ಸಹಾಯಕ ಪ್ರಾಧ್ಯಾಪಕರ ವೇತನ ಹೆಚ್ಚಿಸಿ ಆದೇಶ
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ೨೦೧೮ರ ಯುಜಿಸಿ ನಿಯಮಗಳ ಅನ್ವಯ ವೇತನ ಹೆಚ್ಚಿಸಿ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ೪೩೧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ, ಆ ಪೈಕಿ ೪,೫೦೦ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಅನುದಾನಿತ ಪ್ರಥಮ ದರ್ಜೆಯ ಸುಮಾರು ೩೨೧ಕ್ಕೂ ಹೆಚ್ಚು ಕಾಲೇಜುಗಳಲ್ಲಿ ೨,೫೦೦ ಉಪನ್ಯಾಸಕರು ಸೇರಿದಂತೆ ೬ ಸಾವಿರಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರಿಗೆ ಸಿಎಎಸ್ ರಡಿಯಲ್ಲಿ ವೇತನ ಹೆಚ್ಚಳ ಮಾಡಲಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೆ ೨೦೧೬ರ ಪರಿಷ್ಕೃತ ಯು.ಜಿ.ಸಿ. ವೇತನ ಶ್ರೇಣಿಯ ಆದೇಶ ಜಾರಿಗೊಳಿಸಲಾಗಿದೆ. ಈ ಆದೇಶದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ ೧೨ರ ಯು.ಜಿ.ಸಿ ವೇತನ ಶ್ರೇಣಿ ರೂ. ೭೯,೮೦೦ ರಿಂದ ೨೧,೧೫೦ ರಲ್ಲಿ ಪೂರೈಸಿರುವ ೩ ವರ್ಷಗಳ ಅರ್ಹತಾ ಅವಧಿಯನ್ನು ಪರಿಗಣಿಸಿ ವೇತನ ಕಲ್ಪಿಸಲಾಗಿರುತ್ತದೆ. ಅಲ್ಲದೇ ಸಿಎಎಸ್ ರಡಿಯಲ್ಲಿ ಶೈಕ್ಷಣಿಕ ಹಂತ ೧೩ಎರ ವೇತನ ೧,೩೧,೪೦೦ ರಿಂದ ೨,೧೭,೧೦೦ ರೂ. ವೇತನ ಹೆಚ್ಚಳ ಮಾಡಲಾಗಿದೆ.
ಆಯ್ಕೆ ಸಮಿತಿ ರಚನೆ: ಯುಜಿಸಿ ಮಾರ್ಗಸೂಚಿಗಳ ಹಾಗೂ ಸರ್ಕಾರದ ಆದೇಶ ಅನುಸಾರ ಶೈಕ್ಷಣಿಕ ಹಂತ ೧೨ ರಿಂದ ಶೈಕ್ಷಣಿಕ ಹಂತ ೧೩ಎ ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಸಂಬಂಧ ಪ್ರಾಂಶುಪಾಲರು ತಮ್ಮ ಹಂತದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿ ಸಹಾಯಕ ಪ್ರಾಧ್ಯಾಪಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಹಂತಕ್ಕೆ ಅರ್ಹತೆ ಹೊಂದಿರುವವರ ಮಾಹಿತಿಗಳನ್ನು ನಿಗದಿತ ನಮೂನೆಗಳಲ್ಲಿ ಅನುಮೋದನೆಯೊಂದಿಗೆ ಅರ್ಹ ಸಹಾಯಕ ಪ್ರಾಧ್ಯಾಪಕರಿಗೆ ಉನ್ನತ ಶೈಕ್ಷಣಿಕ ಸ್ಥಾನೀಕರಣಕ್ಕಾಗಿ ಶಿಫಾರಸ್ಸು ಮಾಡಿರುವ ಪ್ರಸ್ತಾವನೆಯನ್ನು ರವಾನಿಸಿತ್ತು. ಅದರ ಶಿಫಾರಸ್ಸಿನ ಮೇಲೆ ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.