ಸರ್ಕಾರಕ್ಕೆ ದಿನಗಣನೆ ಆರಂಭವಾಯಿತೇ…
ಬೆಂಗಳೂರು: ಸದ್ಯದ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಎಷ್ಟು ವಾಸ್ತವವೋ, ಅಷ್ಟೇ ಕಟು ಸತ್ಯ ಎಂಬುದು ಆಗಿಂದಾಗ್ಗೆ ಬಯಲಾಗುತ್ತಲೇ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅನುದಾನವಿಲ್ಲದೇ ಆಡಳಿತ ಪಕ್ಷದ ಶಾಸಕರುಗಳೇ ಸರ್ಕಾರದ ವಿರುದ್ಧ ತಿರಿಗಿ ಬಿದ್ದಿದ್ದಾರೆ. ಈ ಹುಳುಕುಗಳನ್ನು ಮುಚ್ಚಿಕೊಳ್ಳಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಶಾಸಕರ ಒತ್ತಡಗಳನ್ನು ಸಹಿಸಲಾಗದೇ ಆಪರೇಷನ್ ಕಮಲದ ಗಾಳಿಯಲ್ಲಿ ಗುಂಡು ಪ್ರಯೋಗಿಸಿದ್ದರು. ಇದೀಗ ಗೃಹ ಸಚಿವ ಡಾ ಪರಮೇಶ್ವರ ಅವರು ಬೇಗ ಮೈಸೂರು ಕಾಂಗ್ರೆಸ್ ಕಚೇರಿ ಕಟ್ಟಿಬಿಡಿ, ಮುಂದೆ ರಾಜಕೀಯ ಹೇಗೋ ಏನೋ? ಎಂದು ಅವರ ಪಕ್ಷದ ವೇದಿಕೆಯಲ್ಲಿ ಆಡಿರುವ ಮಾತುಗಳು ಈ ಜನವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ದಿನಗಣನೆ ಆರಂಭವಾಯಿತೇ ಎಂಬ ಸಂಶಯ ಹುಟ್ಟುಹಾಕಿದೆ. ನಮ್ಮ ಬಿಜೆಪಿ ಸರ್ಕಾರದ ಮೇಲೆ 40% ಎಂಬ ಸುಳ್ಳು ಅಪಪ್ರಚಾರ ಬಿತ್ತರಿಸಿ, ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರಿಗೆ ಸುಳ್ಳು ಹಾಗೂ ಆಮಿಷಗಳ ಮೂಲಕ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ಜನಾಕ್ರೋಶದ ಮುಂದೆ ಉಳಿದ ಇತಿಹಾಸವಿಲ್ಲ ಎಂಬುದು ಜ್ಞಾನೋದಯವಾಗುತ್ತಿರುವಂತಿದೆ ಎಂದಿದ್ದಾರೆ.