ಸಮರ್ಪಣೆಯ ಪರಿಣಾಮ
ಎಲ್ಲವೂ ಭಗವಂತನದೆ ಎಂದು ಭಾವಿಸಿ ಲಾಭವೇ ಉಂಟಾಗಲಿ ಹಾನಿಯೇ ಉಂಟಾಗಲಿ ಎಲ್ಲವನ್ನು ಶಿವನಿಗೆ ಸಮರ್ಪಿಸಿ ತಾನು ನಿಶ್ಚಿಂತನಾಗಿರುವ ಶಿವಯೋಗಿಯೇ ಶರಣನೆನಿಸಿಕೊಳ್ಳುತ್ತಾನೆ. ಭಗವಂತನೂ ಸಹ ಯಾರು ಎಲ್ಲವನ್ನು ಅವನಿಗೆ ಸಮರ್ಪಿಸುವರೋ ಅವರ ಜೀವನ ನಿರ್ವಾಹದ ವ್ಯವಸ್ಥೆಯನ್ನು ಯಾವುದೋ ರೀತಿಯಾಗಿ ತಾನೇ ಮಾಡುತ್ತಾನೆ.
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯ್ಯುಪಾಸತೇ|
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||
ಗೀತೆಯ ಈ ಮಾತು ಅನನ್ಯವಾಗಿ ಉಪಾಸಿಸುವ ಭಕ್ತರ ಯೋಗಕ್ಷೇಮವನ್ನು ಭಗವಂತನು ನೋಡಿಕೊಳ್ಳುತ್ತಾನೆಂಬುದಕ್ಕೆ ಪ್ರಮಾಣ. ಭಗವಂತನಿಗೆ ಎಲ್ಲ ಸಮರ್ಪಣೆ ಮಾಡಿದರೂ ನಮ್ಮ ರಕ್ಷಣೆ ಒಂದು ವೇಳೆ ಆಗದಿದ್ದರೆ, ನಮ್ಮ ಸಮರ್ಪಣೆ ಪೂರ್ಣಮನಸ್ಸಿನಿಂದ ನಡೆದಿಲ್ಲವೆಂದು ಭಾವಿಸಿಕೊಳ್ಳಬೇಕು. ಸಮರ್ಪಣೆಯ ಭಾವದಲ್ಲಿ ಕೊರತೆಯುಂಟಾದರೆ ಮಾಡಿಕೊಂಡ ಗಂಡನೇ ಸಹಕಾರದಿಂದ ಬದುಕುವುದಿಲ್ಲ. ಇನ್ನು ದೇವರು ಹೇಗೆ ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು! ಒಮ್ಮೆ ದ್ವಾರಕೆಯಲ್ಲಿ ಕೃಷ್ಣ ಊಟಕ್ಕೆ ಕುಳಿತಿದ್ದ. ರುಕ್ಕಿಣಿ ಪ್ರೀತಿಯಿಂದ ಊಟಕ್ಕೆ ಬಡಿಸುತ್ತಿದ್ದಳು. ಊಟ ಅರ್ಧಕ್ಕೆ ಬಂದಿತ್ತು. ಕೃಷ್ಣ ಒಮ್ಮೆಲೆ ಎದ್ದು ಹೊರನಡೆದ, ನಿಲ್ಲಿ! ನಿಲ್ಲಿ! ಊಟ ಮಾಡಿ ಹೋಗಿರಿ ಎಂದು ರುಕ್ಕಿಣಿ ಅಂಗಲಾಚಿದರೂ ಕೇಳಿಯೂ ಕೇಳದವನಂತೆ ಹೋಗಿ ಬಿಟ್ಟ. ಹೋಗಿ ಹತ್ತು ನಿಮಿಷ ಕೂಡ ಕಳೆದಿರಲಿಲ್ಲ. ಮರಳಿ ಬಂದು ಊಟಕ್ಕೆ ಕುಳಿತ. ಆಗ ರುಕ್ಕಿಣಿಯು “ಅಲ್ಲ! ನಿಲ್ಲಿ ನಿಲ್ಲಿ ಎಂದರೂ ಏನೋ ಅವಸರದ ಕೆಲಸವಿದ್ದಂತೆ ಹೋಗಿ ಬಿಟ್ಟಿರಿ. ಅದೇನೋ ಸರಿ, ಅಷ್ಟೇ ಅವಸರವಾಗಿ ಮರಳಿ ಬಂದಿರುವಿರಿ. ಅಂತಹ ಕೆಲಸ ಏನಿತ್ತು ಮತ್ತು ಇಷ್ಟು ಬೇಗ ಅದು ಮುಗಿಯಿತೆ?” ಎಂದು ಕೇಳಿದಳು. ಆಗ ನಗುತ್ತ ಕೃಷ್ಣ ಹೇಳಿದ್ದು ಹೀಗೆ- “ಅರಣ್ಯದಲ್ಲಿ ಒಬ್ಬ ಭಕ್ತ ನಡೆದಿದ್ದ. ನಾಲ್ಕು ಜನ ಕಳ್ಳರು ಅವನಿಗೆ ಕಲ್ಲು ಹೊಡೆಯಲಾರಂಭಿಸಿದರು. ಆ ಭಕ್ತ ಭಯದಿಂದ ಕೃಷ್ಣ! ಕೃಷ್ಣ! ನನ್ನನ್ನು ನೀನೇ ಕಾಪಾಡು ಎಂದು ಪ್ರಾರ್ಥಿಸಿದ. ಆ ಪ್ರಾರ್ಥನೆ ಕೇಳಿ ನಾನು ಎದ್ದು ಹೋದೆ. ಹೋಗುವುದರಲ್ಲೇ ಅಲ್ಲಿಯ ದೃಶ್ಯ ಬದಲಾಗಿತ್ತು. ನೀನೇ ಕಾಪಾಡಬೇಕೆಂದು ನನ್ನನ್ನು ಪ್ರಾರ್ಥಿಸಿದ ಭಕ್ತ ನಾನು ಹೋಗುವುದರಲ್ಲಿಯೇ ತಾನೂ ಕಲ್ಲು ತೆಗೆದುಕೊಂಡು ಅವರಿಗೆ ಮರಳಿ ಹೊಡೆಯತೊಡಗಿದ್ದ. ಆಗ ನಾನು ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುತ್ತಿರುವನೆಂದ ಮೇಲೆ ಇಲ್ಲಿ ನನ್ನದೇನು ಕೆಲಸ? ಎಂದು ಬೇಗ ಮರಳಿ ಬಂದೆ'' ಎಂದನಂತೆ. ಮಾಡುವ ಭಕ್ತಿಯಲ್ಲಿ ಅನನ್ಯತೆ ಇಲ್ಲದಿದ್ದರೆ ಮತ್ತು ಅದು ಭಾವಪೂರ್ಣವಲ್ಲದಿದ್ದರೆ ಅದರಿಂದ ಪ್ರಯೋಜನವಿಲ್ಲ.
ವಸ್ತ್ರಾಪಹರಣದ ಪ್ರಸಂಗದಲ್ಲಿ ದೌಪದಿಯು ಒಂದು ಕೈಯಲ್ಲಿ ಗಟ್ಟಿಯಾಗಿ ಸೀರೆಯನ್ನು ಹಿಡಿದು ಮತ್ತೊಂದು ಕೈಯನ್ನು ಮೇಲೆ ಮಾಡಿ ಅಣ್ಣಾ ಕೃಷ್ಣಾ! ಕಾಪಾಡು ಎಂದು ಪ್ರಾರ್ಥಿಸಿದಾಗ ಕೃಷ್ಣ ದ್ವಾರಕೆಯಲ್ಲಿ ರುಕ್ಕಿಣಿಯ ಪಕ್ಕದಲ್ಲಿ ನಗುತ್ತ ಸುಮ್ಮನೇ ಕುಳಿತಿದ್ದ. ರುಕ್ಕಿಣಿಯು ದೌಪದಿ ಕಷ್ಟದಲ್ಲಿರುವಳು ಕಾಪಾಡಬಾರದೆ? ಎಂದು ಕೃಷ್ಣನನ್ನು ಎಚ್ಚರಿಸಿದಳು. ಕೃಷ್ಣನು “ನೋಡು ರುಕ್ಕಿಣಿ! ಅವಳು ಇನ್ನೂ ಒಂದು ಕೈಯಿಂದ ಸೀರೆ ಹಿಡಿದುಕೊಂಡಿರುವಳು. ಒಂದೇ ಕೈಯಿಂದ ನನ್ನನ್ನು ಕರೆಯುತ್ತಿರುವಳು. ಅಂದರೆ ನಾನು ಬಂದು ಕಾಪಾಡುವನೆಂಬ ಪೂರ್ಣ ನಂಬಿಗೆ ಇಲ್ಲ. ಎಲ್ಲ ಭಾರವನ್ನು ಇನ್ನೂ ನನಗೆ ಒಪ್ಪಿಸಿಲ್ಲ. ನಾನು ಯಾವಾಗಲೂ ಅರ್ಧಭಾರ ಹಿಡಿಯುವುದಿಲ್ಲ. ಹೊತ್ತರೆ ಪೂರ್ಣವೇ ಹೊರುತ್ತೇನೆ. ಇರದಿದ್ದರೆ ಇಲ್ಲ. ಅವಳು ಪೂರ್ಣ ನನ್ನ ಮೇಲೆ ಬಿಟ್ಟಾಗ ನಾನು ಹೋಗುವೆ” ಎಂದನಂತೆ. ಮುಂದೆ ದೌಪದಿಯು ಸೀರೆಯನ್ನು ಕೈಬಿಟ್ಟು ಎರಡೂ ಕೈಗಳಿಂದ ಕೃಷ್ಣನನ್ನು ಕರೆದಳು. ಕೃಷ್ಣ ಅವಳನ್ನು ಕಾಪಾಡಿದ ಆ ಮಾತು ಬೇರೆ. ಒಟ್ಟಿನಲ್ಲಿ ಪರಿಪೂರ್ಣ ಭಾವದಿಂದ ಎಲ್ಲವನ್ನು ಸಮರ್ಪಿಸಿದ ಭಕ್ತನನ್ನು ಭಗವಂತ ಕೈಬಿಡುವುದಿಲ್ಲ.