ಸಹಜ ಸ್ಥಿತಿಗೆ ಬ್ಯಾಡಗಿ, ೮೦ ಜನರ ಬಂಧನ
ಬ್ಯಾಡಗಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದರ ಕುಸಿತದ ಹಿನ್ನೆಲೆಯಲ್ಲಿ ಸಾವಿರಾರು ರೈತರು ದಿಢೀರ್ ದಾಂಧಲೆ ನಡೆಸಿದ್ದರಿಂದ ಪ್ರಕ್ಷುಬ್ಧಗೊಂಡಿದ್ದ ಬ್ಯಾಡಗಿ ಪಟ್ಟಣ ಈಗ ಸಹಜ ಸ್ಥಿತಿಗೆ ಬಂದಿದೆ.
ಒಣ ಮೆಣಸಿನಕಾಯಿ ದರ ಕುಸಿತವಾದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನಡೆದಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಸ್ಥಳೀಯ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ೮ ವಾಹನಗಳಿಗೆ ಬೆಂಕಿ ಹಚ್ಚಿ ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿತ್ತು. ಈ ಘಟನೆಯಲ್ಲಿ ಎಸ್ಪಿ ಅಂಶುಕುಮಾರ ಸೇರಿ ಕೆಲ ಪೊಲೀಸರಿಗೂ ಪೆಟ್ಟುಬಿದ್ದಿದೆ. ಖಾಸಗಿ ವಾಹಿನಿ ಕ್ಯಾಮರಾಮನ್‌ಗೂ ಸಹ ತಲೆ, ಕೈಗೆ ಪೆಟ್ಟಾಗಿದೆ.
ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲಾಗಿವೆ. ಎಪಿಎಂಸಿ ಕಾರ್ಯದರ್ಶಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಹಾಗೂ ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮನ್ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಈವರೆಗೆ ೮೦ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಐಜಿಪಿ ತ್ಯಾಗರಾಜನ್, ಹಾವೇರಿ, ದಾವಣಗೆರೆ, ಚಿತ್ರದುರ್ಗ ಎಸ್ಪಿ ನೇತೃತ್ವದಲ್ಲಿ ೮೦೦ ಪೊಲೀಸ್ ಸಿಬ್ಬಂದಿಯೊಂದಿಗೆ ಭದ್ರತೆ ಹೆಚ್ಚಿಸಿದ್ದಾರೆ. ಸಿಐಎಸ್‌ಎಫ್ ಪಡೆ ಸಹ ಮಾರುಕಟ್ಟೆಯಲ್ಲಿ ರೂಟ್ ಮಾರ್ಚ್ ಮಾಡುತ್ತಿದ್ದಾರೆ.
೪ ಕೋಟಿ ಆಸ್ತಿ ಹಾಳು
ಪ್ರತಿ ವಾರದಂತೆ ಸೋಮವಾರ ಮಾರುಕಟ್ಟೆಗೆ ನೀರಿಕ್ಷೆಗೂ ಮೀರಿ ೩.೧೧ ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದವು. ದರದಲ್ಲಿ ಕುಸಿತ ಬಂದಿದೆ ಎಂದು ಬಳ್ಳಾರಿ, ರಾಯಚೂರು ಭಾಗದಿಂದ ಬಂದಿದ್ದ ೫೦೦ಕ್ಕೂ ಹೆಚ್ಚು ರೈತರು ದಾಂಧಲೆ ಶುರು ಮಾಡಿದರು. ಕೆಲ ಕಿಡಿಗೇಡಿಗಳು ಕಚೇರಿಗೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಇಂತಹ ಹಿಂಸಾತ್ಮಕ ಕೃತ್ಯ ನಡೆಸಿರುವ ಪರಿಣಾಮ ಸುಮಾರು ರೂ. ೪ ಕೋಟಿಗೂ ಹೆಚ್ಚು ಆಸ್ತಿಪಾಸ್ತಿ ಹಾಳಾಗಿದೆ ಎಂದು ಅಂದಾಜಿಸಲಾಗಿದೆ.