For the best experience, open
https://m.samyuktakarnataka.in
on your mobile browser.

ಸಕಲರ ಕಲ್ಯಾಣದ ಗ್ಯಾರಂಟಿಗೆ ಸಿದ್ಧತೆ

03:59 AM Feb 17, 2024 IST | Samyukta Karnataka
ಸಕಲರ ಕಲ್ಯಾಣದ ಗ್ಯಾರಂಟಿಗೆ ಸಿದ್ಧತೆ

ಬೆಂಗಳೂರು: ಐದೂ ಗ್ಯಾರಂಟಿಗಳು ಸೇರಿದಂತೆ ಎಲ್ಲವನ್ನು-ಎಲ್ಲರನ್ನೂ ಒಳಗೊಂಡಿರುವ ಅಂಶಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ ಹದಿನೈದನೇ ಬಜೆಟ್ ಮಂಡಿಸಿದ್ದಾರೆ.
ಈ ಬಾರಿ ಒಟ್ಟು ೩,೭೧,೩೮೩ ಕೋಟಿ ಗಾತ್ರದ ಆದಾಯ ಕೊರತೆಯ ಬಜೆಟ್ ಮಂಡಿಸಿದ್ದು, ಗ್ಯಾರಂಟಿ ಹೊರೆ ನೀಗಿಸಲು ಹೆಚ್ಚಿನ ಸಾಲದ ಮೊರೆ ಹೋಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೧,೦೫, ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದ್ದಾರೆ. ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಅಂದಾಜು ೮೫ ಸಾವಿರ ಕೋಟಿ ಸಾಲ ಮಾಡುವುದಾಗಿ ತಿಳಿಸಿದ್ದರು. ಇದೀಗ ಸರ್ಕಾರ ಪಂಚ ಗ್ಯಾರಂಟಿಯ ಹೊರೆ ನೀಗಿಸಲು ಮತ್ತಷ್ಟು ಸಾಲದ ಮೊರೆ ಹೋಗಿದ್ದಾರೆ.
ನಿರೀಕ್ಷೆಯಂತೆಯೇ ಜನಪ್ರಿಯ ಮುಂಗಡಪತ್ರವನ್ನು ನಾಡಿಗೆ ನೀಡಿದ್ದಾರೆ. ಕೃಷಿ, ನೀರಾವರಿ, ಶಿಕ್ಷಣ ಮತ್ತು ಮಹಿಳಾ-ಮಕ್ಕಳ ಕಲ್ಯಾಣಕ್ಕೆ ಇನ್ನಿಲ್ಲದ ಒತ್ತು ನೀಡಿದ್ದಾರೆ. ಜೊತೆಗೆ ಪ್ರತಿಯೊಂದು ಜಿಲ್ಲೆಗೂ ಅನ್ವಯವಾಗುವಂತೆ ಘೋಷಣೆಗಳ ಭಾಗ್ಯವನ್ನು ಕರುಣಿಸಿದ್ದಾರೆ.
ಕೇಂದ್ರ ಸರಕಾರದ ಅಸಹಕಾರದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪ್ರಿಯ ಬಜೆಟ್ ಮಂಡಿಸಲು ಯತ್ನಿಸಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ರಾಜ್ಯದಲ್ಲಿರುವ ಶಾಲೆಗಳ ದುರಸ್ತಿಗೆ ಹಣ ತೆಗೆದಿರಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡಿರುವುದು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ದೂರದೃಷ್ಟಿ ಬಜೆಟ್‌ನ ಮುಖ್ಯಾಂಶವಾಗಿದೆ.
ಬಜೆಟ್‌ನ ಇನ್ನೊಂದು ಗಮನಾರ್ಹ ಮುಖ್ಯಾಂಶವೆಂದರೆ ಗ್ಯಾರಂಟಿಗಳಿಗೆ ಹಣವನ್ನು ನಿಗದಿ ಮಾಡಿರುವುದು. ಸಿದ್ದರಾಮಯ್ಯ ಗ್ಯಾರಂಟಿಗಳಿಗೆ ಎಷ್ಟು ಎಂಬುದಾಗಿ ಹೇಳಲಿದ್ದಾರೋ ಇಲ್ಲವೋ? ಈ ಭಾಗ್ಯಗಳಿಗಾಗಿ ಎಷ್ಟು ವೆಚ್ಚವನ್ನು ಬಜೆಟ್‌ನಲ್ಲಿ ತೋರಿಸಲಿದ್ದಾರೆ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿದ್ದವು. ರಾಜಸ್ವ ಮತ್ತು ವಿತ್ತೀಯ ಕೊರತೆ ಬಜೆಟ್ ಮಂಡನೆಯಾಗುತ್ತದೆ ಎನ್ನುವ ನಿರೀಕ್ಷೆ ಇದ್ದೇ ಇತ್ತು. ಆದ್ದರಿಂದ ಗ್ಯಾರಂಟಿಗಳಿಗೆ ಹಣವನ್ನು ನಮೂದಿಸುವುದು ಸಾಧ್ಯವೇ ಎನ್ನುವ ಸಹಜ ಪ್ರಶ್ನೆಯೂ ಇತ್ತು. ಇದನ್ನು ಸುಳ್ಳು ಮಾಡಿರುವ ಸಿದ್ದರಾಮಯ್ಯ ಗ್ಯಾರಂಟಿಗಳಿಗೆ ೫೨ ಸಾವಿರ ಕೋಟಿ ತೆಗೆದಿಟ್ಟಿದ್ದಾರೆ. ಈ ಐದು ಗ್ಯಾರಂಟಿಗಳೂ ಸೇರಿ ಒಟ್ಟಾರೆ ಕಲ್ಯಾಣ ಕಾರ್ಯಕ್ರಮಗಳಿಗೆ ೧.೨೦ ಲಕ್ಷ ಕೋಟಿಯಷ್ಟು ದೊಡ್ಡ ಮೊತ್ತವನ್ನೇ ನಿಗದಿ ಮಾಡಿದ್ದಾರೆ. ೩.೭೦ ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಭಾಗ್ಯಗಳಿಗೆ ಮೀಸಲಾಗಿರುವುದು ಸಣ್ಣ ವಿಷಯವಲ್ಲ. ಈ ಮೂಲಕ ವಿಪಕ್ಷಗಳಿಗೂ ಒಂದು ರೀತಿ ಅಚ್ಚರಿಯನ್ನೇ ಮೂಡಿಸಿದ್ದಾರೆ.
ಈ ಬಾರಿ ಬಜೆಟ್‌ನಲ್ಲಿ ಒಟ್ಟು ೨,೬೩,೧೭೭ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಪಡಿಸಲಾಗಿದೆ. ೨೩-೨೪ ಸಾಲಿನ ಬಜೆಟ್‌ನಲ್ಲಿ ವಾರ್ಷಿಕ ಅಂದಾಜು ೯೮,೬೫೦ ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಇದೀಗ ಈ ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು ೧,೧೦ ಲಕ್ಷ ಕೋಟಿ ರೂ. ನಿಗದಿ ಮಾಡಿದೆ.
ಈ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ೩೮,೫೨೫ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಿದೆ. ಈ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮೂಲಕ ೨೬,೦೦೦ ಕೋಟಿ ರೂ. ಸಂಗ್ರಹ ಗುರಿ ನಿಗದಿ ಮಾಡಿದೆ. ಇನ್ನು ಮೋಟಾರು ಮತ್ತು ವಾಹನ ತೆರಿಗೆ ಮೂಲಕ ೧೩ ಸಾವಿರ ಕೋಟಿ ರೂ. ಸಂಗ್ರಹದ ಗುರಿ ನಿಗದಿ ಮಾಡಿದೆ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ೯ ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಿದೆ.
ಈ ಸಾಲಿನಲ್ಲಿ ೨,೬೩,೧೭೮ ಕೋಟಿ ರೂ.ಗಳ ರಾಜಸ್ವ ಜಮೆಯನ್ನು ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಸ್ವಂತ ತೆರಿಗೆಯಿಂದ ೧,೮೯ ಲಕ್ಷ ಕೋಟಿ ರೂ.ಗಳ ಸಂಗ್ರಹಣೆಯನ್ನು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ ೧೩,೫೦೦ ಕೋಟಿ ರೂ. ಸಂಗ್ರಹಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರದಿಂದ ೪೪,೪೮೫ ಕೋಟಿ ರೂ.ಗಳ ತೆರಿಗೆ ಪಾಲು ಹಾಗೂ ೧೫,೩೦೦ ಕೋಟಿ ರೂ.ಗಳ ಸಹಾಯಾನುದಾನ ಸ್ವೀಕೃತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ ೧,೦೫,೨೪೬ ಕೋಟಿ ರೂ.ಗಳ ಸಾಲ ಮಾಡಲು ಅಂದಾಜಿಸಲಾಗಿದೆ. ಆ ಮೂಲಕ ೨೦೨೪-೨೫ ರಲ್ಲಿ ಒಟ್ಟು ೩,೬೮,೬೭೪ ಕೋಟಿ ರೂ. ಸ್ವೀಕೃತಿಯನ್ನು ಅಂದಾಜಿಸಲಾಗಿದೆ.