ಸಂಸಾರ ಗೆಲ್ಲುವ ಗುಟ್ಟು
ಮಹಾಭಾರತ ಪ್ರತಿ ಹೆಜ್ಜೆ ಹೆಜ್ಜೆಗಳಲ್ಲಿಯೂ ವೈಯಕ್ತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಹೇಳುತ್ತದೆ. ಅಲ್ಲದೇ ಮಹಾಭಾರತ ಕೇವಲ ಕಥೆ ಮಾತ್ರವಲ್ಲ ಬದಲಾಗಿ ಅದು ಒಂದು ರೀತಿಯಲ್ಲಿ ಮನಃಶ್ಯಾಸ್ತ್ರವಾಗಿದೆ.
ಸತ್ಯಭಾಮೆ ದ್ರೌಪದಿಯನ್ನು ಕಾಣಲು ಬಂದಾಗ ಅವರಿಬ್ಬರಲ್ಲಿ ನಡೆದ ಮಾತುಕತೆಗಳು ಮತ್ತು ದ್ರೌಪದಿಯ ಅನುಭವದ ಮಾತುಗಳು ನಿಬ್ಬೆರಗಾಗಿಸುತ್ತವೆ ಮತ್ತು ವಾಸ್ತವಿಕವಾಗಿ ಅನ್ವಯವಾಗುತ್ತವೆ. ದಾಂಪತ್ಯದಲ್ಲಿ ಇತ್ತೀಚೆಗೆ ಬಿರುಕುಗಳು ಕಾಣುತ್ತಿರುವುದು ಸಹಜವೇ ಆಗಿದೆ. ಕಾರಣ ಪರಸ್ಪರ ನಡೆದುಕೊಳ್ಳುವ ರೀತಿ. ಮತ್ತು ಪ್ರತಿಷ್ಠೆಗಳು ಎದುರು ಬಂದು ಸಂಬಂಧಗಳನ್ನು ಕಿತ್ತು ಹಾಕುತ್ತದೆ. ಹೀಗಾಗಿ ಅನೇಕ ಬಾರಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛೆ ವರ್ತನೆಗಳು ಕೂಡ ದಾಂಪತ್ಯದಲ್ಲಿ ವಿರಸವನ್ನು ಮೂಡಿಸುತ್ತದೆ.
ಹೆಂಡತಿಯಾದವಳು ಗಂಡನನ್ನು ಒಲಿಸಿಕೊಂಡು ಕುಟುಂಬದಲ್ಲಿ ಪ್ರೇಮ ವಾತ್ಸಲ್ಯ ತುಂಬು ಹೊಣೆಗಾರಿಕೆ ಅವಳ ಮೇಲೆಯೇ ಹೆಚ್ಚಾಗಿರುತ್ತದೆ. ದ್ರೌಪದಿ ಈ ವಿಷಯವಾಗಿ ಕೆಲವು ಏನು ಮಾಡಬೇಕು ಎಂಬುದನ್ನು ಹೇಳುತ್ತಾಳೆ.
ಗಂಡನು ಮಾತನಾಡಿಸಿದಾಗ ತಿರಸ್ಕಾರ ಮಾಡಿದರೆ ಗಂಡನಿಗೆ ಅದು ಇಷ್ಟ್ಟವಾಗುವುದಿಲ್ಲ. ಅಥವಾ ವಿನಾಕಾರಣ ಯಾವುದೇ ಪ್ರಯೋಜನವಿಲ್ಲದೆ ಮತ್ತೊಬ್ಬ ಹೆಂಗಸಿನ ಜೊತೆಯಲ್ಲಿ ಹೆಂಡತಿಯು ಮಾತನಾಡುತ್ತಾ ಕುಳಿತುಕೊಂಡರೆ ಗಂಡನಿಗೆ ಅದು ಇಷ್ಟವಾಗುವುದಿಲ್ಲ. ವಿನಾ ಕಾರಣ ಹಾಸ್ಯ ಮಾಡುತ್ತಲೇ ಇರುವುದು ನಗುತ್ತಲೇ
ಇರುವುದು. ಸುಮ್ಮನೆ ಬಾಗಿಲಿನಲ್ಲಿ ನಿಂತು ಕಾಲ ಕಳೆಯುವುದು. ಮನೆಯಲ್ಲಿ ಕಸವನ್ನು ತೆಗೆಯದೆ ಇರುವುದು. ಕಸದ ಮಧ್ಯದಲ್ಲೇ ಕುಳಿತುಕೊಳ್ಳುವುದು. ಸ್ವಚ್ಛವಲ್ಲದ ಜಾಗವನ್ನು ಎಂದೂ ಸ್ವಚ್ಛಗೊಳಿಸದೇ ಇರುವುದು ಇವೆಲ್ಲವೂ ಗಂಡನಿಗೆ ಇಷ್ಟ್ಟವಾಗುವುದಿಲ್ಲ. ಇಂತಹ ದುರ್ಗುಣವುಳ್ಳ ಹೆಂಡತಿಯಿಂದ ಗಂಡನು ದೂರವಿರಲು ಪ್ರಯತ್ನಿಸುತ್ತಾನೆ.
ಸಣ್ಣಪುಟ್ಟ ಕಾರಣಗಳಿಂದ ಮನಸ್ಸಿನ ಸಂತೋಷವನ್ನು ನಾನು ಕಳೆದುಕೊಳ್ಳುದಿರುವುದು ಲೇಸು. ಇದ್ದಿದ್ದರಲ್ಲಿ ತೃಪ್ತಿಯನ್ನು ಅನುಭವಿಸಬೇಕು. ಮತ್ತೊಬ್ಬರ ಮನೆಯ ವಿಷಯದ ಬಗ್ಗೆ ಮಾತನಾಡದೇ ಇರುವುದು. ಯಾವಾಗಲೂ ತಿನ್ನುತ್ತಲೇ ಇರದಿರುವುದು. ತುಂಬಾ ಸಿಟ್ಟು ಮಾಡುವುದು. ತುಂಬಾ ಜಗಳ ಮಾಡುವುದು. ಇವುಗಳನ್ನು ಯಾವ ಸ್ತ್ರೀಯು ಬಿಡುತ್ತಾಳೋ ಅವಳು ಸಂಸಾರವನ್ನು ಸುಲಭವಾಗಿ ಗೆಲ್ಲುತ್ತಾಳೆ. ಇದುವೇ ಸಂಸಾರ ಗೆಲ್ಲುವ ಗುಟ್ಟು.