ ಸಹಿಸದೆ. “ನಮ್ಮ ಜನ ಎಷ್ಟು ಕ್ರೂರಿಗಳು! ಬಡಪ್ರಾಣಿ ಪಾಪ ಕುದುರೆ. ಅದರ ಮೇಲೆ ತಾನೂ ಕೂಡುವುದು ದೊಡ್ಡ ಮೇವಿನ ಗಂಟೂ ಇಡುವುದು. ಎಂತಹ ಅನ್ಯಾಯವಿದು!” ಎನ್ನುತ್ತ ಹೋದ. ಅವನ ಮಾತಿನಿಂದ ನೋವೆನಿಸಿ ಹೌದು! ಈ ಕುದುರೆಯ ಮೇಲೆ ಇಷ್ಟು ಭಾರ ಹೊರಿಸಬಾರದು ಎಂದು ಯೋಚಿಸಿ ಕುದುರೆಯ ಮೇಲಿನ ಗಂಟನ್ನು ತಲೆಯ ಮೇಲಿಟ್ಟುಕೊಂಡು ತಾನು ಕುದುರೆಯ ಮೇಲೆಯೇ ಕುಳಿತನಂತೆ, ಮೊದಲು ಇವನು ತಾನಾದರೂ ನೆಮ್ಮದಿಯಿಂದ ಇದ್ದ. ಈಗ ತನಗೂ ಭಾರ ಕುದುರೆಗೂ ಭಾರ. ನಮ್ಮ ಬದುಕೂ ಹೀಗೆಯೇ ಆಗಿದೆ. ನಮ್ಮ ಬದುಕಿನ ಭಾರವನ್ನು ಭಗವಂತನೆ ಹೊರುತ್ತಾನೆ. ಅವನ ಮೇಲೆ ಇರಿಸದೆ ನಮ್ಮ ಮೇಲೆಯೇ ಹೊತ್ತುಕೊಂಡು “ಹಾದಿಗೆ ಹೋಗುವ ಜಗಳ ಉಡ್ಯಾಗ ಹಾಕ್ಕೊಂಡಿದ್ದರಂತೆ” ಎನ್ನುವ ತಗಾದೆಯಂತೆ ಭಾರದ ನೋವನ್ನು ಅನುಭವಿಸುತ್ತಿದ್ದೇವೆ. ಈ ಭಾರವನ್ನು ಇಳಿಸಿ ಇಡುವವರೆಗೂ ನಮಗೆ ನೆಮ್ಮದಿ ಕನಸಿನ ಮಾತು. ಭಗವಂತನಿಗೆ ನಾವಾರೂ ಭಾರವಾಗಲಾರೆವು. ಸಂಪೂರ್ಣ ಪ್ರಪಂಚದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಅವನಿಗೆ ನಾವೊಬ್ಬರು ಭಾರವೇ! ಬಳ್ಳಿಗೆ ಕಾಯಿ ದಿಮ್ಮಿತ್ತೆ, ನಾವು ನಮ್ಮ ತಲೆಯ ಮೇಲಿರಿಸಿಕೊಂಡರೂ ಅದನ್ನು ಅವನೇ ಹೊರುವನು. ಇಳಿಸಿದರೂ ಅವನೇ ಹೊರುವನು. ನಾವು ಹೊತ್ತಾಗ ನಮಗೆ ಅವನಿಗೆ ಇಬ್ಬರಿಗೂ ಭಾರ. ಇಳಿಸಿದಾಗ ನಾವಾದರೂ ನೆಮ್ಮದಿಯಾಗಿರಬಹುದು.
ಇದೂ ಅಲ್ಲದೇ ಭಗವಂತನಲ್ಲಿ ಇಂಥ ಒಂದು ಕಲೆಯಿದೆ. ಅವನು ಎಷ್ಟೇ ಎಲ್ಲರ ಭಾರ ಹೊತ್ತರೂ ಅದು ಅವನಿಗೆ ಭಾರವಾಗುವುದಿಲ್ಲ. ಏಕೆಂದರೆ ಅವನಲ್ಲಿ ಅನಂತ ಶಕ್ತಿಗಳಿವೆ. ಸಂಕಲ್ಪ ಮಾತ್ರದಿಂದಲೇ ಅವೆಲ್ಲ ಕೆಲಸಕ್ಕೆ ತೊಡಗುತ್ತವೆ. ಹಾಗೂ ಅವನು ಏನೆಲ್ಲ ಮಾಡಿದರೂ ನಿರ್ಲಿಪ್ತನಾಗಿದ್ದು, ಪದ್ಮಪತ್ರದಂತೆ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಅಂತೆಯೇ “ಜನ್ಮ ಕರ್ಮ ಚ ಮೇ ದಿವ್ಯಂ' ನನಗೆ ದಿವ್ಯವಾದ ಜನ್ಮ ಕರ್ಮಗಳಿವೆ ಎಂದು ಕೃಷ್ಣನು ಗೀತೆಯಲ್ಲಿ ಹೇಳಿರುವುದುಂಟು. ಹೀಗೆ ಎಲ್ಲವನ್ನು ಹೊರುವ ಮತ್ತು ಹೊತ್ತರೂ ಭಾರವಾಗದ ಶಕ್ತಿ ಶಿವನಲ್ಲಿ ನೆಲೆಸಿರುವುದು. ಕಾರಣ ನಾವು ನಮ್ಮೆಲ್ಲ ಭಾರವನ್ನು ಅವನ ಮೇಲಿರಿಸಿ ನಿಶ್ಚಿಂತರಾಗಬಹುದು. ಶಿವಯೋಗಿಗಳು ಎಲ್ಲವನ್ನು ಶಿವನಿಗೆ ಸಮರ್ಪಿಸುವುದರಿಂದಲೇ ಸದಾ ಆನಂದದಿಂದ ಇರುತ್ತಾರೆ.