ಸನ್ಯಾಸಿಗಳಿಗೇಕೆ ರಾಜಕೀಯ ಉಸಾಬರಿ?
ಮಠಾಧೀಶರು, ಧಾರ್ಮಿಕ ಮುಖಂಡರು, ಸನ್ಯಾಸಿಗಳಿಗೇಕೆ ರಾಜಕೀಯ ಉಸಾಬರಿ?
ಕರ್ನಾಟಕದಲ್ಲಿ ಈಗ ಮತ್ತೆ ಈ ವಿವಾದ ಹುಟ್ಟಿಕೊಂಡಿದೆ.
ಲೌಕಿಕ ಜೀವನದಲ್ಲಿ ಮತ್ತು ಸಮಾಜದ ಸ್ತರದಲ್ಲಿ ಧರ್ಮ ಮತ್ತು ರಾಜಕೀಯ ಬೇರೆ ಬೇರೆ. ರಾಜಕೀಯದಲ್ಲಿ ಧರ್ಮವು ಹಸ್ತಕ್ಷೇಪ ನಡೆಸಲು ಮುಂದಾದರೆ ಅಥವಾ ಧರ್ಮದಲ್ಲಿ ರಾಜಕೀಯ-ರಾಜಕಾರಣಿಗಳು ಮೂಗು ತೂರಿಸಲು ಯತ್ನಿಸಿದರೆ ಯಾವುದೂ ಯಾರಿಗೂ ಒಳಿತಾಗಲಾರದು ಎಂಬುದು ಸ್ವತಂತ್ರ ಭಾರತದಲ್ಲಿ ಸ್ಪಷ್ಟವಾಗಿರುವ ಸಂಗತಿ.
ಹಾಗಂತ ಎರಡೂ ಕ್ಷೇತ್ರಗಳು ತಮ್ಮ ಚೌಕಟ್ಟು-ಗಡಿ ದಾಟಿ ಹತ್ತಾರು ವರ್ಷಗಳೇ ಸಂದಿವೆ. ಇದರಿಂದ ರಾಜಕೀಯ ಮತ್ತು ರಾಜಕಾರಣದ ಮೇಲೆ ಹಾಗೂ ಮಠಾಧೀಶರು, ಸ್ವಾಮಿಗಳು ಹಾಗೂ ಧಾರ್ಮಿಕ ಮುಖಂಡರ ಮೇಲಿನ ಗೌರವ-ಘನತೆ ಎಂದೋ ಜನಾಭಿಪ್ರಾಯದಲ್ಲಿ ಕುಂಠಿತವಾಗಿದೆ.
ರಾಜಕಾರಣ ಕೆಟ್ಟಿದೆ. ಅದನ್ನು ಶುದ್ಧೀಕರಿಸಲು ನಾವು ಪ್ರವೇಶಿಸಲೇಬೇಕಿದೆ ಎಂದು ಮಠಾಧೀಶರು, ಧಾರ್ಮಿಕ ಜಾತಿ ಮುಖಂಡರು ಹೇಳುತ್ತಿದ್ದರೆ, ಮಠ ಮಂದಿರಗಳಲ್ಲಿ ಕುಳಿತು ಸಮಾಜದ ಬಗ್ಗೆ ಸಲಹೆ, ಸಂಸ್ಕೃತಿ, ಧಾರ್ಮಿಕ ರಕ್ಷಣೆಯಲ್ಲಿ ತೊಡಗಬೇಕಾದವರು ರಾಜಕಾರಣಕ್ಕೆ ಇಳಿದಿದ್ದಾರೆ; ಮಠ ಮಂದಿರಗಳೆಲ್ಲ ರಾಜಕೀಯ ಕೇಂದ್ರಗಳಾಗಿವೆ ಎಂಬ ಆರೋಪ ರಾಜಕೀಯ ಪಕ್ಷಗಳ ಮುಖಂಡರು ಮತ್ತು ರಾಜಕಾರಣಿಗಳದ್ದು.
ಇದು ಕರ್ನಾಟಕದಲ್ಲಿ ಎಲ್ಲಿಯವರೆಗೆ ಬಂದು ನಿಂತಿದೆ ಎಂದರೆ, ಮಠಾಧೀಶರು ಕಾವಿ ಬಿಚ್ಚಿ, ಮಠ ತೊರೆದು ಬನ್ನಿ ಎಂದು ಸವಾಲು ಹಾಕುವ ಮಟ್ಟಿಗೆ…! ರಾಜಕಾರಣಿಗಳು ನಮ್ಮನ್ನು ಮಠಾಧೀಶರನ್ನಾಗಿಸಿ, ನೀವು ರಾಜಕೀಯಕ್ಕೆ ಬನ್ನಿ ಎಂದು ಪ್ರತಿ ಸವಾಲು ಎಸೆದ ಪ್ರಸಂಗಗಳೂ ಉಂಟು.
ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸಿ. ಪೇಜಾವರದ ಶ್ರೀ ಪ್ರಸನ್ನ ತೀರ್ಥ ಸ್ವಾಮೀಜಿ ಜಾತಿ ಗಣತಿ ಕುರಿತು ಆಡಿದ ಮಾತು, ಆ ನಂತರ ವಕ್ಫ್ ಆಸ್ತಿಯ ಸಂಬಂಧ ಇರುವ ವಿವಾದದ ಹಿನ್ನೆಲೆಯಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಒಳಗಾದವು. ಸ್ವಾಮೀಜಿ ಸಂವಿಧಾನ ಬದಲಿಸಿ, ಧಾರ್ಮಿಕ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಿ ಎಂದಿದ್ದಾರೆ ಎಂಬುದು ವಿವಾದ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆದವು.ನಾನು ಸಂವಿಧಾನದ ವಿಷಯ ಪ್ರಸ್ತಾಪಿಸಿಲ್ಲ. ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿಗಳೇ ತನ್ನ ಮಾತು ಪರಿಶೀಲಿಸದೇ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ' ಎಂಬುದಾಗಿ ಶ್ರೀಗಳು ಆರೋಪಿಸಿದರು. ಒಕ್ಕಲಿಗರ ಸ್ವಾಮೀಜಿ ಶ್ರೀ ಚಂದ್ರಶೇಖರಾನಂದ ಸ್ವಾಮಿಗಳು
ಮುಸಲ್ಮಾನರಿಗೆ ಮತದಾನದ ಹಕ್ಕು ನೀಡಬೇಡಿ' ಎಂದು ಕರೆ ನೀಡಿದ್ದು ಮತ್ತೊಂದು ವಿವಾದ. ಪರಿಣಾಮ ಅವರ ಮೇಲೆ ಪೊಲೀಸ್ ದೂರು ದಾಖಲು.. ಅವರಿಗೆ ವಿಚಾರಣೆಗೆ ಆಗಮಿಸುವಂತೆ ಸಮನ್ಸ್. ಸ್ವಾಮಿಗಳ ಮೇಲೇಕೆ ಕ್ರಿಮಿನಲ್ ಪ್ರಕರಣ ಎಂಬುದರ ಬಗ್ಗೆ ಪರ ವಿರೋಧ ಚರ್ಚೆ… ಸ್ವಾಮೀಜಿ ಕೂಡ ದೇಶದ ಕಾನೂನಿನ ವ್ಯಾಪ್ತಿಯಲ್ಲಿ ಬರುವವರಲ್ಲವೇ? ದೇಶಕ್ಕಿರುವುದು ಒಂದೇ ಕಾನೂನು ಎಂಬ ಸಮರ್ಥನೆ ಒಂದೆಡೆಯಾದರೆ, ಸ್ವಾಮೀಜಿಗಳನ್ನು ಮುಟ್ಟಿ ನೋಡೋಣ, ಅವರು ಈಗಾಗಲೇ ತಮ್ಮ ಮಾತಿಗೆ ವಿಷಾದ ಸೂಚಿಸಿದ್ದಾರೆ ಎಂಬುದು ಅವರ ಬೆಂಬಲಿಗ ರಾಜಕಾರಣಿಗಳ ವಾದ ಮತ್ತು ಹೋರಾಟ!
ಇದಕ್ಕೆ, ವಿಧಾನಸೌಧದಲ್ಲಿ ಕಳೆದ ರಾಜ್ಯಸಭಾ ಚುನಾವಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದವರ ವಿರುದ್ಧ ಏನು ಕ್ರಮ ತೆಗೆದುಕೊಂಡಿರಿ? ಮಾಜಿ ಮುಖ್ಯಮಂತ್ರಿಯನ್ನು ಕರಿಯ' ಎಂದು ವರ್ಣ ನಿಂದನೆ ಮಾಡಿದವರ ಮೇಲೆ ಏನು ಕ್ರಮ ತೆಗೆದುಕೊಂಡಿರಿ? ಎನ್ನುವ ಮರು ಪ್ರಶ್ನೆ ಕೂಡ ಎದುರಾಗಿದೆ. ಈ ಮಧ್ಯೆ ಲಿಂಗಾಯತ ಪಂಚಮಸಾಲಿ ಮಠಾಧೀಶರ ಹೋರಾಟದ ವಿವಾದ... ಹಾಗೇ ವಕ್ಫ್ ಆಸ್ತಿ ನೋಂದಣಿ ಕಾಯ್ದೆ, ರಾಜ್ಯ ಸಚಿವರ ಮೇಲಿನ ಆರೋಪ, ಅವರ ಪ್ರಚೋದನೆ, ಬಸವಣ್ಣನವರನ್ನು ನಿಂದಿಸಿದರೆನ್ನಲಾದ ಯತ್ನಾಳಗೌಡರ ಗದ್ದಲ... ಇತ್ಯಾದಿಗಳೆಲ್ಲವೂ, ಮಠ, ಮಂದಿರ, ಜಾತಿ, ಧಾರ್ಮಿಕ ಮುಖಂಡರನ್ನು ತಳಕು ಹಾಕಿಕೊಂಡು ಕರ್ನಾಟಕ ವಸ್ತುಶಃ ಸಂಘರ್ಷದ ಗೂಡಾಗಿಬಿಟ್ಟಿದೆ. ಮಠಾಧೀಶರು, ಸ್ವಾಮಿಗಳಿಗೇಕೆ ರಾಜಕಾರಣ? ಇಷ್ಟವಿದ್ದರೆ ಕಾವಿ ತೊರೆದು ನೇರ ರಾಜಕಾರಣಕ್ಕೆ ಇಳಿಯಿರಿ ಎಂದು ಮೂರು ವರ್ಷಗಳ ಹಿಂದಯೇ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಕರ್ನಾಟಕದಲ್ಲಿ ಸವಾಲು ರೂಪದ ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ ಮೊದಲ ನೇರ ನಿಷ್ಠುರವಾದಿ ರಾಜಕಾರಣಿ. ಸದ್ಯದ ಬೆಳವಣಿಗೆ ಏಕಾಏಕಿ ಹುಟ್ಟಿದ್ದಲ್ಲ. ಕರ್ನಾಟಕದಲ್ಲಿ ಧರ್ಮ, ಜಾತಿ, ಸಮಾಜದ ಓಲೈಕೆ ಎಲ್ಲವೂ ರಾಜಕೀಕರಣಗೊಂಡು ಹಲವು ವರ್ಷಗಳಾದವು. ಬೇರೆ ರಾಜ್ಯಗಳಿಗಿಂತ ಕರ್ನಾಟಕದ ರಾಜಕಾರಣ ವಿಭಿನ್ನ. ಆದರೆ ಅಷ್ಟೇ ಪ್ರಜ್ಞಾವಂತ, ಒಳಸುಳಿಯ, ಪ್ರೌಢ ಮತದಾರ ಎಂಬುದು ಕಾಲಕಾಲಕ್ಕೆ ಸ್ಪಷ್ಟವಾಗಿದೆ. ದೇಶದ ರಾಜಕೀಯದಲ್ಲಿ ಮಂದಿರ- ಮಂಡಲ್ ವಿವಾದ ಹುಟ್ಟಿದಾಗಲೇ ಧಾರ್ಮಿಕ ಪ್ರಮುಖರ ರಾಜಕೀಯ ಪ್ರವೇಶ ಆರಂಭವಾದದ್ದು. ರಾಮ ಮಂದಿರ ಹೋರಾಟದಲ್ಲಿ ಅನೇಕ ಮಠಾಧೀಶರು ಧುಮಕಿ ಆ ನಂತರ ಸಂಸದರು-ಶಾಸಕರಾಗಿದ್ದು. ಹಿಂದೂ-ಮುಸ್ಲಿಂ ನಡುವೆ ಕಂದಕ ತನ್ಮೂಲಕ ನಡೆದ ರಾಜಕಾರಣದ ಜೊತೆಗೆ ಜಾತಿ ವ್ಯವಸ್ಥೆ, ಓಲೈಕೆ, ಮತ ಬ್ಯಾಂಕ್‌ಗಳ ಸೃಷ್ಟಿ ಇವೆಲ್ಲ ಇನ್ನಷ್ಟು ಇಂಬು ಕೊಟ್ಟವು. ಯೋಗಿ ಮಹಾಂತ ಆದಿತ್ಯನಾಥ ಗೋರಖಪುರ ಮಠದಿಂದ ಸಂಸತ್ತು ಪ್ರವೇಶಿಸಿ, ಈಗ ಮುಖ್ಯಮಂತ್ರಿಯಾಗಿರುವುದು ದೇಶದಲ್ಲಿರುವ ಬಹುತೇಕ ಮಠಾಧೀಶರು, ಸನ್ಯಾಸಿಗಳಿಗೆ ಪ್ರೇರಣೆ ನೀಡಿರುವ ಅಂಶ. ಅತೀ ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಧುಮುಕಿದ ಉಮಾ ಭಾರತಿ ಮುಖ್ಯಮಂತ್ರಿ, ಕೇಂದ್ರದ ಜಲಸಂಪನ್ಮೂಲ ಮಂತ್ರಿಯೂ ಆದವರು. ಫೈರ್ ಬ್ರ್ಯಾಂಡ್, ಹಿಂದೂ ಧರ್ಮದ ಕಟ್ಟರ್ ಪಂಥೀಯರಾಗಿ ರಾಜಕಾರಣ ಪ್ರವೇಶಿಸಿದ ಉಮಾ ಭಾರತಿ ಅವರ ಸಾಲಿಗ ಈಗ ಸಾಧ್ವಿ ರಿತಾಂಬರ, ಸಾಕ್ಷಿ ಮಹಾರಾಜ್, ಸಾಧ್ವಿ ನಿರಂಜನಾ ಇವರೆಲ್ಲ ಸೇರಿದ್ದಾರೆ. ಇವರುಗಳೂ ಸಂಸದರು-ಮಂತ್ರಿಗಳಾದವರು. ಸಾಕಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡವರು. ಹಾಗೇ ಜಗತ್ತಿನ ಐನೂರು ಮಂದಿ ಪ್ರಭಾವಿ ಮುಸ್ಲೀಮರ ಪಟ್ಟಿಯಲ್ಲಿ ಹೆಸರು ಬಂದಿರುವ ಮೌಲಾನಾ ಬದ್ರುದ್ದೀನ ಅಸ್ಮದ್ ಅಸ್ಸಾಂನ ದುಬ್ರಿ ಕ್ಷೇತ್ರದ ಸಂಸದರೂ ಆಗಿದ್ದವರು. ಇವರೆಲ್ಲರ ಮೇಲೂ ದ್ವೇಷ ರಾಜಕಾರಣ, ಧಾರ್ಮಿಕ ಸಂಘರ್ಷ, ವಿವಿಧ ಹೋರಾಟಗಳಿಂದ ದೇಶದ ಗಮನ ಸೆಳೆದವರೇ. ಆದರೆ, ತಾವು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಸಮಾಜ ಸೇವೆ, ಸರ್ವ ಜನಾಂಗದ ಪ್ರೀತಿ, ವಿಶ್ವಾಸ, ಜನಪರ ಕಾಳಜಿಯಿಂದಾಗಿ ವಿಧಾನಸಭೆ-ಸಂಸತ್ತು ಪ್ರವೇಶಿಸಿದ್ದು ಕಡಿಮೆಯೇ. ಕರ್ನಾಟಕದಲ್ಲಿ ಧಾರ್ಮಿಕ ಪ್ರಮುಖರೊಬ್ಬರು ಪ್ರಥಮವಾಗಿ ವಿಧಾನಸಭೆ ಪ್ರವೇಶಿಸಿದ್ದು ೧೯೮೩ರಲ್ಲಿ. ಕಲಘಟಗಿ ಚರ್ಚಿನ ಫಾದರ್ ಜಾಕೋಬ್ ಪಕ್ಷೇತರರಾಗಿ ಸ್ಪರ್ಧಿಸಿದಾಗ ಜನರೇ ಅವರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದ್ದರು. ಜಾಕೋಬ್ ಆ ಭಾಗದಲ್ಲಿ ಎಲ್ಲ ಸಮುದಾಯದ ಬೆಳವಣಿಗೆ, ನೀರು, ಶಿಕ್ಷಣ, ಸಾಮಾಜಿಕ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಜನರನ್ನು ಸಂಘಟಿಸಿ, ಜನಪರ ಕಾರ್ಯ ಮಾಡಿ ಯಶಸ್ವಿಯಾದರು. ಕಲಘಟಗಿ ಕುಡಿಯುವ ನೀರಿನ ಕೆರೆಗೆ ತಾವೇ ಗುದ್ದಲಿ, ಪಿಕಾಸು ಹಿಡಿದು, ಜನ ತಂದು ಕೊಟ್ಟ ಕಾಳುಕಡಿಯಿಂದ ಅನ್ನ ಬೇಯಿಸಿ, ಸ್ಥಳದಲ್ಲೇ ಊಟ ಮಾಡಿ ಜನರೊಂದಿಗೆ ಕೆರೆ ಕಟ್ಟಿದರು. ಚುನಾವಣೆ ಧುಮುಕುತ್ತಿದ್ದಂತೇ ಕ್ರೈಸ್ತ ಧರ್ಮ ಸಂಸತ್ತು ಜಾಕೋಬ್ ಅವರನ್ನು ಫಾದರ್ ಹುದ್ದೆಯಿಂದ ತೆಗೆದು ಹಾಕಿತು. ೧೯೮೩ರಲ್ಲಿ ಗೆದ್ದು, ಅಂದಿನ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ೧೯೮೫ರ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸಲಿಲ್ಲ. ನಂತರ ಪುನಃ ಕ್ರೈಸ್ತ ಧರ್ಮ ಸಂಸತ್ತು ಅವರನ್ನು ಫಾದರ್ ಆಗಿ ಮರು ನೇಮಿಸಿತು. ಜಾಕೋಬ್ ಕೇವಲ ರಾಜಕಾರಣ ಮಾಡಲಿಲ್ಲ. ಜನಪರ ಕೆಲಸಗಳಿಗಾಗಿ ತುಡಿದು ಜನಾನುರಾಗಿಯಾಗಿದ್ದರು. ಸಾರ್ವಜನಿಕ ಬೇಕು ಬೇಡಗಳನ್ನು ಅರಿತು ಕಾರ್ಯ ನಿರ್ವಹಿಸಿದರು. ಆ ಕಾರಣಕ್ಕೇ ಅವರಿಗೆ ರಾಜ್ಯೋತ್ಸವ, ಗೌರವ ಡಾಕ್ಟರೇಟ್ ಸೇರಿ ಹಲವು ಪ್ರಶಸ್ತಿಗಳು ಬಂದವು. ಆ ನಂತರ ಮಾತೆ ಮಹಾದೇವಿ ಸೇರಿದಂತೆ ಕೆಲವರು ಚುನಾವಣಾ ಕಣಕ್ಕೆ ಧುಮುಕಿದರೂ ವಿಧಾನಸಭೆ-ಸಂಸತ್ತು ಪ್ರವೇಶಿಸಲು ಸಫಲರಾಗಲಿಲ್ಲ. ಸಿನೆಮಾ ನಟರು, ಮಠಾಧೀಶರು, ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಖ್ಯಾತಿಯಾದವರು ಚುನಾವಣಾ ಕಣಕ್ಕಿಳಿದರೂ, ಪ್ರೌಢ ಮತದಾರ ಅವರಿಗೆ ಅವರವರ ಸ್ಥಾನಮಾನ ತೋರಿಸಿದ. ಮಠಾಧೀಶರಿಗೇಕೆ ರಾಜಕೀಯ ಉಸಾಬರಿ? ಕಾವಿ ತೊರೆದು ಬನ್ನಿ ಎನ್ನುವ ಮಟ್ಟಿಗೆ ಸವಾಲು ಹಾಕುವ ಹಂತಕ್ಕೆ ಪರಿಸ್ಥಿತಿ ಬಂದಿರುವುದು ಈಗಲ್ಲ. ಮಠ ಮಂದಿರಗಳಿಗೆ ಸರ್ಕಾರದ ಆಯವ್ಯದಲ್ಲೇ ದಾನ ದತ್ತಿ ರೂಪದಲ್ಲಿ ಅನುದಾನ ನೀಡುವುದು ಎಲ್ಲಿಂದ ಆರಂಭವಾಯಿತೋ; ಜಾತಿ, ಧರ್ಮಕ್ಕೊಂದಂರತೆ ನಿಗಮಗಳನ್ನು ಸ್ಥಾಪಿಸಲಾಯಿತೋ, ಮಠಗಳ ಹಿಂದೆ ಜಾತಿ ಮತ ಬ್ಯಾಂಕ್ ಇದೆ ಎಂಬುದು ಗೊತ್ತಾಗಿ ರಾಜಕೀಯ ಪಕ್ಷಗಳು ಓಲೈಸುವ ಮಟ್ಟಿಗೆ ಇಳಿದವೋ ಆಗಿನಿಂದಲೇ ಮಠ ರಾಜಕಾರಣವೂ ಶುರುವಾಯ್ತು. ಈಗ ಅವನ್ನು ನಿಯಂತ್ರಿಸುವುದು ಯಾವ ಪಕ್ಷಕ್ಕೂ, ಯಾವ ಪ್ರಮುಖರಿಗೂ ಸಾಧ್ಯವಾಗುತ್ತಿಲ್ಲ. ಅಂತಹ ಧೈರ್ಯವೂ ಕಾಣುತ್ತಿಲ್ಲ. ಹಾಗೇ ಮಠಾಧೀಶರೂ ಅಷ್ಟೇ. ವಿಧಾನಸೌಧಕ್ಕೆ, ಮಂತ್ರಿ ಶಾಸಕರ ಮನೆಗೆ ದಿನ ಬೆಳಗಾದರೆ ಅಂಡಲೆಯುವ ಮಟ್ಟಕ್ಕೆ ಇಳಿದಿದ್ದಾರೆ. ಒಬ್ಬ ಮಂತ್ರಿ-ಮುಖ್ಯಮಂತ್ರಿಗೆ ಬೆಂಬಲಿಸುವುದು, ಅದಕ್ಕೊಂದು ಸಭೆ, ಸವಾಲು ಹಾಕುವುದು, ಬೆಂಬಲ ಘೋಷಿಸುವುದು, ಅಷ್ಟೇ ಅಲ್ಲ, ಮುಟ್ಟಿದರೆ ನೋಡಿ, ಬದಲಾಯಿಸಿದರೆ ಎಚ್ಚರಿಕೆ ಎಂದು ಧಮಕಿ ನೀಡುವುದು, ಜೊತೆಗೆ ನಾನು ನಿಮ್ಮ ವಿರುದ್ಧ ಸ್ಪರ್ಧಿಸುತ್ತೇನೆ, ನಾನು ಅವರನ್ನು ಬೆಂಬಲಿಸುತ್ತೇನೆ, ಅವರಿಗೆ ಮತ ಹಾಕಬೇಡಿ ಎಂಬಿತ್ಯಾದಿ ಬ್ಲಾö್ಯಕ್‌ಮೇಲ್ ತಂತ್ರವು ಇತ್ತೀಚಿನ ವರ್ಷಗಳಲ್ಲಿ ನಿಯಂತ್ರಿಸಲಾಗದಷ್ಟು ಬೆಳೆದಿದೆ. ಹರಿಹರದ ಮಠವೊಂದರ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮಿಗಳು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ, ನಮ್ಮ ಸಮಾಜದವರಿಗೆ ಇಷ್ಟು ಮಂತ್ರಿ ಸ್ಥಾನ ನೀಡಿ; ಇಲ್ಲವಾದರೆ ನೀವು ಮನೆಯಲ್ಲಿ ಇರಬೇಕಾಗುತ್ತದೆ' ಎಂದು ಅವರ ಸಮ್ಮುಖದಲ್ಲೇ ಎಚ್ಚರಿಕೆ ನೀಡಿದ್ದು ಜನಕ್ಕೆ ನೆನಪಿದೆ. ಕಳೆದ ವರ್ಷದ ಕೆಂಪೇಗೌಡ ಜನ್ಮದಿನೋತ್ಸವದ ಸರ್ಕಾರಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಮ್ಮುಖದಲ್ಲೇ,
ಸಿದ್ದರಾಮಯ್ಯನವರೇ ತಾವು ಮುಖ್ಯಮಂತ್ರಿಯಾಗಿ ಅನುಭವಿಸಿದ್ದು ಸಾಕು; ಡಿ.ಕೆ.ಶಿವಕುಮಾರ ಅವರಿಗೆ ಗೌರವಯುತವಾಗಿ ಸ್ಥಾನ ಬಿಟ್ಟುಕೊಡಿ' ಎಂದಿದ್ದರು.
ವಾಲ್ಮೀಕಿ ಸಮಾದ ಸ್ವಾಮಿಗಳು ತಮ್ಮ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡದಿದ್ದರೆ ಹೋರಾಟಕ್ಕೆ ಇಳಿಯುತ್ತೇವೆ ಎಂದು ಅಂದಿನ ಸಿಎಂಗೆ ಎಚ್ಚರಿಸಿದ್ದರು. ಇವಿಷ್ಟೇ ಅಲ್ಲ. ಹಲವು ಮಠಾಧೀಶರು ಜಾತಿ ಬೆಂಬಲದೊಂದಿಗೆ ರಾಜಕಾರಣವನ್ನೇ ಆರಂಭಿಸಿದರು. ಲಿಂಗಾಯತ ಪಂಚಮಸಾಲಿ ಸಂಘರ್ಷ ಹುಟ್ಟಿದೆಯಲ್ಲ, ಅದರ ಹಿಂದಿರುವುದು ರಾಜಕೀಯ ಎನ್ನುವುದು ಸತ್ಯ.
ಹಾಗೇ ಹಲವು ಮಠಾಧೀಶರಿಗೆ ತಮ್ಮ ಪ್ರಭಾವ ಮತ್ತು ಸಂಪತ್ತು ವೃದ್ಧಿಸುವ ತಂತ್ರ ಈ ರಾಜಕಾರಣ ಮತ್ತು ಹೋರಾಟವೂ ಆಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಕೆಲ ಶಾಸಕರು, ಸಂಸದರನ್ನು, ಸಂಘ ಸಂಸ್ಥೆಗಳನ್ನು ಬಿಗಿ ಮುಷ್ಟಿಯಲ್ಲಿ ಇಟ್ಟುಕೊಂಡಿರುವುದೂ ಉಂಟು.
ರಾಜಕಾರಣಿಗಳೂ ಹಾಗೇ. ತಮಗನುಕೂಲವಾಗುವ ದೃಷ್ಟಿಯಿಂದ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಪ್ರಭಾವ ಬಳಸಿಕೊಂಡು ಬೀದಿಗೆ ಇಳಿದು ವಿವಾದ ಹುಟ್ಟಿಸಿದ್ದೂ ಇದೆ. ಒಂದೇ ಧರ್ಮದ ಎರಡು ಸಮುದಾಯಗಳ ನಡುವೆ ಸಂಘರ್ಷ-ವೈಷಮ್ಯ ಹುಟ್ಟು ಹಾಕಿದ್ದೂ ಇದೆ.
ಹಾಗಂತ, ತಮ್ಮಷ್ಟಕ್ಕೆ ತಾವು ಧರ್ಮ, ಆಧ್ಯಾತ್ಮ, ಸಮಾಜದ ಏಳ್ಗೆ, ಚೌಕಟ್ಟು ಮೀರದಂತೆ ಇರುವ ಹಲವು ಸ್ವಾಮಿಗಳು, ಮಠಾಧೀಶರೂ ಇದ್ದಾರೆ. ಅರ‍್ಯಾರೂ ಇಂತಹ ಸಂಘರ್ಷಕ್ಕೆ ಇಳಿಯುತ್ತಿಲ್ಲ. ತಮ್ಮ ಕೆಲಸ ಅದಲ್ಲ ಎಂದು ಸ್ಪಷ್ಟವಾಗಿ ಹೇಳಿ ದೂರ ನಿಲ್ಲುತ್ತಾರೆ. ಯಾವುದೇ ಪಕ್ಷ-ಸಮಾಜದ ರಾಜಕಾರಣಿ ಬಂದರೂ ಒಂದೇ; ಸಾಮಾನ್ಯ ಬಂದರೂ ಒಂದೇ ಎಂಬ ಸಮಚಿತ್ತದ ಸ್ವಾಮೀಜಿಗಳೂ ನಮ್ಮ ನಡುವಿದ್ದಾರೆ.
ರಾಜಕೀಯದಲ್ಲಿ ಧರ್ಮಗುರುಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ರಾಜಗುರುಗಳಂತೆ ಇದ್ದು, ಅಭಿಪ್ರಾಯ ಕೇಳಿದರೆ ಮಾತ್ರ ಸಲಹೆ ನೀಡಬೇಕಷ್ಟೇ. ಮಠಾಧೀಶರು ರಾಜಕಾರಣದಿಂದ ದೂರ ಇರುವುದು ಒಳಿತು ಎಂಬುದು ಹಲವು ಮಠಾಧೀಶರ ಸಲಹೆ. ನೆಲ-ಜಲ-ಭಾಷೆ-ಜನಪರ ಹೋರಾಟಗಳಲ್ಲಿ ಧರ್ಮಗುರುಗಳು ತೊಡಗಿಸಿಕೊಳ್ಳಬೇಕು. ಅದಕ್ಕೆ ರಾಜಕಾರಣಿಗಳು ಬೆಂಬಲಿಸಿದರೆ ಅಡ್ಡಿಯಿಲ್ಲ. ಯಾವುದೇ ವಿಚಾರವಾಗಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಗದುಗಿನ ತೋಂಟದಾರ್ಯಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳುತ್ತಾರೆ.
ಕಪ್ಪದಗುಡ್ಡ, ಪಶ್ಚಿಮಘಟ್ಟದ ಸಂರಕ್ಷಣೆ, ಪರಿಸರ ನಾಶ ವಿರೊಧ, ಧಾರ್ಮಿಕ ಅಭಿಯಾನ, ದಾಸೋಹ, ಅಕ್ಷರ ಕ್ರಾಂತಿ, ತ್ರಿವಿಧ ದಾಸೋಹದಲ್ಲಿ ತೊಡಗಿಸಿಕೊಂಡು ಘನತೆ-ಗೌರವ-ಧಾರ್ಮಿಕ ಪಾವಿತ್ರ್ಯವನ್ನು ಕಾದುಕೊಂಡಿವೆ. ಹಾಗೇ ಬೆಳಗ್ಗೆ ಏಳುತ್ತಿದ್ದಂತೇ ವಿಧಾನಸೌಧ, ಮಂತ್ರಿ ಮಹೋದಯರ ಮನೆಗೆ ಭೇಟಿ ನೀಡುವ ಸರ್ವಸಂಗ ಪರಿತ್ಯಾಗಿ'ಗಳೂ ಇದ್ದಾರೆ. ಈಗ ವಕ್ಫ್ ಆಸ್ತಿ ವಿವಾದ ದೊಡ್ಡ ಕಂದಕ ಸೃಷ್ಟಿಯಾಗಿದೆ. ಇಲ್ಲಿರುವುದು ಮತ ಬ್ಯಾಂಕ್ ರಾಜಕೀಯ. ಇಷ್ಟಕ್ಕೂ ಇವೆಲ್ಲ ಬೇಕಿತ್ತಾ? ಇದರಲ್ಲಿ ಕಾವಿ ಧರಿಸಿರುವ ಮಠಾಧೀಶರದ್ದೂ ತಪ್ಪಿದೆ. ಈ ಹಂತಕ್ಕೆ ಮಠ ಮಂದಿರಗಳನ್ನು, ಇಗರ್ಜಿ, ಮಸೀದಿಗಳನ್ನು ರಾಜಕೀಯಕ್ಕೆ ಎಳೆದಿರುವುದರಲ್ಲೂ ಅಷ್ಟೇ ತಪ್ಪಿದೆ. ಧರ್ಮ ಮತ್ತು ರಾಜಕೀಯ ಪರಸ್ಪರ ಬೆರೆಯಲೇಬಾರದು ಎನ್ನುವ ಪ್ರಜಾಸತ್ತಾತ್ಮಕ ಮಾತು ಅಥವಾ ತತ್ವ ಪಾಲನೆಯಾಗಬೇಕು. ಆಗ ಈ ಪ್ರವೃತ್ತಿಗೆ ಕಡಿವಾಣ ಬೀಳುತ್ತದೆ. ಮಠಾಧೀಶರು ರಾಜಕಾರಣಕ್ಕೆ ಬರುವುದಾದರೆ ಕಾವಿ ಬಿಟ್ಟು ಬನ್ನಿ ಎಂದು ಹೇಳಿಸಿಕೊಳ್ಳುವ, ನೀವೇ ಮಠಾಧೀಶರಾಗಿ ಎನ್ನುವ ಮಾತು ಕೇಳಿಬರುವಂತಾಗಿರುವುದು ನಿಜಕ್ಕೂ ಅಪಹಾಸ್ಯವೇ. ಇದಕ್ಕೊಂದು ತಾರ್ಕಿಕ ಅಂತ್ಯ, ಲಕ್ಷ್ಮಣ ರೇಖೆ, ಶಿಸ್ತು-ಸಂಯಮಗಳ ಅಗತ್ಯವಿದೆ. ಮಹಾತ್ಮಾ ಗಾಂಧೀಜಿ ಹೇಳಿದ
ರಾಜಕಾರಣದಲ್ಲಿ ಧರ್ಮ ಇರಲಿ; ಧರ್ಮದಲ್ಲಿ ರಾಜಕೀಯ ಬೇಡ' ಎಂಬ ಮಾತನ್ನು ಸರಿಯಾಗಿ ಅರ್ಥೈಸಿಕೊಂಡು ಪಾಲಿಸಬೇಕಾಗಿದೆ.