ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಹಕಾರ' ಸರಕಾರದ ಅಸಹಕಾರ' ಸುಳಿ

10:43 AM May 30, 2024 IST | Samyukta Karnataka

ಸಹಕಾರಿಗಳು ತಳಮಳಗೊಂಡಿದ್ದಾರೆ.
ಸಹಕಾರಿ ರಂಗವನ್ನು ಕಲುಷಿತಗೊಳಿಸುವ, ಸಂಘಟನೆಯನ್ನು ಹೊಸಕಿ ಹಾಕುವ, ಅಕ್ರಮ, ಅವ್ಯವಹಾರಗಳಿಗೆ ಪರೋಕ್ಷವಾಗಿ ನೀರೆರೆಯುವ ಕಾರ್ಯ ಮತ್ತೆ ಆರಂಭವಾಯಿತೇ? ಎನ್ನುವ ಆತಂಕ, ಆಘಾತ ಉಂಟಾಗಿದೆ.
ಕರ್ನಾಟಕದ ತೋಟಿಗರ ಪ್ರಾತಿನಿಧ್ಯ ಮಾತೃಸಂಸ್ಥೆಯಾದ ತೋಟಗಾರ್ಸ್ ಸೇಲ್ಸ್ ಸೊಸೈಟಿಯ (ಶಿರಸಿ-ಟಿಎಸ್‌ಎಸ್) ಆಡಳಿತ ಮಂಡಳಿಯನ್ನು ಏಕಾಏಕಿ ಬರಖಾಸ್ತುಗೊಳಿಸಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಈ ಆತಂಕಕ್ಕೆ ಕಾರಣವಾಗಿದ್ದರೆ, ಸಹಕಾರಿ ಸಂಸ್ಥೆಯೊಂದು ಕಾನೂನು, ನಿಯಮಬದ್ಧವಾಗಿ ಅದರದ್ದೇ ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯುತ್ತಿರುವ ಉತ್ತಮ ಸಂಸ್ಥೆಯ ಆಧಾರ ಅಲ್ಲಾಡಿಸುವ ಪ್ರಯತ್ನವೇಕೆ ಎನ್ನುವ ಪ್ರಶ್ನೆಯೂ ಎದ್ದಿದೆ.
ಶಿರಸಿ ಟಿಎಸ್‌ಎಸ್ ರಾಜ್ಯವಷ್ಟೇ ಅಲ್ಲ, ದೇಶದಲ್ಲಿಯೇ ಒಂದು ಮಾದರಿ ಸಹಕಾರಿ ಸಂಸ್ಥೆಯಾಗಿ ಶತಮಾನಗಳಿಂದ ಅದರ ಬೆಳವಣಿಗೆ, ಕಾರ್ಯಕ್ಷೇತ್ರ, ನಂಬಿಕೆ-ವಿಶ್ವಾಸಾರ್ಹತೆ, ಯಾವ ರಾಜಕೀಯ ಸೋಂಕಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಶ್ರೇಯಸ್ಸು ಹೊಂದಿದೆ. ಒಂದು ನೂರು ವರ್ಷಗಳ ಸಂಸ್ಥೆ ಕಟ್ಟಿ ಬೆಳೆಸಲು ಶ್ರಮಿಸಿದವರು, ತ್ಯಾಗ ಮಾಡಿದವರು ಅಲ್ಲಿಯ ತೋಟಿಗರೇ.
ಕಳೆದ ಐದಾರು ವರ್ಷಗಳಿಂದ ಈ ಸಂಸ್ಥೆಯಲ್ಲೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಾಸನೆ ಹಾಗೂ ಕಣ್ಣಿಗೆ ರಾಚುವಷ್ಟು ನಡವಳಿಕೆ, ಸ್ವತಃ ಅಧಿಕಾರಿ, ನಿರ್ದೇಶಕರಲ್ಲಿಯೇ ಕಂಡಿದ್ದು ನಿಜ. ಇದೇ ಕಾರಣಕ್ಕಾಗಿ ಕೇವಲ ಹತ್ತು ತಿಂಗಳ ಹಿಂದೆ ನಡೆದ ಸಂಸ್ಥೆಯ ಚುನಾವಣೆಯಲ್ಲಿ ಅದರ ಸದಸ್ಯರೇ ಆಮೂಲಾಗ್ರ ಬದಲಾವಣೆ ಮಾಡಿ ಹೊಸ ಯುವ ಪಡೆಗೆ ಅಧಿಕಾರ ನೀಡಿದ್ದು. ಈ ಚುನಾಯಿತ ಆಡಳಿತ ಸಮಿತಿ ನೂರಾರು ಕೋಟಿ ರೂಪಾಯಿಯ ಹಗರಣವನ್ನು ಹೆಕ್ಕಿ ತೆರೆದು ದೂರು ದಾಖಲಿಸುವ ಪ್ರಯತ್ನಕ್ಕಿಳಿದದ್ದೇ ಬಹುಶಃ ಅಲ್ಲಿರುವ ಹಿತಾಸಕ್ತಿಗಳಿಗೆ ತೊಡಕು ಉಂಟಾಗಿರಬೇಕು. ಈ ಕಾರಣಕ್ಕೇ ಸರ್ಕಾರಿ ಅಧಿಕಾರಿಯನ್ನು ಬಳಸಿಕೊಂಡು ಸಂಸ್ಥೆಯನ್ನು ಬರಖಾಸ್ತು ಮಾಡಿ ಧಿಡೀರ್ ಆದೇಶವನ್ನು ಹೊರಡಿಸಿದಾಗ ಶತಮಾನದ ಸಂಸ್ಥೆಯ ನಂಬಿಕೆ ಮತ್ತು ವಿಶ್ವಾಸಾರ್ಹತೆ ಧಕ್ಕೆ ಉಂಟಾಗಿದ್ದು ನಿಜ.
ಒಂದು… ಈ ಸಂಸ್ಥೆಯನ್ನು ಬರಖಾಸ್ತುಗೊಳಿಸುವ ತರಾತುರಿಯಲ್ಲಿ ಇನ್ನಷ್ಟು ಪ್ರಮಾದವನ್ನು ಸರ್ಕಾರ ನಡೆಸಿ ಓರ್ವ ಶಿಕ್ಷಣಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದು, ಅಲ್ಲದೇ ಆಡಳಿತ ಮಂಡಳಿಗೆ ಆದೇಶದ ಪ್ರತಿ ನೀಡದೇ ಅಧಿಕಾರ ಸ್ವೀಕರಿಸಿದ್ದು, ಜನರೇ ಚುನಾಯಿಸಿದ ಆಡಳಿತ ಮಂಡಳಿಯನ್ನು ಬರಖಾಸ್ತುಗೊಳಿಸುವ ಆದೇಶ ಎಲ್ಲೋ, ಯಾರಲ್ಲೋ ಕುಳಿತು ಹೊರಡಿಸಿ, ಆ ಅಧಿಕಾರಿ ಕಣ್ಮರೆಯಾದದ್ದು ಇವೆಲ್ಲವೂ ಗೂಳಿ ಮಾಫಿಯಾ ವ್ಯವಹಾರದಂತೆ ಕಂಡು ಬಂದಿದ್ದರಲ್ಲಿ ಉತ್ಪ್ರೆಕ್ಷೆಯೇನಿಲ್ಲ.
ಜನ ಆಕ್ರೋಶಗೊಂಡಾಗ ಮೇಲಧಿಕಾರಿಯಿಂದ ಜಿಲ್ಲಾ ನಿಬಂಧಕರ ಕ್ರಮಕ್ಕೆ ತಡೆಯಾಜ್ಞೆ ನೀಡಿ ಪುನಃ ಮೂರು ದಿನದಲ್ಲಿಯೇ ಅದೇ ಚುನಾಯಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದ್ದು ಪರಿಸ್ಥಿತಿಯನ್ನು ತಿಳಿಸಗೊಳಿಸುವ ಪ್ರಯತ್ನವಾಯಿತು ನಿಜ. ಆದರೆ ಒಂದು ವ್ಯವಸ್ಥಿತ ಆಡಳಿತದ ಸಂಸ್ಥೆಯಲ್ಲಿ ಏಕಾಏಕಿ ಯಾರದೋ ಪಿತೂರಿಯ ಹಿನ್ನೆಲೆಯಲ್ಲಿ ಬರಖಾಸ್ತುಗೊಳಿಸಿ ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡಿದ್ದು ಎಷ್ಟು ಸರಿ? ಅದೂ ಈಗ ಅಡಿಕೆ ಬೆಳೆಗಾರರ ವಾರ್ಷಿಕ ಉತ್ಪನ್ನದ ವಿಲೇವಾರಿಯ ಸೀಸನ್‌ನಲ್ಲಿ, ಸಾಲ ವಸೂಲಾತಿಯ ಈ ಕಾಲದಲ್ಲಿ ಸರ್ಕಾರ ಅಥವಾ ಯಾವುದೇ ಪ್ರಭಾವಿ ವ್ಯಕ್ತಿ ಬರಖಾಸ್ತು ಯತ್ನ ನಡೆಸಿರುವುದು ಆಘಾತಕಾರಿಯೇ.
ಟಿಎಸ್‌ಎಸ್ ಸ್ವಾಯತ್ತವಾಗಿ ಸದೃಢವಾಗಿ ಬೆಳೆದ ಸಹಕಾರಿ ಸಂಸ್ಥೆ. ೧೮೦೦ ಕೋಟಿ ರೂಪಾಯಿ ವ್ಯವಹಾರ ನಡೆಸುವ, ಹಲವು ಕ್ಷೇತ್ರಗಳಿಗೆ ತನ್ನ ಬಾಹುಗಳನ್ನು ವಿಸ್ತರಿಸಿರುವ ಸಂಸ್ಥೆಗೆ ನಂಬಿಕೆ ಮತ್ತು ಅಲ್ಲಿಯ ಸದಸ್ಯರ ಬದ್ಧತೆಯೇ ಶಕ್ತಿ. ಈ ಸಂಸ್ಥೆಯನ್ನು ಅವಲಂಬಿಸಿಯೇ ಹತ್ತಾರು ಹಳ್ಳಿ ಸೊಸೈಟಿಗಳಿವೆ. ಲಕ್ಷಾಂತರ ಬೆಳೆಗಾರರಿದ್ದಾರೆ. ಬೆಳೆಗಾರರ ಎಲ್ಲ ಬೇಕು ಬೇಡಿಕೆ, ಕಷ್ಟ ಸುಖಗಳಿಗೆಲ್ಲ ಟಿ.ಎಸ್‌ಎಸ್ ನಿಂದಲೇ ಪರಿಹಾರ ಎನ್ನುವ ಅಪಾರ ನಂಬಿಕೆ ಅಲ್ಲಿಯ ಜನರದ್ದು. ಯಾರ ಹಂಗೂ ಬೇಡ ಎಂದು ಸರ್ಕಾರದ ಯಾವೊಂದೂ ಶೇರನ್ನು (ಪಾಲನ್ನು) ಇಟ್ಟುಕೊಳ್ಳದ, ಸರ್ಕಾರಿ ಹಸ್ತಕ್ಷೇಪವೇ ಬೇಡ ಎನ್ನುವ ಕಾರಣಕ್ಕೆ ನಾಮಕರಣಾದಿಯಾಗಿ ಎಲ್ಲವನ್ನೂ ಎದುರಿಸಿ ಬೆಳೆದ ಸಂಸ್ಥೆ. ವಿಶೇಷವಾಗಿ ಈ ಸಂಸ್ಥೆಯಲ್ಲಿ ಯಾವುದೇ ಪಕ್ಷ ರಾಜಕೀಯ, ಜಾತಿ ರಾಜಕೀಯ ಇರಲಿಲ್ಲ.
ವಿಧಾನಸಭೆ, ಲೋಕಸಭೆ, ಜಿಪಂಗಳಲ್ಲಿ ಪಕ್ಷ ರಾಜಕೀಯವಿದ್ದರೂ ಟಿಎಸ್‌ಎಸ್ ವಿಷಯ ಬಂದಾಗ ಅದು ಸುಳಿಯಲಿಲ್ಲ. ಹಾಗಂತ ಟಿಎಸ್‌ಎಸ್‌ನ ಹಲವು ಸದಸ್ಯರು ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರಿದ್ದಾರೆ. ಹಾಗಂತ ಟಿಎಸ್‌ಎಸ್ ನಲ್ಲಿ ಅವ್ಯವಹಾರ ಹಾಗೂ ಅಕ್ರಮದ ವಾಸನೆ ಬಂದದ್ದು ಇತ್ತೀಚಿನ ೫ ವರ್ಷಗಳಿಂದೀಚೆಗೆ. ಅದೂ ಸಂಸ್ಥೆಯ ಅಧಿಕಾರಿಗಳಿಂದ… ಇದೂ ನಿರ್ದೇಶಕರ ಅಜ್ಙಾನ ವ್ಯವಹಾರಗಳಿಂದ.
ಇಡೀ ದೇಶದ ಸಹಕಾರಿ ರಂಗಕ್ಕೆ ಅತ್ಯಂತ ದೊಡ್ಡ ಹೆಸರು ಮತ್ತು ವಿಶ್ವಾಸಾರ್ಹತೆ ನೀಡಿದ್ದು ಕರ್ನಾಟಕ. ಎಂತೆಂಥ ಪ್ರಬುದ್ಧ ಸಹಕಾರಿ ಧುರೀಣರು ನಮ್ಮ ನಾಡಿನಲ್ಲಿ ಈ ಕ್ಷೇತ್ರ ಬೆಳೆಸಿದ ಶ್ರೇಯಸ್ಸು ಹೊಂದಿದವರು. ಗದಗ ಜಿಲ್ಲೆಯ ಕಣಗಿನಹಾಳ ದೇಶದಲ್ಲೇ ಪ್ರಪ್ರಥಮ ಸಹಕಾರಿ ಸಂಸ್ಥೆಯ ಹುಟ್ಟಿಗೆ ಕಾರಣವಾದದ್ದು.
ಕರ್ನಾಟಕದ ಸಹಕಾರಿ ಸಂಸ್ಥೆಗಳೇ ಜನರಿಗೆ ಅನ್ನ ಆಹಾರ, ಬದುಕು ಕಟ್ಟಿಕೊಟ್ಟಿವೆ. ಒಂದು ಕ್ಷಣ ಸಹಕಾರಿ ರಂಗ ಕುಸಿತವಾಯಿತೆಂದುಕೊಳ್ಳಿ. ಇಡೀ ರಾಜ್ಯದ ಬಹುಶಃ, ಆರ್ಥಿಕ ಚಟುವಟಿಕೆಯೇ ಅಲ್ಲೋಲಕಲ್ಲೋಲವಾದೀತು. ಇಡೀ ಸಹಕಾರಿ ಸಂಘ ನಿಂತಿರುವುದು ನಂಬಿಕೆ, ವಿಶ್ವಾಸಾರ್ಹತೆ ಮತ್ತು ಜನಸಾಮಾನ್ಯರ ಕಾಳಜಿಯಿಂದ. ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಸಕ್ಕರೆ, ಚಿಕ್ಕಪುಟ್ಟ ಉದ್ಯಮ ರಂಗಗಳಿಗೆ ಸಹಕಾರಿ ಕ್ಷೇತ್ರವೇ ಬೆನ್ನೆಲುಬು.
ರಾಜ್ಯದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿ ಸಹಕಾರಿ ಸಂಸ್ಥೆಗಳ ಸದಸ್ಯರು. ಸುಮಾರು ೧.೩೬ ಕೋಟಿಗೂ ಅಧಿಕ ದುಡಿಯುವ ಬಂಡವಾಳ ಇಲ್ಲಿದೆ. ೫೦,೮೦೦ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿಗಿವೆ. ೨.೪೪ ಕೋಟಿಯಷ್ಟು ಸದಸ್ಯರಿದ್ದಾರೆ. ೬,೩೦೦ ಕೋಟಿಗೂ ಅಧಿಕ ಶೇರು ಬಂಡವಾಳಗಳಿವೆ. ೨೬ ಸಾವಿರಕ್ಕೂ ಅಧಿಕ ಸಂಸ್ಥೆಗಳು ಲಾಭದಲ್ಲಿವೆ. ಹಾಗೇ ೧೪ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ನಷ್ಟದಲ್ಲೂ ಇವೆ.
ಇಡೀ ರಾಜ್ಯದ ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರುಗಳಲ್ಲಿ ಬಹುತೇಕ ಮಂದಿಗೆ ಸಹಕಾರಿ ರಂಗವೇ ಮೆಟ್ಟಿಲಾಯಿತು. ಸಹಕಾರಿ ಸಂಸ್ಥೆಗಳ ಆಡಳಿತ ಚುಕ್ಕಾಣಿ ಹಿಡಿದವರು, ಅಲ್ಲಿಯ ಜನಪ್ರಿಯತೆಯನ್ನು ಮೆಟ್ಟಿಲಾಗಿಸಿಕೊಂಡರು. ಹಾಗೇ ಕೆಲವರಂತೂ ಶಾಸಕ ಸ್ಥಾನಕ್ಕಿಂತಲೂ ಜಿಲ್ಲಾ ಸಹಕಾರಿ ಬ್ಯಾಂಕು, ಅಥವಾ ಸ್ಥಳೀಯ ಸಂಸ್ಥೆಗಳ ಹಿತ ಬೆಳವಣಿಗೆಗೆ ಹೆಚ್ಚು ಸಮಯ ಮತ್ತು ಕಾಳಜಿ ತೋರಿಸಿದವರಿದ್ದಾರೆ.
ರಾಜ್ಯದ ಸಹಕಾರಿ ರಂಗಕ್ಕೆ ರಾಜಕೀಯ ಹಸ್ತಕ್ಷೇಪ ಆಗಿಲ್ಲ ಎಂದಲ್ಲ. ನಿರಂತರವಾಗಿ ಎಲ್ಲ ಸರ್ಕಾರಗಳಲ್ಲೂ ಆಗಿದೆ. ಹೀಗಾಗಿಯೇ ಹಲವು ಜಿಲ್ಲಾ ಬ್ಯಾಂಕುಗಳು, ಸಂಸ್ಥೆಗಳು ನಷ್ಟಕ್ಕೊಳಗಾದವು. ಹಗರಣಗಳ ಕೇಂದ್ರ ಬಿಂದುವೂ ಆದವು.
ಬೀದರ್, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಧಾರವಾಡ, ರಾಯಚೂರು ಮೊದಲಾದೆಡೆ ಹಲವು ಡಿಸಿಸಿ ಬ್ಯಾಂಕುಗಳು ಇನ್ನೇನು ಸಮಾಪನವಾದವು ಎನ್ನುವ ಮಟ್ಟಕ್ಕೂ ಹೋಯಿತು. ಹಾಗೇ ಇವೆಲ್ಲವೂ ಮತ್ತೆ ಎದ್ದು ನಿಂತ ಉದಾಹರಣೆಯೂ ಇದೆ. ರಾಜಕೀಯ ಹಸ್ತಕ್ಷೇಪವಾಗಿ ಹಲವು ಸಹಕಾರಿ ಬ್ಯಾಂಕುಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿ ಈಗ ಅನುತ್ಪಾದಕ ಆಸ್ತಿಯ ಹೆಚ್ಚಳದ ಅಡಕತ್ತರಿಯಲ್ಲೂ ಸಿಲುಕಿವೆ.
ರಾಜಕೀಯ ಕುಲಗೆಡಿಸಿದವರೇ, ಸಹಕಾರಿ ಕ್ಷೇತ್ರವನ್ನೂ ಕೂಡ ಹಾಳುಗೆಡವಿದರು. ಬಹುತೇಕ ರಾಜಕಾರಣಿಗಳೇ ನಿರ್ದೇಶಕರಾಗಿರುವ ಸಹಕಾರಿ-ಖಾಸಗಿ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್ ಬ್ಯಾಂಕ್ ೩,೧೭೩.೪೨ ಕೋಟಿ ಸಾಲ ನೀಡಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಸಾಲ ಮರುಪಾವತಿಸುತ್ತಿಲ್ಲ. ಸಾಲ ಕೊಟ್ಟು ಒದ್ದಾಡುತ್ತಿರುವ ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕುಗಳು ವಸೂಲಿಗಾಗಿ ಹರಸಾಹಸ ಮಾಡುತ್ತಿವೆ. ಸಾಲ ಪಡೆದವರೆಲ್ಲ ಶಾಸಕರು, ಮಂತ್ರಿಗಳು, ಮಾಜಿ ಮಂತ್ರಿಗಳು. ಎಲ್ಲ ಸಹಕಾರಿ ಸಂಸ್ಥೆಗಳಿಗೆ ಮಾತೃ ಕೇಂದ್ರವಾದ ಅಪೆಕ್ಸ್ ಬ್ಯಾಂಕ್‌ನಲ್ಲಿಯೇ ಕೋಟ್ಯಂತರ ರೂಪಾಯಿ ಅವ್ಯವಹಾರ ಅಥವಾ ಅನುತ್ಪಾದಕ ವೆಚ್ಚಗಳಿಗೆ ಸಾಲ ನೀಡಿಕೆ ನಡೆಯಿತು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರುಗಳೇ ಹಗರಣದಲ್ಲಿ ಸಿಲುಕಿಕೊಂಡರು. ಆದಾಗ್ಯೂ ಸಹಕಾರಿ ಕ್ಷೇತ್ರ, ಅದರ ಅಡಿಪಾಯ ಮತ್ತು ಬದ್ಧತೆ ಗಟ್ಟಿ ಇರುವ ಹಿನ್ನೆಲೆಯಲ್ಲಿ ಎದ್ದು ನಿಂತಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಎನ್. ರಾಜಣ್ಣ ಈಗ ಸಹಕಾರ ಮಂತ್ರಿ. ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಈ ಮೊದಲು ಆರ್ಭಟಿಸಿದವರೇ ಈಗ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಬರಖಾಸ್ತುಗೊಳಿಸಿದರೇ?
ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರಿ ಇಲಾಖೆ-ಕ್ಷೇತ್ರ ರಾಜ್ಯ ಸರ್ಕಾರಗಳದ್ದು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ, ಖಾತೆಯನ್ನು ತೆರೆದಿದೆ. ಅಮಿತ್ ಶಾ ಅದರ ಮಂತ್ರಿ. ಶಾ ಈ ಖಾತೆ ಮಂತ್ರಿಯಾದದ್ದೇ ಸಹಕಾರಿ ರಂಗದ ದಿಗ್ಗಜರುಗಳಿಗೆ ಉರುಳು ಹಾಕಿ ಹೆಣೆಯಲು ಎನ್ನುವುದು ಸ್ಪಷ್ಟವಾಗಿತ್ತು. ಹಾಗೆಯೇ ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ತನ್ಮೂಲಕ ಅಜಿತ್ ಪವಾರ್, ಅಶೋಕ ಚವ್ಹಾಣ್, ಪ್ರಫುಲ್ ಪಟೇಲ್ ಮುಂತಾದವರೆಲ್ಲ ಈಗ ಶಾ ಗಾಳದಲ್ಲಿದ್ದಾರೆ. ಅವರು ನಡೆಸಿರುವ ಕೋಟ್ಯಂತರ ರೂಪಾಯಿ ಸಹಕಾರಿ ಹಗರಣದ ಕಡತ ಮಣ್ಣಿನಲ್ಲಿ ಹೂತಿಡಲಾಗಿದೆ!. ಶಾ ಉದ್ದೇಶ ಈಡೇರಿತಲ್ಲ…!!
ಸಹಕಾರಿ ಕ್ಷೇತ್ರದಲ್ಲಿ ತಮ್ಮ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ. ಅವ್ಯವಹಾರ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು' ಎಂದು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಸಹಕಾರಿ ಮಹರ್ಷಿ ಬಾಬುಸಾಹೇಬ್ ಥಾರೋಟ್ ಹಾಗೂ ಸ್ವತಂತ್ರ ಹೋರಾಟಗಾರ ಡಾ.ಅಣ್ಣಾಸಾಹೇಬ ಶಿಂಧೆ ಅವರ ಜನ್ಮಶತಮಾನೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು.ಒಬ್ಬರಿಗೇ ಎಲ್ಲರೂ, ಎಲ್ಲರಿಗೇ ಒಬ್ಬರು; ಸಹಕಾರಂ ಗೆಲ್ಗೆ' ಎಂದು ಘೋಷಿಸಿದ್ದ ಸಿದ್ದರಾಮಯ್ಯ ಸರ್ಕಾರ ಅವರದೇ ಪಕ್ಷದ ಆಡಳಿತ ಇರುವ ಟಿಎಸ್‌ಎಸ್ ಚುನಾಯಿತ ಮಂಡಳಿಯನ್ನು ಬರಖಾಸ್ತುಗೊಳಿಸಿದಾಗ ನಂಬುವುದು ಯಾರನ್ನ? ಎನ್ನುವಂತಾಗಿದೆ.
ಇಷ್ಟಕ್ಕೂ ಸಹಕಾರಿ ಸಂಸ್ಥೆಗಳ ಚುನಾಯಿತ ಮಂಡಳಿಗಳ ಮೇಲೆ ನಿಯಂತ್ರಣ, ಅಲ್ಲಿಯ ವ್ಯವಹಾರದ ಮೇಲೆ ಕಣ್ಗಾವಲು ಇಡಬಾರದೆಂದೇನೂ ಇಲ್ಲ. ಆದರೆ ಇದಕ್ಕೆ ಅವುಗಳದ್ದೇ ಆದ ವ್ಯವಸ್ಥೆ, ನೀತಿ, ನಿಯಮ, ಚೌಕಟ್ಟುಗಳಿವೆ. ಸಹಕಾರಿ ಸಂಘಗಳ ಬೆಳವಣಿಗೆಗೆ ಹಲವು ಸರ್ಕಾರಿ ಆದೇಶಗಳು ಮಾರಕವಾಗಿವೆ. ಇವುಗಳ ಸ್ವಾಯತ್ತತೆಗೂ ಧಕ್ಕೆ ತರುವ ಕಾರ್ಯವಾಗುತ್ತಿದೆ. ಅಲ್ಲಿಯೂ ಭ್ರಷ್ಟಾಚಾರ, ವಂಚನೆ, ಅಕ್ರಮಗಳ ಸಂಖ್ಯೆಯೂ ಏರುತ್ತಿವೆ.
ಆದರೆ ಇದಕ್ಕೆ ಅಸಹಕಾರ, ಜನರ ವಿಶ್ವಾಸ ಕೆಡಿಸುವ ಕಾರ್ಯ ಮತ್ತು ರಾಜಕಾರಣ ಬೆರೆಸುವಂತಾಗಬಾರದು ಎನ್ನುವುದೇ ಜನಾಶಯ.

Next Article