For the best experience, open
https://m.samyuktakarnataka.in
on your mobile browser.

ಸಂಸ್ಕೃತ-ಒಳ ಅರ್ಥ ತಿಳಿದರೆ ಚೆನ್ನ..

05:06 AM Aug 29, 2024 IST | Samyukta Karnataka
ಸಂಸ್ಕೃತ ಒಳ ಅರ್ಥ ತಿಳಿದರೆ ಚೆನ್ನ

ಪ್ರಾತಃ ದ್ಯೂತ ಪ್ರಸಂಗೇನ
ಮಧ್ಯಾನ್ಹೆ ಸ್ತ್ರೀ ಪ್ರಸಂಗತಃ
ರಾತ್ರೌ ಚೋರ ಪ್ರಸಂಗೇನ
ಕಾಲೌ ಗಚ್ಛತಿ ಧೀಮತಃ

ಸಂಸ್ಕೃತ ಪ್ರಾಕೃತ ಭಾಷೆ. ನೋಡಲು ಸುಂದರ ಸರಳವಾದರೂ ಅದರ ಪದಗಳ ಅರ್ಥಗಳನ್ನು ತಿಳಿಯಬೇಕಾದರೆ ಸುಜ್ಞಾನ ಬೇಕು. ಈ ಸಂಸ್ಕೃತ ಶ್ಲೋಕಗಳೇ ಹೀಗೆ.. ಇದರ ಒಳ ಅರ್ಥ ತಿಳಿದು ಆಚರಿಸಿದರೆ ಶ್ರೇಯಸ್ಕರ.
ಅದರಂತೆ ಪ್ರಾತಃ ದ್ಯೂತ ಪ್ರಸಂಗೇನ' ಎಂದರೆ ಯಾವದ್ಯೂತ' ದ ಕಾರಣದಿಂದ ಧರ್ಮ ಅಧರ್ಮಗಳ ದ್ಯೋತಕವಾಗಿ ಪಾಂಡವರು ಹಾಗೂ ಕೌರವರ ನಡುವೆ ಯುದ್ಧ ನಡೆದು, ಧರ್ಮ ಸಂಸ್ಥಾಪನೆಯಾಯಿತೋ ಅಂಥ ಮಹಾಭಾರತದ ಕಥೆಯನ್ನು ದಿನನಿತ್ಯ ಪ್ರಾತಃ ಕಾಲದಲ್ಲಿ ಪಾರಾಯಣ ಮಾಡಬೇಕು. ಮಹಾಭಾರತದ ಕಥೆಗಳು ನಮ್ಮ ಜೀವನದ ಸಂಸಾರ ಸಾಗರದಲ್ಲಿ ಹೇಗೆ ಸಾಮರಸ್ಯದಿಂದ ಜೀವನ ನಡೆಸಬೇಕು ಎಂಬ ಪ್ರೇರಣೆ ಕೊಡುತ್ತವೆ.
ಮುಂದೆ ಮಧ್ಯಾನ್ಹೆ ಸ್ತ್ರೀ ಪ್ರಸಂಗತಃ'.. ಸೀತಾ ಮಾತೆಯನ್ನು ರಾವಣನು ಮೋಸದಿಂದ ಸನ್ಯಾಸಿ ವೇಷದಲ್ಲಿ ಬಂದು ಅಪಹರಿಸಿ ಲಂಕಾಪಟ್ಟಣಕ್ಕೆ ಕರೆದುಕೊಂಡು ಹೋದ. ಶ್ರೀರಾಮನು ಸೀತೆಯನ್ನು ಹುಡುಕಿಕೊಂಡು ಹೋದಾಗ ಹನುಮಂತನು ಲಂಕಾಪಟ್ಟಣಕ್ಕೆ ಹೋಗಿ ಸೀತಾ ಲಂಕಾದಲ್ಲಿ ಇರುವುದನ್ನು ದೃಢಪಡಿಸಿದ ಮೇಲೆ, ರಾಮನು ರಾಮ ಸೇತು ನಿರ್ಮಿಸಿ, ಕಪಿಸೈನ್ಯ ಕರೆದುಕೊಂಡು ಹೋಗಿ ಆ ದುಷ್ಟ ರಾವಣನನ್ನು ಸಂಹಾರಮಾಡಿ, ವಿಭೀಷಣನಿಗೆ ಪಟ್ಟಕಟ್ಟಿದನೋ ಅಂತ ರಾಮಾಯಣವನ್ನು ಮಧ್ಯಾನ್ಹ ಕಾಲದಲ್ಲಿ ಪಾಠ ಪ್ರವಚನ ಮಾಡಬೇಕು.
ರಾತ್ರೌ ಚೋರ ಪ್ರಸಂಗೇನ' ಯಾವ ಬೆಣ್ಣೆಯನ್ನು ಕದ್ದು, ಜೊತೆಗೆ ಸಹಸ್ರಾರು ಗೋಪಿಯರ ಮನಸ್ಸು ಕದ್ದು, ನಂದಗೋಪ ಕುಮಾರನಾಗಿ, ಯಶೋಧೆ ಕಂದನಾಗಿ, ಬೃಂದಾವನದಲ್ಲಿ, ಯಮುನಾತೀರದಲ್ಲಿ, ಕಾಳಿಂಗ ಮರ್ಧನ ಮಾಡಿ, ಪುನನಿಯ ಪ್ರಾಣ ಹೀರಿ, ಹಲವಾರು ರಾಕ್ಷಸರ ಸಂಹಾರಮಾಡಿ, ಗೋಪಿಯರೊಡನೆ ಜಲಕ್ರೀಡೆಯಾಡಿ, ಬಾಲ ಲೀಲೆಯನ್ನು ತೋರಿದ ಕೃಷ್ಣನ ಕಥೆಯನ್ನು ರಾತ್ರಿ ಕೇಳುತ್ತ.. ಸಾತ್ವಿಕನಾಗಿ ಸಧರ್ಮ ನಿರತನಾಗಿ ದಿನದ ಕಾಲವನ್ನು ಕಳೆಯಬೇಕು ಎಂಬುದೇ ಮೇಲಿನ ಶ್ಲೋಕದ ನೈಜಾರ್ಥ.
ದಿನನಿತ್ಯದ ಕೆಲಸಗಳ ಮಧ್ಯ, ಸಮಯ ಮಾಡಿಕೊಂಡು ಆದಷ್ಟು ಧಾರ್ಮಿಕವಾಗಿ ಜೀವನ ನಡೆಸಿದರೆ ಅವು ನಮ್ಮ ದೇಹದ ಅರೋಗ್ಯ ಕಾಪಾಡಲು, ಮನಸ್ಸಿನ ಒತ್ತಡ ಕಡಿಮೆ ಮಾಡಲು, ಸಂಸಾರದಲ್ಲಿ ಸಾಮರಸ್ಯ ಮೂಡಿಸಲು ಪರೋಕ್ಷವಾಗಿ ಸಹಕರಿಸುತ್ತವೆ. ಆದುದರಿಂದ ನಮ್ಮ ಸನಾತನ ಸಂಕೃತಿಯ ಮೇರು ಕೃತಿಗಳಾದ ರಾಮಾಯಣ, ಮಹಾಭಾರತ, ಭಾಗವತ ಶ್ರವಣ ಮನನಾದಿಗಳನ್ನು ಮಾಡುತ್ತ.. ದಿನನಿತ್ಯದಲ್ಲಿ ಸಾಧ್ಯವಾದಷ್ಟು ದೇವರ ಧ್ಯಾನದಲ್ಲಿ ನಿರತರಾಗಿ ದೇವರ ಆಶೀರ್ವಾದವನ್ನು ಸಂಪಾದಿಸಬೇಕು.