For the best experience, open
https://m.samyuktakarnataka.in
on your mobile browser.

ಸಮಾಜ ಸೇವೆ ತುಡಿತ ಟಿಸಿಲೊಡೆದಾಗ…

02:32 AM Nov 11, 2024 IST | Samyukta Karnataka
ಸಮಾಜ ಸೇವೆ ತುಡಿತ ಟಿಸಿಲೊಡೆದಾಗ…

ಭಾರತದ ರತ್ನ ರತನ್ ಟಾಟಾ ಕಾಲವಾದ ಮೇಲೆ ರತನ್ ಟಾಟಾ ಬಗ್ಗೆ ಬರೆಯದೆ ಇರುವ ಪತ್ರಿಕೆಗಳಿಲ್ಲ, ಅವರ ಬಗ್ಗೆ ಮಾತನಾಡದ ಜನರಿಲ್ಲ ಅವರ ಜೀವನವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಹಿಡಿದಿಡಲು ಪ್ರಯತ್ನಿಸದ ಟಿವಿ ಚಾನೆಲ್‌ಗಳಿಲ್ಲ. ಆದರೆ, ಹೀಗೆ ಅವರ ಬಗ್ಗೆ ವರದಿ ಮಾಡುವಾಗ ಅವರ ವಿಷಯಗಳನ್ನು ಹೇಳುವಾಗ, ಕೇಳುವಾಗ ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಚರ್ಚೆ ಮಾಡುವಾಗ ಹೆಚ್ಚು ಚರ್ಚೆ ಆಗಿದ್ದು, ಅವರ ಸಿಂಪ್ಲಿಸಿಟಿ ಅಂದರೆ ಸರಳತೆ ಹಾಗೂ ಅವರ ಸೇವಾ ಮನೋಭಾವ. ಅಂದರೆ ಅವರ ಸಂಪತ್ತು ಅವರ ಚರ್ಚೆಯ ವಿಷಯವಾಗಲಿಲ್ಲ ಅಥವಾ ಅವರ ಗುಣಗಾನಕ್ಕೆ ಅವರ ಸಂಪತ್ತು ಎಂದು ವಸ್ತುವಾಗಲೇ ಇಲ್ಲ. ಅದರ ಅರ್ಥ ಇಷ್ಟೇ; ಇತಿಹಾಸ ಶ್ರೀಮಂತರ ಧನ ಸಂಪತ್ತನ್ನು ಮೆಲಕು ಹಾಕುವುದಿಲ್ಲ. ಆದರೆ ವ್ಯಕ್ತಿ ಶ್ರೀಮಂತನಾಗಿದ್ದು ಆತನಲ್ಲಿ ಸಮಾಜ ಸೇವೆಯ ತುಡಿತ ಟಿಸಿಲೊಡೆದಿದ್ದರೆ ಆತನನ್ನು ನೆನಪಿಸಿಕೊಳ್ಳುತ್ತದೆ. ಆತ ಸೃಷ್ಟಿಸಿದ ಪ್ರಭಾವವನ್ನು ನೆನಪಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ರತನ್ ಟಾಟಾ ನಮಗೆಲ್ಲರಿಗೆ ಅಚ್ಚು ಮೆಚ್ಚಿನ ಭಾರತದ ರತ್ನದಂತೆ ಭಾಸವಾಗುತ್ತಾರೆ. ಎಲ್ಲೊ ಕೇಳಿದ ನೆನಪು ಇದು ನೈಜ್ಯ ಘಟನೆಯೋ ಅಥವಾ ಪಾರ್ಸಿ ಅಥವಾ ಝೋರಾಷ್ಟ್ರೀಯನ್‌ರ ಬಗ್ಗೆ ಹೇಳುವಾಗ ಅವರ ಪ್ರಾಮುಖ್ಯತೆಯನ್ನು ತೋರ್ಪಡಿಸಲು ಬಳಕೆಯಲ್ಲಿರುವ ಅಂಶವೋ ತಿಳಿಯದು. ಒಮ್ಮೆ ಪಾರ್ಸಿ ಪಂಗಡದ ಜನರು ಭಾರತದಲ್ಲಿ ನಿಮ್ಮ ನಾಡಿನಲ್ಲಿರಲು ಒಂದಿಷ್ಟು ಜಾಗ ಬೇಕು ಎಂದು ಒಬ್ಬ ರಾಜನನ್ನು ಕೇಳಿದರಂತೆ, ರಾಜ ಒಂದು ಲೋಟದಲ್ಲಿ ತುಂಬಿದ ಹಾಲನ್ನು ಅವರಿಗೆ ಕೊಟ್ಟು, ಈ ಹಾಲಿನಂತೆ ಎಲ್ಲ ಸ್ಥಳವೂ ತುಂಬಿ ಹೋಗಿದೆ ಎಂದರಂತೆ. ಪಾರ್ಸಿಗಳು ಆ ಹಾಲಿನಲ್ಲಿ ಕೇಸರಿಯನ್ನು ಹಾಕಿ ರಾಜನಿಗೆ ಕೊಟ್ಟು, ಈ ಹಾಲಿನಲ್ಲಿರುವ ಕೇಸರಿಯಂತೆ ನಾವು ನಿಮ್ಮೊಡನೆ ಇರುತ್ತೇವೆ, ಆದ್ದರಿಂದ ನಮಗೆ ಜಾಗವಿಲ್ಲ ಎನ್ನದಿರಿ ಎಂದು ಕೇಳಿಕೊಂಡರಂತೆ. ಅಂದು ಆ ವಾಗ್ದಾನ ಮಾಡಿದ ಮಹಾಶಯರ ಆತ್ಮ ಬಹುಶಃ ಇಂದು ನೆಮ್ಮದಿಯಿಂದ ಮಗ್ಗುಲು ಬದಲಿಸಿ ಮಲಗಿರಬೇಕು, ಏಕೆಂದರೆ ರತನ್ ಟಾಟಾ ಕಟ್ಟಿ ಕೊಟ್ಟು ಬಿಟ್ಟು ಹೋದ ಸಾಮ್ರಾಜ್ಯವೇ ಸಾಕು ಆ ವಾಗ್ದಾನದ ನಿದರ್ಶನಕ್ಕೆ.
ಜೀವನದ ಪಯಣದಲ್ಲಿ ಕಷ್ಟ ಕಾರ್ಪಣ್ಯವೆಂಬ ಎತ್ತರಕ್ಕೆ ಏರಿದ ವ್ಯಕ್ತಿಗಳಲ್ಲಿ ಸಮಾಜ ಸೇವೆಯ ತುಡಿತ ಟಿಸಿಲೊಡೆದ ಅನೇಕ ಉದಾಹರಣೆಗಳಿವೆ. ಅಂತಹ ಉದಾಹರಣೆಗಳ ಸಾಲಿನಲ್ಲಿ ಅಗ್ರಮಾನ್ಯರಾಗಿ ನಿಲ್ಲುವವರು ಶಿವ ನಾಡರ್. ಎಚ್‌ಸಿಎಲ್ ಟೆಕ್ನಾಲಜೀಸ್‌ನ ಸಂಸ್ಥಾಪಕರಾದ ಶಿವ ನಾಡಾರ್ ಹಾಗೂ ಅವರ ಕುಟುಂಬ ಭಾರತದಲ್ಲಿ ಅತ್ಯಂತ ಹೆಚ್ಚು ದೇಣಿಗೆ ನೀಡುವವರ ಸಾಲಿನಲ್ಲಿ ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಅತೀ ಹೆಚ್ಚು ದೇಣಿಗೆಯನ್ನು ನೀಡಿದ ವ್ಯಕ್ತಿಗಳಲ್ಲಿ ಶಿವ್ ನಾಡಾರ್ ಪ್ರಪ್ರಥಮ ಸ್ಥಾನವನ್ನು ಮತ್ತೊಮ್ಮೆ ಭದ್ರ ಪಡಿಸಿಕೊಂಡಿದ್ದಾರೆ. ೭೯ ವರ್ಷ ವಯಸ್ಸಿನ ಟೆಕ್ ಮ್ಯಾಗ್ನೇಟ್ ಶಿವ್ ನಾಡಾರ್ ೨೦೨೪ ರ ಆರ್ಥಿಕ ವರ್ಷದಲ್ಲಿ ೨,೧೫೩ ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಅಂದರೆ ಪ್ರತಿ ದಿನ ೫.೯ ಕೋಟಿ ರೂಪಾಯಿಗಳನ್ನು ಶಿಕ್ಷಣ ಮತ್ತು ತಂತ್ರಜ್ಞಾನ ಆಧಾರಿತ ಕಲಿಕಾ ವಿಭಾಗದ ಉತ್ತೇಜನಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಚೆನ್ನೈನ ಮೂಲೈಪೋಜಿಯಲ್ಲಿ ಜನಿಸಿದ ಶಿವ ನಾಡರ್, ಚಿಕ್ಕವರಿದ್ದಾಗಲೇ ಮ್ಯಾಗಸ್' ಎಂದು ಕರೆಸಿಕೊಂಡಿದ್ದರು. ಪರ್ಷಿಯನ್ ಭಾಷೆಯಲ್ಲಿ ಮ್ಯಾಗಸ್ ಎಂದರೆ ವಿಝರ್ಡ್ ಅಂದರೆ ಪರಿಣಿತ ಬುದ್ಧಿವಂತ ಎಂದರ್ಥ. ಕ್ಯಾಲ್ಕುಲೇಟರ್‌ಗಳು ಮತ್ತು ಮೈಕ್ರೊಪ್ರೊಸೆಸರ್‌ಗಳನ್ನು ತಯಾರಿಸಲು ೧೯೭೬ರಲ್ಲಿ ಇಂದಿನ ಹಲವಾರು ಸ್ಟಾರ್ಟ್ ಅಪ್ ಕಂಪೆನಿಗಳಂತೆ ಗ್ಯಾರೇಜ್‌ನಲ್ಲಿಯೇ ಕಂಪನಿಯನ್ನು ಸ್ಥಾಪಿಸಿದ್ದರು. ೧೯೭೬ರ ಸಮಯದಲ್ಲಿಯೇ ಎಮರ್ಜೆನ್ಸಿ ಕೂಡ ಲಾಗು ಆಗಿತ್ತೆಂಬುದು ಇಲ್ಲಿ ಗಮನಿಸಬೇಕಾದ ಸಮಯ. ಅಂತಹ ಸಮಯದಲ್ಲೂ ತನ್ನ ಕನಸನ್ನು ನನಸಾಗುವ ಸಂಕಲ್ಪ ತೊಟ್ಟು ಮುಂದಡಿ ಇಟ್ಟಿದ್ದ ಶಿವ ನಾಡರ್ ಧೈರ್ಯ ನಿಜಕ್ಕೂ ಮೆಚ್ಚಲೇಬೇಕು. ಪ್ರತಿಯೊಬ್ಬ ಸಾಧಕನಲ್ಲಿ ಯಾವುದೊ ಒಂದು ಅಪರೂಪದ ಅಂಶ ಇರುತ್ತದೆ, ಅದು ಎಲ್ಲರಲ್ಲೂ ಸಾಮಾನ್ಯವಾಗಿ ಇರುವುದಿಲ್ಲ. ಹಾಗಾಗಿಯೇ ಸಾಧಕರು ಆ ಸಾಧನೆ ಮಾಡುವುದು. ಶಿವ್ ನಾಡರ್ ಅವರಲ್ಲಿದ್ದ ಅಪರೂಪದ ಅಂಶವೆಂದರೆ ಪರಿಕಲ್ಪನೆ ಮತ್ತು ಸಂವಹನೆ. ಶಿವ ನಾಡಾರ್ ತಮ್ಮ ಅದ್ಭುತವಾದ ಸಂವಹನದ ಕಲೆಯಿಂದ ತಮ್ಮ ಪರಿಕಲ್ಪನೆಗಳನ್ನು ನೈಜ್ಯವಾಗಿರುವಂತೆ ತೋರ್ಪಡಿಸಿ ಮಾರುಕಟ್ಟೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದರು. ಅದು ೧೯೭೪ ರ ಸಮಯ ಡೆಲ್ಲಿ ಕ್ಲಾತ್ ಮಿಲ್‌ನಲ್ಲಿ ಶಿವ ನಾಡಾರ್ ಉದ್ಯೋಗಿಯಾಗಿದ್ದರು. ಆಗ ಅಲ್ಲಿ ಕಂಪನಿ ಹೊಸದೊಂದು ಕಂಪ್ಯೂಟರ್ ಕೊಂಡುಕೊಂಡಿತ್ತು. ಎಲ್ಲರೂ ಈ ಕಂಪ್ಯೂಟರ್ ನಮ್ಮ ಕೆಲಸವನ್ನು ಕಸಿದೀತು ಎಂದು ಚಿಂತೆಯಲ್ಲಿದ್ದಾಗ ಶಿವ ನಾಡಾರ್ ಯೋಚನೆಯೇ ಬೇರೆಯದಾಗಿತ್ತು. ಈ ಕಂಪ್ಯೂಟರ್ ಎಂಬ ಪೆಟ್ಟಿಗೆ ನಮ್ಮ ಕೆಲಸವನ್ನು ಕಸಿದೀತು ಎಂದು ಚಿಂತೆ ಮಾಡುವುದಕ್ಕಿಂತ ಇಂತಹ ಕಂಪ್ಯೂಟರ್ ಅನ್ನು ನಾವೇ ತಯಾರಿಸಿದರೆ ಹೇಗೆ ಎಂಬುದು ಶಿವ ನಾಡಾರ್ ಯೋಚನೆಯಾಗಿತ್ತು. ಹಾಗೆ ಯೋಚಿಸಿದ ಶಿವ ನಾಡಾರ್ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ, ಕಾರಣ ಅದುಗರೀಬಿ ಹಟಾವೋ ರೊಜ್ಗಾರ್ ಬಡಾವೋ…' ಎಂಬ ಘೋಷ ವಾಕ್ಯ ಮೊಳಗಿದ ಸಮಯ ಆದರೆ ಲಕ್ಷ್ಯ ಅಚಲವಾಗಿತ್ತು, ಇಟ್ಟ ಹೆಜ್ಜೆ ದಿಟ್ಟವಾಗಿತ್ತು. ಶಿವ ನಾಡಾರ್ ಅದಾಗಲೇ ಕೆಲಸ ಬಿಟ್ಟಾಗಿತ್ತು ಆದರೆ ಕಂಪ್ಯೂಟರ್ ತಯಾರಿಸುವ ಯೋಜನೆಯನ್ನು ಕೇಳುತ್ತಿದ್ದಂತೆ ಯಾವ ಹಣಕಾಸು ಸಂಸ್ಥೆಗಳು ಸಾಲ ಕೊಡಲು ತಯಾರಿರಲಿಲ್ಲ. ಎಲ್ಲೆಡೆ `ನಾಳೆ ಬನ್ನಿ…' ಎಂಬ ಫಲಕ. ಆದರೆ ಶಿವ ನಾಡಾರ್ ಎದೆಗುಂದಲಿಲ್ಲ. ಆಗ ಅವರು ಕದ ತಟ್ಟಿದ್ದು ಉತ್ತರ ಪ್ರದೇಶದ ಸರ್ಕಾರ. ಉತ್ತರ ಪ್ರದೇಶ ಸರ್ಕಾರಕ್ಕೆ ಕಂಪ್ಯೂಟರ್ ತಯಾರಿಸುವ ಪರಿಕಲ್ಪನೆಯನ್ನು ಸವಿಸ್ತಾರವಾಗಿ ವಿವರಿಸಿ ೧೯೭೮ ರಲ್ಲಿ ಯುಪಿ ಸರ್ಕಾರದಿಂದ ಇಪ್ಪತ್ತು ಲಕ್ಷ ರೂಪಾಯಿಗಳ ಸಾಲ ಪಡೆದುಕೊಂಡು ಯುಪಿ ಸರ್ಕಾರವನ್ನು ಶೇ. ೨೬ರ ಪಾಲುದಾರನಾಗಿಸಿತು. ಆದರೆ, ಇನ್ನಷ್ಟು ಹಣದ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು ಹೋದಲೆಲ್ಲಾ ಮತ್ತದೇ ನಾಳೆ ಬಾ ಫಲಕ ಅಲ್ಲದೆ ನೀವೇನು ಕಂಪ್ಯೂಟರ್ ತಯಾರಿಸಲು ಐಐಟಿ ಯ ಸಂಜಾತರೆ ಎಂದು ಪ್ರಶ್ನಿಸುತ್ತಿದ್ದರು. ಬೇರೆಯವರಾಗಿದ್ದರೆ ಈ ಪೆಟ್ಟಿಗೆ ಆಟ ನಿಲ್ಲಿಸಿ ಹೊರಟು ಹೋಗುತಿದ್ದರು ಆದರೆ, ಶಿವ ನಾಡಾರ್ ತನ್ನ ಸ್ನೇಹಿತ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅರ್ಜುನ್ ಮಲ್ಹೋತ್ರ ಅವರನ್ನು ಕೋ ಫೌಂಡರ್ (ಪಾಲುದಾರ) ಮಾಡಿಕೊಂಡು ಇನ್ನಷ್ಟು ಐಐಟಿಯವರನ್ನು ಜೊತೆಗೂಡಿಸಿ ಐಐಟಿ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಇಲ್ಲದೆ ನೀವೇನು ಮಾಡೀರಿ? ಎಂದು ಪ್ರಶ್ನಿಸಿ ಮುಂದಿನ ದುನಿಯಾ ಏನಿದ್ದರೂ ಕಂಪ್ಯೂಟರ್‌ಗಳ ದುನಿಯಾ ನಿಮ್ಮಲ್ಲಿ ಕಂಪ್ಯೂಟರ್ ಲ್ಯಾಬ್‌ಗಳೇ ಇಲ್ಲದಿದ್ದರೆ ಹೇಗೆ ಎಂದು ಹೇಳಿ ಐಐಟಿಗಳಿಗೆ ಕಂಪ್ಯೂಟರ್‌ಗಳನ್ನೂ ಪೂರೈಸುವ ಆದೇಶವನ್ನು ಪಡೆದುಕೊಂಡಿತು. ಶಿವ ನಾಡಾರ್ ಅವರ ದಿಟ್ಟ ಹೆಜ್ಜೆಯಿಂದಾಗಿ ಐಐಟಿಯಲ್ಲಿ ೧೯೮೦ ರಲ್ಲಿ ಕಂಪ್ಯೂಟರ್ ಸೈನ್ಸ್ ನ ಮೊಟ್ಟ ಮೊದಲ ವಿಭಾಗ ಪ್ರಾರಂಭವಾಗಿತ್ತು. ಐಐಟಿಯ ಕಥೆಯನ್ನು ಬೇರೆಡೆ ಹೇಳಿ ಅಲ್ಲೂ ಕಂಪ್ಯೂಟರ್‌ಗಳನ್ನೂ ಪೂರೈಸುವ ಆದೇಶವನ್ನು ಪಡೆದುಕೊಂಡಿದ್ದರು. ಆದರೆ ಅಷ್ಟು ಕಂಪ್ಯೂಟರ್ ತಯಾರಿಸಲು ಬೇಕಾದ ಮಾನವ ಸಂಪನ್ಮೂಲ ಪೂರೈಸಿಕೊಳ್ಳುವ ಸವಾಲು ಶಿವ ನಾಡಾರ್ ಅವರನ್ನು ಕಾಡಿತ್ತು. ಆಗ ಸಾಥ್ ಕೊಟ್ಟಿದ್ದು ಅಂದಿನ ರಾಜಕೀಯ ಸ್ಥಿತಿಗತಿ ಹಾಗೂ ಮಾರ್ಕೆಟ್ ಡೈನಾಮಿಕ್ಸ್. ಅಂದರೆ, ಅದು ಎಮರ್ಜೆನ್ಸಿ ಸಮಯ. ವಿದೇಶಿ ಕಂಪನಿಗಳಿಗೆ ಜನ ಧಿಕ್ಕಾರ ಕೂಗುತ್ತಿದ್ದರು. ಆ ಸಂದರ್ಭದಲ್ಲಿಯೇ ಐಬಿಎಂ ಎಂಬ ಕಂಪನಿ ಆಗ ತಾನೇ ಭಾರತದಲ್ಲಿ ತನ್ನ ಬಾಹುಳ್ಯ ವಿಸ್ತರಿಸಲು ಅಂಬೆಗಾಲಿಟ್ಟಿತ್ತು. ಸಾವಿರಾರು ಎಂಜಿನಿಯರ್ ಗಳಿಗೆ ತರಬೇತಿ ಕೊಟ್ಟಿತ್ತು. ಆದರೆ, ರಾಜಕೀಯ ಸ್ಥಿತಿಗತಿಗಳು ಟೆಕ್ ಜಯಂಟ್ ಐಬಿಎಂ ಕಂಪನಿ ಬಾಗಿಲು ಮುಚ್ಚುವಂತೆ ಮಾಡಿತ್ತು. ಇದೆಲ್ಲವನ್ನು ಶಿವ ನಾಡಾರ್ ಗಮನಿಸುತ್ತಲೇ ಇದ್ದರು. ಹಾಗೆ ತರಬೇತಿ ಪಡೆದು ಕೆಲಸವಿಲ್ಲದೇ ಖಾಲಿ ಕುಳಿತ್ತಿದ್ದ ಎಂಜಿನಿಯರ್‌ಗಳನ್ನೂ ತನ್ನ ಸಂಸ್ಥೆಗೆ ಬರಮಾಡಿಕೊಂಡಿದ್ದರು ನಾಡಾರ್. ಹೀಗೆ ಐಬಿಎಂ ನ ಎಕ್ಸಿಸ್ಟ್ ನಾಡರ್ ಅವರಿಗೆ ಬೆನಿಫಿಟ್ ಆಗಿತ್ತು.
ಇಂದು ಶಿವ ನಾಡಾರ್ ಅವರ ಪ್ರಸ್ತುತ ನಿವ್ವಳ ಮೌಲ್ಯ ಸುಮಾರು ೨೯ ಬಿಲಿಯನ್‌ಗಳಷ್ಟಿದೆ. ೨೨ ರ ವರ್ಷದವರೆಗೆ ಆಂಗ್ಲ ಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿದ್ದ ಶಿವ ನಾಡಾರ್ ಅವರ ಸಂಸ್ಥೆ ಇಂದು ಅದೇ ಭಾಷಯನ್ನಾಡುವ ಹತ್ತು ಹಲವು ದೇಶಗಳಲ್ಲಿ ತಮ್ಮ ಸಂಸ್ಥೆಯ ಮೂಲಕ ಹಲವಾರು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಒಟ್ಟಿನಲ್ಲಿ ಶಿವ ನಾಡಾರ್ ತಾನು ಕಂಡ ಕನಸನ್ನು ನನಸಾಗಿಸಿದ್ದಾರೆ.