For the best experience, open
https://m.samyuktakarnataka.in
on your mobile browser.

ಸಂಸ್ಕಾರ ಅವಶ್ಯ ಬೇಕು

04:49 AM Aug 18, 2024 IST | Samyukta Karnataka
ಸಂಸ್ಕಾರ ಅವಶ್ಯ ಬೇಕು

ಇದ್ದಿಲು ಕಪ್ಪಾದರೇನು
ಅಗ್ನಿ ಸಂಗದಿಂದ ಶುಭ್ರವಾಗದೇನಯ್ಯ?
ಮಾನವ ದುರ್ಗುಣಿಯಾದರೇನು?
ಸದ್ಗುರುವಿನ ಜ್ಞಾನ ಸಂಗದಿಂದ ಶುದ್ಧನಾಗಲಾರನೇನಯ್ಯ
ಮೃಡಗಿರಿ ಅನ್ನದಾನೀಶ

ಯಾವುದೇ ವಸ್ತುವನ್ನು ಸುಟ್ಟಾಗ ಕಪ್ಪಾಗುವುದು ಅದರಲ್ಲೂ ಕಟ್ಟಿಗೆಯನ್ನು ಸುಟ್ಟರೆ ಇದ್ದಲಿಯಾಗಿ ಪರಿವರ್ತನೆಗೊಳ್ಳುವದು ಅದರ ಸ್ವಭಾವ. ಮತ್ತೆ ಇದ್ದಲಿಯನ್ನು ಸಹ ಅಗ್ನಿಯಾಗಿ ಪರಿವರ್ತಿಸಿದರೆ ಇದ್ದಲಿಯೂ ಶುಭ್ರ ಬೂದಿಯಾಗುವುದು. ಅದರಂತೆ ಮಾನವನು ದುರ್ಜನರ ಸಂಗದಿಂದ ದುರ್ಗುಣಿಯಾಗುತ್ತಾನೆ. ದುರ್ವ್ಯಸನ, ದುರಾಚಾರಗಳ ಅಭ್ಯಾಸದಲ್ಲಿ ತೊಡಗುವನು. ಆದುದರಿಂದ ಜೀವನವು ದುರ್ಭರವಾಗುವುದು. ತನ್ನ ಜೀವನವನ್ನು ಹಾಳು ಮಾಡಿಕೊಳ್ಳುವನು.
ಇಲ್ಲಿ ಸಂಸ್ಕಾರದ ಬಲದಿಂದ ಸದ್ವಿವೇಕ ಮತ್ತು ಸತ್ಪಾತ್ರವೂ ಲಭಿಸುವುದು. ವ್ಯಕ್ತಿಗೆ ಎಂಥ ಪರಿಸರ ಬೇಕು. ಎಂಥ ಪರಿಸರ ಇರಕೂಡದು ಎಂಬುದು ಮೊದಲು ನಿಶ್ಚಯಗೊಳಿಸಿಕೊಳ್ಳಬೇಕು. ಮನುಷ್ಯ ಸಂತೋಷ ಮತ್ತು ಆನಂದವನ್ನೇ ಬಯಸುತ್ತಾನೆ. ಆದರೆ ದುರ್ಜನರ ಸಂಗದಿಂದ ಸದಾಕಾಲ ಒತ್ತಡ, ಆತಂಕ ಮತ್ತು ಭಯದಲ್ಲಿ ಕಾಲ ಕಳೆಯುತ್ತಾನೆ. ಅಂಥ ಸ್ಥಿತಿಯನ್ನು ಯಾರೂ ವಿವೇಚನೆ ಇದ್ದವರು ಬಯಸುವದಿಲ್ಲ. ಅದಕ್ಕಾಗಿಯೇ ಪೂರ್ವದ ಹಿರಿಯರು ಪರಿಸರ ಪ್ರಭಾವ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂಬ ಹಿನ್ನೆಲೆಯಲ್ಲಿ ಸತ್ಸಂಗವಿರಬೇಕು ಬದುಕಿಗೆ ಎಂದು ಹೇಳಿರುವದುಂಟು. ಹಾಗೂ ಉತ್ತಮ ಗುರುಗಳ ಸಾನ್ನಿಧ್ಯದಲ್ಲಿ ಇರುವದರಿಂದಲೂ ವ್ಯಕ್ತಿ ಸರಿಯಾದ ದಾರಿಯಲ್ಲಿ ಸಾಗುವನು. ಸದ್ಗುರುಗಳ ಮತ್ತು ಸದು ಹೃದಯಗಳ ಸಹವಾಸವಾದರೆ ದುರ್ಗುಣಿಯೂ ಸನ್ಮಾರ್ಗಾವಲಂಬಿಯಾಗುವನು. ಸತ್ಸಂಗವೂ ಜೀವನದಲ್ಲಿ ಅಪರೂಪವಾದುದು ಸದ್ಗುರುಗಳ ಮಾರ್ಗದರ್ಶನ ದೊರೆತರೆ ನಿಶ್ಚಯವಾಗಿ ಆ ವ್ಯಕ್ತಿಯೂ ಶುದ್ಧ ಸನ್ಮಾರ್ಗದಲ್ಲಿ ನಡೆಯಲಾರಂಭಿಸುವನು. ಸನ್ಮಾರ್ಗವು ಎಲ್ಲರ ಜೀವನಕ್ಕೆ ಅವಶ್ಯವಾಗಿ ಬೇಕು. ಇದ್ದಲಿಯಂಥ ವಸ್ತು ಅಗ್ನಿ ಸಂಸ್ಕಾರದಿಂದ ಶುದ್ಧವಾಗುವದಾದರೆ ಅಗ್ನಿ ರೂಪದ ಸನ್ಮಾರ್ಗವು ದುರ್ಗುಣ ವ್ಯಕ್ತಿಯನ್ನು ಶುದ್ಧಗೊಳಿಸುವದರಲ್ಲಿ ಯಾವ ಸಂಶಯವೂ ಇಲ್ಲ. ಅಂಥ ಸತ್ಸಂಗವು ಪುಣ್ಯವಶದಿಂದ ಪ್ರಾಪ್ತವಾಗುವುದು. ಅದಕ್ಕೆ ಸಂಸ್ಕಾರ ಬೇಕು.
ಸಜ್ಜನರಿಂದ ಸತ್ಸಂಗ, ಸತ್ಸಂಗದಿಂದ ಸಂಸ್ಕಾರ, ಸಂಸ್ಕಾರದಿಂದ ಸನ್ಮಾರ್ಗ, ಸನ್ಮಾರ್ಗದಿಂದ ಸದ್ಗತಿ ಆ ಕಾರಣಕ್ಕಾಗಿಯೇ ಮನುಷ್ಯನಿಗೆ ಸಂಸ್ಕಾರ ಜೀವನದಲ್ಲಿ ಅತ್ಯವಶ್ಯವಾಗಿ ಬೇಕು.