ಸರಕಾರಿ ಯೋಜನೆ: ಲೈಂಗಿಕ ಅಲ್ಪಸಂಖ್ಯಾತರಿಗೆ (ಟ್ರಾನ್ಸ್‌ಜಂಡರ್) ಷರತ್ತು ಬೇಡ
ಬೆಂಗಳೂರು: ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಹಾಕುವ ಸಂದರ್ಭದಲ್ಲೂ ತೃತೀಯ ಲಿಂಗದವರಿಗೆ ಸಮಾನ ಅವಕಾಶ ಕಲ್ಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು "ಇತ್ತೀಚೆಗೆ ಸರ್ಕಾರದ ಹಲವು ಯೋಜನೆಗಳಿಗೆ ತೃತೀಯ ಲಿಂಗೀಯರು ಅರ್ಜಿ ಹಾಕಲು ಅರ್ಹತೆ ಇದ್ದರೂ ಸಹ ಸರ್ಕಾರದ ಅಂತರ್ಜಾಲದಲ್ಲಿ ಇದಕ್ಕೆ ಅವಕಾಶ ಇಲ್ಲದೆ ಇರುವುದು ಇವರಿಗೆ ತೀವ್ರ ಹಿನ್ನಡೆಯಾಗಿದೆ.
ಅಂತರ್ಜಾಲದಲ್ಲಿ ಅರ್ಜಿ ಹಾಕಿದಾಗ: ಗಂಡು/ಹೆಣ್ಣು ಎರಡೇ ಆಯ್ಕೆಗಳಿದ್ದು, ಅವರು ಇವೆರಡಕ್ಕೂ ಸೇರದ ಕಾರಣ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಸರ್ಕಾರದ ಬೇರೆ ಯೋಜನೆಗಳಿಗೂ ಸಹ ಇವರಿಗೆ ಈ ರೀತಿಯಾದ ಸಮಸ್ಯೆ ಉದ್ಭವಿಸುತ್ತಿದೆ. ಸಮಾಜವು ಹಾಗೂ ಸ್ವಂತ ಕುಟುಂಬವು ಇವರನ್ನು ಕೀಳಾಗಿ ಕಾಣುವ ಹಾಗೂ ಬಹಿಷ್ಕಾರ ಮಾಡುವುದರಿಂದ ಬಹುತೇಕ ತೃತೀಯ ಲಿಂಗಿಗಳು ತಮ್ಮ ಕುಟುಂಬವನ್ನು ಬಿಟ್ಟು ಪ್ರತ್ಯೇಕವಾಗಿದ್ದಾರೆ, ಕುಟುಂಬದ ಜೊತೆ ಇಲ್ಲ ಎಂಬ ತಾಂತ್ರಿಕ ನೆಪವನ್ನಿಟ್ಟು, ಇವರಿಗೆ ಪಡಿತರ ಚೀಟಿ ಕೂಡ ನಿರಾಕರಿಸಲಾಗುತ್ತಿದೆ. ಪಡಿತರ ಚೀಟಿಗೆ ಅರ್ಜಿ ಹಾಕುವ ಮಂಗಳಮುಖಿಯರು ತಮ್ಮ ಕುಟುಂಬದ ಜೊತೆಗಿಲ್ಲ ಎಂಬ ಕಾರಣಕ್ಕೆ, ಅವರ ಅರ್ಜಿಯನ್ನು ಸ್ವೀಕೃತಿ ಮಾಡದೆ ಅಥವಾ ಅದನ್ನು ತಿರಸ್ಕರಿಸುತ್ತಿರುವುದು ಇವರಿಗೆ ಮಾಡುತ್ತಿರುವ ಅನ್ಯಾಯ, ತೃತೀಯ ಲಿಂಗಿಗಳಿಗೆ ಸರ್ಕಾರ ಎಲ್ಲ ರೀತಿಯಾದ ಬೆಂಬಲ ನೀಡುವ ಅವಶ್ಯಕತೆಯಿದೆ, ಇಂತ ಸನ್ನಿವೇಶದಲ್ಲಿ ಅವರಿಗೆ ಬದುಕಲು ಬೇಕಾದ ಪಡಿತರ ಚೀಟಿಯನ್ನು ಕೊಡಲು ಪೂರಕ ವ್ಯವಸ್ಥೆಯಿಲ್ಲದೆ ಅವರು ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವುದು ಖೇದನೀಯ, ಇವರಿಗೆ ಪಡಿತರ ಚೀಟಿ ನೀಡದೆ ಇರುವುದು ಆರ್ಟಿಕಲ್ 21 ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆರ್ಟಿಕಲ್ 21 ರ ಅಡಿ ಯಾವುದೇ ವ್ಯಕ್ತಿ ವಯುಕ್ತಿಕ ಸ್ವಾತಂತ್ರ್ಯ (ಪರ್ಸನಲ್ ಲಿಬರ್ಟಿ) ನಿಂದ ವಂಚಿತರಾಗಬಾರದೆಂದು ಹೇಳುತ್ತದೆ, ಪಡಿತರ ಚೀಟಿಗೆ ಅರ್ಜಿ ಹಾಕುವ ಸಂದರ್ಭದಲ್ಲಿ ಮಂಗಳಮುಖಿಯರಿಗೂ ಇನ್ಪುಟ್ ಆಯ್ಕೆಯನ್ನು ನೀಡಬೇಕು. ಇದಲ್ಲದೆ, ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಹಾಕುವ ಸಂದರ್ಭದಲ್ಲೂ ಸಹ ಅವರಿಗೆ ಸಮಾನ ಅವಕಾಶ ಕಲ್ಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬಿ.ಎಂ.ಟಿ.ಸಿ./ಕೆ.ಎಸ್.ಆರ್.ಟಿ.ಸಿ ಸೇರಿದಂತೆ ಸರಕಾರದ ಎಲ್ಲ ಕಲ್ಯಾಣ ಯೋಜನೆಗಳಿಗೆ ಅರ್ಜಿ ಹಾಕಲು ಬೇಕಾದ ತಂತ್ರಜ್ಞಾನದ ಮಾರ್ಪಾಡು/ಬದಲಾವಣೆಯನ್ನು ಮಾಡಿ ಮಂಗಳಮುಖಿಯರೂ ಸಹ ಅರ್ಜಿ ಹಾಕುವಂತೆ ಸೌಲಭ್ಯವನ್ನು ತುರ್ತಾಗಿ ಸರ್ಕಾರ ಮಾಡಬೇಕು. ಸರ್ಕಾರದ ಯೋಜನೆಗಳಿಗೆ ಅರ್ಜಿ ಹಾಕಲು ಮಂಗಳಮುಖಿಯರು ಕಚೇರಿಯಿಂದ ಕಚೇರಿಗೆ ಓಡಾಡುವ ಬದಲಿಗೆ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಕಿಯೋಸ್ಕ್ ಗಳನ್ನೂ ಆರಂಭಿಸಿದ್ದಲ್ಲಿ ಹಾಗೂ 'ಏಕ ಗವಾಕ್ಷಿ' [ಸಿಂಗಲ್ ವಿಂಡೋ ಕ್ಲಿಯರೆನ್ಸ್] ವ್ಯವಸ್ಥೆಯನ್ನು ಕಲ್ಪಿಸಿದ್ದಲ್ಲಿ ಇವರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.