ಸಲಹುವರಾರೋ ಅವರು ದೇವರು
ಪ್ರತಿನಿತ್ಯ ನಾವು ದೇವರನ್ನು ಆರಾಧಿಸುತ್ತೇವೆ. ಈ ದೇವರನ್ನು ಏತಕ್ಕಾಗಿ ಆರಾಧಿಸಬೇಕು? ಈ ದೇವರು ಯಾರು? ತಾಯಿಯ ಗರ್ಭದಲ್ಲಿರುವ ಮಗುವಿಗೆ ತಾಯಿ ಕಾಣುವುದಿಲ್ಲ. ತಾಯಿಗೂ ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಕಾಣುವುದಿಲ್ಲ. ಹಾಗಂತ ತಾಯಿ ಮತ್ತು ಆ ಮಗುವಿನ ಅಸ್ತಿತ್ವ ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಭಗವಂತನ ಗರ್ಭದಲ್ಲಿ ನಾವಿದ್ದೇವೆ. ಮಗು ಹೇಗೆ ತಾಯಿಯಿಂದ ರಕ್ಷಿಸಲ್ಪಡುತ್ತದೆಯೋ, ಪೋಷಿಸಲ್ಪಡುತ್ತದೆಯೋ ಅದೇ ರೀತಿ ನಾವು ಭಗವಂತನಿಂದ ರಕ್ಷಿಸಲ್ಪಟ್ಟಿದ್ದೇವೆ. ನಮಗೆ ಬೇಕಾದದ್ದನ್ನೆಲ್ಲಾ ಕಾಲ ಕಾಲಕ್ಕೆ ಕೊಟ್ಟು ರಕ್ಷಿಸುವವ ಭಗವಂತ, ಅವನೇ ದೇವರು.
ಪ್ರಪಂಚದಲ್ಲಿ ನಕ್ಷತ್ರ, ಸೂರ್ಯ, ಚಂದ್ರ, ಗ್ರಹಗಳು, ಭೂಮಿ, ಆಕಾಶ ಗಾಳಿ ನೀರು, ಬೆಂಕಿ ಎಲ್ಲವನ್ನು ವ್ಯವಸ್ಥಿತ ರೂಪದಲ್ಲಿ ಇರಿಸಿ, ಯಾರು ಈ ಜಗತ್ತನ್ನು ನಿಯಂತ್ರಣ ಮಾಡುತ್ತಾನೋ, ಜೀವಿಗಳ ಉಗಮಕ್ಕೆ ಯಾರು ಕಾರಣನೋ ಅವನನ್ನು ನಾವು ದೇವರು ಎಂದು ಸಂಬೋಧಿಸುತ್ತೇವೆ.
ದೀಪದಿಂದ ಹೊರಟ ಬೆಳಕು ವಸ್ತುವಿನ ಮೇಲೆ ಬಿದ್ದು ಪ್ರತಿಫಲಿಸಿದಾಗ ಮಾತ್ರ ವಸ್ತು ನಮಗೆ ಕಾಣುತ್ತದೆ. ಆದರೆ ಬೆಳಕು ಸಾಗಿದ ಪಥ ನಮಗೆ ಕಾಣುವುದಿಲ್ಲ. ಭಕ್ತಿ ಬೆಳಕಿದ್ದ ಹಾಗೆ. ಭಕ್ತಿಯ ಕಂಗಳಿಂದ ನೋಡಿದಾಗ ಎಲ್ಲೆಲ್ಲೂ ಭಗವಂತ ಕಾಣುತ್ತಾನೆ. ದಾರಿ ಕಾಣಲೆಂದು ದೀಪ ಹಿಡಿಯುವವನು ದೇವರಲ್ಲ. ದೀಪವೇ ದೇವರು.
ಈ ಸೃಷ್ಟಿಯಲ್ಲಿ ನಾವು ಹಲವಾರು ದೇವರುಗಳನ್ನು ಪೂಜಿಸುತ್ತೇವೆ. ಹೇಗೆ ಇಂದಿನ ಸಂವಿಧಾನದಲ್ಲಿ ರಾಷ್ಟ್ರಪತಿ ಒಂದು ದೇಶದ ಪ್ರಥಮ ವ್ಯಕ್ತಿ, ರಾಷ್ಟ್ರಪತಿಗೆ ಪ್ರಧಾನ ಮಂತ್ರಿ, ಮಂತ್ರಿಗಳ ಗಣ, ರಾಜ್ಯದ ಮುಖ್ಯಮಂತ್ರಿ ಮಂತ್ರಿಗಳ ಗಣ.. ಹೇಗೆ ಒಂದು ಒಂದು ಸ್ಥಾನಕ್ಕೆ ಒಂದು ಒಂದು ಕ್ರಮ ಇದೆಯೋ, ತಾರತಮ್ಯ ಇದೆಯೋ ಕ್ರಮಾನುಗತವಾಗಿ ವ್ಯವಸ್ಥಿತವಾಗಿ ಜನರನ್ನು ರಕ್ಷಿಸಲು ನೀತಿ ನಿಯಮಗಳನ್ನು ಮಾಡುತ್ತಾರೋ ಹಾಗೆ, ಯಾವುದೇ ನಿಯಮ ರೂಪಿಸಿದರೂ ಕೊನೆಗೆ ರಾಷ್ಟ್ರಪತಿ ಅಂಕಿತ ಬಿದ್ದರೆ ಮಾತ್ರ ಆ ನಿಯಮ ಕಾಯಿದೆಯಾಗಿ ಜಾರಿಯಾಗುತ್ತದೆಯೋ ಹಾಗೆ, ದೇವರುಗಳ ಸಮೂಹದಲ್ಲೂ ಒಂದು ಒಂದು ತತ್ವಕ್ಕೆ ಒಬ್ಬ ಒಬ್ಬ ದೇವರಿದ್ದಾನೆ.
ಆ ದೇವರುಗಳಲ್ಲಿ ಅವರವರದೇ ಕ್ರಮಾನುಗತವಾಗಿ ಜವಾಬ್ದಾರಿಗಳು ಇವೆ. ಆ ದೇವರುಗಳು ಮಾಡುವ ದಿನನಿತ್ಯದ ಕಾರ್ಯಗಳು ನಮಗೆ ಕಣ್ಣಿಗೆ ಗೋಚರವಾಗುವಂತೆ ಕಾಣುತ್ತವೆ. ಉದಾಹರಣೆಗೆ ಗಾಳಿ, ಮಳೆ, ಬೆಳಕು ಇತ್ಯಾದಿ. ಆದುದರಿಂದ ನಮಗೆ ಮಳೆ ಬೇಕು ಎಂಬ ಉದ್ದೇಶವಿದ್ದರೆ, ವರುಣ ದೇವರನ್ನು, ಗಾಳಿ ಬೇಕು ಎಂದಾಗ ವಾಯುದೇವರನ್ನು, ಬೆಳಕು ಶಾಖ ಬೇಕು ಎಂದಾಗ ಸೂರ್ಯನನ್ನು, ತಂಪು ಬೇಕು ಎಂದಾಗ ಚಂದ್ರನನ್ನು ಕುರಿತು ಪ್ರಾರ್ಥನೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ.
ನಾವು ಬೇರೆ ಬೇರೆ ದೇವರುಗಳಿಗೆ ಭಕ್ತಿಯಿಂದ ಮಾಡುವ ಪೂಜೆ ಪ್ರಾರ್ಥನೆಗೆ ಆ ಆ ದೇವರುಗಳು ಭಗವಂತನಲ್ಲಿ ನಮಗೆ ಅನುಗ್ರಹಿಸಲು ಶಿಫಾರಸು ಮಾಡಿ ನಮ್ಮನ್ನು ಕಾಪಾಡುತ್ತಾರೆ. ಮೇಲೆ ರಾಷ್ಟ್ರಪತಿಗಳ ಉದಾಹರಣೆಯಲ್ಲಿ ತಿಳಿಸಿದಂತೆ, ದೇವರುಗಳು ಮಾಡುವ ಶಿಫಾರಸ್ಸಿನ ಅನುಗುಣವಾಗಿ, ಭಗವಂತ ನಮ್ಮನ್ನು ಅನುಗ್ರಹಿಸುತ್ತಾನೆ. ಆದುದರಿಂದಲೇ ಸಂಸ್ಕೃತದಲ್ಲಿ ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಮ್. ಸರ್ವದೇವ ನಮಸ್ಕಾರಃ ಕೇಶವಃ ಪ್ರತಿಗಚ್ಛತಿ ಎಂದು ತಿಳಿಸಿಕೊಟ್ಟಿದ್ದಾರೆ. ಆಕಾಶದಿಂದ ಮಳೆಯ ರೂಪದಲ್ಲಿ ಬೀಳುವ ನೀರು, ಸಾಗರವನ್ನು ಹೇಗೆ ತಲುಪುತ್ತದೆಯೋ ಹಾಗೆ ಎಲ್ಲಾ ದೇವರುಗಳ ಪ್ರಾರ್ಥನೆಗಳು ಅಂತಿಮವಾಗಿ ಭಗವಂತ ಕೇಶವನಿಗೆ ಸಿಲ್ಲಿಕೆಯಾಗುತ್ತದೆ. ಜಗನ್ನಿಯಾಮಕನಾದ ಕೇಶವ ಎಲ್ಲರನ್ನು ರಕ್ಷಣೆ ಮಾಡುತ್ತಾನೆ.