ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಾಮಾಜಿಕ ಜಾಲತಾಣದ ಉಪಯೋಗ ಅರಿತು ನಿಯಂತ್ರಿಸಿ

08:16 PM Jan 28, 2024 IST | Samyukta Karnataka

ಶಿರಸಿ: ಸಾಮಾಜಿಕ ಜಾಲತಾಣಗಳು ಸಾಕಷ್ಟು ವ್ಯಾಪಿಸಿದೆ. ಒಂದು ಕ್ಷಣದಲ್ಲಿ ಲಕ್ಷಾಂತರ ಜನರಿಗೆ ಸುದ್ದಿ ಕಳುಹಿಸುವ ಕಾಲಘಟ್ಟದಲ್ಲಿದ್ದೇವೆ. ೭೦ ಕೋಟಿ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂಬ ಅಂಶ ಸರ್ವೇಯಿಂದ ಬೆಳಕಿಗೆ ಬಂದಿದೆ. ಮುಂದಿನ ೫ ವರ್ಷದ ಒಳಗಡೆ ೧೩೦ ಕೋಟಿ ದಾಟಬಹುದು. ಪತ್ರಿಕೋದ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಅನ್ಯೋನ್ಯ ಸಂಬಂಧ ಹೊಂದಿದೆ. ಸಾಮಾಜಿಕ ಜಾಲತಾಣಗಳ ಉಪಯೋಗ, ದುರುಪಯೋಗ, ಮಹತ್ವ ಅರಿತುಕೊಂಡು ನಿಯಂತ್ರಿಸಿದರೆ ಮುಂದೆ ನಡೆಯುವ ಅಪೂರ್ಣ ಜಗತ್ತನ್ನು ನಿಯಂತ್ರಿಸಲು ಸಾಧ್ಯ ಎಂದು ಸಂಯುಕ್ತ ಕರ್ನಾಟಕ ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ ಹೆಗಡೆ ಹೇಳಿದರು.
ಅವರು ರವಿವಾರ ಟಿಆರ್‌ಸಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ, ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣ ಪತ್ರಿಕೋದ್ಯಮದ ನಡೆ ವಿಷಯವಾಗಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳನ್ನು ಜನರು ಗಂಭೀರವಾಗಿ ಪರಿಣಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಿಂದ ಶೇ. ೬೦ರಷ್ಟು ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂಬ ಅಂಶ ಹೊರ ಬಿದ್ದಿದೆ. ಸುಳ್ಳು, ಅಶ್ಲೀಲತೆಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿದೆ. ಜನರಿಗೆ ಪತ್ರಿಕೆ ಬೇಕಾಗಿಲ್ಲ. ಹಿಂದೆ ಏನೂ ಇಲ್ಲ. ಮುಂದಿನದು ಕಷ್ಟ. ಹಿಂದೆಲ್ಲ ಪತ್ರಿಕೆ ಕೆಲಸ ಮಾಡುವವನು ಪತ್ರಕರ್ತ. ಆದರೆ ಇಂದು ಸ್ಮಾರ್ಟಫೋನ್ ಇದ್ದವನೂ ಪತ್ರಕರ್ತನಂತಾಗಿದೆ. ಆಳ ಅಧ್ಯಯನ ಬೇಕಾಗಿಲ್ಲ. ಇದರಿಂದ ಬಹಳಷ್ಟು ಹಾನಿಯಾಗಿದೆ. ಸತ್ಯ ಮತ್ತು ಅಸತ್ಯತೆ ಪರಾಮರ್ಶಿಸುವ ಸಹನೆ ಜನರಿಗಿಲ್ಲ. ಮುಂದಿನ ದಿನ ಇಂಟರ್ನೆಟ್ ಇಲ್ಲದೆ ಏನು ಇಲ್ಲ. ಎಲ್ಲದಕ್ಕೂ ಸಂಪರ್ಕ ವ್ಯವಸ್ಥೆ ಅನಿವಾರ್ಯದಂತಾಗುತ್ತಿದೆ. ಅಧ್ಯಯನ ಬೇಕಾಗಿಲ್ಲ. ಎಲ್ಲವೂ ಗೂಗಲ್. ಅಂತರ್‌ಜಾಲ ಯಾವ ಮಟ್ಟದಲ್ಲಿ ವ್ಯವಸ್ಥೆ ಬಳಸಬೇಕೆಂಬುದರ ನಿರ್ಣಯ ವ್ಯಕ್ತಿಗೆ ಬಿಟ್ಟ ವಿಚಾರ. ಟಿವಿ ಬಂದಾಗ ಪತ್ರಿಕೆ ಮುಚ್ಚುತ್ತವೆ ಎಂಬ ಭಯ ಇತ್ತು. ಆದರೆ ಪ್ರಸಾರ ಸಂಖ್ಯೆ ಹೆಚ್ಚಳವಾಯಿತು. ಸಾಮಾಜಿಕ ಜಾಲತಾಣದಿಂದ ಪೀತ ಪತ್ರಿಕೋದ್ಯಮ ಮತ್ತು ಅಸತ್ಯ ಮಾಹಿತಿ ಹೆಚ್ಚುತ್ತಿದೆ ಅದಕ್ಕೆ ವಿಷಾದವಿದೆ ಎಂದರು.
ಕೊರೊನಾ ನಂತರ ಪತ್ರಿಕೆ ಮೇಲೆ ಬಹಳ ಪರಿಣಾಮ ಬೀರಿವೆ. ಪ್ರಾದೇಶಿಕ ಪತ್ರಿಕೆಗಳು ಬಹಳಷ್ಟು ಮುಚ್ಚಿ ಹೋದವು. ಪತ್ರಿಕೆಗಳ ಮೇಲೆ ಓದುಗರನ್ನು ಹೆಚ್ಚಿಸಿಕೊಳ್ಳಬೇಕಾದ ಬಹಳ ದೊಡ್ಡ ಜವಾಬ್ದಾರಿ ಇದೆ. ಪತ್ರಿಕೆಗಳು ವಿಶ್ವಾಸ ಹೆಚ್ಚಿಸಿಕೊಳ್ಳುವ ಕೆಲಸ ಆಗಬೇಕಿದೆ. ಹೊಸ ಪ್ರಯೋಗಗಳು ಕಷ್ಟ ಸಾಧ್ಯ. ಆದಾಯ ಮೂಲಗಳನ್ನು ಬದಲಾವಣೆ ಮಾಡಿಕೊಂಡಿವೆ. ಇದು ಅನಿವಾರ್ಯವಾಗಿದೆ. ದೊಡ್ಡ ಉದ್ಯಮಗಳು ಪ್ರಚಾರಕ್ಕಾಗಿ ಶೇ.೬೦ ರಷ್ಟು ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿದ್ದವು. ಈಗ ಅದು ಶೇ.೩೦ ಕ್ಕೆ ಇಳಿದಿದೆ. ಕೊರೊನಾಕ್ಕಿಂತ ಮೊದಲು ಪತ್ರಿಕೆಗಳ ದರ ಹೆಚ್ಚಳವಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರದ ಸುಂಕ ಬೇರೆ. ಪತ್ರಿಕೆಗಳ ಮಿಲ್ ಬಂದ್ ಆಗಿವೆ. ಜನರ ವಿಶ್ವಾಸವಿರುವವರೆಗೆ ಪತ್ರಿಕೋದ್ಯಮಕ್ಕೆ ಸಮಸ್ಯೆಯಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಕಸ್ತೂರಿ ಮಾಸಪತ್ರಿಕೆ ಸಂಪಾದಕರಾದ ಶಾಂತಲಾ ಧರ್ಮರಾಜ್, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ, ಹಿರಿಯ ಪತ್ರಕರ್ತ ವಿನಾಯಕ ಭಟ್ಟ ಮುರೂರು, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಹಿರಿಯ ಪತ್ರಕರ್ತರಾದ ಅಶೋಕ ಹಾಸ್ಯಗಾರ ಹಾಗೂ ಇತರರು ಉಪಸ್ಥಿತರಿದ್ದರು.

Next Article