ಸರ್ಕಾರ ತನ್ನಿಂತಾನೇ ಬೀಳಲಿದೆ
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ತನ್ನಿಂತಾನೇ ಬೀಳುವ ಹೊತ್ತಿನಲ್ಲಿ ಆಪರೇಷನ್ ಕಮಲ ಮಾಡುವ ಅವಶ್ಯಕತೆ ನಮಗಿಲ್ಲ. ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ಶಾಸಕ-ಸಚಿವರಲ್ಲೇ ಬೇಗುದಿ ಇದೆ. ಅವರಿಂದಲೇ ಸರ್ಕಾರ ಅಸ್ಥಿರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ದಂಗೆ ಏಳುತ್ತಿದ್ದಾರೆ. ಅವರಿಂದಲೇ ಕಾಂಗ್ರೆಸ್ ನೆಲಕಚ್ಚಬೇಕೇ ಹೊರತು ಆಪರೇಷನ್ ಕಮಲದಿಂದಲ್ಲ. ಬೋಗಸ್ ಹೇಳಿಕೆ ನೀಡುವುದು ಮತ್ತು ಹಿಟ್ ಆ್ಯಂಡ್ ರನ್ ಮಾಡುವುದನ್ನು ಬಿಟ್ಟು ಮುಖ್ಯಮಂತ್ರಿಗಳು ಆಪರೇಷನ್ ಕಮಲ ನಡೆದ ಬಗ್ಗೆ ಸಾಕ್ಷಿಗಳನ್ನು ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೊಸ ಲೈಸೆನ್ಸ್, ಲೈಸೆನ್ಸ್ ರಿನೀವಲ್‌ಗೆ ೨೦, ೩೦ ಲಕ್ಷ ಹಾಗೂ ಒಂದು ಕೋಟಿ ಅಂತ ಪ್ಯಾಕೇಜ್ ಫಿಕ್ಸ್ ಮಾಡಲಾಗಿದೆ.
ಮೊದಲಿಂದಲೂ ಅಬಕಾರಿ ಇಲಾಖೆಯಲ್ಲಿ ಈ ವ್ಯವಸ್ಥೆ ಇತ್ತು. ಆದರೆ, ಅದನ್ನು ಮೀರಿ ಭ್ರಷ್ಟಾಚಾರ ನಡೆದ ಹಿನ್ನೆಲೆ ಪ್ರತಿಭಟನೆ ಆಗುತ್ತಿವೆ. ಪ್ರತಿಭಟನೆ ಮುಂದುವರಿದರೆ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದರು.
ವೀರಾವೇಶಕ್ಕೆ ಉಚಿತ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ಒತ್ತಡ ಎದುರಾಗಿದೆ. ಹೀಗಾಗಿ, ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಇದು ಬಡವರ ವಿರೋಧಿ ನಿರ್ಧಾರ ಎಂದರು.