For the best experience, open
https://m.samyuktakarnataka.in
on your mobile browser.

ಸಕಲರನ್ನು ರಕ್ಷಿಸುವ ಶ್ರೀ ರಾಘವೇಂದ್ರ ಸ್ವಾಮಿ

03:29 AM Aug 20, 2024 IST | Samyukta Karnataka
ಸಕಲರನ್ನು ರಕ್ಷಿಸುವ ಶ್ರೀ ರಾಘವೇಂದ್ರ ಸ್ವಾಮಿ

ಉದ್ಧಾರದ ಮಾರ್ಗ ಕಾಣದೇ ಅಜ್ಞಾನಾಂಧಕಾರದಲ್ಲಿ ಮುಳುಗಿ, ಸಂಸಾರದ ಜಂಜಾಟದಲ್ಲಿ ಉದ್ಧಾರದ ಮಾರ್ಗ ಜೀವರುಗಳಿಗೆ ಜ್ಞಾನಭಾಸ್ಕರರಂತಿರುವ ಶ್ರೀಮನ್ಮಂತ್ರಾಲಯ ಪ್ರಭುಗಳ ಅಗಾಧ ಜ್ಞಾನ ಸಂಪತ್ತು ಸುಜೀವಿಗಳ ಅಜ್ಞಾನವನ್ನು ಪರಿಹರಿಸಿ, ಜ್ಞಾನವನ್ನು ಕರುಣಿಸಿ, ಜಗತ್ತಿನ ಎಲ್ಲ ಸಜ್ಜನರು ಶ್ರೀಹರಿಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗುವಂತೆ ಮಾಡಿ, ಅನುಗ್ರಹರೂಪದ ಮಂಗಳದ ಹೊಂಗಿರಣಗಳ ಪ್ರಕಾಶದ ಪ್ರಭೆಯಲ್ಲಿ ಸುಜನರು ಆನಂದತುಂದಿಲರಾಗಿ ನಲಿಯುವಂತೆ ಮಾಡಲು ಸಮರ್ಥವಿದೆ.
ಶ್ರೀಪರಿಮಳಾಚಾರ್ಯರ ಹರಿವಾಯು ಭಕ್ತಿ! ಅಬ್ಬಾ, ಅದನ್ನು ಬಣ್ಣಿಸುವ ಯೋಗ್ಯತೆ ಯಾರಿಗಿದೆ? ಸೃಷ್ಟಿಕರ್ತರಾದ ಚತುರ್ಮುಖ ಶ್ರೀ ಬ್ರಹ್ಮದೇವರು ಭಕ್ತಿ ವೈರಾಗ್ಯ ಭಾವಗಳನ್ನು ಒಟ್ಟಾಗಿ ಬೆರೆಸಿ, ತಮ್ಮ ಕೌಶಲ್ಯವನ್ನೆಲ್ಲಾ ಬೀರಿ ಸೃಜಿಸಿದ ಭಕ್ತಿಯ ಪುತ್ಥಳಿಯೆ ಶ್ರೀಗುರು ರಾಘವೇಂದ್ರ ಸ್ವಾಮಿಗಳೆಂದು ಒಂದೇ ಮಾತಿನಲ್ಲಿ ಹೇಳಬಹುದು. ಅಂದರೆ ಆಗ ಶ್ರೀಗುರುರಾಜರ ಭಕ್ತಿಸಾಮ್ರಾಜ್ಯ ವೈಭವದ ಒಂದು ಭವ್ಯ ಚಿತ್ರ ಭಕ್ತಜನರ ಚಿತ್ತಭಿತ್ತಿಯಲ್ಲಿ ಒಡಮೂಡಬಹುದೆನಿಸುತ್ತದೆ. ಶ್ರೀ ಪರಿಮಳಾಚಾರ್ಯರ ಜ್ಞಾನ-ಭಕ್ತಿ-ವೈರಾಗ್ಯಗಳು ಅವರ್ಣನೀಯ. ಶ್ರೀರಾಘವೇಂದ್ರ ಗುರುಸಾರ್ವಭೌಮರ ತಪಸ್ಸು ಸಮಸ್ತ ವಿಶ್ವದ ಜನತೆಯ ಕಲ್ಯಾಣವನ್ನೆಸಗಲು ಶಕ್ತವಾಗಿದೆ. ಗುರುವರ್ಯರ ಸಂಪತ್ತು ಅಕ್ಷಯ ಸಂಪತ್ತು! ಅಚ್ಚುತನು ಮೆಚ್ಚಿ ಕೊಟ್ಟ ದಿವ್ಯಸಂಪತ್ತು ! ರಮಾಧವನಾದ ಗೋವಿಂದನ ಚರಣಾರವಿಂದಗಳ ಸೇವೆಯಿಂದ ಲಬ್ಧವಾದ ಈ ಸಾತ್ವಿಕ ಸಂಪತ್ತು ಸಮಸ್ತ ವಿಶ್ವದ ಜೀವರಾಶಿಯ ದುಃಖ ದಾರಿದ್ರಾಯದಿಗಳನ್ನು ಕಳೆದು ಮನೋಭೀಷ್ಟಗಳನ್ನು, ಸುಖ ಸಂತೋಷಗಳನ್ನು ಯುಗಾಂತ್ಯದವರೆಗೂ ಪೂರೈಸಲು ಸಮರ್ಥವಾಗಿದೆ.
ಭಾಗವತಾಗ್ರಣಿಗಳಾದ ಶ್ರೀಪ್ರಹ್ಲಾದರಾಜರ ಚತುರ್ಥ ಹಾಗೂ ಕೊನೆಯ ಅವತಾರಿಗಳಾದ ಶ್ರೀಗುರು ರಾಘವೇಂದ್ರರ ಪುಣ್ಯ ಪರ್ವತದಷ್ಟು ಬೆಳೆದು ನಿಂತಿದೆ. ಅವರ ಪುಣ್ಯ ಭಂಡಾರವು ಅನಂತ ಭಕ್ತಿಕೋಟಿಯ ಮನೋಭೀಷ್ಟಗಳನ್ನು ಶತಶತಮಾನಗಳವರೆಗೆ ದಾನ ಮಾಡಿದರೂ ಬರಿದಾಗದಷ್ಟು ಹಿರಿದಾಗಿದೆ. ಅಕ್ಷಯ ಭಂಡಾರವಾಗಿದೆ.
ಶ್ರೀರಾಘವೇಂದ್ರರು ಮೂಲತಃ ‘ಮಾಧ್ವ ದ್ವೆತ’ ಸಿದ್ಧಾಂತ ಪ್ರತಿಪಾದಕರು. ಆದರೆ ಇವರು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳ ಸಮನ್ವಯಾಚಾರ್ಯರೆಂಬುದು ಸಕಲ ಆಧಾರಗಳಿಂದ ಸ್ಪಷ್ಟಪಡುತ್ತದೆ. ಸರ್ ಥಾಮಸ್ ಮನ್ರೋ ದೊರೆಗೆ ದರ್ಶನ, ಆದವಾನಿ ನವಾಬ ಮಂಚಾಲೆ ಗ್ರಾಮದಾನವಾಗಿ ಕೊಟ್ಟ ವಿಚಾರ, ಇವರ ಸರ್ವಧರ್ಮ ಪ್ರೇಮವನ್ನು ಪ್ರತಿಪಾದಿಸುತ್ತಿದೆ. ಜನರು ಗಮನಿಸಬೇಕಾದ ಒಂದು ಮುಖ್ಯ ವಿಚಾರವೆಂದರೆ, ಶ್ರೀರಾಘವೇಂದ್ರರು ಹಿಂದೂ ಧರ್ಮದ ಯತಿಗಳಾದರೂ, ಇಂದು ಮಂತ್ರಾಲಯಕ್ಕೆ ಪ್ರತಿ ದಿವಸ ಬರುವ ಭಕ್ತಾದಿಗಳಲ್ಲಿ ಎಲ್ಲಾ ಮತೀಯರೂ ಬಹುಸಂಖ್ಯೆಯಲ್ಲಿದ್ದಾರೆ. ಇದೇ ಕಾರಣದಿಂದಾಗಿ ಇವರನ್ನು ವಿಶ್ವಗುರು ಎಂಬುದಾಗಿ ಜಗತ್ತು ಕೊಂಡಾಡುತ್ತಿದೆ. ಶ್ರೀರಾಘವೇಂದ್ರರ ಮೂಲ ಬೃಂದಾವನ ಮಂತ್ರಾಲಯ, ಅಂದಿನ ಆದವಾನಿ ಸನಾಬನಾಗಿದ್ದ ಸಿದ್ಧಿ ಮಸೂದ್ ಖಾನ್ ದಾನವಾಗಿ ಕೊಟ್ಟ ಸ್ಥಳ. ಈ ಪ್ರೀತಿಯ ದ್ಯೋತಕವಾಗಿ ತಮ್ಮ ಬೃಂದಾವನದ ತುದಿಯಲ್ಲಿ ಮುಸ್ಲಿಂ ಆರ್ಕಿಟೆಕ್ವರ್ ಮಾದರಿಯ ‘ಗುಮ್ಮಟ’ವನ್ನು ಸ್ವತಃ ಹೇಳಿ ಇರಿಸಿಕೊಂಡಿದ್ದಾರೆ. ಈ ಅದ್ಭುತ ಕೆಲಸ ಮಾಡಿದ ಏಕೈಕ ಹಿಂದೂ ಗುರುಗಳಿವರು.
ರಾಯರ ಮಂತ್ರಾಕ್ಷತೆ ದಿವ್ಯೌಷಧವೆಂದು ಬಹಳಷ್ಟು ಭಕ್ತರು ನಂಬುತ್ತಾರೆ. ಶ್ರೀರಾಯರ ಆರಾಧನೆ ಪ್ರಪಂಚದಾದ್ಯಂತ ಬಹು ಸಂಭ್ರಮದಿಂದ ನಡೆಯುವುದರೊಂದಿಗೆ ಸುಮಾರು ೨೦೦ ಕ್ವಿಂಟಾಲ್ ಮಂತ್ರಾಕ್ಷತೆ ವಿತರಣೆಯಾಗುತ್ತದೆ. ರಾಯರ ಪರಿಮಳ ಪ್ರಸಾದ ಸ್ವೀಕರಿಸಿ ಭಕ್ತಾದಿಗಳು ಧನ್ಯರಾಗುತ್ತಾರೆ. ಒಟ್ಟಿನಲ್ಲಿ ಸುಖ, ಶಾಂತಿ, ಸಮೃದ್ಧಿಯ ಸಂಕೇತವೇ ಶ್ರೀ ಗುರುರಾಘವೇಂದ್ರ ಸನ್ನಿಧಿ ಎನ್ನುವುದರಲ್ಲಿ ಬೇರೆ ಮಾತಿಲ್ಲ.
ಮೂರೂವರೆ ಶತಮಾನಗಳ ಹಿಂದೆಯೇ ‘ಜಾತಿಗಿಂತ ನೀತಿ ಮೇಲು, ಮಡಿಗಿಂತ ಭಕ್ತಿ ಮೇಲು’ ಎನ್ನುವ ಮೂಲ ತತ್ವವನ್ನು ಹಾಗೂ ‘ಉಚ್ಚ-ನೀಚ, ಬಡವ ಬಲ್ಲಿದ’ ಎನ್ನುವ ಭೇದಭಾವವಿಲ್ಲದೆ ಜಗತ್ತಿಗೆ ಸಾರಿದ ಮಹಾಮಹಿಮರು ಶ್ರೀರಾಘವೇಂದ್ರ.
ಶ್ರೀಕ್ಷೇತ್ರ ಮಂತ್ರಾಲಯ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲೂಕಿನಲ್ಲಿದೆ. ಈ ಕ್ಷೇತ್ರ ಬಳ್ಳಾರಿಯಿಂದ ೧೩೫ ಕಿ.ಮೀ. ಹಾಗೂ ರಾಯಚೂರಿನಿಂದ ೪೫ ಕಿ.ಮೀ. ದೂರದಲ್ಲಿದೆ. ಶ್ರೀಮಠವು ಇಲ್ಲಿ ಆಗಮಿಸುವ ಭಕ್ತಾದಿಗಳಿಗೆ ಭೋಜನ ಹಾಗೂ ವಸತಿ ಸೌಕರ್ಯ ಒದಗಿಸುತ್ತದೆ. ಮಂತ್ರಾಲಯ ಒಂದು ಶಾಂತಿವನದಂತ್ತಿದ್ದು ಭಕ್ತಾದಿಗಳು ಇಲ್ಲಿ ಜೀವನದ ಜಂಜಾಟವನ್ನು ಮರೆತು ಸುಖ, ಶಾಂತಿ, ಸಮೃದ್ಧಿಯನ್ನು ಅನುಭವಿಸುತ್ತಾರೆ.
ಶ್ರೀ ಗುರುರಾಜರು ಸಶರೀರ ಬೃಂದಾವನಸ್ಥರಾದ್ದರಿಂದ, ಇವರಲ್ಲಿ ಬರುವ ಭಕ್ತಾದಿಗಳು ಭಕ್ತಿಯಿಂದ ಸೇವೆ ಸಲ್ಲಿಸುವ ವೇಳೆ ಅವರಿಗೆ ರಾಯರ ಇರುವಿಕೆ ಒಂದಲ್ಲಾ ಒಂದು ರೀತಿಯಲ್ಲಿ ಅನುಭವಕ್ಕೆ ಬರುತ್ತದೆ. ಕೆಲವರಿಗೆ ಸ್ವಪ್ನದಲ್ಲಿ ಬಂದು ಬವಣೆ ಪರಿಹರಿಸುವುದೂ ಉಂಟು. ಕಲಿಯುಗದ ಕಾಮಧೇನು, ಕಲ್ಪವೃಕ್ಷವೆನಿಸಿದ ಗುರುಸಾರ್ವಭೌಮರು ಸಕಲರನ್ನು ರಕ್ಷಿಸಿ, ತಮ್ಮ ಪುಣ್ಯವನ್ನು ಹಂಚುತ್ತಾರೆ.
ಇವರ ಕೊನೆಯ ಬೋಧನೆ ನಡೆದದ್ದು ಕ್ರಿ.ಶ. ೧೬೭೧, ಶ್ರಾವಣ ಮಾಸ ಕೃಷ್ಣ ಪಕ್ಷ ಬಿದಿಗೆಯಲ್ಲಿ. ಇದು ನಡೆದ ಸ್ಥಳ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆ ಆದೋನಿ ತಾಲೂಕಿನಲ್ಲಿರುವ ಮಂಚಾಲೆ ಗ್ರಾಮ. ಈ ಬೋಧನೆಯಲ್ಲಿ ಯತಿವರ್ಯರ ಚಿಂತನೆ ಮತ್ತು ಜ್ಞಾನಗಳೊಳಗೆ ಪರಸ್ಪರ ಹೊಂದಾಣಿಕೆಯಿದೆ. ಸುವ್ಯವಸ್ಥೆ ಇಲ್ಲದ ಚಿಂತನೆ ಜೀವನಕ್ಕೆ ಮಾರಕವಾಗುತ್ತದೆ. ಸರಿಯಾದ ಜೀವನವೆಂದರೆ ಕರ್ತವ್ಯಗಳಲ್ಲಿ ನಿಷ್ಠೆ, ಕರ್ತವ್ಯದಲ್ಲಿ ಫಲಾಪೇಕ್ಷೆ ತೋರಿಸಬಾರದು. ಕರ್ತವ್ಯಗಳಿಗೆ ಫಲ ನೀಡುವುದು ಭಗವಂತನಿಗೆ ಸಲ್ಲುತ್ತದೆ. ಸದಾಚಾರವೇ ನಿಜವಾದ ಕರ್ಮಯೋಗ. ಅನಂತರ ರಾಘವೇಂದ್ರರು ಸಮಾಜದ ಹಿತ ಸಾಧಿಸುವುದನ್ನು ತಿಳಿಸಿದರು. ಅವರ ಅಭಿಪ್ರಾಯದಂತೆ ಪ್ರತಿಯೊಬ್ಬನ ಕರ್ತವ್ಯವೂ ಸಮಾಜದ ಹಿತಕ್ಕಾಗಿ ನಡೆಯಬೇಕು. ಕರ್ತವ್ಯ ಪಾಲನೆಯಲ್ಲಿ ಕ್ಲುಪ್ತ ಸಮಯ ಮತ್ತು ಸೂಕ್ತ ವರ್ತನೆಗಳ ಕಡೆಗೆ ಗಮನ ನೀಡಬೇಕು. ಪ್ರತಿಯೊಂದು ಕೆಲಸವೂ ದೇವತಾರಾಧನೆಯೆಂದು ತಿಳಿದುಕೊಳ್ಳಬೇಕು. ಒಟ್ಟಿನಲ್ಲಿ ವ್ಯಕ್ತಿ ಸಮಾಜದ ಹಿತಕ್ಕಾಗಿ ತನ್ನ ಕೆಲಸವನ್ನು ದೇವತಾ ಸೇವೆಯೆಂದು ತಿಳಿದು ನಡೆಸಬೇಕು. ಸಮಯಪ್ರಜ್ಞೆ ಇರಬೇಕು. ಧರ್ಮಶಾಸ್ತçಗಳ ಅರಿವು, ಅಧ್ಯಯನ, ಮನನ ಮತ್ತು ಚಿಂತನೆಗಳಿAದ ಭಕ್ತರು ತಮ್ಮ ಜೀವನವನ್ನು ಉದಾತ್ತ ಮಾಡಿಕೊಳ್ಳಬೇಕು.
ರಾಘವೇಂದ್ರ ಯತಿಗಳ ಕೊನೆಯ ಬೋಧನೆಯನ್ನು ಅಧ್ಯಯನ ಮಾಡಿದಾಗ ತೋರುವ ಸದಂಶಗಳು ಹಲವು. ಮೊದಲನೆಯದಾಗಿ, ಇದು ಸಾರ್ವತ್ರಿಕ ಹಿತಾಸಕ್ತಿಯನ್ನು ಒಳಗೊಂಡಿದೆ. ಇಲ್ಲಿ ಶ್ರೀಗಳು ಯಾವುದೇ ನಿರ್ದಿಷ್ಟ ಪಂಥಗಳಿಗೆ ಅಂಟಿಕೊಳ್ಳಲಿಲ್ಲ. ಎರಡನೆಯದಾಗಿ, ಜ್ಞಾನ ಸಂಪಾದನೆಯ ಮಹತ್ವವನ್ನು ತಿಳಿಸಿದರು. ಜ್ಞಾನವಿಲ್ಲದ ಭಕ್ತಿ ಆಚರಣೆಗೆ ಸೂಕ್ತವಲ್ಲದವೆಂದು ಬೋಧಿಸಿದರು.
ಈ ರೀತಿ ಬೋಧನೆ ನೀಡಲು ಕಾರಣವೇನೆಂದರೆ ಆಗ ಭಾರತದಲ್ಲಿ ಭಕ್ತರೆನಿಸಿಕೊಂಡವರು ವಿವಿಧ ಪಂಥಗಳಲ್ಲಿ ಹಂಚಿಹೋಗಿ ತಮ್ಮತಮ್ಮೊಳಗೇ ಗುದ್ದಾಟ ನಡೆಸುತ್ತಿದ್ದರು. ಮಾಟ, ಮಂತ್ರ, ಪವಾಡ ಮುಂತಾದ ಅರ್ಥಹೀನ ಪ್ರವೃತ್ತಿಗಳನ್ನು ಯತೀಂದ್ರರು ಪ್ರಬಲರಾಗಿ ಖಂಡಿಸಿದರು. ಇವುಗಳೆಲ್ಲಾ ಮೋಸ ಎಂದು ಪ್ರತಿಪಾದಿಸಿದರು. ಈ ರೀತಿ ಖಂಡನೆ ಮಾಡಿದ ಯತೀಂದ್ರರ ಕೆಲಸ ಪ್ರಶಂಸನೀಯ.