ಸಮ್ಮೇಳನ ತ್ರಿವೇಣಿ ಸಂಗಮ
ಬೆಂಗಳೂರು: ರಾಜ್ಯದ ಎಲ್ಲ ಬ್ರಾಹ್ಮಣ ಪಂಗಡಗಳಿಗೆ ಈ ಕಾರ್ಯಕ್ರಮ ತ್ರಿವೇಣಿ ಸಂಗಮ ಇದ್ದಂತೆ. ಎಲ್ಲ ಬ್ರಾಹ್ಮಣ ಪಂಗಡಗಳು ಸಂಘಟನೆಗೊಂಡು ಇಲ್ಲಿ ಸೇರಿವೆ. ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು.
ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚಿಸಿದ ಅವರು ಮೂವರು ಆಚಾರ್ಯರ ವಿಚಾರಧಾರೆಗಳನ್ನು ಮಹಾಸಭಾ ಮೈಗೂಡಿಸಿಕೊಂಡಿದೆ. ಬ್ರಾಹ್ಮಣರಿಗೆ ಸಮಾಜದಲ್ಲಿ ದೊಡ್ಡ ಹೊಣೆಗಾರಿಕೆ ಇದೆ. ಇತರ ಎಲ್ಲ ವರ್ಣದವರಿಗೆ ಬ್ರಾಹ್ಮಣರು ಗುರುಗಳಾಗಿದ್ದಾರೆ.
ಬ್ರಾಹ್ಮಣರು ಅಜ್ಞಾನರಿಗೆ ಜ್ಞಾನವನ್ನು ನೀಡಿ ಅವರನ್ನು ತಮ್ಮ ಜತೆ ಕರೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಬ್ರಾಹ್ಮಣರನ್ನು ಅಜ್ಞಾನ ನಿವಾರಕ ಎನ್ನುತ್ತಿದ್ದಾರೆ. ಬ್ರಾಹ್ಮಣರು ತಾವು ಜ್ಞಾನವನ್ನು ಅನುಸರಿಸುವುದರ ಜತೆಗೆ ಇತರರು ಇದೇ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು. ಅಲ್ಲದೆ ಎಲ್ಲ ವರ್ಣಗಳ ಜನರನ್ನು ತಮ್ಮ ಜತೆ ಕರೆದುಕೊಂಡು ಹೋಗಬೇಕು. ಹೀಗಾಗಿ ಬ್ರಾಹ್ಮಣರಿಗೆ ಹಾದಿ ತೋರಿಸುವ ಗುರುಗಳು ಎನ್ನುತ್ತಾರೆ. ಬ್ರಾಹ್ಮಣ ತಾನು ವೃತವನ್ನು ಆಚರಿಸಿ ಇತರರನ್ನು ಅದರಕಡೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಇದೆ ಎಂದು ಅವರು ನುಡಿದರು.
ವೈದಿಕರಿಗೆ ವಿವಾಹ ಸಮಸ್ಯೆ
ಪ್ರಸ್ತುತ ವೈದಿಕರಿಗೆ ವಿವಾಹ ಸಮಸ್ಯೆ ಹಾಗೂ ಅಂತರ್ಜಾತಿ ವಿವಾಹ ಸಮಸ್ಯೆ ಎದುರಾಗಿದೆ. ಇದನ್ನು ನಿವಾರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಳು ಹೇಳಿದರು.