ಸರ್ಕಾರ ರೈತರ ಬಗ್ಗೆ ಕಾಳಜಿ ಹೊಂದಿದೆ
ಬೆಳಗಾವಿ: ನುಡಿದಂತೆ ನಡೆದ ನಮ್ಮ ಸರ್ಕಾರ ರೈತರ ಬಗ್ಗೆ ಕಾಳಜಿ ಹೊಂದಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ
ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಇಂದು ಮುಖ್ಯಮಂತ್ರಿಗಳೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಅವರು, ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ನಮ್ಮ ಬೆಳಗಾವಿ. ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಐತಿಹಾಸಿಕ. ನುಡಿದಂತೆ ನಡೆದ ನಮ್ಮ ಸರ್ಕಾರ ರೈತರ ಬಗ್ಗೆ ಕಾಳಜಿ ಹೊಂದಿದ್ದು, ಅಥಣಿ ಭಾಗದ ರೈತರ ನೀರಿನ ಸಮಸ್ಯೆಗೆ ಪರಿಹಾರವಾಗಿ ಇಂದು ಈ ಯೋಜನೆಯ ಶಂಕುಸ್ಥಾಪನೆ ಮಾಡಲಾಗಿದೆ.
ಇದು ರೂ.1486.81 ಕೋಟಿ ಮೊತ್ತದ ಬೃಹತ್ ನೀರಾವರಿ ಯೋಜನೆಯಾಗಿದ್ದು, ತಾಲೂಕಿನ ಝಂಜರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿ ಎಡದಂಡೆ ನದಿಯ ಮೂಲದಿಂದ 2.903 ಟಿಎಂಸಿ ನೀರನ್ನು ಸುಮಾರು 19,274 ಹೆಕ್ಟೇರ್ ಕೃಷಿ ಭೂಮಿಗೆ ಒದಗಿಸಲಾಗುವುದು. ನೀರಾವರಿ ವಂಚಿತ ಜಮೀನುಗಳು, ಒಳಹರಿವಿನ ಕೊರತೆಯಿರುವ ಕೆರೆಗಳು, ಜನ-ಜಾನುವಾರುಗಳಿಗೆ ಈ ಯೋಜನೆಯ ಮೂಲಕ ನೀರು ಕಲ್ಪಿಸಲಾಗುತ್ತದೆ. ಅಲ್ಲದೆ ಐಗಳಿ,ಬಾಡಗಿ, ಅರಟಾಳ, ರಾಮತೀರ್ಥ, ಬಾವಣದಡ್ಡಿ ಪಡಿತರವಾಡಿ ಹಾಗೂ ಇತರೆ ಗ್ರಾಮಗಳು ಸೇರಿದಂತೆ 13 ಕೆರೆಗಳಿಗೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಮೂಲಕ ಅಥಣಿ ಭಾಗದ ಜನರ ಬಹುದಿನದ ಕನಸು ನನಸಾಗಲಿದ್ದು, ನಮ್ಮ ಸರ್ಕಾರ ರೈತರ ಏಳಿಗೆಗೆ ಸದಾ ಬದ್ಧವಾಗಿದೆ ಎಂದರು.