For the best experience, open
https://m.samyuktakarnataka.in
on your mobile browser.

ಸತ್ಯವನ್ನು ಸೇರಿದಾಗ ನಿತ್ಯತೃಪ್ತಿ

12:45 AM Nov 27, 2023 IST | Samyukta Karnataka
ಸತ್ಯವನ್ನು ಸೇರಿದಾಗ ನಿತ್ಯತೃಪ್ತಿ

ಸಾಮಾನ್ಯವಾಗಿ ಪರಮ ಸತ್ಯವನ್ನು ಅಗಲಿ ಬಂದ ಎಲ್ಲ ಜೀವಿಗಳು ಯಾವ ಕೆಲಸ ಮಾಡಿದರೂ ಕೂಡ ಅದರ ಹಿನ್ನೆಲೆಯ ಉದ್ದೇಶ ಮಾತ್ರ ನಿತ್ಯತೃಪ್ತಿ ದೊರೆಯಲೆಂಬುದೇ ಆಗಿರುತ್ತದೆ. ಆದರೆ ಯಾವ ವಸ್ತುವನ್ನು ಕಳೆದುಕೊಂಡು ಮನುಷ್ಯ ಅತೃಪ್ತನಾಗಿರುವನೋ ಆ ವಸ್ತುವನ್ನು ಪಡೆಯುವವರೆಗೆ ಶಾಶ್ವತ ಸಮಾಧಾನವಾಗಲಿ, ನಿತ್ಯತೃಪ್ತಿಯಾಗಲಿ ಕೇವಲ ಕನಸಿನ ಮಾತೇ ಸರಿ. ಆದ್ದರಿಂದ ಆ ಪರಮ ಸತ್ಯವನ್ನು ಪಡೆಯಲು ನಿರಂತರ ಪ್ರಯತ್ನಿಸಬೇಕು. ಸಾಗರದಿಂದ ಆವಿಯಾಗಿ ಬೇರ್ಪಟ್ಟ ಒಂದು ನೀರಿನ ಕಣ ಪುನಃ ಸಾಗರ ಸೇರುವವರೆಗೆ ಸಮಾಧಾನವಿಲ್ಲದೆ ಚಡಪಡಿಸುತ್ತದೆ. ಆವಿಯಾಗಿ ಮೇಲೆ ಹೋಗಿ ಮೋಡವಾದರೂ ಅದಕ್ಕೆ ಸಮಾಧಾನವಿಲ್ಲ. ಅತ್ತಿಂದಿತ್ತ ಇತ್ತಿಂದತ್ತ ಸುಳಿಸುಳಿದಾಡುತ್ತಲೇ ಇರುತ್ತದೆ. ಗುಡುಗುಡಿಸುತ್ತಲೇ ಇರುತ್ತದೆ. ಆರ್ಭಟಿಸುತ್ತದೆ. ನಂತರ ಮಳೆಯ ಹನಿಯಾಗಿ ಭೂಮಿಯತ್ತ ಧಾವಿಸುತ್ತದೆ. ಮಳೆಯ ಹನಿಯಾದಾಗಲೂ ಅದಕ್ಕೆ ಸಮಾಧಾನವಿಲ್ಲ. ಒಂದು ರೀತಿಯಾದ ತೀವ್ರತೆ ಅದರಲ್ಲಿ. ಭೂಮಿಗೆ ಬಿದ್ದು ಹಳ್ಳಕೊಳ್ಳದ ರೂಪವನ್ನು ಧರಿಸಿ ಹರಿಯುತ್ತ ಹರಿಯುತ್ತ ನದಿ ಸೇರಿ ಅಲ್ಲಿಯೂ ತನ್ನ ವೇಗವನ್ನು ನಿಲ್ಲಿಸದೆ ಹರಿದು ಮಹಾನದಿಯಾಗಿ ಕೊನೆಗೆ ಸಾಗರವನ್ನು ಸೇರಿ ಶಾಂತವಾಗುತ್ತದೆ. ಸಾಗರದಿಂದ ಅಗಲಿದ ಆ ನೀರಿನ ಕಣ ಯಾವ ರೂಪವನ್ನು ಧರಿಸಿದರೂ, ಅಂದರೆ ಮೋಡ, ಮಳೆ, ಹಳ್ಳ, ನದಿ, ಮಹಾನದಿಯಾದರೂ ಅದಕ್ಕೆ ಸಮಾಧಾನವಿಲ್ಲ. ಮತ್ತು ಒಂದೆಡೆ ನಿಲ್ಲುವುದಿಲ್ಲ. ಸಾಗರವನ್ನು ಸೇರಿದಾಗಲೇ ಅದು ತನ್ನ ವೇಗ, ತೀವ್ರತೆ, ಕಳವಳಗಳನ್ನೆಲ್ಲ ಕಳೆದುಕೊಂಡು ಅದರಲ್ಲಿ ಬೆರೆತು ಒಂದಾಗುತ್ತದೆ. ಇದರಂತೆಯೇ ಪರಮಚೈತನ್ಯ ಸಾಗರರೂಪನಾದ ಪರಶಿವ ತತ್ವದಿಂದ ಹೊರಹೊಮ್ಮಿದ ಜೀವಿಗಳು ಮರಳಿ ಅವನನ್ನು ಸೇರುವವರೆಗೆ ಪೂರ್ಣ ನೆಮ್ಮದಿಯನ್ನು ದೊರಕಿಸಿಕೊಳ್ಳಲಾರವು. ಸಾಮಾನ್ಯವಾಗಿ ಜೀವಿಗಳೆಲ್ಲ ಸುಖ ಪಡೆಯಬೇಕೆಂಬ ಹಂಬಲದಿಂದ ಏನೇನೊ ಮಾಡಲು ಮತ್ತು ಏನೇನೋ ಆಗಲೂ ಪ್ರಯತ್ನಿಸುತ್ತಾರೆ. ಆದರೆ ಏನು ಮಾಡಿದರೂ ಏನು ಆದರೂ ಮೂಲತಃ ಅಗಲಿದ ಸ್ಥಾನವನ್ನು ಸೇರುವವರೆಗೆ ಆ ಚಿರಸುಖ ನಮ್ಮದಾಗಲು ಸಾಧ್ಯವಿಲ್ಲ.
ಪರಮ ಸತ್ಯದಿಂದ ಅಗಲಿ ಭೂಮಿಗೆ ಬಂದ ಜೀವಿಯು ಯಾರದೋ ಮಗುವಾಗಿರುತ್ತಾನೆ. ಏನೋ ಹೆಸರಿಟ್ಟುಕೊಳ್ಳುತ್ತಾನೆ. ಬೆಳೆದು ಓದಿ ವಿವಿಧ ಪದವಿಗಳನ್ನು ಗಳಿಸಿಕೊಳ್ಳುತ್ತಾನೆ. ನೌಕರಿಗಾಗಿ ಪರದಾಡಿ ಯಾವುದೋ ಖುರ್ಚಿಯ ಮೇಲೆ ಕುಳಿತು ಅಧಿಕಾರಿಯಾಗುತ್ತಾನೆ. ನಂತರ ಯಾವುದೋ ಹೆಣ್ಣಿಗಾಗಿ ಪರದಾಡಿ ಅವಳ ಗಂಡನಾಗುತ್ತಾನೆ. ಮುಂದೆ ಹಲವು ಮಕ್ಕಳ ತಂದೆಯಾಗಿ ಹಲವು ಸೊಸೆಯಂದಿರ ಮಾವನಾಗಿ ಹಲವು ಮೊಮ್ಮಕ್ಕಳ ಅಜ್ಜನಾಗಿ ಕೊನೆಗೊಮ್ಮೆ ಆ ದೇಹವನ್ನು ತೊರೆದು ಸತ್ತು ಹೋಗುತ್ತಾನೆ. ಇಷ್ಟೆಲ್ಲಾ ಆದರೂ ಪೂರ್ಣ ನೆಮ್ಮದಿಯೆನ್ನುವುದು ಈ ಜೀವಿಗೆ ಎಲ್ಲಿದೆ?. ಈ ತುಂಬು ಜೀವನದಲ್ಲಿ ಕೆಲವು ಕ್ಷಣಗಳು ಸುಖಮಯವೆನಿಸುತ್ತವೆ, ಆದರೆ ಅವು ಅಭಾಸ ಮಾತ್ರ. ಚಿರಸುಖವು ಪರಮಾನಂದ ರೂಪನಾದ ಪರಶಿವ ತತ್ವವನ್ನು ಅರಿತು ಪರಮ ಸತ್ಯದಲ್ಲಿ ಬೆರೆತಾಗಲೇ ಸೂರೆಗೊಳ್ಳುತ್ತದೆ.
ಸಾಗರದಿಂದ ಬೇರ್ಪಟ್ಟ ಮೇಘದ ರೂಪ ಧರಿಸಿದ ಹನಿಗಳಲ್ಲಿ ಮತ್ತೆ ಕೆಲ ಹನಿಗಳು ನದಿಗಳಲ್ಲಿ ಬಿದ್ದರೆ, ಕೆಲ ಹನಿಗಳು ಹಳ್ಳಕೊಳ್ಳಗಳಲ್ಲಿ ಬೀಳುತ್ತವೆ. ಮತ್ತೆ ಕೆಲ ಹನಿಗಳು ಕೆರೆ ಬಾವಿಗಳಲ್ಲಿ ಬೀಳುತ್ತವೆ. ಇವುಗಳಲ್ಲಿ ನದಿಗಳಲ್ಲಿ ಬಿದ್ದ ಹನಿಗಳು ತ್ವರಿತವಾಗಿ ಹರಿದು ಸಾಗರ ಸೇರುತ್ತವೆ. ಹಳ್ಳಗಳಲ್ಲಿ ಬಿದ್ದ ಹನಿಗಳು ಸಾಗರವನ್ನು ತಲುಪುವುದು ವಿಳಂಬವಾಗುತ್ತದೆ. ಕೆರೆ ಬಾವಿಗಳಲ್ಲಿ ಬಿದ್ದ ಹನಿಗಳು ಸಾಗರವನ್ನು ಸೇರುವುದು ಎಂದೊ ಏನೊ! ಇದರಂತೆಯೇ ಸಾಂಸಾರಿಕ ವಸ್ತುಗಳಲ್ಲಿಯೇ ಆಸಕ್ತನಾದ ಮನುಷ್ಯನು ಕೆರೆ ಬಾವಿಗಳಲ್ಲಿ ಬಿದ್ದ ಹನಿಯಂತೆ ಭಗವಂತನನ್ನು ಸೇರುವುದು ಎಂದೋ ಏನೋ! ಇಹಲೋಕದ ಭೋಗದ ಜೊತೆಗೆ ಆತ್ಮಸಾಧನೆಯನ್ನು ಮಾಡಿಕೊಳ್ಳಬೇಕೆನ್ನುವ ಬಯಕೆಯುಳ್ಳ ಮನುಷ್ಯನು ಹಳ್ಳಕೊಳ್ಳಗಳಲ್ಲಿ ಬಿದ್ದ ಮಳೆಯ ಹನಿಯಂತೆ ತ್ವರಿತವಾಗಿ ಪರಶಿವ ತತ್ವದಲ್ಲಿ ಸೇರಿ ಒಂದಾಗುತ್ತಾನೆ.