ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರ್ವೇ ಜನಾಃ ಸುಖಿನೋ ಭವಂತು

04:08 AM Oct 31, 2024 IST | Samyukta Karnataka

ಶ್ರೀಮನ್ನಾರಾಯಣ ವರಾಹ ಅವತಾರದಲ್ಲಿ ರಾಕ್ಷಸನಾದ ಹಿರಣ್ಯಾಕ್ಷನನ್ನು ಸಂಹರಿಸುವಾಗ, ಹಣೆಯಲ್ಲಿ ಬಂದ ಒಂದು ಹನಿ ಬೆವರು ಭೂಮಿಯ ಮೇಲೆ ಬಿದ್ದಿತಂತೆ. ಆ ಬೆವರಿನಿಂದ ಭೂತಾಯಿ ಗರ್ಭಸಂಭೂತನಾಗಿ ಒಬ್ಬ ಶಕ್ತಿವಂತನಾದ ಮಗ ಹುಟ್ಟಿದನಂತೆ. ಅವನ ಹೆಸರೇ ನರಕ. ಭೂದೇವಿಗೆ ತನ್ನ ಮಗ ನರಕನ ಮೇಲೆ ಮಹಾ ಪ್ರೀತಿ. ತನ್ನ ಮಗ ಸದಾ ಜಯಶಾಲಿಯಾಗಿರಬೇಕು, ಯಾರೂ ಅವನನ್ನು ಸೋಲಿಸಬಾರದು ಎಂದು ವರ ದೇವರಲ್ಲಿ ಪಡೆದುಕೊಂಡಳಂತೆ. ಮೊದಮೊದಲು ಸರಿಯಾಗಿದ್ದ ನರಕ ನಂತರ ರಾಕ್ಷಸರ ಸಹವಾಸ ಮಾಡಿ ತಾನೂ ರಾಕ್ಷಸನಾದ. ಜೊತೆಗೆ ಅಮರತ್ವ ಸಾಧನೆಗಾಗಿ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡ. ಹಡೆದ ತಾಯಿ ಯಾವತ್ತೂ ಮಗನನ್ನು ಕೊಲ್ಲಳಾರಲು ಎಂದು ಯೋಚಿಸಿ ‘ನನ್ನ ತಾಯಿಯಿಂದ ಮಾತ್ರ ನನಗೆ ಸಾವು’ ಎನ್ನುವ ವರ ಪಡೆದ.
ಆ ವರದ ಪ್ರಭಾವದಿಂದ, ವಿಪರೀತ ಬಲಶಾಲಿಯಾದ ಆದರೆ ಮಹಾ ಅಧರ್ಮಿಯಾದ. ಹದಿನಾರು ಸಾವಿರ ಸ್ತ್ರೀಯರನ್ನು ತನ್ನ ಅರಮನೆಯಲ್ಲಿ ಬಂಧಿಸಿಟ್ಟಿದ್ದ. ಸ್ವರ್ಗಕ್ಕೆ ಹೋಗಿ ಇಂದ್ರನನ್ನೇ ಸೋಲಿಸಿ ಎಲ್ಲಾ ದೇವತೆಗಳನ್ನು ತನ್ನ ಕೈವಶ ಮಾಡಿಕೊಂಡಿದ್ದ. ದೇವತೆಗಳೆಲ್ಲ ವಿಷ್ಣುವಿನ ಹತ್ತಿರ ಹೋಗಿ ನರಕನಿಂದ ನಮ್ಮನ್ನು ರಕ್ಷಿಸು ಎಂದು ಕೇಳಿಕೊಂಡರು.
ದ್ವಾಪರದಲ್ಲಿ ಮಹಾವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತಾರ ಎತ್ತಿ ಭೂಮಿಗೆ ಬಂದ. ಕ್ರೂರಿ ನರಕಾಸುರ ನನ್ನ ತಾಯಿಯ ಕಿವಿಯೋಲೆ ಕಿತ್ತುಕೊಂಡಿದ್ದಾನೆ, ದಯವಿಟ್ಟು ಅವನ ಅಹಂಕಾರದ ಹುಟ್ಟಡಗಿಸು ಅಂತ ಕೃಷ್ಣನ ಹೆಂಡತಿ ಸತ್ಯಭಾಮೆ ಶ್ರಿಕೃಷ್ಣನಿಗೆ ವಿಶೇಷವಾಗಿ ಕೇಳಿಕೊಂಡಳು. ತಕ್ಷಣವೇ ಗರುಡ ಪಕ್ಷಿಯನ್ನು ಏರಿ ಶ್ರೀಕೃಷ್ಣ ಸತ್ಯಭಾಮಾ ಸಮೇತನಾಗಿ ನರಕಾಸುರನನ್ನು ಕಾಣಲು ಹೊರಟನು.
ತನ್ನ ಶಂಖ ಪಾಂಚಜನ್ಯವನ್ನು ಒಮ್ಮೆ ಜೋರಾಗಿ ಊದಿದ. ಪಾಂಚಜನ್ಯದ ಶಬ್ದ ಕೇಳಿ ನರಕಾಸುರ ಆರ್ಭಟಿಸಿ ಕೃಷ್ಣನ ಮೇಲೆ ಯುದ್ಧಕ್ಕೆ ಬಂದ. ನರಕಾಸುರನ ಎಲ್ಲ ಅಸ್ತçಗಳನ್ನೂ ಬಳಸಿ ಶ್ರೀಕೃಷ್ಣ ಅವನನ್ನು ಸೋಲಿಸಿಬಿಟ್ಟ. ಅದೇ ಸಮಯಕ್ಕೆ ನರಕಾಸುರನಿಗೆ ತನಗಿರುವ ವರದ ಜ್ಞಾಪಕ ಬಂತು. ತನ್ನ ತಾಯಿಯಿಂದ ಮಾತ್ರ ತನಗೆ ಸಾವು ಅಂದ ಮೇಲೆ ಸತ್ಯಭಾಮೆಯೇ ತನ್ನ ಹಿಂದಿನ ಜನ್ಮದಲ್ಲಿ ತಾಯಿ ಮತ್ತು ಶ್ರೀಕೃಷ್ಣನು ವರಾಹನಲ್ಲದೇ ಬೇರೆ ಯಾರೂ ಅಲ್ಲ ಎಂದು ಅರಿವಾಯಿತು. ಶ್ರೀಕೃಷ್ಣ ಮತ್ತು ಸತ್ಯಭಾಮೆಯರ ಬಾಣದಿಂದ ನರಕಾಸುರ ನೆಲಕ್ಕುರುಳಿದ.
ನರಕಾಸುರ ತನ್ನ ಕೆಟ್ಟಕಾರ್ಯಗಳಿಗೆ ತುಂಬಾ ಪಶ್ಚಾತ್ತಾಪ ಪಟ್ಟ. ಸಾಯುವ ಮುನ್ನ ಅವನು ಸತ್ಯಭಾಮೆ, ಕೃಷ್ಣರನ್ನು ಒಂದು ವರ ಕೇಳಿದ. ನಾನು ಸತ್ತ ಈ ದಿನ ನರಕಚತುರ್ದಶಿಯೆಂದು ಪ್ರಸಿದ್ಧಿಯಾಗಲಿ ಮತ್ತು ಜಗತ್ತು ದೀಪಗಳಿಂದ ನರಕನ ವಧೆಯನ್ನು ಆಚರಿಸಲಿ ಎಂದು ವರವನ್ನು ಬೇಡಿದ. ಸತ್ಯಭಾಮೆಯು ಮನಕರಗಿ ವರವನ್ನು ಕೊಟ್ಟಳು.
ಕಲಿಯುಗದಲ್ಲಿ, ನಮ್ಮ ದೇಹದಲ್ಲೇ ದೈವತ್ವ, ನರಕನಂತೆ ಅಸುರ ಸ್ವಭಾವ ಒಟ್ಟಿಗೆ ಇವೆ. ದೇವಸ್ವರೂಪ ವಿದ್ದಾಗ ಒಳ್ಳೆಯ ಕಾರ್ಯಗಳನ್ನು, ನರಕ ಸ್ವರೂಪ ಹೆಚ್ಚಾದಾಗ ದುಷ್ಟ ಕಾರ್ಯಗಳನ್ನು ನಾವು ಮಾಡುತ್ತದೆ. ನರಕಾಸುರನ ವೃತ್ತಾಂತ ನಮ್ಮನ್ನು ಎಚ್ಚರಿಸಬೇಕು. ಸಜ್ಜನರ ಸಂಗದಿಂದ, ಸದ್ಧರ್ಮ ಪರಿಪಾಲನೆಯಿಂದ ದೇವರ ಧ್ಯಾನದಲ್ಲಿ ನಿರತರಾದರೆ ದೇವರ ಕೃಪೆಗೆ ಒಳಗಾಗಬಹುದು. ನರಕ ಚತುರ್ಥಿ, ದೀಪಾವಳಿ ನಿಮ್ಮೆಲ್ಲರ ಜೀವನದಲ್ಲಿ ಉತ್ತಮ ಬೆಳಕನ್ನು ದೇವರು ಕರುಣಿಸಲಿ.

Next Article