ಸಾಂಕ್ರಾಮಿಕ ರೋಗ ಭೀತಿ: ಫಾಗಿಂಗ್ ಮಾಡಲು ಮುಂದಾದ ಪಾಲಿಕೆ
ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದ್ದು, ಮಹಾನಗರ ಪಾಲಿಕೆಯಿಂದ ಸಾಂಕ್ರಾಮಿಕ ರೋಗ ಹಾಗೂ ಸೊಳ್ಳೆಯ ನಿಯಂತ್ರಣಕ್ಕಾಗಿ ಫಾಗಿಂಗ್ ಹಾಗೂ ಕ್ರಿಮಿನಾಶಕ ಔಷಧಿ ಸಿಂಪಡಣೆ ಸೇರಿದಂತೆ ಮನೆ ಮನೆ ಒಳಗಡೆ ಫಾಗಿಂಗ್ ಮಾಡಲು ಮುಂದಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು ೭೫ ಡೆಂಗ್ಯು ಪ್ರಕರಣಗಳು ಬೆಳಕಿಗೆ ಬಂದಿವೆ. ಹುಬ್ಬಳ್ಳಿ ನಗರದಲ್ಲಿ ೧೧ ಹಾಗೂ ಧಾರವಾಡದಲ್ಲಿ ೬೪ ಪ್ರಕರಣಗಳು ಕಂಡು ಬಂದಿವೆ. ಸದ್ಯಕ್ಕೆ ಮಲೇರಿಯಾ, ಚಿಕನ್ ಗುನ್ಯಾ ವರದಿಯಾಗಿಲ್ಲ. ಡೆಂಗ್ಯು ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಿಂದ ತ್ವರಿತ ಕ್ರಮ ಕೈಗೊಂಡು ತಪಾಸಣೆ ಆರಂಭಿಸಿದೆ. ವಾರದಲ್ಲಿ ಒಂದು ಬಾರಿಯಾದರೂ ಪ್ರತಿ ವಾರ್ಡ್‌ನಲ್ಲಿ ಫಾಗಿಂಗ್ ಅಥವಾ ಔಷಧಿ ಸಿಂಪಡಣೆ ನಿರಂತರವಾಗಿ ಮಾಡುತ್ತಿದೆ.
ಪ್ರತಿ ವಾರ್ಡ್‌ನಲ್ಲಿ ಫಾಗಿಂಗ್, ಔಷಧಿ ಸಿಂಪಡಣೆ
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ೧೫ ದಿನಗಳಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ೮೨ ವಾರ್ಡ್ನಲ್ಲಿ ಏರಿಯಾ ವೈಸ್ ಫಾಗಿಂಗ್ ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಹೆಚ್ಚು ಸೊಳ್ಳೆಗಳು ಕಂಡು ಬರುವ ಹಾಗೂ ರೋಗ ಭೀತಿ ಇರುವ ಕಡೆ ಔಷಧಿ ಸಿಂಪಡಣೆ ಕೂಡ ಮಾಡಲಾಗುತ್ತಿದೆ. ಜನರಿಗೆ ಪಾಲಿಕೆಯ ಆರೋಗ್ಯ ವಿಭಾಗದಿಂದ ಜನರಿಗೆ ಮಲೇರಿಯಾ, ಡೆಂಗ್ಯು, ಕ್ಷಯ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಅಧಿಕಾರಿಗಳ ತಂಡ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಡೆಂಗ್ಯು ಕಂಡ ಬಂದ ಪ್ರದೇಶದಲ್ಲಿ ಲಾರ್ವ್ ಪರೀಕ್ಷೆ, ನೀರಿನ ಮೂಲಗಳನ್ನು ಸ್ವಚ್ಛತೆ ಕಾಪಾಡುವ ಕುರಿತು ಹೆಚ್ಚಿನ ತಿಳುವಳಿಕೆ ನೀಡಲಾಗುತ್ತಿದೆ. ಬಯೋಲಾಜಿಕಲ್ ಅಂದರೆ ರಾಜಕಾಲುವೆ, ತೋಳನಕೆರೆ, ಉಣಕಲ್ ಕೆರೆ ಸೇರಿ ನಗರದ ಕೆರೆಗಳಲ್ಲಿ ಲಾರ್ವ್ ತಿನ್ನುವ ಮೀನು ಬಿಡಲಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮಾಡಲಾಗುತ್ತಿದೆ. ೩೦೦ ವಿದ್ಯಾರ್ಥಿಗಳಿಂದ ವಾರದ ಎರಡು ದಿನಗಳಲ್ಲಿ ಲಾರ್ವ್ ಸರ್ವೇ ನಡೆಸಲಾಗುತ್ತಿದೆ.
ಮನೆ ಮನೆ ಒಳಗೆ ಫಾಗಿಂಗ್‌ಗೆ ನಿರ್ಧಾರ
ಈ ಬಾರಿ ವಾಣಿಜ್ಯನಗರಿಯಲ್ಲಿ ಸಾಂಕ್ರಾಮಿಕ ರೋಗ ಅಂದರೆ ಸೊಳ್ಳೆಗಳು ಹೆಚ್ಚಾಗಿರುವುದರಿಂದ ಪ್ರತಿ ವಾರ್ಡ್‌ಗಳಷ್ಟೇ ಅಲ್ಲದೇ ಮನೆಯ ಒಳಗಡೆಯೂ ಕೂಡ ಫಾಗಿಂಗ್ ಮಾಡಲು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ ಹೆಚ್ಚು ಕೊಳಚೆ ಇರುವ ಪ್ರದೇಶದಲ್ಲಿ ಫಾಗಿಂಗ್ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲ ಪ್ರದೇಶಗಳ ಮನೆ ಮನೆಗೂ ಫಾಗಿಂಗ್ ಮಾಡುವ ನಿರ್ಧಾರವನ್ನು ಮಹಾನಗರ ಪಾಲಿಕೆಯಿಂದ ಮಾಡಲಾಗಿದೆ. ಸದ್ಯ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಪ್ರದೇಶದಲ್ಲಿ ಮನೆಮನೆಗೆ ಫಾಗಿಂಗ್ ಮಾಡಲಾಗುತ್ತಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಡೆಂಗ್ಯು ಪ್ರಕರಣ ದಾಖಲಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಹಾಗೂ ಸೊಳ್ಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್ಗಳಲ್ಲಿ ಫಾಗಿಂಗ್ ಹಾಗೂ ಕ್ರಿಮಿನಾಶಕ ಔಷಧ ಸಿಂಪಡಣೆ ಮಾಡಿಸಲಾಗುತ್ತಿದೆ.
- ಡಾ. ಶ್ರೀಧರ್ ದಂಡಪ್ಪನವರ, ಪಾಲಿಕೆ ಆರೋಗ್ಯಾಧಿಕಾರಿ.
ಅವಳಿನಗರದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಲಾರ್ವ್ ಪರೀಕ್ಷೆ, ಫಾಗಿಂಗ್, ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಒಂದು ಹಂತ ಮುಂದೆ ಎಲ್ಲ ಕಡೆ ಮನೆಯ ಒಳಗಡೆ ಕೂಡ ಫಾಗಿಂಗ್ ಮಾಡುವ ನಿರ್ಧಾರ ಮಾಡಲಾಗಿದೆ.
- ಡಾ.ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ.