For the best experience, open
https://m.samyuktakarnataka.in
on your mobile browser.

ಸರ್ಕಾರಿ ಇಲಾಖಾ ನೇಮಕ ಪ್ರಕ್ರಿಯೆ ಮಧ್ಯೆ ಹಸ್ತಕ್ಷೇಪ ಸಲ್ಲ

02:30 AM Nov 09, 2024 IST | Samyukta Karnataka
ಸರ್ಕಾರಿ ಇಲಾಖಾ ನೇಮಕ ಪ್ರಕ್ರಿಯೆ ಮಧ್ಯೆ ಹಸ್ತಕ್ಷೇಪ ಸಲ್ಲ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಜಾಹೀರಾತು ನೀಡಿದ ಮೇಲೆ ಅದನ್ನು ಮಧ್ಯದಲ್ಲಿ ಬದಲಿಸಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಈಗ ಆಡಳಿತದಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿದೆ. ಕೇಂದ್ರದ ಯುಪಿಎಸ್‌ಸಿ, ಕರ್ನಾಟಕದ ಕೆಪಿಎಸ್‌ಸಿ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ನೇಮಕಾತಿಗೆ ಇರುವ ಆಯೋಗಗಳಲ್ಲಿ ಹಲವು ಹಗರಣಗಳು ನಡೆದು ನೇಮಕಾತಿ ಪ್ರಕ್ರಿಯೆ ವಿಳಂಬವಾಗಲು ಕಾರಣವಾಗಿದೆ. ಸುಪ್ರೀಂ ಕೋರ್ಟ್ ಆದೇಶ ಕೇಂದ್ರ ಸರ್ಕಾರವೂ ಸೇರಿದಂತೆ ಎಲ್ಲ ರಾಜ್ಯಗಳಿಗೆ ಅನ್ವಯಿಸುವುದರಿಂದ ನೇಮಕಾತಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ತತ್‌ಕ್ಷಣದಿಂದ ಜಾರಿಗೆ ತರಬೇಕು. ಎಲ್ಲ ರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮುನ್ನ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಲವು ರಾಜ್ಯಗಳಲ್ಲಿ ಎಷ್ಟೋ ವರ್ಷಗಳು ನೇಮಕಾತಿ ನಡೆಯದೇ ಇರುವುದಕ್ಕೆ ಮತ್ತೆ ಮತ್ತೆ ನಿಯಮಗಳನ್ನು ಬದಲಿಸಿ ನ್ಯಾಯಾಲಯದ ತಡೆಯಾಜ್ಞೆಗಳು ಬಂದಿರುವುದೇ ಕಾರಣ. ಬಹುತೇಕ ಬದಲಾವಣೆಗೆ ರಾಜಕೀಯ ಮತ್ತು ಭ್ರಷ್ಟಾಚಾರದ ಕೆಸರು ಅಂಟಿರುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಯುವಪೀಳಿಗೆ ಇಂಥ ವ್ಯವಸ್ಥೆಯಿಂದ ನಿರಾಶೆಗೊಂಡಿರುವುದು ನಿಜ. ನೇಮಕಾತಿ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು. ಇದರಲ್ಲಿ ಮಧ್ಯೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈಗಲಾದರೂ ಕಾಲಬದ್ಧ ನೇಮಕಾತಿ ಪ್ರಕ್ರಿಯೆ ನಡೆಯಬೇಕು.
ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿ ಪರೀಕ್ಷೆ, ಸಂದರ್ಶನದಲ್ಲಿ ಭಾಗವಹಿಸಿ ಕೊನೆಯಲ್ಲಿ ಎಲ್ಲವೂ ಸ್ಥಗಿತಗೊಂಡ ಉದಾಹರಣೆಗಳೂ ಇವೆ. ಈಗ ಸುಪ್ರೀಂ ಕೋರ್ಟ್ ಆದೇಶ ಬಂದಿರುವುದರಿಂದ ಒಮ್ಮೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡ ಮೇಲೆ ಯಾರಿಗೂ ಅದರಲ್ಲಿ ಹಸ್ತಕ್ಷೇಪ ಮಾಡಲು ಅಧಿಕಾರ ಇರುವುದಿಲ್ಲ. ಅರ್ಜಿ ಸಲ್ಲಿಸಿದವರಿಗೆ ತಮ್ಮ ಭವಿಷ್ಯ ನಿಗದಿತ ದಿನಗಳಲ್ಲಿ ನಿರ್ಧಾರವಾಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ಈಗ ಅರ್ಜಿ ಸಲ್ಲಿಸಿದವರಿಗೆ ಯಾವಾಗ ಲಿಖಿತ ಪರೀಕ್ಷೆ ನಡೆಯುತ್ತದೋ ಎಂಬುದು ತಿಳಿಯುವುದಿಲ್ಲ. ಅದಾದಮೇಲೆ ಸಂದರ್ಶನ ನಡೆಯುತ್ತದೆ. ಆಮೇಲೆ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡು ಏನೂ ಆಕ್ಷೇಪ ಇಲ್ಲ ಎಂದರೆ ಅಂತಿಮ ಪಟ್ಟಿ ಪ್ರಕಟಗೊಳ್ಳುತ್ತದೆ. ಎಷ್ಟೋ ಬಾರಿ ರಾಜಕೀಯ ಬದಲಾವಣೆಗಳಿಂದ ನೇಮಕಾತಿ ಪ್ರಕ್ರಿಯೆ ಅರ್ಧದಲ್ಲೇ ನಿಂತುಹೋಗಿದೆ. ಇದೆಲ್ಲವನ್ನೂ ಸುಪ್ರೀಂ ಕೋರ್ಟ್ ಪರಿಗಣಿಸಿ ತೀರ್ಪು ನೀಡಿರುವುದು ಸ್ವಾಗತಾರ್ಹ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಒಟ್ಟು ೪೦ ಲಕ್ಷ ಹುದ್ದೆಗಳಿವೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ೯.೬೪ ಲಕ್ಷ ಹುದ್ದೆಗಳು ಖಾಲಿ. ಕೇಂದ್ರದಲ್ಲಿ ಎ ವರ್ಗಕ್ಕೆ ೧.೦೯ ಲಕ್ಷ, ಬಿ ವರ್ಗಕ್ಕೆ ೨.೯೨ ಲಕ್ಷ, ಸಿ ವರ್ಗಕ್ಕೆ ೨೬.೧ ಲಕ್ಷ ಹುದ್ದೆಗಳಿವೆ. ಇವುಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿಗಳಿಗೆ ಮೀಸಲಿರುವ ಹುದ್ದೆಗಳನ್ನು ಪ್ರಕಟಿಸಬೇಕು. ಹೀಗಿರುವಾಗ ನೇಮಕಾತಿ ಆರಂಭಿಸುವ ಮುನ್ನ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು. ಪ್ರತಿ ಹುದ್ದೆಗೆ ಇರಬೇಕಾದ ಅರ್ಹತೆ, ಅನುಭವ, ಮೆರಿಟ್, ವಿವಿಧ ಹಂತಗಳಲ್ಲಿ ನಡೆಯುವ ನೇಮಕಾತಿ ಸ್ವರೂಪವನ್ನು ಸ್ಪಷ್ಟಪಡಿಸಬೇಕು. ಅರ್ಹತೆ, ಮೆರಿಟ್ ಮತ್ತು ಪಾರದರ್ಶಕತೆ ಎದ್ದುಕಾಣಬೇಕು. ಉತ್ತಮರನ್ನು ಆಯ್ಕೆ ಮಾಡಬೇಕೆಂದು ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಬದಲಿಸುವುದು, ವಿದ್ಯಾರ್ಹತೆಗೆ ಹೆಚ್ಚುವರಿ ನಿಯಮ ಸೇರಿಸುವುದು, ಲಿಖಿತ ಪರೀಕ್ಷೆ ಮುಕ್ತಾಯಗೊಂಡ ಮೇಲೆ ಕನಿಷ್ಟ ಅಂಕವನ್ನು ಬದಲಿಸುವುದು, ಸಂದರ್ಶನ ವೇಳೆ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದು ಸೇರಿದಂತೆ ಹಲವು ಅಕ್ರಮಗಳನ್ನು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು.
ರಾಜಾಸ್ತಾನದ ಹೈಕೋರ್ಟ್‌ನಲ್ಲೇ ನಡೆದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ಈಗಿನ ತೀರ್ಪು ಬರಲು ಕಾರಣವಾಯಿತು. ೨೦೦೯ರಲ್ಲಿ ರಾಜಾಸ್ತಾನ ಹೈಕೋರ್ಟ್ ೧೩ ಅನುವಾದಕರ ಹುದ್ದೆಗೆ ಅರ್ಜಿ ಕರೆದಿತ್ತು. ಲಿಖಿತ ಪರೀಕ್ಷೆ ಆದ ಮೇಲೆ ಕನಿಷ್ಟ ಅಂಕ ಬದಲಿಸಿತು. ಇದರಿಂದ ೨೧ ಜನರಲ್ಲಿ ಮೂವರು ಮಾತ್ರ ಅರ್ಹತೆ ಪಡೆದರು. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೇ ರೀತಿ ಕೇರಳ, ಮಣಿಪುರ, ಗುಜರಾತ್, ಗೌಹಾತಿ, ಪಾಟ್ನಾ ಹೈಕೋರ್ಟ್‌ಗಳಲ್ಲಿ ಹಲವು ಪ್ರಕರಣಗಳು ಉಳಿದುಕೊಂಡಿದ್ದವು. ಎಲ್ಲವನ್ನೂ ಪರಿಗಣಿಸಿ ಸುಪ್ರೀಂ ಕೋರ್ಟ್ ಸಂವಿಧಾನಪೀಠ ಹೊಸ ತೀರ್ಪನ್ನು ನೀಡಿದೆ. ಐವರು ನ್ಯಾಯಮೂರ್ತಿಗಳ ಪೀಠ ನೀಡಿದ ಹೊಸ ಆದೇಶ ಎಲ್ಲ ಸರ್ಕಾರಿ ನೇಮಕಾತಿಗಳಿಗೆ ಹೊಸ ಲಗಾಮು ಹಾಕಿದಂತಾಗಿದೆ. ಚುನಾವಣೆಗೆ ನಿಗದಿತ ವೇಳಾಪಟ್ಟಿ ಪ್ರಕಟಿಸುವ ಹಾಗೆ ಸರ್ಕಾರಿ ನೇಮಕಾತಿಗೂ ವೇಳಾಪಟ್ಟಿ ಪ್ರಕಟಿಸುವಂತೆ ಕಡ್ಡಾಯಗೊಳಿಸಬೇಕು.