ಸಂಸ್ಕೃತಿಯ ಹಸ್ತಾಂತರದಲ್ಲಿ ಪಾಲಕರು ಹಿಂದೆ..
ಇಂದು ಎಲ್ಲ ಕಡೆ ಮಕ್ಕಳಿಗಾಗಿ ಉನ್ನತ ವಿದ್ಯಾಭ್ಯಾಸದ ಕನಸು ಕಾಣುವ ಪಾಲಕರನ್ನು ಕಾಣುತ್ತೇವೆ. ಅದಕ್ಕಾಗಿ ಹತ್ತನೇ ತರಗತಿಯ ಮಕ್ಕಳು ಮತ್ತು ಪದವಿಪೂರ್ವ ಎರಡನೇ ವರ್ಷದ ಮಕ್ಕಳಿಗೆ ಹೆಚ್ಚಿನ ಒತ್ತಡವನ್ನು ಅನೇಕ ಪಾಲಕರು ಹಾಕುತ್ತಿದ್ದಾರೆ. ತಮ್ಮ ಮನೆಯ ಸಂಸ್ಕಾರಗಳನ್ನು ಮಕ್ಕಳಿಗೆ ನೀಡುವ ಬಗ್ಗೆ ಗಮನ ಹರಿಸುವುದು ತೀರಾ ಕಡಿಮೆ ಆಗುತ್ತಿದೆ. ಇದರಿಂದ ಮಕ್ಕಳು ಸಂಸ್ಕೃತಿಗೆ ವಿರುದ್ಧದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಅಮೇರಿಕಾ ಮುಂತಾದ ದೇಶಗಳಲ್ಲಿ ಹುಟ್ಟಿದ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ವಸತಿ ಶಾಲೆಗಳಿಗೆ (ರಿಮಾಂಡ್ ಹೋಮ್) ಸೇರಿಸುತ್ತಾರೆ. ಇದರಿಂದ ಮಕ್ಕಳಿಗೆ ಬೆಳವಣಿಗೆಯ ಹಂತದಲ್ಲಿ ತಾಯಿ-ತಂದೆಯರ ವಾತ್ಸಲ್ಯ ದೊರೆಯದೆ ಮಾನಸಿಕವಾಗಿ ಬೆಳವಣಿಗೆಗೆ ತೊಂದರೆಯಾಗಿ ಬುದ್ಧಿ ಭ್ರಮಣೆಯ ತನಕವೂ ಹೋಗುತ್ತಿದೆ. ಇದೇ ಕ್ರಮಕ್ಕೆ ನಾವು ಹತ್ತಿರ ಹೋಗುತ್ತಿದ್ದೇವೆ.
ಸಂಸ್ಕಾರ ಕೊಡುವಲ್ಲಿ ಹಿಂದೆ ಬೀಳುವಿಕೆ ಮತ್ತು ಪ್ರೀತಿ ವಾತ್ಸಲ್ಯಗಳಲ್ಲಿ ಒಂದು ರೀತಿಯ ವಿಕೃತಿ, ಇವುಗಳೆ ಮುಂದೊಂದು ದಿನ ಮಕ್ಕಳು ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸಲು ಮೂಲ ಕಾರಣವಾಗುತ್ತದೆ. ಯುರೋಪ್ ದೇಶಗಳಲ್ಲಿ ಸುಮಾರು ಒಂದೂವರೆ ಶತಮಾನ ವರ್ಷಗಳಷ್ಟು ಹಿಂದೆ ಔದ್ಯೋಗಿಕ ಕ್ರಾಂತಿ ಆಯಿತು. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯ ಹಂಬಲದಿಂದ ಮನೆಯ ಎಲ್ಲ ಮಂದಿ ಉದ್ಯೋಗಕ್ಕೆ ತೊಡಗಿಕೊಂಡರು.
ಇದರಿಂದ ಮನೆಯ ಧರ್ಮಾಚರಣೆಗಳು ಕೈಬಿಟ್ಟು ಹೋದವು. ಇವತ್ತು ನಮ್ಮ ದೇಶದ ಹಳ್ಳಿಗಳು ಇದನ್ನೆ ಮಾಡುತ್ತಿವೆ. ಇದರಿಂದ ನೆಮ್ಮದಿಯಾಗುವಂತಿದ್ದರೆ ಆಕ್ಷೇಪವಿರುತ್ತಿರಲಿಲ್ಲ. ಔದ್ಯೋಗೀಕರಣದ ಆರಂಭದಲ್ಲೆ ಮಾನಸಿಕ ಒತ್ತಡಗಳ ಮೂಲದಿಂದ ಬರುವ ದೈಹಿಕ-ಮಾನಸಿಕ ರೋಗಗಳು ಹೆಚ್ಚಿಗೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ನೆಮ್ಮದಿಯೇ?
ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಕೊಡಬೇಕೆಂದರೆ ಪಾಲಕರು ತಾವು ಮೊದಲು ಆಚರಿಸಬೇಕು. ತಮ್ಮ ಆಚರಣೆಯಲ್ಲಿ ಇಲ್ಲದ್ದನ್ನು ಉಪದೇಶಿಸಿದರೆ ಪ್ರಭಾವ ಬೀರುವುದಿಲ್ಲ. ನಿಷ್ಠೆಯಿಂದ ಆಚರಣೆಯಲ್ಲಿದ್ದ ವಿಷಯಗಳನ್ನು ಉಪದೇಶಿಸಿದರೆ ಮೊದ ಮೊದಲು ಮಕ್ಕಳು ಅದನ್ನು ಉಪೇಕ್ಷಿಸಿದಂತೆ ಕಂಡು ಬಂದರೂ ಬೆಳವಣಿಗೆಯಾಗುತ್ತಿದಂತೆ ಮಕ್ಕಳು ಖಂಡಿತ ಅದೆ ದಾರಿಗೆ ಬರುತ್ತಾರೆ.
ದುರ್ವ್ಯಸನಿಗಳಾದ ಪಾಲಕರು ಮಕ್ಕಳು ಸಹಜ-ಸುಲಭವಾಗಿ ದುರ್ವ್ಯಸನಿಗಳಾಗುವಂತಯೇ, ಸಂಸ್ಕಾರ-ಸಂಸ್ಕೃತಿ-ಆಚಾರ ನಿಷ್ಠ ಪಾಲಕರ ಮಕ್ಕಳು ಅಷ್ಟೇ ಸಹಜ-ಸುಲಭವಾಗಿ ಸಂಸ್ಕಾರ ನಿಷ್ಠರೂ ಸಂಸ್ಕೃತಿ ನಿಷ್ಠರೂ-ಆಚಾರ ನಿಷ್ಠರೂ ಆಗುತ್ತಾರೆ. ಆದ್ದರಿಂದ ಪಾಲಕರು ತಮ್ಮ ಆಚರಣೆ-ಉಪದೇಶಗಳ ಮೂಲಕ ಮಕ್ಕಳಿಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಅಗತ್ಯವಾಗಿ ನಡೆಸಬೇಕು.